ಭಯಪಡದೆ ನಮ್ಮ ಆಸ್ಪತ್ರೆಗೆ ಬನ್ನಿ: ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾದ ಬಾಲು ಆಸ್ಪತ್ರೆ
ರಾಜ್ಯ

ಭಯಪಡದೆ ನಮ್ಮ ಆಸ್ಪತ್ರೆಗೆ ಬನ್ನಿ: ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾದ ಬಾಲು ಆಸ್ಪತ್ರೆ

ರೋಗಿಗಳಿಗೆ ಹಾಸಿಗೆಗಳನ್ನು ನೀಡದೆ ಸತಾಯಿಸುತ್ತಿರುವಾಗ ಸರ್ಕಾರವೇ ಮಧ್ಯಪ್ರವೇಶಿಸಬೇಕಾದಂತಹ ಸನ್ನಿವೇಶಗಳು ಹುಟ್ಟಿಕೊಂಡವು. ಖಾಸಗಿ ಆಸ್ಪತ್ರೆಗಳ ನಡೆ ವಿಮರ್ಷೆಗೊಳಪಡುತ್ತಿರುವಂತೆಯೇ, ಇಲ್ಲೊಂದು ಖಾಸಗಿ ಆಸ್ಪತ್ರೆ ತನ್ನ ವೃತ್ತಿಪರತೆ ಹಾಗೂ ಸೇವಾ ಮನೋಭಾವದಿಂದ ಸದ್ದು ಮಾಡುತ್ತಿದೆ.

ಫೈಝ್

ಫೈಝ್

ಕೋವಿಡ್‌ ಕಾಲದಲ್ಲಿ ಬಹುತೇಕ ಚರ್ಚೆಗೊಳಪಟ್ಟಿದ್ದು ಖಾಸಗಿ ಆಸ್ಪತ್ರೆಗಳ ಸಂವೇದನಾ ಹೀನ ನಡೆ. ರೋಗಿಗಳಿಗೆ ಹಾಸಿಗೆಗಳನ್ನು ನೀಡದೆ ಸತಾಯಿಸುತ್ತಿರುವಾಗ ಸರ್ಕಾರವೇ ಮಧ್ಯಪ್ರವೇಶಿಸಬೇಕಾದಂತಹ ಸನ್ನಿವೇಶಗಳು ಹುಟ್ಟಿಕೊಂಡವು. ಖಾಸಗಿ ಆಸ್ಪತ್ರೆಗಳ ನಡೆ ವಿಮರ್ಷೆಗೊಳಪಡುತ್ತಿರುವಂತೆಯೇ, ಇಲ್ಲೊಂದು ಖಾಸಗಿ ಆಸ್ಪತ್ರೆ ತನ್ನ ವೃತ್ತಿಪರತೆ ಹಾಗೂ ಸೇವಾ ಮನೋಭಾವದಿಂದ ಸದ್ದು ಮಾಡುತ್ತಿದೆ.

ಈ ಖಾಸಗಿ ಆಸ್ಪತ್ರೆ ಇರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ. ಹೆಸರು ಬಾಲು ಆಸ್ಪತ್ರೆ. ಕೋವಿಡ್‌ ಹಿನ್ನಲೆಯಲ್ಲಿ ಯಾವ ರೋಗಿಗಳನ್ನು ದಾಖಲಿಸಲು ನಿರಾಕರಿಸದೆ, ಎಲ್ಲಾ ರೋಗಿಗಳನ್ನೂ ತಪಾಸಣೆಗೆ ಒಳಪಡಿಸುತ್ತಿರುವುದೇ ಈ ಆಸ್ಪತ್ರೆಯ ವಿಶೇಷ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೋವಿಡ್‌ ಕಾರಣಕ್ಕೆ ಬಾಲು ಆಸ್ಪತ್ರೆಯಲ್ಲಿ ಸಾಮಾನ್ಯ ಜ್ವರ, ಹೊಟ್ಟೆ ನೋವು, ತಲೆ ನೋವು, ವಾಂತಿ ಬೇಧಿ ಮೊದಲಾದ ಖಾಯಿಲೆಗಳಿಂದ ಬಂದವರಿಗೆ ಹೊರಗಡೆಯೇ ಸ್ಕ್ರೀನ್ ಮಾಡಿ, ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಬಳಿಕ ತಪಾಸಣೆಗೆಂದೇ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಗರ್ಭಿಣಿಯರನ್ನು ಆಸ್ಪತ್ರೆಯ ಒಳಗಡೆ ತಪಾಸಣೆ ಮಾಡಲಾಗುತ್ತಿದೆ.

ಈ ಕುರಿತು ಪ್ರತಿಧ್ವನಿ ಯೊಂದಿಗೆ ಮಾತನಾಡಿರುವ ʼಬಾಲು ಆಸ್ಪತ್ರೆʼಯ ಮಾಲೀಕರೂ ಆಗಿರುವ ಡಾಕ್ಟರ್ ಮನೋಜವಮ್ ವಿ, ನಾವು ಯಾವುದೇ ರೋಗಿಗಳನ್ನೂ ದಾಖಲಿಸಿಕೊಳ್ಳಲು ನಿರಾಕರಿಸುವುದಿಲ್ಲ. ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ಸ್ಕ್ರೀನಿಂಗ್‌ ಮಾಡಿಸಿ, ಟ್ರೀಟ್‌ಮೆಂಟ್‌ ನೀಡಿ, ಅವರಿಗೆ ಗೈಡ್‌ ಮಾಡುತ್ತೇವೆ. ಅವಶ್ಯಕತೆ ಇದ್ರೆ ಬೇರೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಸಲಹೆ ನೀಡುತ್ತೇವೆ. ಅದಕ್ಕೂ ಮೊದಲು ನಮ್ಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ.‌

ಡಾಕ್ಟರ್ ಮನೋಜವಮ್ ವಿ
ಡಾಕ್ಟರ್ ಮನೋಜವಮ್ ವಿಬಾಲು ಆಸ್ಪತ್ರೆ ಮಾಲಿಕರು

ಕೋವಿಡ್‌ ನಮಗೂ ಹೊಸತಾಗಿತ್ತು. ಹಾಗೆಂದು ರೋಗಿಗಳಿಗೆ ಚಿಕಿತ್ಸೆ ನೀಡದೆ ಕಳುಹಿಸುವುದು ವೃತ್ತಿಪರತೆಯಲ್ಲ. ಹಾಗಾಗಿ ನಾವು ನಮ್ಮ ಆಸ್ಪತ್ರೆಯಲ್ಲಿ ಕೆಲವೊಂದು ಬದಲಾವಣೆ ತಂದಿದ್ದೇವೆ.

ಇನ್ನು ಆಸ್ಪತ್ರೆಯ ಸಿಬ್ಬಂದಿಗಳಿಗೆ, ಕೋವಿಡ್‌ ಹರಡಲು ಶುರುವಾದಾಗಲೇ, ಸರ್ಜಿಕಲ್‌ ಮಾಸ್ಕ್‌ ಹಾಗೂ N95 ಮಾಸ್ಕ್‌, ಫೇಸ್‌ ಶೀಲ್ಡ್‌ ಹಾಗೂ ಪ್ರತಿದಿನವೂ ನೈಟ್ರಿಲ್‌ ಗ್ಲೌವ್ಸ್‌ ಕೊಡುತ್ತಿದ್ದೇವೆ. ಅದಾಗ್ಯೂ ನಮ್ಮ ಸಿಬ್ಬಂದಿಗಳಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಚಿಕಿತ್ಸೆ ನೀಡಿ ಹೋಂ ಕ್ವಾರಂಟೈನ್‌ನಲ್ಲಿರಿಸುತ್ತೇವೆ. ಇದುವರೆಗೂ ಒಬ್ಬರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಕೊನೆಗೆ ಅವರಿಗೂ ನೆಗೆಟೀವ್‌ ಬಂದಿದೆ ಎಂದು ಹೇಳಿದ್ದಾರೆ.

ರ‍್ಯಾಪಿಡ್‌ ಕಿಟ್ಸ್‌ ನೀಡಿದರೆ ನಮಗೆ ಬಹಳ ಉಪಯೋಗವಾಗುತ್ತೆ. ನಮಗೆ ಅಂತಲ್ಲಾ, ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಇದು ಬಹಳ ಪ್ರಯೋಜನವಾಗಲಿದೆ. ಕೋವಿಡ್‌ ರ‍್ಯಾಪಿಡ್‌ ಟೆಸ್ಟ್‌ ಕಿಟ್‌ ಕೊಟ್ಟುಬಿಟ್ಟು ಲೆಕ್ಕ ಕೇಳಲಿ, ಹಾಗಾದಾಗ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಅನಿವಾರ್ಯ ತಪ್ಪುತ್ತದೆ ಹಾಗೂ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗುತ್ತದೆ ಎಂದಿದ್ದಾರೆ. ಇದರಿಂದ ರೋಗಿಗಳಿಗೆ ಚಿಕಿತ್ಸೆ ಸಿಗುವ ವೇಗವೂ ಹೆಚ್ಚುತ್ತದೆ. ನಾವು ಬೇಕಿದ್ರೆ ಉಚಿತವಾಗಿಯೇ ಮಾಡುತ್ತೇವೆ, ಬಳಿಕ ಲೆಕ್ಕವೂ ನೀಡುತ್ತೇವೆ. ಇದು ರೋಗಿಗಳಿಗೆ ಪ್ರಯೋಜನಾಕಾರಿಯೂ ಆಗುತ್ತದೆ.

ಸರ್ಕಾರ ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಆದರೆ ನಮ್ಮಂತಹ ಖಾಸಗೀ ಆಸ್ಪತ್ರೆಗಳೊಂದಿಗೂ ಹೊಂದಾಣಿಕೆ ಮಾಡಿಕೊಂಡು, ಸ್ಟ್ರಾಟರ್ಜಿ ಮಾಡಿಕೊಂಡು ಕೆಲಸ ನಿರ್ವಹಿಸಿದರೆ ಇನ್ನೂ ಅನುಕೂಲವಾಗುತ್ತದೆ. ಈಗ ಸರ್ಕಾರ ಅಧ್ಬುತವಾಗಿ ಕೆಲಸ ಮಾಡುತ್ತಿದೆ, ನಾವೂ ಅವರಿಗೆ ಸಹಾಯ ಮಾಡಲು ಬಯಸುತ್ತೇವೆ.

ಕರೋನಾ ಕೆಲವೊಬ್ಬರಲ್ಲಿ ವಿಪರೀತ ಸಮಸ್ಯೆ ಉಂಟುಮಾಡುತ್ತದೆ. ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಆರೋಗ್ಯಪೂರ್ಣ ವ್ಯಕ್ತಿಗಳಿಗೆ ಸಮಸ್ಯೆ ಆಗುವುದಿಲ್ಲವೆಂದು ಅಸಡ್ಡೆಯಿಂದ ವರ್ತಿಸಬಾರದು. ನಮ್ಮಿಂದ ಇನ್ನೊಬ್ಬರಿಗೆ ಹರಡದಂತೆಯೂ ಜಾಗೃತೆ ವಹಿಸಬೇಕು. ಆಸ್ಪತ್ರೆಗೆ ಭಯಪಟ್ಟು ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಸರಿಯಲ್ಲ. ಆಸ್ಪತ್ರೆಗೆ ಬರಬೇಕು, ಚಿಕಿತ್ಸೆ ನೀಡಲು ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದ್ದಾರೆ.

ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಾಲು ಆಸ್ಪತ್ರೆಯನ್ನು ಸ್ಥಾಪಿಸಿದ್ದು ಪ್ರಸ್ತುತ ಮಾಲೀಕರಾಗಿರುವ ಡಾ. ಮನೋಜವಮ್‌ ಅವರ ಹೆತ್ತವರು. ಡಾ. ಮನೋಜವಂ ಅವರ ತಾಯಿಯೂ ವೈದ್ಯೆಯಾಗಿದ್ದು ಚನ್ನಪಟ್ಟಣದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೆ ಡಾ. ಮನೋಜವಮ್‌ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಙ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com