ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ
ರಾಜ್ಯ

ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ

ಸಿಲಿಕಾನ್ ಬಳಸಿ ಮಹಿಳೆಯ ಬೊಂಬೆಯನ್ನು ತಯಾರು ಮಾಡಲಾಗಿದೆ. ಮುಟ್ಟಿದರೆ ಮನುಷ್ಯರನ್ನೇ ಮುಟ್ಟುತ್ತಿದ್ದೇವೆ ಎನ್ನುವಂತೆ ಭಾಸವಾಗುವ ರೀತಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಗೆ ಮಾಧವಿ ಅವರ ಕೂದಲನ್ನೇ ಬಳಸಿರುವುದು ವಿಶೇಷ.

ಕೃಷ್ಣಮಣಿ

ಎಲ್ಲರಿಗೂ ಮನೆ ಕಟ್ಟಿಸುವುದು ಒಂದು ಕನಸು. ಅದೇ ರೀತಿ ಕೊಪ್ಪಳದ ಈ ಮಹಿಳೆ ಮನೆ ಕಟ್ಟಿಸುವ ಆಸೆ ವ್ಯಕ್ತಪಡಿಸಿದ್ದರು. ಹೆಂಡತಿಯ ಆಸೆಯಂತೆ ಉದ್ಯಮಿ ಗಂಡ ಶ್ರೀನಿವಾಸ ಗುಪ್ತಾ ಸೈಟ್‌ ತೆಗೆದುಕೊಂಡು ಪೂಜೆ ಮಾಡಿಸಿ ಅಡಿಪಾಯವನ್ನೂ ಹಾಕಿಸಿದ್ದರು. ಅದೆಲ್ಲವೂ ಹೆಂಡತಿಯ ಇಚ್ಛೆಯಂತೆ ನಡೆದಿತ್ತು. ಆದರೆ 2017ರಲ್ಲಿ ಅದೊಂದು ದಿನ ತಿರುಪತಿಯ ವೆಂಕಟೇಶ್ವರನ ದರ್ನಕ್ಕೆ ತೆರಳುವಾಗ ನಡೆದ ಭೀಕರ ಅಪಘಾತದಲ್ಲಿ ಪತ್ನಿ ಇಹಲೋಕ ತ್ಯಜಿಸಿದ್ದರು. ಇದರಿಂದ ಮಾನಸಿಕ ಹಿಂಸೆಗೆ ಒಳಗಾದ ಶ್ರೀನಿವಾಸ ಗುಪ್ತಾ, ಹೆಂಡತಿ ಆಸೆಪಟ್ಟಿದ್ದ ಮನೆಯನ್ನು ಕಟ್ಟಿಸೋಣ ಎನ್ನುವ ತೀರ್ಮಾನಕ್ಕೆ ಬಂದು ಮನೆ ನಿರ್ಮಾಣ ಪೂರ್ತಿಗೊಳಿಸಿದ್ದಾರೆ. ಇದೀಗ ಮನೆ ಗೃಹಪ್ರವೇಶವೂ ಆಗಿದೆ. ಅಚ್ಚರಿ ಎಂದರೆ ಗೃಹ ಪ್ರವೇಶಕ್ಕೆ ಸ್ವತಃ ಸತ್ತು ದೂರವಾಗಿದ್ದ ಪತ್ನಿಯನ್ನೇ ಕರೆತಂದಿದ್ದಾರೆ.

ಅಚ್ಚರಿಯಾದರೂ ಇದು ಸತ್ಯ. ಮನೆ ಕಟ್ಟಿಸುವ ಇಂಗಿತ ವ್ಯಕ್ತಪಡಿಸಿದ್ದ ವಿಚಾರ ಎಲ್ಲಾ ಬಂಧು ಬಳಗಕ್ಕೂ ಗೊತ್ತಿತ್ತು. ಆದರೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಸ್ವತಃ ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಮಾಧವಿಯೇ ಹಜಾರದಲ್ಲಿ ಕುಳಿತಿದ್ದನ್ನು ಕಂಡು ಬಂಧು ಬಳಗದವರು ಅಚ್ಚರಿಗೆ ಒಳಗಾಗಿದ್ದರು. ಸತ್ಯಾಂಶವೇನೆಂದು ಕೇಳಿದ ಬಳಿಕ ನಿಟ್ಟುಸಿರು ಬಿಟ್ಟು ಸಂತಸ ವ್ಯಕ್ತಪಡಿಸಿದರು.

ಮನೆ ಕಟ್ಟುವ ಆಸೆಯಿಂದಲೇ ಇಹಲೋಕ ತ್ಯಜಿಸಿದ್ದ ಪತ್ನಿ ಇಲ್ಲದೆ ಗೃಹ ಪ್ರವೇಶ ಮಾಡಲು ಮನಸ್ಸಾಗದ ಉದ್ಯಮಿ ಶ್ರೀನಿವಾಸ ಗುಪ್ತಾ, ಸಾಕಷ್ಟು ಕಡೆಗಳಲ್ಲಿ ವಿಚಾರಿಸಿ ತನ್ನ ಪತ್ನಿ ಮಾಧವಿಯ ತದ್ರೂಪ ಮೂರ್ತಿಯಲ್ಲೇ ಮಾಡಿಸಿದ್ದಾರೆ. ಮನೆ ಒಳಗಡೆ ಹಜಾರದ ಮಂಚದ ಮೇಲೆ ಕುಳಿತಿರುವ ಹಸನ್ಮುಖಿ ಮೂರ್ತಿಯನ್ನು ನೋಡುತ್ತಾ ಹೆಂಡತಿ ಜೊತೆಗಿದ್ದಾಳೆ ಎಂದು ಸಂಭ್ರಮದಿಂದ ಗೃಹ ಪ್ರವೇಶ ಮಾಡಿ ಮುಗಿಸಿದ್ದಾರೆ.

ಮಕ್ಕಳೂ ಸಹ ತಾಯಿ ಇಲ್ಲದೆ ಇರುವ ಬೇಸರವನ್ನು ಈ ಮೂಲಕ ಮರೆತಿದ್ದಾರೆ. ತಾಯಿ ಜೊತೆಗೆ ಇದ್ದಾಳೆ ಎನ್ನುವಂತೆ ಅಮ್ಮನ ಜೊತೆ ಕುಳಿತು ಕಾಲ ಕಳೆದಿದ್ದಾರೆ. ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ನೆಂಟರಿಸ್ಟರು ಮಹಿಳಾ ಮೂರ್ತಿ ಜೊತೆಗೆ ಫೋಟೋ ತೆಗೆಸಿಕೊಂಡು ಹೋಗಿದ್ದಾರೆ ಒಟ್ಟಾರೆ ಬದುಕಿನಲ್ಲಿ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಪತ್ನಿ ಅರ್ಧ ದಾರಿಯಲ್ಲೇ ಕೈಕೊಟ್ಟು ಹೋದವರನ್ನು ಉದ್ಯಮಿ ಶ್ರೀನಿವಾಸ ಗುಪ್ತಾ ಈ ಮೂಲಕ ವಾಪಸ್‌ ಮನೆಗೆ ಕರೆತಂದಿದ್ದಾರೆ.

ಹೆಂಡತಿಯ ತದ್ರೂಪ ಪ್ರತಿಮೆ ಮಾಡಿಸಬೇಕು ಎಂದು ಹೊರಟ ಶ್ರೀನಿವಾಸ ಗುಪ್ತಾ ಅವರಿಗೆ ವರವಾಗಿ ಸಿಕ್ಕಿದ್ದು, ಬೆಂಗಳೂರಿನ ಪ್ರಸಿದ್ಧ ಬೊಂಬೆ ಮನೆ. ಕಲಾವಿದರನ್ನು ಸಂಪರ್ಕ ಮಾಡಿ, ತನ್ನ ಮನದ ಆಸೆ ಹೇಳಿಕೊಂಡಾಗ ಒಂದು ವರ್ಷದ ಸಮಯವನ್ನು ತೆಗೆದುಕೊಂಡು ಮಾಧವಿ ಅವರ ಮೂರ್ತಿಯನ್ನು ಸಿದ್ಧ ಮಾಡಿಕೊಟ್ಟರು ಎಂದು ಸಂತಸ ಪಡುತ್ತಾರೆ ಮಕ್ಕಳಾದ ಅನುಷಾ ಹಾಗೂ ಸಿಂಧುಷಾ.

ಸಿಲಿಕಾನ್ ಬಳಸಿ ಬೊಂಬೆಯನ್ನು ತಯಾರು ಮಾಡಲಾಗಿದೆ. ಮುಟ್ಟಿದರೆ ಮನುಷ್ಯರನ್ನೇ ಮುಟ್ಟುತ್ತಿದ್ದೇವೆ ಎನ್ನುವಂತೆ ಭಾಸವಾಗುವ ರೀತಿಯಲ್ಲಿ ನಿರ್ಮಾಣವಾಗಿರುವ ಈ ಪ್ರತಿಮೆಗೆ ಮಾಧವಿ ಅವರ ಕೂದಲನ್ನೇ ಬಳಸಿರುವುದು ವಿಶೇಷ. ಅಸಲಿಗೆ ಶ್ರೀನಿವಾಸ ಗುಪ್ತಾ ಅವರು ಮಾಡುವ ಉದ್ಯಮ ಕೂದಲು ವ್ಯವಹಾರ. ಕೂದಲು ಉದುರಿದವರು ಧರಿಸುವ ಟೋಫನ್‌ಗಳನ್ನು ಮಾಡಲಾಗುತ್ತದೆ. ಮಾಧವಿ ಅವರು ತನ್ನ ಕೂದಲನ್ನು ಕತ್ತರಿಸಿ ಭಿನ್ನ ಭಿನ್ನವಾದ ಶೈಲಿಯಲ್ಲಿ ಚವಲಿ (Artificial Hair Extension) ಮಾಡಿಸಿಕೊಂಡಿದ್ದರು. ಆಕಸ್ಮಿಕ ಘಟನೆಯಲ್ಲಿ ಅಸುನೀಗಿದ ಬಳಿಕ ಅವರ ಕೂದಲನ್ನೇ ಬಳಸಿ ಜಡೆ ಹಾಕಲಾಗಿದೆ ಎನ್ನುತ್ತಾರೆ ಅವರ ಮಗಳು ಅನುಷಾ.

ಒಟ್ಟಾರೆ, ಜೀವನದಿಂದ ದೂರ ಹೋಗಿರುವ ಪತ್ನಿಯನ್ನು ಮಾನಸಿಕವಾಗಿ, ದೈಹಿಕವಾಗಿಯೂ ಮನೆಗೆ ವಾಪಸ್‌ ಕರೆತಂದಿದ್ದಾರೆ. ಈ ಮೂರ್ತಿ ಮಾಡಿಸಲು ಖರ್ಚಾದ ಹಣವೆಷ್ಟು ಎನ್ನುವ ಮಾತಿಗೆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ ಉದ್ಯಮಿ ಶ್ರೀನಿವಾಸ ಗುಪ್ತಾ. ಅದೇನೇ ಇರಲಿ ಪ್ರೀತಿಯ ಮಾಧುರಿ ಸದಾ ಅವರ ಜೊತೆಗಿರಲಿ.

ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ
ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ
ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ
ಗೃಹ ಪ್ರವೇಶಕ್ಕೆ ಮೃತ ಪತ್ನಿಯನ್ನೇ ಕರೆತಂದ ಉದ್ಯಮಿ

Click here to follow us on Facebook , Twitter, YouTube, Telegram

Pratidhvani
www.pratidhvani.com