ಸತ್ತ ದನದ ಚರ್ಮ ಸುಲಿದಿದ್ದಕ್ಕೆ ದಲಿತರ ಸಾಯಿಸಿದ್ದು ಯಾರ ಆಡಳಿತದಲ್ಲಿ?- ಸಿದ್ದರಾಮಯ್ಯ
ರಾಜ್ಯ

ಸತ್ತ ದನದ ಚರ್ಮ ಸುಲಿದಿದ್ದಕ್ಕೆ ದಲಿತರ ಸಾಯಿಸಿದ್ದು ಯಾರ ಆಡಳಿತದಲ್ಲಿ?- ಸಿದ್ದರಾಮಯ್ಯ

ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು? ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?

ಪ್ರತಿಧ್ವನಿ ವರದಿ

ಬಿ ಎಲ್‌ ಸಂತೋಷ್‌ ದಲಿತರನ್ನು ಕಾಂಗ್ರೆಸ್‌ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನಕ್ಕೆ ಹೋಗಿ ತೀವ್ರ ತರಾಟೆಗಳೆನ್ನುದುರಿಸುತ್ತಿದ್ದಾರೆ. ಕಾಂಗ್ರೆಸ್‌ ಶಾಸಕ ಝಮೀರ್‌ ಅಹಮದ್‌, ಬಿ ಎಲ್‌ ಸಂತೋಷ್‌ರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯ ವಿರುದ್ಧ ಟ್ವಿಟರ್‌ ಸಮರ ಶುರು ಮಾಡಿದ್ದಾರೆ.

ಬಿ ಎಲ್‌ ಸಂತೋಷ್‌ ಅವರು 'ಹಿಂದುತ್ವ'ದ ಜಪ ನಿಲ್ಲಿಸಿ 'ದಲಿತ' ಜಪ ಶುರು ಮಾಡಿದ್ದಾರೆ. 'ಹಿಂದು-ಒಂದು' ಎಂದು ಭಜನೆ ಮಾಡ್ತೀರಿ, ಜಾತಿ ಮೂಲದ ತಾರತಮ್ಯ,ಶೋಷಣೆಗಳ ಜೊತೆ ಗುದ್ದಾಡಿ, ದಲಿತರೊಬ್ಬರು ಶಾಸಕರಾದರೂ ಅವರನ್ನು ದಲಿತರೆಂದು ಹಂಗಿಸುತ್ತೀರಿ. ನಿಮ್ಮನ್ನು ಕೂಡಾ ನಿಮ್ಮ ಜಾತಿಯಿಂದಲೇ ಕರೆಯೋಣವೇ? ಎಂದು ನೇರವಾಗಿ ಮೂಲಕ್ಕೇ ಪ್ರಶ್ನೆ ಬಿಟ್ಟಿದ್ದಾರೆ ಸಿದ್ದರಾಮಯ್ಯ.

ರಾಜ್ಯದಲ್ಲಿ ನಿಮ್ಮದೇ ಪಕ್ಷ‌ ಅಧಿಕಾರದಲ್ಲಿರುವಾಗ ಒಬ್ಬ ದಲಿತ ಶಾಸಕನ ಮನೆಗೆ ರಕ್ಷಣೆ ನೀಡಲು ನಿಮಗೆ ಸಾಧ್ಯವಾಗಿಲ್ಲ, ಇನ್ನು ಕೋಟ್ಯಂತರ ಸಂಖ್ಯೆಯ ಬಡ-ಅಸಹಾಯಕ ದಲಿತರ ಮನೆಗಳಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ? ಇದು ತಲೆತಗ್ಗಿಸುವಂತಹ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ?

ದಲಿತರ ಬಗ್ಗೆ ನಿಮ್ಮ ಮೊಸಳೆ ಕಣ್ಣೀರನ್ನು ದೇಶ ಕಂಡಿದೆ. ಸತ್ತ ದನದ ಚರ್ಮ ಸುಲಿದಿದ್ದಕ್ಕೆ, ಗೋಮಾಂಸ ತಿಂದಿದ್ದಕ್ಕೆ, ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ, ಕುದುರೆ ಏರಿದ್ದಕ್ಕೆ, ಮೀಸೆ ಬಿಟ್ಟಿದ್ದಕ್ಕೆ... ದಲಿತರ ಬೆನ್ನತ್ತಿ ಹಿಂಸಿಸಿ, ಸಾಯಿಸಿದ್ದು ಯಾರ ಆಡಳಿತದಲ್ಲಿ?

ದಲಿತರು ನಾಯಿಗಳೆಂದು ತುಚ್ಛೀಕರಿಸಿದವರು, ಮೀಸಲಾತಿಯನ್ನು ವಿರೋಧಿಸುತ್ತಿರುವವರು, ಸಂವಿಧಾನವನ್ನು ಬದಲಾಯಿಸಬೇಕೆನ್ನುವವರು, ಡಾ.ಅಂಬೇಡ್ಕರ್ ಅವರನ್ನು ಅವಮಾನಿಸುವವರು ಯಾವ ಪಕ್ಷದವರು? ಇಂತಹ ಮನುಷ್ಯ ವಿರೋಧಿಗಳ ವಿರುದ್ಧ ನಿಮ್ಮ ಪಕ್ಷವೇನಾದರೂ ಕ್ರಮ ಕೈಗೊಂಡಿದೆಯೇ?

ನಿಮ್ಮ ಕಾಲದಲ್ಲಿ ದಲಿತರ ಹತ್ಯೆ/ದೌರ್ಜನ್ಯ ದುಪ್ಪಟ್ಟಾಗಿದೆ ಎಂದು NCRBHQ ವರದಿ ಹೇಳುತ್ತಿದೆ. ಹೀಗಿದ್ದರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಸುತ್ತೀರಿ. ನಿಮ್ಮ ದಲಿತರ ಮೇಲಿನ ಕಾಳಜಿ ಇದೇನಾ?

ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು‌? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು ಎನ್ನುವುದು ಅವರಿಗೆ ಗೊತ್ತಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ನೀಡಿದ್ದ ಹಣ ರೂ. 22,161 ಕೋಟಿ ಮಾತ್ರ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ನೀಡಿದ್ದ ಹಣ ರೂ. 88,395 ಕೋಟಿ. ನರೇಂದ್ರ ಮೋದಿಗೆ ಹೇಳಿ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುತ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com