ಗಲಭೆಕೋರನಿಗೆ ಕೇಸು ಹಿಂಪಡೆಯುವ ಅಭಯ ನೀಡಿದರೇ ಗೃಹ ಸಚಿವರು?
ರಾಜ್ಯ

ಗಲಭೆಕೋರನಿಗೆ ಕೇಸು ಹಿಂಪಡೆಯುವ ಅಭಯ ನೀಡಿದರೇ ಗೃಹ ಸಚಿವರು?

ಈ ವೀಡಿಯೋ ಮಂಗಳೂರು ಗಲಭೆಗೆ ಸಂಬಂಧಿಸಿದ್ದು, ಆತ ಮಂಗಳೂರಿನ ಸಂಘಪರಿವಾರದ ಪ್ರಮುಖ ವ್ಯಕ್ತಿ. ಆತ ತನ್ನ ಮೇಲಿನ ಪ್ರಕರಣ ವಾಪಸು ಪಡೆಯುವಂತೆ ಸಚಿವರ ಬಳಿ ಮನವಿ ಮಾಡಿದಾಗ, ಸಚಿವರು ಔದಾರ್ಯದಿಂದ ಈ ಅಭಯ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ.

ಪ್ರತಿಧ್ವನಿ ವರದಿ

ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಅತ್ಯುಗ್ರ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ರಾಜ್ಯ ಸರ್ಕಾರ, ಗಲಭೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸ ಮಾಡಿದವರನ್ನು ಗುರುತಿಸಿ, ಉತ್ತರಪ್ರದೇಶ ಸರ್ಕಾರದ ಮಾದರಿಯಲ್ಲಿ ಆಸ್ತಿಪಾಸ್ತಿ ನಷ್ಟವನ್ನು ಅವರಿಂದಲೇ ಭರಿಸಲಾಗುವುದು ಎಂದು ಹೇಳಿದೆ.

ಗಲಭೆಕೋರರ ಆಸ್ತಿಪಾಸ್ತಿ ಜಪ್ತಿ ಮಾಡಿಕೊಂಡು ಅವರ ಕೃತ್ಯಕ್ಕೆ ಪ್ರತಿಯಾಗಿ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿರುವುದಾಗಿ ಹಲವು ಹಿರಿಯ ಸಚಿವರು ಹೇಳಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಮತ್ತು ಅದರ ಪರಿವಾರದ ಸಂಘಟನೆಗಳು ಪ್ರತಿಭಟನೆ ನಡೆಸಿ, ಗಲಭೆಕೋರರಿಂದಲೇ ನಷ್ಟ ಭರಿಸಬೇಕು ಮತ್ತು ಅವರಿಗೆ ಗಲ್ಲುಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ಆ ಎಲ್ಲಾ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಗೃಹ ಸಚಿವ ಬಸರಾಜ್ ಬೊಮ್ಮಾಯಿ ಅವರು, ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಮಾಡಿರುವ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ತೀರ್ಮಾನ ತೆಗೆದುಕೊಂಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಮೇರೆಗೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹ ಬಿಗಿ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದೂ ಹೇಳಿದ್ದಾರೆ.

ಪೊಲೀಸ್ ಠಾಣೆಗೆ ಬೆಂಕಿ, ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಬೆಂಕಿ, ಅಂಗಡಿಮುಂಗಟ್ಟು, ಶಾಸಕರ ಮನೆಗೆ ಬೆಂಕಿ, ಹಲವು ಅಂಗಡಿ ಮತ್ತು ವಾಹನ ಜಖಂ ಸೇರಿದಂತೆ ಗಲಭೆಕೋರರ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಎಸಗಿದ್ದಾರೆ ಮತ್ತು ಇಂತಹ ಸ್ವೇಚ್ಛಾಚಾರದ ಘಟನೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ ಎಂಬುದು ನಿಜ. ಆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಎನಿಸಿದರೂ, ಸರ್ಕಾರದ ನಿರ್ಧಾರಕ್ಕೆ ಬಹುತೇಕ ಸ್ವಾಗತಾರ್ಹ ಎಂಬಂತಹ ಪ್ರತಿಕ್ರಿಯೆಯೇ ಸಿಕ್ಕಿದೆ.

ಆದರೆ, ಇಂತಹ ದಿಟ್ಟ ನಿಲುವನ್ನು ಗೃಹ ಸಚಿವರು ಪ್ರಕಟಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಗೃಹ ಸಚಿವರು ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ವೀಡಿಯೋ ಒಂದು ಹರಿದಾಡತೊಡಗಿದೆ. ಬೆಂಗಳೂರು ಗಲಭೆಯ ವಿಷಯದಲ್ಲಿ ಉತ್ತರಪ್ರದೇಶದ ಮಾದರಿ ಅನುಸರಿಸುವ ಮಾತನಾಡಿದ ಸಚಿವರೇ, ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕೇಸರಿ ಶಾಲು ಹೊದ್ದ ಗಲಭೆಕೋರನೊಬ್ಬ ಎನ್ನಲಾದ ವ್ಯಕ್ತಿಗೆ “ನೀನೇನು ಭಯಪಡಬೇಡ, ನಿನ್ನ ಮೇಲಿನ ಪ್ರಕರಣಗಳನ್ನೆಲ್ಲಾ ತೆಗೆದುಹಾಕುತ್ತೇವೆ” ಹೇಳಿದ್ದಾರೆ ಎನ್ನಲಾಗುತ್ತಿರುವ ವೀಡಿಯೋ ಅದು. ಅದರಲ್ಲಿ ಸ್ವತಃ ಗೃಹ ಸಚಿವ ಬೊಮ್ಮಾಯಿ ಮತ್ತು ಅವರ ಜೊತೆಗೆ ನಾಲ್ಕಾರು ಮಂದಿ ಕಾಣಿಸಿಕೊಂಡಿದ್ದು, ಆ ಪೈಕಿ ಕೇಸರಿ ಶಾಲು ಹೊದ್ದ ವ್ಯಕ್ತಿಯೊಬ್ಬ ಸಚಿವರ ಬಳಿ ಏನೋ ಅಹವಾಲು ಹೇಳಿಕೊಂಡಾಗ, ಆತನನ್ನು ಸಮಾಧಾನಪಡಿಸುವ ದಾಟಿಯಲ್ಲಿ ಸಚಿವರು, ಮೇಲಿನ ಮಾತುಗಳನ್ನು ಆಡುವುದು ಸ್ಪಷ್ಟವಾಗಿ ಕೇಳುತ್ತದೆ.

ಈ ವೀಡಿಯೋ ಮಂಗಳೂರು ಗಲಭೆಗೆ ಸಂಬಂಧಿಸಿದ್ದು, ಆತ ಮಂಗಳೂರಿನ ಸಂಘಪರಿವಾರದ ಪ್ರಮುಖ ವ್ಯಕ್ತಿ. ಆತ ತನ್ನ ಮೇಲಿನ ಪ್ರಕರಣ ವಾಪಸು ಪಡೆಯುವಂತೆ ಸಚಿವರ ಬಳಿ ಮನವಿ ಮಾಡಿದಾಗ, ಸಚಿವರು ಔದಾರ್ಯದಿಂದ ಈ ಅಭಯ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ.

ಹಾಗೊಂದು ವೇಳೆ ಅದು ನಿಜವೇ ಆಗಿದ್ದರೆ, ಈಗ ರಾಜ್ಯ ಸರ್ಕಾರದ ಬೆಂಗಳೂರು ಗಲಭೆ ಕುರಿತ ಕಠಿಣ ನಿಲುವಿನ ಹಿಂದಿನ ಉದ್ದೇಶದ ಬಗ್ಗೆಯೇ ಸಂಶಯ ಏಳುತ್ತದೆ. ತಮ್ಮದೇ ಪರಿವಾರದವರು ಭಾಗಿಯಾದ ಗಲಭೆಯಾದರೆ, ಅವರ ವಿರುದ್ಧ ಪೊಲೀಸರು ದಾಖಲಿಸಿದ ಪ್ರಕರಣಗಳನ್ನೂ ವಾಪಸು ಪಡೆದು ಗಲಭೆಕೋರರಿಗೆ ಆಶ್ರಯ ನೀಡುವುದು, ತಮ್ಮ ಸಂಘಟನೆಗಳಲ್ಲದ ಇತರ ಸಂಘಟನೆಗಳ ಗಲಭೆಕೋರರ ವಿಷಯದಲ್ಲಿ ಉತ್ತರಪ್ರದೇಶ ಮಾದರಿ ಅನುಸರಿಸುವುದು ಬಿಜೆಪಿ ಸರ್ಕಾರದ ಧೋರಣೆಯೇ? ಎಂಬ ಪ್ರಶ್ನೆ ಎದ್ದಿದೆ.

ಆ ಹಿನ್ನೆಲೆಯಲ್ಲಿ ಬೆಂಗಳೂರು ಗಲಭೆ ವಿಷಯದಲ್ಲಿ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನದ ಬಗ್ಗೆ ಜನಮೆಚ್ಚುಗೆ ವ್ಯಕ್ತವಾದಷ್ಟೇ ವೇಗದಲ್ಲಿ ಸರ್ಕಾರದ ಉದ್ದೇಶದ ಬಗ್ಗೆಯೇ ಅನುಮಾನಗಳೂ ಎದ್ದಿವೆ. ಸ್ವತಃ ಗೃಹ ಸಚಿವರೇ ಪರಸ್ಪದ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ವಾದಗಳ ಹಿನ್ನೆಲೆಯಲ್ಲಿ, ತೀರಾ ಇರಿಸುಮುರಿಸಿನ ಪರಿಸ್ಥಿತಿ ನಿರ್ಮಾಣವಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com