ಈ ಗ್ರಾಮದಲ್ಲಿ ಸ್ವಾತಂತ್ರ್ಯ ದಿನವನ್ನು ದೀಪಾವಳಿಯಂತೆ ಆಚರಿಸುತ್ತಾರೆ...
ರಾಜ್ಯ

ಈ ಗ್ರಾಮದಲ್ಲಿ ಸ್ವಾತಂತ್ರ್ಯ ದಿನವನ್ನು ದೀಪಾವಳಿಯಂತೆ ಆಚರಿಸುತ್ತಾರೆ...

ಈ ಹಬ್ಬದ ತಯಾರಿ ಮೂರು ನಾಲ್ಕು ದಿನಗಳಿಂದ ನಡೆಯುತ್ತದೆ. ಊರಿನ ಯುವಕರು ತಮ್ಮ ಸುತ್ತಮುತ್ತ ಊರಿನ ಸ್ನೇಹಿತರಿಗೆ ಆಮಂತ್ರಣ ನೀಡುತ್ತಾರೆ. ಇಡೀ ಊರನ್ನೇ ಶೃಂಗಾರ ಮಾಡುತ್ತಾರೆ. ಎಲ್ಲ ಬೀದಿಗಳಲ್ಲಿಯೂ ರಂಗೋಲಿ ಹಾಕುತ್ತಾರೆ.

ಕೆ. ಶ್ರೀಕಾಂತ್

ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು. ನಾವೆಲ್ಲ ಆಗಸ್ಟ್ 15 ರಂದು ಈ ಹಬ್ಬವನ್ನು ಆಚರಿಸುತ್ತೇವೆ. ಆದರೆ ಹುಬ್ಬಳ್ಳಿಯ ಹತ್ತಿರದ ಜಕ್ಕಲಿ ಗ್ರಾಮದಲ್ಲಿ ಈ ಹಬ್ಬವನ್ನು ಗ್ರಾಮವೆಲ್ಲ ಸೇರಿ ಆಗಸ್ಟ್ 14 ರಂದು ನಡುರಾತ್ರಿಯಲ್ಲಿಯೇ ಆಚರಿಸುತ್ತಾರೆ. ಹೌದು, ಊರಿನ ನೂರಾರು ಜನರೆಲ್ಲಾ ರಾತ್ರಿಯೆಲ್ಲಾ ಎದ್ದು ಧ್ವಜಾರೋಹಣದ ನಂತರ ಊರಿನ ಹಿರಿಯರನ್ನು ಸನ್ಮಾನಿಸಿ ಅವರಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಯಶೋಗಾಥೆಗಳನ್ನು ಕೇಳುತ್ತಾರೆ. ಸ್ಥಳೀಯವಾಗಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೇಗಿತ್ತು ಹಾಗೂ ಗ್ರಾಮದ ಹಾಗೂ ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಯೋಧರ ಬಗ್ಗೆಯೂ ಇಲ್ಲಿ ಭಾಷಣಗಳಿರುತ್ತವೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ನಸುಕಿನವೆರೆಗೆ ಹಬ್ಬದಂತೆ ಆಚರಿಸುತ್ತಾರೆ.

ಅಂದಹಾಗೆ ಈ ಊರು ಹುಬ್ಬಳ್ಳಿಯಿಂದ ಗದುಗಿಗೆ ಬಂದು, ನಂತರ ನರೇಗಲ್ ನಿಂದ ಜಕ್ಕಲಿಗೆ ಹೋಗಬಹುದು. ಇದು ಗದಗ್ ಜಿಲ್ಲೆ ರೋಣ ತಾಲೂಕಿನ ವ್ಯಾಪ್ತಿಯಲ್ಲಿ ಬರುತ್ತದೆ.

ಈ ಹಬ್ಬದ ತಯಾರಿ ಮೂರು ನಾಲ್ಕು ದಿನಗಳಿಂದ ನಡೆಯುತ್ತದೆ. ಊರಿನ ಯುವಕರು ತಮ್ಮ ಸುತ್ತಮುತ್ತ ಊರಿನ ಸ್ನೇಹಿತರಿಗೆ ಆಮಂತ್ರಣ ನೀಡುತ್ತಾರೆ. ಇಡೀ ಊರನ್ನೇ ಶೃಂಗಾರ ಮಾಡುತ್ತಾರೆ. ಎಲ್ಲ ಬೀದಿಗಳಲ್ಲಿಯೂ ರಂಗೋಲಿ ಹಾಕುತ್ತಾರೆ. ಪ್ರತಿ ಮನೆಯ ಮುಂದೆ ತಳಿರು ತೋರಣಗಳು ರಾರಾಜಿಸುತ್ತವೆ. ಮನೆಯ ಎಲ್ಲ ಸದಸ್ಯರು ರಾತ್ರಿ ಚಳಿಯನ್ನು ಲೆಕ್ಕಿಸದೇ ದೇಶ ಭಕ್ತಿಯನ್ನು ಮೆರೆಯುತ್ತಾರೆ. ಈ ವೈಭವವನ್ನು ಕಣ್ತುಂಬಿಕೊಳ್ಳಲೆಂದೇ ಪರ ಊರುಗಳಿಂದ ಜನರು ತಂಡೋಪತಂಡವಾಗಿ ಆಗಮಿಸುತ್ತಾರೆ. ಕಾರ್ಯಕ್ರಮದ ನಂತರ ಎಲ್ಲರೂ ಜೊತೆಗೂಡಿ ಊಟ ಮಾಡಿ ಸಂಭ್ರಮಿಸುತ್ತಾರೆ.

ಜಕ್ಕಲಿಯ ಹವ್ಯಾಸಿ ಬರಹಗಾರರು ಹಾಗೂ ಸಾಮಾಜಿಕ ಹೋರಾಟಗಾರರಾದ ಸಂಗಮೇಶ ಮೆಣಸಗಿ ಅವರು ಪ್ರತಿಧ್ವನಿ ತಂಡಕ್ಕೆ ತಿಳಿಸಿದರು, “ಪ್ರತಿ ವರ್ಷವೂ ಸ್ವಾತಂತ್ರ್ಯದ ಹಬ್ಬವನ್ನು ದೀಪಾವಳಿಯಂತೆಯೇ ಆಚರಿಸುತ್ತ ಬಂದಿದ್ದೇವೆ. ಊರಿನ ಮಹಿಳೆಯರು ಹಾಗೂ ವೃದ್ದರೂ ಕೊರೆಯುವ ಚಳಿಯನ್ನು ಲೆಕ್ಕಿಸದೇ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಹಬ್ಬ ಆರಂಭವಾಗುವುದು ರಾತ್ರಿ 11 ಕ್ಕೆ. ಊರ ಮಧ್ಯದಲ್ಲಿರುವ ಬಯಲು ಜಾಗೆಯಲ್ಲಿ ಎಲ್ಲರೂ ಸೇರುತ್ತಾರೆ. ದೇಶ ಭಕ್ತಿ ಗೀತೆಗಳು ಆರಂಭವಾಗುತ್ತಿದ್ದಂತೆ ಮೈ ಚಳಿ ಬಿಟ್ಟು ದೇಶ ಭಕ್ತಿಯಿಂದ ಮನವೆಲ್ಲ ಉಲ್ಲಸಿತಗೊಳ್ಳುತ್ತದೆ. ಸರಿಯಾಗಿ 12 ಗಂಟೆಗೆ ಧ್ವಜಾರೋಹಣ ಮಾಡಿ ನಂತರ ಎಲ್ಲರೂ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರು. ಊರಿನ ಪುಟ್ಟ ಪುಟ್ಟ ಬಾಲಕ ಬಾಲಕಿಯರು ಹಾಡು, ನೃತ್ಯಗಳ ಪ್ರದರ್ಶನ ನೀಡುತ್ತಾರೆ. ಹೀಗೆ ನೂರಾರು ಜನ ಸೇರಿ ರಾಷ್ಟ್ರೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ.”.

ಕರೋನಾದಿಂದ ಬಿತ್ತು ಬ್ರೇಕ್

ಹಲವು ದಶಕಗಳಿಂದ ನಡೆದುಕೊಂಡು ಬರುತ್ತಿದ್ದ ಅದ್ದೂರಿ ಹಬ್ಬಕ್ಕೆ ಈ ಬಾರಿ ಕೋವಿಡಾತಂಕದಿಂದ ಬ್ರೇಕ್ ಬಿತ್ತು. ಆದರೂ ರಾಷ್ಟ್ರೀಯ ಹಬ್ಬವನ್ನು ಬಿಡಬಾರದು ಎಂದು ಯುವಕರು ಸಾಂಕೇತಿಕವಾಗಿ ಸಾಮಾಜಿಕ ಅಂತರ ಕಾಪಿಟ್ಟುಕೊಂಡು ಮಾಸ್ಕ್ ಧರಿಸಿ ಆಚರಿಸಿದರು. ಎಲ್ಲರಿಗೂ ಡಂಗುರ ಮೂಲಕ ಎಚ್ಚರವಹಿಸಿ ಭಾಗವಹಿಸಲು ಸೂಚಿಸಲಾಗಿತ್ತು. ಗ್ರಾಮದ 50 ಜನರ ನಡುವೆ ಸರಳವಾಗಿ ಹಬ್ಬವನ್ನು ಆಚರಿಸಿದೆವು ಎಂದು ಪ್ರತಿಧ್ವನಿ ತಂಡಕ್ಕೆ ಗ್ರಾಮಸ್ಥರು ತಿಳಿಸಿದರು.

Click here to follow us on Facebook , Twitter, YouTube, Telegram

Pratidhvani
www.pratidhvani.com