ಬೆಂಗಳೂರು ಗಲಭೆ: ಕೈ-ಕಮಲ ಪಾಳಯದಿಂದ ʼಸತ್ಯಶೋಧನಾ ಸಮಿತಿʼ ರಾಜಕಾರಣ
ರಾಜ್ಯ

ಬೆಂಗಳೂರು ಗಲಭೆ: ಕೈ-ಕಮಲ ಪಾಳಯದಿಂದ ʼಸತ್ಯಶೋಧನಾ ಸಮಿತಿʼ ರಾಜಕಾರಣ

ಕಾಂಗ್ರೆಸ್‌ ಹೇಗೆ ಪರಿಶಿಷ್ಟ ಜಾತಿಯ ನಾಯಕನಾದ ಡಾ ಜಿ ಪರಮೇಶ್ವರ್‌ ಅವರನ್ನು ಅಧ್ಯಕ್ಷನನ್ನಾಗಿ ಮಾಡಿತ್ತೋ ಅದೇ ರೀತಿ ಬಿಜೆಪಿ ಕೂಡ ಅರವಿಂದ ಲಿಂಬಾವಳಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆ.

ಕೃಷ್ಣಮಣಿ

ಬೆಂಗಳೂರಿನ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಕೆಜೆ ಹಳ್ಳಿ, ಡಿಜಿ ಹಳ್ಳಿ, ಕಾವಲ ಭೈರಸಂದ್ರದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದರು. ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ, ವಾಹನಗಳನ್ನು ಸುಟ್ಟು ಹಾಕಿ ಗೂಂಡಾವರ್ತನೆ ತೋರಿಸಿದ್ದರು. ಘಟನೆ ಬಳಿಕ ಕಾಂಗ್ರೆಸ್‌ ಪಕ್ಷ ಹಾಗೂ ಬಿಜೆಪಿ ಜಿದ್ದಾಜಿದ್ದಿನ ರಾಜಕೀಯ ಮಾಡುತ್ತಿವೆ. ಮುಂದಿನ ಬಾರಿಯ ಚುನಾವಣೆಗೆ ಜನರ ಮತ ಸೆಳೆಯುವ ನಾಟಕ ಶುರು ಮಾಡಿಕೊಂಡಿವೆ. ಅದರ ಒಂದು ಒಂದು ಭಾಗವೇ ಸತ್ಯಶೋಧನಾ ಸಮಿತಿ.

ಪುಲಿಕೇಶಿ ನಗರ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಬಿದ್ದ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದರು. ಆ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್‌ ಅವರನ್ನು ನೇಮಕ ಮಾಡಿದ್ದರು. ಡಾ ಜಿ ಪರಮೇಶ್ವರ್‌ ನೇತೃತ್ವದ ಸತ್ಯಶೋಧನಾ ಸಮಿತಿ ಶನಿವಾರ ಸಂಜೆ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಬಗ್ಗ ಸ್ಥಳೀಯರಿಂದಲೂ ಮಾಹಿತಿ ಕಲೆ ಹಾಕಿತ್ತು. ಆದರೆ ಒಂದೇ ದಿನದಲ್ಲಿ ರಾಜಕೀಯ ರಂಗು ಪಡೆದುಕೊಂಡಿದೆ.

ಶನಿವಾರ ಕಾಂಗ್ರೆಸ್‌, ಭಾನುವಾರ ಬಿಜೆಪಿ ಶೋಧ..!

ವಿರೋಧ ಪಕ್ಷದಲ್ಲಿ ಇರುವ ಕಾಂಗ್ರೆಸ್‌ ಏನಾಗಿದೆ ಎನ್ನುವ ಸತ್ಯವನ್ನು ತಿಳಿಯುವ ಅವಶ್ಯಕತೆ ಇತ್ತು. ಅದೇ ಕಾರಣಕ್ಕೆ ಸತ್ಯಶೋಧನಾ ಸಮಿತಿ ರಚನೆ ಮಾಡಿದ್ದು, ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿತ್ತು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಶಾಸಕ ಅಖಂಡ ಶ್ರೀನಿವಾಸ್‌ ಅವರ ಮನೆಗೆ ಕಾಂಗ್ರೆಸ್‌ ನಿಯೋಗ ಭೇಟಿ ಕೊಟ್ಟಿದ್ದು ಬಿಜೆಪಿಯನ್ನು ಕಂಗಾಲಾಗಿಸಿದ್ದು, ರಾತ್ರೋರಾತ್ರಿ ಆಡಳಿತ ಪಕ್ಷವೇ ಸತ್ಯಶೋಧನಾ ಸಮಿತಿ ರಚನೆ ಮಾಡಿದೆ. ಕಾಂಗ್ರೆಸ್‌ ಹೇಗೆ ಪರಿಶಿಷ್ಟ ಜಾತಿಯ ನಾಯಕನಾದ ಡಾ ಜಿ ಪರಮೇಶ್ವರ್‌ ಅವರನ್ನು ಅಧ್ಯಕ್ಷನನ್ನಾಗಿ ಮಾಡಿತ್ತೋ ಅದೇ ರೀತಿ ಬಿಜೆಪಿ ಕೂಡ ಅರವಿಂದ ಲಿಂಬಾವಳಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆ.

ಸುಟ್ಟು ಹೋದ ಮನೆಯಲ್ಲಿ ಚದುರಿದ ಮತಗಳ ಹುಡುಕಾಟ..!

ಅಖಂಡ ಶ್ರೀನಿವಾಸ್ ಮನೆಗೆ ಭೇಟಿ ನೀಡಿದ ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ಅರವಿಂದ ಲಿಂಬಾವಳಿ, ಪಿ.ಸಿ ಮೋಹನ್, ಛಲವಾದಿ ನಾರಾಯಣಸ್ವಾಮಿ, ಮಾಲೀಕಯ್ಯ ಗುತ್ತೇದಾರ್. ಘಟನಾ ಸ್ಥಳವನ್ನು ಪರಿಶೀಲಿಸಿದರು. ಮೊದಲು ಮುನೇಗೌಡ ಮನೆಗೆ ಭೇಟಿ ನೀಡಿದ ನಂತರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್ ಮನೆ ಬಳಿ ಇರುವ ಬಾರ್ ಅಂಡ್‌ ರೆಸ್ಟೋರೆಂಟ್‌ಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಅಂದಿನ ಗಲಭೆಯಲ್ಲಿ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳು, ಸ್ಥಳದಲ್ಲೇ ಬಿದ್ದಿರುವ ಸುಟ್ಟ ವಾಹನಗಳ ಅವಶೇಷಗಳನ್ನು ವೀಕ್ಷಿಸಿ ಮಾಹಿತಿ ಕಲೆ ಹಾಕಲಾಯ್ತು. ಬಿಜೆಪಿ ಕಾರ್ಯಕರ್ತ ಅರುಣ್ ಮನೆಗೆ ಭೇಟಿ ನೀಡಿದ್ದ ನಿಯೋಗ, ನವೀನ್ ಮನೆಗೆ ತೆರಳದೆ ವಾಪಸ್‌ ಆಯ್ತು.

ಇಲ್ಲಿಯ ಪರಿಸ್ಥಿತಿ ‌ಗಮನಿಸಿದರೆ ಶಾಸಕರನ್ನೇ ನೇರ ಹೊಣೆ ಮಾಡಲಾಗಿದೆ. ಅವರ ಮನೆ, ಕಚೇರಿ, ಸಂಬಂಧಪಟ್ಟವರ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗಿದೆ. ಪೊಲೀಸರೂ ಇವರ ಮನೆಗಳಿಗೆ ರೀಚ್ ಆಗದಂತೆ, ಫೈರ್ ಬ್ರಿಗೇಡ್ ತಲುಪದಂತೆ ತಡೆದಿದ್ದಾರೆ. ಮನೆಯೊಳಗೆ ಪಾರ್ಕ್ ಆಗಿದ್ದ ವಾಹನಗಳನ್ನು ರಸ್ತೆಗೆ ತಂದು ಬೆಂಕಿ ಇಟ್ಟಿದ್ದಾರೆ. ನಾನು ಅನೇಕ ಬಾರಿ ಕಾಶ್ಮೀರಕ್ಕೆ ಭೇಟಿ ಮಾಡಿದ್ದೇನೆ, ಕಾಶ್ಮೀರದ ಕಣಿವೆಯಲ್ಲೂ ಇಂಥಾ ಪರಿಸ್ಥಿತಿ ನೋಡಿಲ್ಲ. ಪಕ್ಷ ಬೇಧ ಮರೆತು ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ ಅರವಿಂದ ಲಿಂಬಾವಳಿ. ನವೀನ್ ಎನ್ನುವ ವ್ಯಕ್ತಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದ ಹಾಗಾಗಿ ಗಲಾಟೆ ಆರಂಭ ಆಯ್ತು ಎನ್ನಲಾಗ್ತಿದೆ. ಆದರೆ ಸಂಜೆ 5ಕ್ಕೆ ಹಾಕಿದ ಪೋಸ್ಟ್ ನೋಡಿ 8 ರಿಂದ 10 ಸಾವಿರ ಜನ ಸೇರಬಹುದಾದರೆ ಇದು ಆಕಸ್ಮಿಕವಾ..? ವ್ಯವಸ್ಥಿತ ಯೋಜನೆಯಾ..? ಎಂದು ಯೋಚಿಸಬೇಕಾಗುತ್ತದೆ. ಇದು ಕಾಂಗ್ರೆಸ್‌ನವರ ಪಿತೂರಿಯೋ..? ದಲಿತರ ಮೇಲಿನ‌ ಅನ್ಯಾಯವೋ..? ಅಥವಾ ಏನಿದು..? ಕಾಂಗ್ರೆಸ್ ಪಕ್ಷ ಇನ್ನೂ ಇದನ್ನು ಖಂಡಿಸುತ್ತಿಲ್ಲ, ಅದೇ ದುರ್ದೈವ ಹೀಗೇ ಬಿಟ್ರೆ ಕರ್ನಾಟಕ ಇಂಥಾ ಚಟುವಟಿಕೆ ನಡೆಸುವಂತವರ ತಾಣವಾಗುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

ಹೊಸ ದಾಳ ಉರುಳಿಸಿದ ಕಾಂಗ್ರೆಸ್‌..!

ಕಾಂಗ್ರೆಸ್‌, ಬಿಜೆಪಿಯದ್ದು ಪಕ್ಕಾ ಮತಗಳ ಲೆಕ್ಕಾಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ನಡುವೆ ಕಾಂಗ್ರೆಸ್‌ ಹೊಸ ದಾಳ ಉರುಳಿಸಿದೆ. ಅಖಂಡ ಶ್ರೀನಿವಾಸ ಮೂರ್ತಿ ಏನು ಹೇಳಬೇಕು ಎನ್ನುವುದನ್ನು ಬಿಜೆಪಿ ಸೂಚಿಸುತ್ತಿದೆ ಎಂದಿದ್ದ ಡಿ ಕೆ ಶಿವಕುಮಾರ್‌. ಇದೀಗ ಪುಲಿಕೇಶಿ ನಗರದ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಅವರನ್ನು ಕಾಂಗ್ರೆಸ್‌ಗೆ ಸೆಳೆದಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿಗೂ ಮುನ್ನ ಶಾಸಕನಾಗಿದ್ದ ಪ್ರಸನ್ನ ಕುಮಾರ್‌, ಅವರು ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಿದ್ದಾರೆ. ಈ ವಿಚಾರವಾಗಿ ಅಖಂಡ ಶ್ರೀನಿವಾಸ್ ಮೂರ್ತಿ ಜೊತೆಗೆ ಚರ್ಚೆ ಮಾಡಲಾಗಿದೆ ಎಂದಿದ್ದಾರೆ. ನಾನು ಅಖಂಡ ಶ್ರೀನಿವಾಸ್ ಮೂರ್ತಿ ಕೇಳಿದ್ದೇನೆ. ಅವರೇ ಬೇಕಾದರೆ ತೆಗೆದುಕೊಳ್ಳಿ ಅಭ್ಯಂತರವಿಲ್ಲ ಎಂದಿದ್ದಾರೆ. ಹಾಗಾಗಿ ಪ್ರಸನ್ನ ಅವರನ್ನು ಬರಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರಿದರೆ ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಈ ದಾಳ ಎನ್ನಲಾಗಿದೆ. ಒಟ್ಟಾರೆ ಸುಟ್ಟ ಹೋದ ಮನೆಯಲ್ಲಿ ಭರ್ಜರಿ ರಾಜಕೀಯವಂತೂ ನಡೀತಿದೆ. ಕ್ಷೇತ್ರದ ಮತದಾರ ಮುಂಬರುವ ದಿನಗಳಲ್ಲಿ ಯಾರಿಗೆ ಬುದ್ಧಿ ಕಲಿಸ್ತಾನೆ ಎನ್ನುವುದನ್ನ ಕಾದು ನೋಡ್ಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com