BSNL ಉದ್ಯೋಗಿಗಳು ದೇಶದ್ರೋಹಿಗಳಾದರೆ ಸರ್ಕಾರ ಸಂಬಳ ನೀಡುವುದು ಯಾಕೆ?
ರಾಜ್ಯ

BSNL ಉದ್ಯೋಗಿಗಳು ದೇಶದ್ರೋಹಿಗಳಾದರೆ ಸರ್ಕಾರ ಸಂಬಳ ನೀಡುವುದು ಯಾಕೆ?

ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳಿಸ್ತೇವೆ. ಎಲ್ಲಾ ಸೌಕರ್ಯಗಳಿದ್ದರೂ ಬಿಎಸ್ಎನ್ಎಲ್ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸಿ ಈ ಸಂಸ್ಥೆಯನ್ನು ಖಾಸಗೀಕರಣ ಮಾಡ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕೃಷ್ಣಮಣಿ

ಭಾರತದ ಹೆಮ್ಮೆಯ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಿಎಸ್‌ಎನ್‌ಎಲ್‌ ಸಂಸ್ಥೆ ಬಾಗಿಲು ಮುಚ್ಚುವ ಕಾಲ ಸನಿಹಕ್ಕೆ ಬಂದು ನಿಂತಿದೆ. ಖಾಸಗಿ ಟೆಲಿಕಾಂ ಕಂಪನಿಗಳು 5ಜಿ ತಂತ್ರಜ್ಞಾನ ಕೊಡಲು ಮುಂದಾಗಿರುವ ಈ ಕಾಲದಲ್ಲೂ ಬಿಎಸ್‌ಎನ್‌ಎಲ್‌ ಸಂಸ್ಥೆ ಇನ್ನೂ 2ಜಿ, 3ಜಿ ತಂತ್ರಜ್ಞಾನದಲ್ಲೇ ಕಾಲ ಕಳೆಯುತ್ತಿದೆ. ಹೀಗಾಗಿ ತನ್ನ ಗ್ರಾಹಕರನ್ನು ವಲಸೆ ಹೋಗಲು ಬಿಟ್ಟು ಸಂಸ್ಥೆ ಬಾಗಿಲು ಬಂದ್‌ ಮಾಡುವ ಹಂತಕ್ಕೆ ತಲುಪಿದೆ. 4ಜಿ ತಂತ್ರಜ್ಞಾನದ ಯೋಜನೆಯನ್ನು ಕೇಂದ್ರ ಸರ್ಕಾರ ಕೆಲವೇ ತಿಂಗಳುಗಳ ಹಿಂದೆ ರದ್ದು ಮಾಡಿತ್ತು. ಇದು ಬಿಎಸ್‌ಎನ್‌ಎಲ್‌ ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಎಸ್‌ಎನ್‌ಎಲ್‌ ಉದ್ಯೋಗಿಗಳನ್ನು ವಿಆರ್‌ಎಸ್‌ ತೆಗೆದುಕೊಂಡು ಹೋಗುವಂತೆ ಸೂಚನೆ ಕೊಟ್ಟಿತ್ತು. ಅದರಂತೆ ಇಲ್ಲೀಗವರೆಗೂ 80 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ನಿವೃತ್ತಿ ಪಡೆದು ಹೋಗಿದ್ದಾರೆ. ಸಾವಿರಾರು ಉದ್ಯೋಗಿಗಳು ವೇತನವಿಲ್ಲದೆ ಪರದಾಡುತ್ತಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಬಿಎಸ್‌ಎನ್‌ಎಲ್‌ ಉದ್ಯೋಗಿ ವೇತನವಿಲ್ಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ವರದಿಯಾಗಿವೆ. ಇದರ ನಡುವೆ ಬಿಎಸ್‌ಎನ್‌ಎಲ್‌ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದಿದ್ದಾರೆ ಬಿಜಿಪಿ ಸಂಸದ ಅನಂತ್‌ ಕುಮಾರ್‌ ಹೆಗಡೆ.

ದೇಶದ್ರೋಹಿಗಳಿಗೆ ಸಂಬಳ ಕೊಡುತ್ತಿದ್ಯಾ ಸರ್ಕಾರ..?

ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಒಂದು ರೀತಿ ವಿವಾದಿತ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಸೋಮವಾರದ ಮಾತು ಬಹುತೇಕ ಜನರಿಗೆ ಇರುಸು ಮುರುಸು ತಂದಿದೆ. ಕುಮಟಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಬಿಎಸ್‌ಎನ್‌ಎಲ್‌ ಸಿಗ್ನಲ್‌ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳಲಾಯ್ತು. ಈ ವೇಳೆ ಉತ್ತರ ಕೊಟ್ಟ ಸಂಸದ ಅನಂತ್‌ ಕುಮಾರ್‌ ಹೆಗಡೆ, ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು, ಆ ಸಂಸ್ಥೆಯನ್ನು ಸರಿಪಡಿಸಲು ನಮ್ಮ ಸರ್ಕಾರದಿಂದಲೂ ಸಾಧ್ಯವಾಗಲಿಲ್ಲ. ಆ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ ಎಂದಿದ್ದಾರೆ. ದೇಶದ ಜನರಿಗೆ ಸಮರ್ಪಕ ಸೇವೆ ನೀಡಲು ಬಿಎಸ್ಎನ್ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗೋದಿಲ್ಲ, ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೌಕರರನ್ನು ಮನೆಗೆ ಕಳಿಸ್ತೇವೆ. ಎಲ್ಲಾ ಸೌಕರ್ಯಗಳಿದ್ದರೂ ಬಿಎಸ್ಎನ್ಎಲ್ ಸಂಸ್ಥೆಯ ನೌಕರರು ಕೆಲಸ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಸಂಸ್ಥೆಯನ್ನು ಸ್ಥಗಿತಗೊಳಿಸಿ ಈ ಸಂಸ್ಥೆಯನ್ನು ಖಾಸಗೀಕರಣ ಮಾಡ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಇದು ಗೊತ್ತಿಲ್ವಾ..?

ರೈತನ ಜಮೀನಿನಲ್ಲಿ ಕೆಲಸ ಮಾಡಲು ಕರೆದುಕೊಂಡು ಹೋಗುವ ಕೂಲಿ ಆಳುಗಳು ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಅವರಿಗೆ ಸಮಯ ತುಂಬಿಸಿದರೆ ಆಯಿತು ಎನ್ನುವ ಲೆಕ್ಕಾಚಾರ ಅವರದ್ದು. ಆದರೆ ಅವರನ್ನು ಕರೆದುಕೊಂಡು ಬಂದು ಮೇಲುಸ್ತುವಾರಿ ಮಾಡುವ ಯಜಮಾನ ಕೂಲಿ ಆಳುಗಳಿಗೆ ಉತ್ತಮವಾಗಿ ಕೆಲಸ ತೆಗೆಸುವುದು ಹೇಗೆ ಎನ್ನುವುದನ್ನು ಕಲಿತಿರಬೇಕು. ಅದೇ ರೀತಿ ಸರ್ಕಾರ ಮಟ್ಟದಲ್ಲೂ ಕೆಲಸ ತೆಗೆಸುವ ಚಾಕಚಕ್ಯತೆ ಆಳುವ ವರ್ಗಕ್ಕೆ ಇರಬೇಕು. ಕೆಲಸ ಮಾಡುತ್ತಿಲ್ಲ ಎಂದು ಒಂದೊಂದೇ ಸಂಸ್ಥೆಯನ್ನು ಮುಚ್ಚುತ್ತಾ ಹೋದರೆ..? ಸರಿಹೋಗುತ್ತದೆಯೇ..? ಮುಂದಿನ ದಿನಗಳಲ್ಲಿ ರಾಜಕಾರಣಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಸಂಸತ್‌ಗೆ ಬೀಗ ಹಾಕಬಹುದೇ..? ಅನಂತ್‌ ಕುಮಾರ್‌ ಹೆಗಡೆ ಅವರೇ ಉತ್ತರ ಕೊಡಬೇಕಿದೆ.

ಡಿಜಿಟಲ್‌ ಇಂಡಿಯಾ ಎಂದು ಉದ್ದುದ್ದ ಭಾಷಣ ಮಾಡುತ್ತಾ ಹೋದರೆ ಸಾಲದು, ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡುತ್ತಾ ಹೋಗಬೇಕು. ಖಾಸಗಿ ಕಂಪನಿಗಳಿಗೆ ಸರ್ಕಾರ ಬೆಂಬಲ ನೀಡಬೇಕು ಎನ್ನುವುದು ಸತ್ಯ. ಆದರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಮುಳುಗಿಸಿ ಖಾಸಗಿ ಉದ್ಯಮಿಯ ಸಂಸ್ಥೆಯನ್ನು ಬೆಳೆಸುವುದು ದೇಶದ್ರೋಹ ಆಗುವುದಿಲ್ಲವೇ..? ಖಾಸಗಿ ಟೆಲಿಕಾಂ ಕಂಪನಿಗೆ ಸಹಾಯ ಮಾಡಿದ್ದರಿಂದ 530 ಮಿಲಿಯನ್‌ ಡಾಲರ್‌ ಹಣ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಸರ್ಕಾರದ ಆಡಿಟ್‌ ವರದಿ ತಿಳಿಸಿತ್ತು. ಒಂದು ಖಾಸಗಿ ಸಂಸ್ಥೆಗೆ ಪರೋಕ್ಷವಾಗಿ ಈ ರೀತಿ ಸಹಾಯ ಮಾಡಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಮುಚ್ಚುವಂತೆ ಮಾಡುವುದು ದೇಶಭಕ್ತಿಯೇ..? ಎಂಬುದನ್ನು ಜನರೇ ನಿರ್ಧಾರ ಮಾಡಬೇಕಿದೆ.

ಖಾಸಗಿ ಸಂಸ್ಥೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಡುವೆ ಆರೋಗ್ಯರ ಪೈಪೋಟಿ ಇರಬೇಕು ಎನ್ನುವುದು ಸತ್ಯ. ಪೈಪೋಟಿ ಇದ್ದಾಗಲೇ ಗ್ರಾಹಕರಿಗೆ ಉತ್ತಮ ಸೇವೆ ಲಭ್ಯವಾಗಲು ಕಾರಣವಾಗುತ್ತದೆ. ಆದರೆ ಖಾಸಗಿ ಸಂಸ್ಥೆಯನ್ನು ಅಭಿವೃದ್ಧಿ ಆಗುವಂತೆ ಮಾಡುವ ಉದ್ದೇಶದಿಂದ ಸರ್ಕಾರಿ ಸಂಸ್ಥೆಯನ್ನೇ ಹಾಳು ಮಾಡಲು ಸಂಚು ಮಾಡಬಾರದು. ದೇಶದಲ್ಲಿ ಬಿಎಸ್‌ಎನ್‌ಎಲ್‌ ಸಂಸ್ಥೆ ಒಂದು ಮಾತ್ರವಲ್ಲ. ಹೆಚ್‌ಎಎಲ್‌ ಸಂಸ್ಥೆ ಗಣನೀಯ ಸಾಧನೆ ಮಾಡುತ್ತಿದೆ. ಆದರೂ ರಫೇಲ್‌ ಯುದ್ಧ ವಿಮಾನ ಜೋಡಣೆ ಕಾರ್ಯವನ್ನು ಬೇರೆ ಸಂಸ್ಥೆಗೆ ಕೊಟ್ಟಿಲ್ಲವೇ..? ಇದೇ ರೀತಿ ಆದರೆ ಹೆಚ್‌ಎಎಲ್‌ ಮುಚ್ಚುವ ದಿನಗಳು ಮುಂದೆ ಬರುವುದಿಲ್ಲವೇ..? ಭಾರತೀಯ ರೈಲು ಇನ್ನೇನು ಕೆಲವೇ ದಿನಗಳಲ್ಲಿ ಖಾಗಿಸಗೀಕರಣವಾಗಲಿದೆ. ಅಂದರೆ ಬಿಎಸ್‌ಎನ್‌ಎಲ್‌ ಜೊತೆಗೆ ಹೆಚ್‌ಎಎಲ್‌, ರೈಲ್ವೆ ಇಲಾಖೆಯ ನೌಕರರೂ ದೇಶದ್ರೋಹಿಗಳೋ..? ಭಾರತೀಯ ಹೆಮ್ಮೆಯ ಸಂಸ್ಥೆಯನ್ನು ಮುಚ್ಚುತ್ತಿರುವ ನಾಯಕರು ದೇಶಭಕ್ತರೋ ಅರ್ಥವಾಗದ ವಿಚಾರ.

ದೇಶದ ಜನರು ಬಣ್ಣದ ಮಾತಿಗೆ ಮರುಳಾಗುತ್ತ ಕಾಲ ಕಳೆಯುವ ಸಮಯ ಕೊನೆಯಾಗುವ ತನಕ ಈ ರೀತಿಯ ಕೆಲಸಗಳು ನಡೆಯುತ್ತಲೇ ಇರುತ್ತವೇ. ಭಾರತೀಯ ಹೆಮ್ಮೆಯಾಗಿದ್ದ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಮುಚ್ಚುತ್ತಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟಿಸುವ ತಾಕತ್ತು ವಿರೋಧ ಪಕ್ಷಗಳಿಗೂ ಇಲ್ಲದಿರುವುದು ವಿಷಾದನೀಯ. ಹಾಗೂ ಸಂಸದ ಅನಂತ್‌ ಕುಮಾರ್‌ ಹೆಗಡೆ ಬಿಎಸ್‌ಎನ್‌ಎಲ್‌ ಮುಚ್ಚುತ್ತೇವೆ ಎಂದಾಗ ಚಪ್ಪಾಳೆ ತಟ್ಟುವ ಮೂರ್ಖ ಶಿಖಾಮಣಿಗಳ ಕಾಲವಿದು. ಅಚ್ಛೇ ದಿನ್‌ ಆಯೇಗಾ ಎನ್ನುವ ಮಾತು ಭಾರೀ ಮಹತ್ವ ಪಡೆದುಕೊಂಡಿತ್ತು. ಇದೇನಾ ಅಚ್ಛೇ ದಿನ್‌ ಗೊತ್ತಿಲ್ಲ.

Click here to follow us on Facebook , Twitter, YouTube, Telegram

Pratidhvani
www.pratidhvani.com