ಭೀಕರ ಗಾಳಿ- ಮಳೆಗೆ ಕೊಡಗಿನ ಹಾನಿ ಪ್ರಮಾಣ ಏನು?
ರಾಜ್ಯ

ಭೀಕರ ಗಾಳಿ- ಮಳೆಗೆ ಕೊಡಗಿನ ಹಾನಿ ಪ್ರಮಾಣ ಏನು?

ಭೂ ಗರ್ಭ ಶಾಸ್ತ್ರಜ್ಞರ ಪ್ರಕಾರ ಮೊದಲೆರಡು ವರ್ಷ ಮಣ್ಣು ಸಡಿಲವಾಗಿದ್ದ ಗುಡ್ಡಗಳೆಲ್ಲ ಕುಸಿದು ಹೋಗಿವೆ. ಹಾಗಾಗಿ ಇನ್ನು ಕುಸಿಯುವ ಗುಡ್ಡಗಳ ಪ್ರಮಾಣ ಕಡಿಮೆ ಇದೆ.

ಕೋವರ್ ಕೊಲ್ಲಿ ಇಂದ್ರೇಶ್

ಆಗಸ್ಟ್ ತಿಂಗಳ ಮೊದಲ ವಾರದ ಭೀಕರ ಮಳೆ ಗಾಳಿಗೆ ಹತ್ತಾರು ಕೋಟಿ ರೂಪಾಯಿಗಳ ಖಾಸಗೀ ಆಸ್ತಿ ಮತ್ತು ಸರ್ಕಾರೀ ಅಸ್ತಿಗೆ ಹಾನಿ ಅಗಿದೆ. 2018 ಮತ್ತು 2019 ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯು ಈ ವರ್ಷಕ್ಕಿಂತ ಹೆಚ್ಚಿನ ಆವಾಂತರಗಳನ್ನು ಸೃಷ್ಟಿಸಿತ್ತು. ಹಾಗೆ ಹೋಲಿಸಿ ನೋಡಿದರೆ ಈ ವರ್ಷ ಹಾನಿಯ ಪ್ರಮಾಣ ಕಡಿಮೆ ಇದೆ. ಇನ್ನೂ ಆಗಸ್ಟ್ ತಿಂಗಳು ಮುಗಿದಿಲ್ಲವಾದರೂ ಮಳೆ ಮತ್ತು ಗಾಳಿಯ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಭೂ ಕುಸಿತದ ಪ್ರಮಾಣ ಕೂಡ ಕಡಿಮೆ ಆಗಿದೆ.

ಭೂ ಗರ್ಭ ಶಾಸ್ತ್ರಜ್ಞರ ಪ್ರಕಾರ ಮೊದಲೆರಡು ವರ್ಷ ಮಣ್ಣು ಸಡಿಲವಾಗಿದ್ದ ಗುಡ್ಡಗಳೆಲ್ಲ ಕುಸಿದು ಹೋಗಿವೆ. ಹಾಗಾಗಿ ಇನ್ನು ಕುಸಿಯುವ ಗುಡ್ಡಗಳ ಪ್ರಮಾಣ ಕಡಿಮೆ ಇದೆ. ಅದೇನೇ ಇದ್ದರೂ ಪ್ರತೀ ವರ್ಷ ಆಗಸ್ಟ್ ತಿಂಗಳಿನಲ್ಲಿ ಜನರು ಮಳೆಗೆ ಹೆದರಿ ಭಯದಿಂದಲೇ ಬದುಕಬೇಕಾಗಿರುವುದು ಕಟು ಸತ್ಯ.

ಕಳೆದ ಎರಡು ವರ್ಷಗಳಲ್ಲಿ ಕ್ರಮವಾಗಿ 12 ಮತ್ತು 18 ಮಾನವ ಜೀವಹಾನಿ ಸಂಭವಿಸಿತ್ತು. ಅದರೆ ಈ ವರ್ಷ ಈ ತನಕ ವರದಿ ಆಗಿರುವುದು ತಲಕಾವೇರಿಯ ಗುಡ್ಡ ಕುಸಿತದಲ್ಲಿ 5 ಸಾವುಗಳು ಮಾತ್ರ. ಆದರೆ ಖಾಸಗೀ ಆಸ್ತಿ ಪಾಸ್ತಿ ಮತ್ತು ಸರ್ಕಾರೀ ಮೂಲ ಸೌಕರ್ಯ ವ್ಯವಸ್ಥೆಗೆ ಆಗಿರುವ ಹಾನಿ ನೂರಾರು ಕೋಟಿ ರೂಪಾಯಿ ಆಗಿದೆ. ಕೊಡಗಿನಲ್ಲಿ ಕಳೆದ ಎರಡು ವರ್ಷಗಳ ಭೀಕರ ಮಳೆ ಮತ್ತು ಭೂ ಕುಸಿತಕ್ಕೆ ಸಿಲುಕಿ ಸಾವಿರಾರು ಜನ ಸಂತ್ರಸ್ಥರಾಗಿದ್ದಾರೆ. ಸುಮಾರು 1,000 ಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡಿದ್ದಾರೆ. ಅದರೆ ಮನೆ ಕಳೆದುಕೊಂಡಿರುವ ಬಹುತೇಕ ಸಂತ್ರಸ್ಥರಿಗೆ ಇನ್ನೂ ಸರ್ಕಾರ ಮನೆಗಳನ್ನು ಕಟ್ಟಿ ಕೊಟ್ಟಿಲ್ಲ. ಮನೆ ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ನಡೆಯುತ್ತಿದೆ ಎಂದು ಸಂತ್ರಸ್ಥರು ಆರೋಪಿಸುತಿದ್ದಾರೆ. ಈ ನಡುವೆ ಈ ವರ್ಷವೂ ಕೂಡ ಮಳೆ ನೂರಾರು ಸಂತ್ರಸ್ಥರನ್ನು ಸೃಷ್ಟಿಸಿದೆ.

ಜಿಲ್ಲೆಯ ಪ್ರಮುಖ ಬೆಳೆ ಆಗಿರುವ ಕಾಫಿ ತೋಟಗಳಲ್ಲಿ ಅದರಲ್ಲೂ ನದಿಗಳ ಪಕ್ಕದಲ್ಲಿರುವ ತೋಟಗಳಲ್ಲಿ ಎರಡು ಮೂರು ಅಡಿಗಳಷ್ಟು ನೀರು ನಿಂತಿದ್ದು ಗಿಡಗಳು ಕೊಳೆಯಲಾರಂಬಿಸಿವೆ. ಉಳಿದ ತೋಟಗಳಲ್ಲಿ ಶೀತದಿಂದಾಗಿ ಕಾಫಿ ಉದುರುವುದು, ಎಲೆ ಉದುರುವುದು, ಎಲೆ ಚುಕ್ಕೆ ರೋಗ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 3,200 ಹೆಕ್ಟೇರ್ ನಷ್ಟು ಕೃಷಿ ಬೆಳೆ ಹಾನಿಯಾಗಿದ್ದು 32,500 ಹೆಕ್ಟೇರ್ ಗಳಷ್ಟು ತೋಟಗಳು ಬೆಳೆ ಹಾನಿ ಅನುಭವಿಸಿವೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.

ಈ ವರ್ಷ ಒಟ್ಟು ಜಿಲ್ಲೆಯಲ್ಲಿ 304 ಮನೆಗಳಿಗೆ ಹಾನಿ ಆಗಿದ್ದು ಹಾನಿಯಾದ ಒಟ್ಟು ಮನೆಗಳ ಸಂಖ್ಯೆ ಮಡಿಕೇರಿ ತಾಲ್ಲೂಕಿನಲ್ಲಿ 65, ಸೋಮವಾರಪೇಟೆ ತಾಲ್ಲೂಕಿನಲ್ಲಿ 133, ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 106 ಆಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ. ಈ ಗುಡ್ಡಗಾಡು ಜಿಲ್ಲೆಯಲ್ಲಿ ಅತೀ ಹೆಚ್ಚು ಹಾನಿಗೀಡಾಗಿರುವ ಸರ್ಕಾರಿ ಆಸ್ತಿಯೆಂದರೆ ಅದು ರಸ್ತೆ ಮತ್ತು ಸೇತುವೆಗಳದ್ದಾಗಿದೆ. ಗ್ರಾಮೀಣ ಪ್ರದೇಶಗಳ ರಸ್ತೆಗಳು ಅನೇಕ ಕಡೆಗಳಲ್ಲಿ ಕುಸಿದಿದ್ದು ಹಲವಾರು ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಪ್ರಾಥಮಿಕ ಅಂದಾಜಿನಂತೆ: ರಾಜ್ಯ ಹೆದ್ದಾರಿ 35.80 ಕಿ.ಮೀ ಗಳಷ್ಟು ಹಾಳಾಗಿದ್ದು ಜಿಲ್ಲಾ ಮುಖ್ಯ ರಸ್ತೆಗಳು 26.78 ಕಿ.ಮೀ, ಗ್ರಾಮೀಣ ರಸ್ತೆಗಳು 260.37 ಕಿ.ಮೀ., ನಗರ ಪ್ರದೇಶದ ರಸ್ತೆಗುಳು 47 ಕಿ.ಮೀ., ಹಾಗೂ 20 ಸೇತುವೆ ಗಳು ಹಾನಿಗೀಡಾಗಿವೆ.

ಎರಡನೇ ಅತೀ ಹೆಚ್ಚು ನಷ್ಟ ಅನುಭವಿಸಿರುವದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ‌ (ಸೆಸ್ಕ್) ಆಗಿದೆ. ಒಟ್ಟು 2012 ವಿದ್ಯುತ್ ಕಂಬಗಳು, 2650 ಕಿ.ಮೀ.ಗಳಷ್ಟು ಉದ್ದದ ವಿದ್ಯುತ್ ಸರಬರಾಜು ಲೈನ್, 75 ವಿದ್ಯುತ್ ಪರಿವರ್ತಕಗಳು, ಹಾನಿಗೀಡಾಗಿವೆ. ಸೆಸ್ಕ್ ಸಿಬ್ಬಂದಿಗಳು ಹಗಲೂ ರಾತ್ರಿ ಕೆಲಸ ಮಾಡುತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 10-12 ದಿನಗಳಿಂದ ಇನ್ನೂ ವಿದ್ಯುತ್ ಪೂರೈಕೆ ಸಾದ್ಯವಾಗಿಲ್ಲ ಎಂದು ಸೆಸ್ಕ್ ಜಿಲ್ಲಾ ಕಾರ್ಯ ನಿರ್ವಾಹಕ ಎಂಜಿನಿಯರ್ ಸೋಮಶೇಖರ್ ತಿಳಿಸಿದರು. ಕೆಲವೆಡೆಗಳಲ್ಲಿ ಗ್ರಾಮಸ್ಥರೇ ಸೆಸ್ಕ್ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿ ಸಾಮೂಹಿಕ ಶ್ರಮದಾನದ ಮೂಲಕ ವಿದ್ಯುತ್ ಕಂಬ ಅಳವಡಿಕೆ, ಲೈನ್ ಎಳೆಯುವುದರಲ್ಲಿ ಭಾಗಿಯಾಗಿದ್ದು ಆ ಗ್ರಾಮಗಳ ವಿದ್ಯುತ್ ಸರಬರಾಜು ಆರಂಭಗೊಂಡಿದೆ ಎಂದೂ ಅವರು ತಿಳಿಸಿದರು.

ಇದಲ್ಲದೆ ಜಿಲ್ಲೆಯಲ್ಲಿ 74 ಶಾಲಾ ಕಟ್ಟಡಗಳು 13 ಅಂಗನವಾಡಿಗಳು, ಒಂದು ಸಮುದಾಯ ಭವನ, 32 ಸಣ್ಣ ನೀರಾವರಿ ಕೆರೆಗಳು, 48 ನೀರು ಪೂರೈಕೆ ಮತ್ತು ನೈರ್ಮಲ್ಯ ರಚನೆಗಳು, 18 ತಡೆಗೋಡೆಗಳು ಹಾಗೂ ಒಂದು ಸರ್ಕಾರಿ ಕಟ್ಟಡ ಕೂಡ ಹಾನಿಗೀಡಾಗಿದೆ.

ಜಿಲ್ಲೆಯಲ್ಲಿ ಒಟ್ಟು 60 ಪ್ರದೇಶಗಳನ್ನು ಪ್ರವಾಹಪೀಡಿತ ಎಂದು ಗುರುತಿಸಲಾಗಿದ್ದು ಈ ನಡುವೆ ಜಿಲ್ಲಾಡಳಿತವು ನಾಪೋಕ್ಲುನಲ್ಲಿ 13, ಹೊದವಾಡದಲ್ಲಿ 13, ನೆಲ್ಲಿಹುದಿಕೇರಿಯಲ್ಲಿ 96, ಕಡಗದಾಳುವಿನಲ್ಲಿ 150, ಬಲಮುರಿಯಲ್ಲಿ 7, ಕೊಟ್ಟಮುಡಿಯಲ್ಲಿ 29, ಚೆರಿಯಪರಂಬುವಿನಲ್ಲಿ 7, ಬಾಳೆಗುಂಡಿ ಗ್ರಾಮದಲ್ಲಿ (ವಾಲ್ನೂರು ತ್ಯಾಗತ್ತೂರು) 6, ನಲ್ವತ್ತೆಕರೆಯಲ್ಲಿ 12, ಬೆಟ್ಟಗೇರಿಯಲ್ಲಿ 8, ಬೊಟ್ಲಪ್ಪ ಪೈಸಾರಿಯಲ್ಲಿ ಕೈಮಾಡುವಿನಲ್ಲಿ 5, ನೀರುಕೊಲ್ಲಿಯಲ್ಲಿ 43, ಮೈತಾಡಿಯಲ್ಲಿ 40, ಕೊಂಡಂಗೇರಿಯಲ್ಲಿ 8, ಸಿದ್ದಾಪುರದಲ್ಲಿ (ಕುರುಬರ ಗುಂಡಿ) 8, ತಣ್ಣಿಮಾನಿಯಲ್ಲಿ 50, ಬೆಟ್ಟದಕಾಡುನಲ್ಲಿ 10, ಅತ್ತೂರುನಲ್ಲೂರುನಲ್ಲಿ 20 ಕೊಟ್ಟಗೇರಿ ಪೈಸಾರಿಯಲ್ಲಿ 10, ಬಾಳೆಲೆಯಲ್ಲಿ 2, ಚಾಮಿಯಾಲದಲ್ಲಿ 17, ಒಟ್ಟು 585. ಜನರನ್ನೂ ರಕ್ಷಣೆ ಮಾಡಿದೆ.

ಇದಲ್ಲದೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿ, ಕಾಶಿಮಠದಲ್ಲಿ 50 ಕುಟುಂಬಗಳು ಆಶ್ರಯ ಪಡೆದಿದ್ದು, 102 ಸಂತ್ರಸ್ತರಿದ್ದಾರೆ. ಭಾಗಮಂಡಲ ಕೆ.ವಿ.ಜಿ. ಕಾಲೇಜು 39 ಕುಟುಂಬಗಳು ಆಶ್ರಯ ಪಡೆದಿದ್ದು, 95 ಸಂತ್ರಸ್ತರಿದ್ದಾರೆ. ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 15 ಕುಟುಂಬಗಳು ಆಶ್ರಯ ಪಡೆದಿದ್ದು, 35 ಸಂತ್ರಸ್ತರಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 3 ಕೇಂದ್ರಗಳಿದ್ದು, 104 ಕುಟುಂಬಗಳು ಆಶ್ರಯ ಪಡೆದಿದ್ದು, 232 ಸಂತ್ರಸ್ತರಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 21 ಕುಟುಂಬಗಳು ಆಶ್ರಯ ಪಡೆದಿದ್ದು, 41 ಜನ ಸಂತ್ರಸ್ತರಿದ್ದಾರೆ. ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 8 ಕುಟುಂಬಗಳು ಆಶ್ರಯ ಪಡೆದಿದ್ದು, 27 ಜನ ಸಂತ್ರಸ್ತರಿದ್ದಾರೆ. ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ 19 ಕುಟುಂಬಗಳಿದ್ದು, 36 ಜನ ಸಂತ್ರಸ್ತರಿದ್ದಾರೆ. ಹುದಿಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 36 ಕುಟುಂಬಗಳಿದ್ದು, 112 ಜನ ಸಂತ್ರಸ್ತರಿದ್ದಾರೆ. ಬಲ್ಯಮಂಡೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 5 ಕುಟುಂಬಗಳಿದ್ದು, 16 ಜನ ಸಂತ್ರಸ್ತರಿದ್ದಾರೆ. ವಿರಾಜಪೇಟೆ ಚಿಕ್ಕಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 24 ಕುಟುಂಬಗಳಿದ್ದು, 42 ಜನ ಸಂತ್ರಸ್ತರಿದ್ದಾರೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು 6 ಪರಿಹಾರ ಕೇಂದ್ರಗಳಲ್ಲಿ 113 ಕುಟುಂಬಗಳು ಆಶ್ರಯ ಪಡೆದಿದ್ದು, 274 ಜನ ಸಂತ್ರಸ್ತರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 9 ಪರಿಹಾರ ಕೇಂದ್ರಗಳಿದ್ದು, 217 ಕುಟುಂಬದವರು ಆಶ್ರಯ ಪಡೆದಿದ್ದು, 506 ಜನ ಸಂತ್ರಸ್ತರಿದ್ದಾರೆ.

ಈ ಮೇಲಿನ ಅಂದಾಜನ್ನು ಪ್ರಾಥಮಿಕವಾಗಿ ಸಿದ್ದಪಡಿಸಿದ್ದು ಅಂತಿಮ ಹಾನಿಯ ವರದಿಯನ್ನು ಮಳೆ ಮುಗಿದ ನಂತರ ಸಿದ್ದಪಡಿಸಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com