ಬಿಂಕದಕಟ್ಟಿ ಝೂ ನಲ್ಲಿ ಮತ್ತೇ ಘರ್ಜಿಸಲಿವೆ ಸಿಂಹಗಳು...
ರಾಜ್ಯ

ಬಿಂಕದಕಟ್ಟಿ ಝೂ ನಲ್ಲಿ ಮತ್ತೇ ಘರ್ಜಿಸಲಿವೆ ಸಿಂಹಗಳು...

ಬನ್ನೇರುಘಟ್ಟ ಜೈವಿಕ ಉದ್ಯಾನವನವು ಬಿಂಕದಕಟ್ಟಿ ಮೃಗಾಲಯಕ್ಕೆ ಸಿಂಹಗಳನ್ನು ನೀಡುವುದಾಗಿ ಘೋಷಿಸಿದ್ದು, ಸಿಂಹಗಳನ್ನು ತರಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಸಿಂಹಗಳಿಗಾಗಿ ವಿಶೇಷ ಪಂಜರಗಳು ಸಿದ್ದವಾಗುತ್ತಿದ್ದು ಎರಡು ಹೊಂಡಗಳನ್ನು ನಿರ್ಮಿಸಲಾಗಿದೆ

ಕೆ. ಶ್ರೀಕಾಂತ್

ಉತ್ತರ ಕರ್ನಾಟಕದ ಪ್ರಸಿದ್ದ ಪ್ರಾಣಿ ಸಂಗ್ರಹಾಲಯವಾಗಿರುವ ಬಿಂಕದಕಟ್ಟಿ ಮೃಗಾಲಯದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜೋಡಿ ಸಿಂಹಗಳು ಆಗಮಿಸುವ ಸುದ್ದಿ ಹಬ್ಬುತ್ತಿದ್ದಂತೆ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿದೆ.

ಬಹು ದಿನಗಳಿಂದ ಸಿಂಹಗಳ ನಿರೀಕ್ಷೆ ಇದ್ದು ಕರೊನಾ ಅಡ್ಡಿಯಾಗಿದ್ದು, ಈಗ ಮತ್ತೆ ಘೋಷಣೆ ಹೊರಬಿದ್ದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನವು ಅಗಸ್ಟ್ ೧೦ ರ ವಿಶ್ವ ಸಿಂಹ ಸಂರಕ್ಷಣಾ ದಿನಾಚರಣೆಯ ಪ್ರಯುಕ್ತ ಗದಗ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ನಕುಲ ಮತ್ತು ನಿರೂಪಮಾ ಎಂಬ ಗಂಡು ಮತ್ತು ಹೆಣ್ಣು ಸಿಂಹಗಳನ್ನು ಕೊಡುಗೆಯಾಗಿ ನೀಡಲು ನಿರ್ಧರಿಸಿವೆ.

“ಮುಖ್ಯ ಪ್ರಾಣಿ ಸಂಗ್ರಹಾಲಯದ ಆಡಳಿತಧಿಕಾರಿಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ. ಸಧ್ಯದಲ್ಲೇ ಅನುಮತಿ ದೊರೆಯಲಿದೆ" ಎಂದು ಬನ್ನೇರುಘಟ್ಟ ಝೂ ಎಂಬ ಅಧಿಕೃತ ಪೇಜ್ ಸೋಮವಾರ ಟ್ವೀಟ್ ಮಾಡಿದ್ದು, ಸಿಂಹಗಳ ಆಗಮನದಿಂದ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಮತ್ತಷ್ಟು ಆಕರ್ಷಣೀಯವಾಗಲಿದೆ.

ಬಿಂಕದಕಟ್ಟಿ ಮೃಗಾಲಯವೂ ೪೦ ಎಕರೆ ವಿಸ್ತಿರ್ಣವನ್ನು ಹೊಂದಿದೆ. ಇಲ್ಲಿ ಜಿಂಕೆ, ಸಾರಂಗ, ಕತ್ತೆ ಕಿರುಬ, ಕೃಷ್ಣಮೃಗ, ಕರಡಿ, ಮುಳ್ಳುಹಂದಿ, ಕಾಡು ಕುರಿ, ಚಿರತೆ, ಉಡ, ಹೆಬ್ಬಾವು, ಮೊಸಳೆ, ನವಿಲು ಸೇರಿ ೩೭ಕ್ಕೂ ಹೆಚ್ಚು ಪ್ರಭೇದದ ೪೦೦ಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳಿವೆ. ಚಿಕ್ಕ ಮಕ್ಕಳ ಉದ್ಯಾನವೂ ಇಲ್ಲಿದೆ. ಎರಡೂವರೆ ವರ್ಷದ ಹಿಂದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ, ಅನಸೂಯಾ ಹಾಗೂ ಲಕ್ಷ್ಮಣ್ ಹೆಸರಿನ ಎರಡು ಹುಲಿಗಳನ್ನು ಇಲ್ಲಿಗೆ ತಂದಿರುವದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು. ಮೃಗಾಲಯದಲ್ಲಿ ಪಕ್ಷಿಗಳ ವೀಕ್ಷಣೆಗಾಗಿ ೧೫೦ ಅಡಿ ಉದ್ದ, ೪೦ ಅಡಿ ಅಗಲ ಮತ್ತು ೫೦ ಅಡಿ ಎತ್ತರದಲ್ಲಿ ಬೃಹತ್ ಮತ್ತು ವಿಶೇಷ ಪಂಜರ ನಿರ್ಮಿಸಲಾಗಿದೆ. ಮೈಸೂರು ಮೃಗಾಲಯದಿಂದ ಕರಿ ಹಂಸ, ಲೇಡಿ ಅಮೆರ್ಸ್ಟ್ ಪೆಸೆಂಟ್, ನೈಟ್ ಹೆರಾನ್, ಬಡ್ಜ್ರಿಗರ್, ರೋಸ್ ರಿಂಗ್ಡ್ ಪ್ಯಾರಾಕೀಟ್, ಜವಾ ಸ್ಪಾರೋ, ಫಿಂಚಸ್, ಬಣ್ಣದ ಕೊಕ್ಕರೆ, ರೆಡ್‌ಜಂಗಲ್ ಪೌಲ್, ರೋಸ್ ಪೆಲಿಕನ್ ಸೇರಿ ವಿವಿಧ ಜಾತಿಯ ೯೦ ಪಕ್ಷಿಗಳನ್ನು ಇಲ್ಲಿಗೆ ತರಲಾಗಿದೆ. ಅಲ್ಲದೆ, ಪಂಜರದ ನಡುವಿನಿಂದ ಪಾದಾಚಾರಿ ಸೇತುವೆ ನಿರ್ಮಿಸಲಾಗಿದೆ. ಇದರಿಂದ ಹತ್ತಿರದಿಂದ ಪಕ್ಷಿಗಳನ್ನು ವೀಕ್ಷಿಸಿ ಕಣ್ತುಂಬಿಸಿಕೊಳ್ಳಬಹುದು.

ಗದಗ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಹೇಳುವ ಪ್ರಕಾರ, " ಬನ್ನೇರುಘಟ್ಟ ಜೈವಿಕ ಉದ್ಯಾನವನವು ಬಿಂಕದಕಟ್ಟಿ ಮೃಗಾಲಯಕ್ಕೆ ಸಿಂಹಗಳನ್ನು ನೀಡುವುದಾಗಿ ಘೋಷಿಸಿದ್ದು, ಸಿಂಹಗಳನ್ನು ತರಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಸಿಂಹಗಳಿಗಾಗಿ ವಿಶೇಷ ಪಂಜರಗಳು ಸಿದ್ದವಾಗುತ್ತಿದ್ದು ಎರಡು ಹೊಂಡಗಳನ್ನು ನಿರ್ಮಿಸಲಾಗಿದೆ”.

Click here to follow us on Facebook , Twitter, YouTube, Telegram

Pratidhvani
www.pratidhvani.com