ಬೆಂಗಳೂರು ಮಿಡ್‌ನೈಟ್‌ ಗೋಲಿಬಾರ್‌ಗೆ ನಿಖರ ಕಾರಣ ಏನು..?
ರಾಜ್ಯ

ಬೆಂಗಳೂರು ಮಿಡ್‌ನೈಟ್‌ ಗೋಲಿಬಾರ್‌ಗೆ ನಿಖರ ಕಾರಣ ಏನು..?

ನವೀನ್‌ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದ್ದು, ಅದೇ ಸಮಯದಲ್ಲಿ ಮುಜಾಮುಲ್‌ ಪಾಷಾ ಕೂಡ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದೊಂಬಿ ತೀವ್ರ ಸ್ವರೂಪ ಪಡೆದಿದೆಯೇ ಎಂದು ಚರ್ಚೆಯಾಗುತ್ತಿದೆ.

ಕೃಷ್ಣಮಣಿ

ಫೇಸ್‌ಬುಕ್‌ನಲ್ಲಿ ಸಾವಿರ ಜನರ ಸಾವಿರ ರೀತಿಯ ಪೋಸ್ಟ್‌ ಹಾಕುತ್ತಿರುತ್ತಾರೆ. ಅದರಲ್ಲಿ ಕೆಲವರ ಮಾನಹಾನಿ ಆಗುವಂತೆಯೂ ಪೋಸ್ಟ್‌ ಹಾಕುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾರೆ. ಅಂತಹದ್ದೇ ಘಟನೆ ನಿನ್ನೆ ನಡೆದಿದೆ. ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಯುವಕ ಎನ್ನಲಾದ ನವೀನ್‌ ಎಂಬಾತ ಪ್ರವಾದಿ ಬಗ್ಗೆ ಹಾಕಿದ್ದ ಪೋಸ್ಟ್ ವಿವಾದ ಸ್ವರೂಪ ಪಡೆದುಕೊಂಡಿತ್ತು. ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಡಿ.ಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಎಂಟತ್ತು ಮುಖಂಡರು ಬಂದು ದೂರು ದಾಖಲು ಮಾಡಿದ್ದರು. ಬಳಿಕ ಪೊಲೀಸರು ಸೂಕ್ತ ಕ್ರಮಕೈಗೊಳ್ಳುವ ಮೊದಲೇ ಮುಸ್ಲಿಂ ಸಮುದಾಯದ ಜನ ಠಾಣೆ ಬಳಿ ಜಮಾಯಿಸಿ ಗಲಾಟೆ ಶುರು ಮಾಡಿದ್ದರು.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಗಲಾಟೆ ಆಗುವ ಮುನ್ಸೂಚನೆ ಸಿಕ್ಕಿತ್ತು. ಕುಟುಂಬ ಸಮೇತ ಕಾಲು ಕಾಲಿಗೆ ಬುದ್ಧಿ ಹೇಳಿದ್ದ ಶಾಸಕರು ಯಾವುದೇ ಗಲಾಟೆ ಒಳಗೆ ಸಿಲುಕಲಿಲ್ಲ. ಗಲಾಟೆ ಆರಂಭವಾಗುತ್ತಿದ್ದಂತೆ ಶಾಂತಿ ಸಂದೇಶ ರವಾನಿಸಿದ ಶಾಸಕರು ನಾವೆಲ್ಲರೂ ಅಣ್ಣ ತಮ್ಮಂದಿರು ಇದ್ದಂತೆ, ಮುಸಲ್ಮಾನ್ ಬಾಂಧವರು ಶಾಂತಿ ಕಾಪಾಡಿ. ಯಾವುದೇ ಗಲಾಟೆ ಮಾಡಬೇಡಿ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಕೊಡಿಸೋ ವ್ಯವಸ್ಥೆ ಮಾಡೋಣ. ನಾನು ನಿಮ್ಮ‌ ಜೊತೆ ಇರ್ತೀವಿ ಎಂದು ಶಾಸಕರು ಮನವಿ ಮಾಡಿದ್ದರು. ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆ ಪುಂಡರ ಗುಂಪು ಬೆಳೆಯುತ್ತಾ ಸಾಗಿತ್ತು. ಫೇಸ್‌ಬುಕ್‌ ಪೋಸ್ಟ್‌ ನೆಪಕ್ಕೆ ಮಾತ್ರ ಎನ್ನುವಂತೆ ಗಲಾಟೆ ರಂಗು ಪಡೆಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಖಂಡ‌‌ ಶ್ರೀನಿವಾಸ್ ಮನವಿಗೆ ಕ್ಯಾರೆ ಎನ್ನದ ಮುಸ್ಲಿಂ ಸಮುದಾಯದ ಕೆಲ ಜನ ಗುಂಪುಗೂಡಿ ಠಾಣೆ ಬಳಿ ಜಮಾಯಿಸುತ್ತಾ ಶಾಸಕರು ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗುವುದಕ್ಕೆ ಶುರು ಮಾಡಿದರು. ಇನ್ನೂ ಕೂಡ ಯಾಕೆ ಬಂಧಿಸಿಲ್ಲ ಎಂದು ಮಾತಿನ ಚಕಮಕಿ ಮಾಡಲು ಶುರು ಮಾಡಿದರು. ಈ ವೇಳೆ ಉದ್ವಿಘ್ನ ರೂಪ ಪಡೆದು ಮುಸ್ಲಿಂ ಸಮುದಾಯದ ಯುವಕರು ಶಾಸಕರ ಮನೆ ಇರುವ ರಸ್ತೆಯ ಎರಡೂ ಭಾಗಗಳಲ್ಲಿ ಬೆಂಕಿ ಹಚ್ಚುತ್ತಾ ಸಾಗಿದರು. ಶಾಸಕ ಅಖಂಡ ಶ್ರೀನಿವಾಸ್ ಮನೆ ಹಾಗೂ ಕಚೇರಿಗೂ ಬೆಂಕಿ ಹಾಕಿದರು. ಸಾವಿರಾರು ಸಂಖ್ಯೆಯಲ್ಲಿ ಕೆ.ಜಿ ಹಳ್ಳಿ ಠಾಣಾ ಮುಂಭಾಗದಲ್ಲಿ ಬಂದಿದ್ದ ಮುಸ್ಲೀಂಮರು, ಕಲ್ಲು ತೂರಾಟ ಮಾಡುತ್ತಾ, ಪೊಲೀಸರ ಠಾಣೆ, ವಾಹನ, ಪೀಠೋಪಕರಣಗಳಿಗೂ ಬೆಂಕಿ ಹಚ್ಚುವುದಕ್ಕೆ ಶುರು ಮಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರೂ ಶೀಘ್ರ ಕ್ರಮ ಕೈಗೊಳ್ಳದ ಪೊಲೀಸ್‌ ಇಲಾಖೆ ಕೇವಲ 50 ಜನರ ಪೊಲೀಸರನ್ನು ಇಟ್ಟುಕೊಂಡು ಕಾನೂನು ಸುವ್ಯವಸ್ಥೆ ಹತೋಟಿಗೆ ತರುವ ದುಸ್ಸಾಹಸ ಮಾಡುತ್ತಿತ್ತು. ಬಳಿಕ ಪೊಲೀಸ್ ಠಾಣಾ ಆವರಣದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಯ್ತು. ಪೂರ್ವ ವಿಭಾಗದ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ಸ್‌ ಹಾಗೂ ಸಿಬ್ಬಂದಿ ಕೆ.ಜಿ ಹಳ್ಳಿ ಠಾಣೆ ಬಳಿ ಬರುವಂತೆ ಸೂಚನೆ ಕೊಡಲಾಯ್ತು. ಡಿಸಿಪಿ ಶರಣಪ್ಪ, ಮುಸ್ಲಿಂ ಸಮುದಾಯದ ಹಿರಿಯ ನಾಯಕರನ್ನು ಕರೆಸಿ ಮಾತನಾಡಲು ಮುಂದಾದರು.

FIR ದಾಖಲಿಸಿ ಕೂಡಲೇ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ 10.30ರ ಸುಮಾರಿಗೆ ಹಿಂಸಾ ರೂಪ ಪಡೆಯಲು ಶುರುವಾಯಿತು. ಅಖಂಡ ಶ್ರೀನಿವಾಸ್ ಮನೆಯ ರಸ್ತೆಯುದ್ದಕ್ಕೂ ಬೆಂಕಿ ಹಚ್ಚಿದರು. ಅಷ್ಟರಲ್ಲಿ ಆರೋಪ ಹೊತ್ತ ನವೀನ್‌ನನ್ನು ಅರೆಸ್ಟ್‌ ಮಾಡಿ ಆಗಿತ್ತು. ಆಗಲೂ ಪೊಲೀಸರು ಮನವಿ ಮಾಡುತ್ತಲೇ ಇದ್ದರು. ಆದರೆ ಪೊಲೀಸರ ಮಾತಿಗೂ ಯಾರೊಬ್ಬರೂ ಕಿವಿ ಕೊಡಲಿಲ್ಲ. ಏರಿಯಾದ ಎಲ್ಲಾ ರಸ್ತೆಗಳಲ್ಲಿಯೂ ಕಿಡಿಗೇಡಿಗಳು ಬೆಂಕಿ‌ ಹಚ್ಚಿದರು. ಸಾರ್ವಜನಿಕರು ಏರಿಯಾಗೆ ಬರದಂತೆ ಪೊಲೀಸರು ಎಚ್ಚರ ವಹಿಸಿದ್ದರು. ಕಾವಲ್‌ ಭೈರಸಂದ್ರ, ಡಿ.ಜೆ ಹಳ್ಳಿ ಠಾಣೆ ಹತ್ತಿರ ಬೆಂಕಿ ಹಚ್ಚಲಾಯ್ತು. ಆಗ ಎಚ್ಚೆತ್ತ ಗೃಹ ಇಲಾಖೆ ಕಾನೂನು ರೀತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಿ. ಕಾನೂನು ಕೈಗೆತ್ತಿಕೊಂಡವರ ಮೇಲೆ ಉಗ್ರ ಕ್ರಮ ಅಗತ್ಯವಿದ್ದರು ಹಿಂದೆ ಮುಂದೆ ನೋಡಬೇಡಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೂಚನೆ ರವಾನಿಸಿದರು.

ಕೂಡಲೇ ಶಾಸಕ ಆಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಗಳೂರು ನಗರ ಪೊಲೀಸ್‌ ಕಮೀಷನರ್ ಕಮಲ್ ಪಂತ್ ಭೇಟಿ ನೀಡಿ, ಮನೆಯನ್ನು ಪರಿಶೀಲಿಸಿದರು. ನಗರದ ಎಲ್ಲ ಡಿಸಿಪಿ, ‌ಎಸಿಪಿಗಳು‌ ಕೆಜಿ ಹಳ್ಳಿ, ಡಿಜೆ ಹಳ್ಳಿಗೆ ದೌಡಾಯಿಸಿದರು. ಡಿಜೆ ಹಳ್ಳಿ ಠಾಣೆಯ ಬೇಸ್ಮೆಂಟ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಠಾಣಾ ಅವರಣದಲ್ಲಿದ್ದ ವಸ್ತುಗಳ ಧ್ವಂಸವಾಗಿದ್ದವು. ಮೊದಲಿಗೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಗುಂಪನ್ನು ಚದುರಿಸಲು ಪ್ರಯತ್ನ ನಡೆಸಿದರು. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಗೆ ಸುಮಾರು 1500 ಪೊಲೀಸರನ್ನು ರವಾನೆ ಮಾಡಲಾಯ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ಶತಪ್ರಯತ್ನ ನಡೆಸಿದರು. ಆ ಬಳಿಕ ಅಂತಿಮವಾಗಿ ಗುಂಡು ಹಾರಿಸಲಾಯ್ತು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹಲವಾರು ಪೊಲೀಸರೂ ಸಹ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಗಲಭೆಯಲ್ಲಿ ಬಿಬಿಎಂಪಿ ಚುನಾವಣೆ ತಳುಕು ಹಾಕಿಕೊಂಡಿದ್ದೇಕೆ?

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ನವೀನ್‌ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ಎನ್ನಲಾಗಿದೆ. ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ಎನ್ನುವ ಮಾಹಿತಿಗಳು ಸಿಗುತ್ತಿದೆ. ಇದೇ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮುಜಾಮುಲ್‌ ಪಾಷಾ ಕೂಡ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ. ಇದೇ ಕಾರಣದಿಂದ ಗಲಾಟೆ ಆಗಿದೆ ಎನ್ನಲಾಗ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಲ್ಲೀವರೆಗೂ ಸುಮಾರು 200 ಜನರನ್ನು ಬಂಧನ ಮಾಡಲಾಗಿದ್ದು, ಮೊದಲು ಅರೆಸ್ಟ್‌ ಆ ಬಳಿಕ ತನಿಖೆ ಮಾಡಿ ಎಂದು ಸೂಚನೆ ಕೊಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೇವಲ ಫೇಸ್‌ಬುಕ್‌ ಪೇಜ್‌ನಲ್ಲಿನ ಪೋಸ್ಟ್‌ ನೆಪವಾಗಿ ಮಾಡಿಕೊಂಡು ದೊಂಬಿ ಸೃಷ್ಠಿಸಿದ ಗೂಂಡಾಗಳಿಗೆ ಕಾನೂನಿನ ಬಿಸಿ ಮುಟ್ಟಬೇಕಿದೆ. ಇಲ್ಲದಿದ್ದರೆ ಬೆಂಗಳೂರು ಸಹ ಕೋಮು ಸೂಕ್ಷ್ಮ ಪ್ರದೇಶ ಎನಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com