ಸಾರ್ವಜನಿಕ ಗಣೇಶೋತ್ಸವ; ಸರ್ಕಾರದ ಗೊಂದಲಕಾರಿ ನಡೆ..!
ರಾಜ್ಯ

ಸಾರ್ವಜನಿಕ ಗಣೇಶೋತ್ಸವ; ಸರ್ಕಾರದ ಗೊಂದಲಕಾರಿ ನಡೆ..!

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಬಗ್ಗೆ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಕರೋನಾ ನಿಯಮ ಪಾಲಿಸಿಕೊಂಡು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ

ಕೃಷ್ಣಮಣಿ

ಸ್ವತಂತ್ರ ಹೋರಾಟದ ವೇಳೆಯಲ್ಲಿ ಸಾರ್ವಜನಿಕವಾಗಿ ಶುರುವಾದ ಗಣೇಶ ಆಚರಣೆ ಇಂದಿಗೂ ಹಿಂದೂಗಳ ವಾರ್ಷಿಕ ಹಬ್ಬವಾಗಿ ಬದಲಾಗಿದೆ. ಗಣೇಶ ಚತುರ್ಥಿ ಹಬ್ಬದ ಆಚರಣೆಗಿಂತಲೂ ಗಣೇಶನನ್ನು ಕೂರಿಸಿ ವಿಜೃಂಭಿಸುವ ಕಾಲಘಟ್ಟ ಬಂದಾಗಿದೆ. ಒಂದೊಂದು ಏರಿಯಾ ಒಂದೊಂದು ಬೀದಿಯಲ್ಲಿ ಗಣೇಶನನ್ನು ಕೂರಿಸಿ ಜನ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಬೃಹತ್‌ ಶೋಭಾ ಯಾತ್ರೆಗಳನ್ನು ಆಯೋಜಿಸಿ ಸಾವಿರಾರು ಜನರ ಮೆರವಣಿಗೆಯಲ್ಲಿ ಗಣೇಶ ವಿಸರ್ಜನೆ ಮಾಡಲಾಗುತ್ತದೆ. ಆದರೆ ಈ ಬಾರಿ ಗಣೇಶೋತ್ಸವ ಇರುವುದು ಅನುಮಾನ. ಯಾಕೆಂದರೆ ಕೋವಿಡ್‌ 19 ಮಾರ್ಗಸೂಚಿ ಅನ್ವಯ ಸಭೆ ಸಮಾರಂಭ ಹಬ್ಬಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ.

ಈ ಬಗ್ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್‌ ಮಂಜುನಾಥ್‌, ಕೇಂದ್ರ ಸರ್ಕಾರ ಆಗಸ್ಟ್ 31 ರವರೆಗೆ ಅನ್ವಯವಾಗುವಂತೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆ ಮಾರ್ಗಸೂಚಿ ಅನ್ವಯ ಯಾವುದೇ ಸಭೆ ಸಮಾರಂಭ, ಹಬ್ಬಗಳ - ಆಚರಣೆಗಳನ್ನ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ನಮ್ಮ ನಿರ್ಣಯವೂ ಅದೇ ಆಗಿದ್ದು ಪುನರ್ ಪರಿಶೀಲಿಸುವ ಮಾತೆ ಇಲ್ಲ ಎಂದಿದ್ದಾರೆ. ನಮ್ಮ ಮನೆಗಳಲ್ಲಿ ಹಲವು ವರ್ಷಗಳಿಂದ ಗಣೇಶ ಹಬ್ಬ ಆಚರಣೆ ಮಾಡಿ, ಮನೆಯಲ್ಲಿಯೇ ವಿಸರ್ಜನೆ ಮಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಜನರನ್ನ ಸೇರಿಸಿಕೊಂಡು ಕಾರ್ಯಕ್ರಮ ಮಾಡುವುದು ಎಷ್ಟು ಸರಿ..? ಎಂದು ಪ್ರಶ್ನಿಸಿದ್ದಾರೆ.

ಗಣೇಶ ಮೂರ್ತಿ ತಯಾರಿ ಮಾಡುವ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಮೂರ್ತಿ ತಯಾರಿ ಮಾಡುವವರ ಕಷ್ಟ ನನಗೂ ಅರ್ಥವಾಗುತ್ತೆ. ಆದರೆ ಈ ವರ್ಷ ವ್ಯಾಪಾರವಾಗದ ಗಣೇಶ ಮೂರ್ತಿಗಳನ್ನು ಮುಂದಿನ ವರ್ಷ ಮಾರಾಟ ಮಾಡಬಹುದು. ಹೀಗಾಗಿ ಗಣೇಶ ಹಬ್ಬದ ನಿರ್ಣಯವನ್ನು ನಾವು ಕೈಬಿಡುವ ಮಾತೇ ಇಲ್ಲ ಎಂದು ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಸ್ಪಷ್ಟವಾಗಿ ಹೇಳಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಮುತಾಲಿಕ್‌ ಆಕ್ರೋಶ..!

ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಬಗ್ಗೆ ಸರ್ಕಾರ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಕರೋನಾ ನಿಯಮ ಪಾಲಿಸಿಕೊಂಡು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಸರ್ಕಾರದವರು ಅಧಿಸೂಚನೆ ಹೊರಡಿಸ್ತಾರೋ ಬಿಡ್ತಾರೋ, ಆದರೆ ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ನಾನು ಹಿಂದೂ ಮುಖಂಡನಾಗಿ ಹೇಳ್ತೀನಿ ನಿಮಗೆ ತಾಕತ್ ಇದ್ರೆ, ಅರೆಸ್ಟ್ ಮಾಡಿ, ತಡೀರಿ ನೋಡೋಣ. ನಿಮಗೆ ದುಡ್ಡು ಬೇಕಾದಾಗ ಜನ ಬೇಕಾದರೆ ಸಾಯಿಲಿ ಎಂದು ಸಾರಾಯಿ ಕುಡಿಯೋಕೆ ಅನುಮತಿ ಕೊಡ್ತೀರಿ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜ್ ಅಳವಡಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ಈ ಬಗ್ಗೆ ಕೂಡಲೇ ಗೃಹಮಂತ್ರಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಆದೇಶ ಹೊರಡಿಸಬೇಕೆಂದು ಎಂದು ಆಗ್ರಹ ಮಾಡಿದ್ದಾರೆ.

ನಾವು ಹಿಂದಿನಿಂದಲೂ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದೀವಿ. ಆ ಸಂಪ್ರದಾಯ ನಾವು ಮುರಿಯುವುದಿಲ್ಲ. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋಕೆ ಅವಕಾಶ ಕೊಡಬೇಕು. ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೊನಾ ಕೇಸ್ ಇವೆ. ಆದರೂ ಆ ರಾಜ್ಯದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದ್ದಾರೆ. ಆಗಿದ್ದ ಮೇಲೆ ನಮ್ಮ ರಾಜ್ಯದಲ್ಲಿ ಅವಕಾಶ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಕುರಿತಂತೆ ಸ್ಥಳೀಯವಾಗಿ ಪರಿಶೀಲಿಸಿ ಆಯಾಯ ಜಿಲ್ಲಾಧಿಕಾರಿಗಳ ಹಂತದಲ್ಲಿ ಅನುಮತಿ ನೀಡುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಧಾರ್ಮಿಕದತ್ತಿ ಇಲಾಖೆ ಈಗಾಗಲೇ ಕೋರಿದೆ

ಇಂದಿನ ಸ್ಥಿತಿಯಲ್ಲಿ ಅಡ್ಡಿ ಮಾಡುವುದು ಸೂಕ್ತವೇ..?

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕರೋನಾ ನಿಯಂತ್ರಣ ಮಾಡುವ ಯಾವ ಉದ್ದೇಶವೂ ಇಲ್ಲ ಎನ್ನುವ ಹಾಗೆ ಎಲ್ಲಾ ವ್ಯವಹಾರಗಳನ್ನು ಮುಕ್ತವಾಗಿ ಬಿಡಲಾಗಿದೆ. ಹಾಗಿದ್ದ ಮೇಲೆ ಹಬ್ಬವನ್ನು ಮನೆಯಲ್ಲೇ ಮಾಡಿಕೊಳ್ಳಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಸರ್ಕಾರ ಚಿಂತನೆ ಮಾಡಬೇಕಿದೆ. ರಾಜಕೀಯ ನಾಯಕರು ನೂರಾರು ಮಂದಿ ಒಂದೆಡೆ ಸೇರಿ ಕಾರ್ಯಕ್ರಮ ಮಾಡಬಹುದು, ರಾಜಕೀಯ ಶಕ್ತಿ ಇದ್ದವರು ಯಾವುದೇ ಕಾರ್ಯಕ್ರಮವನ್ನು ಮಾಡಬಹುದು ಆದರೆ ಜನಸಮಾನ್ಯರು ಗೌರಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಮಾಡಬಾರದು ಎನ್ನುವುದು ಯಾವ ನ್ಯಾಯ..? ಜನರ ನಂಬಿಕೆ ಮೇಲೆ ಹಸ್ತಕ್ಷೇಪ ಮಾಡಿದಂತೆ ಆಗುವುದಿಲ್ಲವೇ..? ಶ್ರೀಮಂತರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಸಂವಿಧಾನದಲ್ಲಿ ಇದೆಯಾ..? ಎನ್ನುವ ಪ್ರಶ್ನೆ ಮೂಡುತ್ತದೆ.

ಸುಪ್ರೀಂಕೋರ್ಟ್‌ ಕೊಡಲಿಲ್ಲವೇ ಅನುಮತಿ..?

ಒಡಿಶಾದ ಪುರಿ ಜಗನ್ನಾಥ ಸ್ವಾಮಿ ರಥೋತ್ಸವ ಕಳೆದ ತಿಂಗಳು ಜೂನ್‌ನಿಂದ ನಡೆದಿತ್ತು. ಆ ವೇಳೆ ಇನ್ನೂ ಕೂಡ ಸಂಪೂರ್ಣ ಲಾಕ್‌ಡೌನ್‌ ನಿಯಮಗಳು ಅನ್‌ಲಾಕ್‌ ಆಗಿರಲಿಲ್ಲ. ಹಾಗಾಗಿ ರಥೋತ್ಸವ ಮಾಡಲು ರಾಜ್ಯ ಸರ್ಕಾರ ಅನುಮತಿ ಕೊಡಲಿಲ್ಲ. ಆ ಬಳಿಕ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ದೇವಸ್ಥಾನ ಆಡಳಿತ ಮಂಡಳಿ ನಮ್ಮ ಸಂಪ್ರದಾಯ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ, ಹಾಗಾಗಿ ನಮಗೆ ಅನುಮತಿ ನೀಡಬೇಕು ಎಂದು ಆಗ್ರಹ ಮಾಡಿದ್ರು. ಆದರೆ ಅನುಮತಿ ಕೊಟ್ಟರೆ ನಮ್ಮನ್ನು ಆ ಜಗನ್ನಾಥನೇ ಕ್ಷಮಿಸುವುದಿಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಲಾಗಿತ್ತು. ಆ ಬಳಿಕ ಮತ್ತೊಮ್ಮೆ ಮೇಲ್ಮನವಿ ಹೋದ ಬಳಿಕ ಅರ್ಜಿ ವಿಚಾರಣೆ ನಡೆಸಿದೆ ಸುಪ್ರೀಂಕೋರ್ಟ್‌ ಮುಖ್ಯನ್ಯಾಯಮೂರ್ತಿ ಎಸ್‌.ಎ ಬೊಬ್ಡೆ, ಕರ್ಫ್ಯೂ ಜಾರಿ ಮಾಡಿ ಕೆಲವೇ ಕೆಲವು ಜನರನ್ನು ಬಳಸಿಕೊಂಡು ರಥೋತ್ಸವ ಮಾಡುವಂತೆ ಅನುಮತಿ ಕೊಟ್ಟಿತ್ತು.

ಕರೋನಾ ಸೋಂಕಿನಿಂದ ನಲುಗಿದ ಮಹಾರಾಷ್ಟ್ರ ಇನ್ನೂ ಕೂಡ ಚೇತರಿಕೆ ಕಂಡಿಲ್ಲ. ಆದರೂ ಕೊನಾರ್ಕ್‌ ಗಣೇಶೋತ್ಸವಕ್ಕೆ ಅನುಮತಿ ನೀಡಿ ಆದೇಶ ಮಾಡಿದೆ. ರಾಜ್ಯ ಸರ್ಕಾರವೇ ಬಸ್‌ ವ್ಯವಸ್ಥೆಯನ್ನೂ ಕಲ್ಪಿಸಿದೆ. ಅಲ್ಲಿಗೆ ತೆರಳುವ ಪ್ರತಿಯೊಬ್ಬರನ್ನೂ ಕರೋನಾ ಟೆಸ್ಟ್‌ ಮಾಡಲಾಗ್ತಿದೆ. ಒಂದು ವೇಳೆ ಸೋಂಕು ಬಂದಿದ್ದರೆ, ಕ್ವಾರಂಟೈನ್‌ ಕೇಂದ್ರಕ್ಕೆ ರವಾನೆ ಮಾಡುವ ವ್ಯವಸ್ಥೆ ಮಾಡಿದೆ. ಮಹಾರಾಷ್ಟ್ರದಲ್ಲಿ ಸೋಂಕು ಉಲ್ಬಣವಾಗಿದ್ದರೂ ಗಣೇಶೋತ್ಸವಕ್ಕೆ ಅಡ್ಡಿ ಮಾಡಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಎಲ್ಲಾ ವ್ಯವಹಾರಗಳಿಗೆ ಅವಕಾಶ ಕೊಟ್ಟ ಮೇಲೂ ಗಣೇಶೋತ್ಸವ ತಡೆಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸ ಅಷ್ಟೆ.

Click here to follow us on Facebook , Twitter, YouTube, Telegram

Pratidhvani
www.pratidhvani.com