ಮುನಿಸಿಕೊಂಡ ವರುಣದೇವ: ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ
ರಾಜ್ಯ

ಮುನಿಸಿಕೊಂಡ ವರುಣದೇವ: ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ

2018-ಆಗಸ್ಟ್ ತಿಂಗಳ 14-15-16 ಈ ಮೂರು ದಿನಗಳು ಕೂಡ ಕೊಡಗು ಸಹಜವಾಗಿರಲಿಲ್ಲ ಅಂದು ಉತ್ತರ ಕೊಡಗಿನ ಜೋಡುಪಾಲ, ಹಾಲೇರಿ, ಹಮ್ಮಿಯಾಲ, ಮುಕ್ಕೊಡ್ಲು, ಉದಯಗಿರಿ, ಕಾಲೂರು, ಮಕ್ಕಂದೂರು ಗ್ರಾಮಗಳು ಇದೇ ತರಹದ ಜಲಸ್ಫೋಟಕ್ಕೆ, ಗುಡ್ಡ ಕುಸಿತಕ್ಕೆ ತತ್ತರಿಸಿ ಹೋಗಿತ್ತು.

ಕೋವರ್ ಕೊಲ್ಲಿ ಇಂದ್ರೇಶ್

ರಾಜ್ಯದ ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದಲೇ ದೇಶಾದ್ಯಂತ ಹೆಸರುವಾಸಿ ಅಗಿದೆ. ಅಷ್ಟೇ ಅಲ್ಲ ನಿತ್ಯ ಸಾವಿರಾರು ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಕೊಡಗಿನಲ್ಲಿ ಮಳೆಗಾಲ ಎಂದರೆ ಅದೊಂದು ಕಷ್ಟಕರವಾದ ಸಂತೋಷವೂ ಹೌದು. ಬೆಟ್ಟ ಗುಡ್ಡಗಳ ಹಸಿರು ಕಾನನದ ನಡುವೆ ನೂರಾರು ಜಲಪಾತಗಳು ಸೃಷ್ಟಿಯಾಗುತ್ತವೆ. ಈ ಜಲಪಾತಗಳು ಮಳೆ ಮುಗಿಯುತಿದ್ದಂತೆಯೇ ಮಾಯವಾಗುತ್ತವೆ. ಕೊಡಗಿನ ಮಳೆಗಾಲದಲ್ಲಿ ಜನತೆಯ ಬದುಕು ತ್ರಾಸದಾಯಕವಾಗಿರುತ್ತದೆ. ಮುಖ್ಯವಾಗಿ ನದಿಗಳ ನೀರಿನ ಮಟ್ಟ ಹೆಚ್ಚಿ ರಸ್ತೆ ಸಂಪರ್ಕ ಕಡಿದು ಹೋಗುತ್ತದೆ. ಅದು ಹೇಗಾದರೂ ಪರವಾಗಿಲ್ಲ ಮನೆಯಲ್ಲೇ ಬೆಚ್ಚಗೆ ಇರೋಣ ಸಾಕು ಎಂದರೆ ವಿದ್ಯುತ್ ಇರೋದೆ ಇಲ್ಲ. ಮರಗಿಡಗಳ ನಡುವೆಯೇ ವಿದ್ಯುತ್ ತಂತಿಗಳು ಹಾದು ಬರಬೇಕಾಗಿದ್ದು ಮಳೆಗಾಲದಲ್ಲಿ ಬೀಸುವ ಗಾಳಿಯ ವೇಗವೂ ಘಂಟೆಗೆ 70-80 ಕಿಮಿ ವೇಗದಲ್ಲೇ ಇರುತ್ತದೆ. ಆ ವೇಗಕ್ಕೆ ಮರಗಳ ಕೊಂಬೆಗಳು , ಮರಗಳೇ ಮುರಿದು ವಿದ್ಯುತ್ ಕಂಬಗಳ ಮೇಲೆ ಬೀಳುತ್ತವೆ. ಇನ್ನು ಕಂಬ ಬದಲಿಸಿ ಲೈನ್ ಎಳೆಯುವುದು ಸಮಯ ತೆಗೆದುಕೊಳ್ಳುತ್ತದೆ. ಆಗ ಗ್ರಾಮೀಣ ಪ್ರದೇಶದಲ್ಲಿ ವಾರಗಟ್ಟಲೆ ವಿದ್ಯುತ್ ಇರುವುದಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಈಗ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಹೆದರಿಕೊಂಡು ಬದುಕುವ ಕಾಲ ಬಂದಿದೆ. ಏಕೆಂದರೆ 2018 ರ ಮಳೆಗಾಲದಿಂದ ಈ ವರ್ಷದ ಮಳೆಗಾಲದವರೆಗೆ ಪ್ರತೀ ವರ್ಷವೂ ಭೂ ಕುಸಿತ ಸಂಭವಿಸಿ ಜೀವ ಹಾನಿ ಸಂಭವಿಸಿದೆ. ಆಗಸ್ಟ್ 08-2019 ಇಂದಿಗೆ ಸರಿಯಾಗಿ ಹೆಚ್ಚು ಕಡಿಮೆ ಒಂದು ವರ್ಷಗಳ ಹಿಂದೆ ಹೋದರೆ ಆ ದಿನ ಕೊಡಗು ಸಹಜವಾಗಿರಲಿಲ್ಲ ವಿರಾಜಪೇಟೆ ತಾಲೂಕಿನ ತೋರ ಗ್ರಾಮ ಇಡೀ ಕೊಡಗನ್ನು ತಲ್ಲಣಿಸಿ ಹಾಕಿತ್ತು. ರಣ ಭೀಕರ ಜಲಪ್ರವಾಹ ಅಲ್ಲಿ ಸಂಭವಿಸಿತ್ತು. 10 ಮಂದಿ ಕಣ್ಮರೆಯಾಗಿದ್ದರು ಅವರಲ್ಲಿ 4 ಮಂದಿ ಇನ್ನೂ ಸಿಕ್ಕಿಲ್ಲ ಹತ್ತಿರ ಹತ್ತಿರ ಒಂದು ತಿಂಗಳು ನೂರಾರು ಮಂದಿ ಶ್ರಮಿಸಿಯೂ...

ಅದಕ್ಕೂ ಮೊದಲು ಅಂದರೆ 2018-ಆಗಸ್ಟ್ ತಿಂಗಳ 14-15-16 ಈ ಮೂರು ದಿನಗಳು ಕೂಡ ಕೊಡಗು ಸಹಜವಾಗಿರಲಿಲ್ಲ ಅಂದು ಉತ್ತರ ಕೊಡಗಿನ ಜೋಡುಪಾಲ, ಹಾಲೇರಿ, ಹಮ್ಮಿಯಾಲ, ಮುಕ್ಕೊಡ್ಲು, ಉದಯಗಿರಿ, ಕಾಲೂರು, ಮಕ್ಕಂದೂರು ಗ್ರಾಮಗಳು ಇದೇ ತರಹದ ಜಲಸ್ಫೋಟಕ್ಕೆ, ಗುಡ್ಡ ಕುಸಿತಕ್ಕೆ ತತ್ತರಿಸಿ ಹೋಗಿತ್ತು.

ಇಂದು ಕಾವೇರಿಯ ಉಗಮ ತಲಕಾವೇರಿಯ ಪಕ್ಕದ ಬ್ರಹ್ಮಗಿರಿಯಲ್ಲಿ ಜಲಸ್ಫೋಟವನ್ನು ಒಳಗೊಂಡಂತೆ ಈ ಮೂರು ದುರಂತಗಳು ಜಿಲ್ಲೆಯಲ್ಲಿ ಸಂಭವಿಸಿದೆ. ಅದೂ ಕೂಡ ಮೂರೂ ವರುಷದ ಆಗಸ್ಟ್'ತಿಂಗಳಿನಲ್ಲಿ. ಕೊಡಗು ಈ ಹಿಂದೆ ಎಂದು ಕೂಡ ಕಂಡು, ಕೇಳರಿಯದಷ್ಟು ಮಳೆಗೆ ಸಾಕ್ಷಿಯಾಗಿದೆ. ಕೊಡಗಿನಾದ್ಯಂತ ಮೈಚಾಚಿ ಇಷ್ಟೂ ವರ್ಷಗಳ ಕಾಲ ರಮಣೀಯವಾಗಿದ್ದ ಪಶ್ಚಿಮ ಘಟ್ಟ ಇದೀಗ ನರಕ ಸದೃಶ್ಯದಂತೆ ಬಾಸವಾಗುತ್ತಿದೆ. ಇಂದಿನ ಬ್ರಹ್ಮಗಿರಿ ಬೆಟ್ಟದ ದುರಂತವನ್ನು ಒಳಗೊಂಡಂತೆ ಈ ಮೂರು ವರ್ಷಗಳ ದುರಂತವನ್ನು ನಾವು ನೋಡುತ್ತಾ, ನೊಂದುಕೊಳ್ಳುತ್ತಾ ಬಂದಿದ್ದೇವೆ. ನೋವಿನಿಂದಲೇ ನಾವು ವರದಿಯನ್ನು ಮಾಡಿದ್ದೇವೆ.

ಕೊಡಗಿನ ಕುಲಮಾತೆ ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಭಾರೀ ಭೂಕುಸಿತದಿಂದ ಎರಡು ಮನೆಗಳು ಸಂಪೂರ್ಣ ಧ್ವಂಸಗೊಂಡು, ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಕಣ್ಮರೆಯಾಗಿದ್ದಾರೆ. ಈ ದುರಂತದಲ್ಲಿ ಐವರು ಜೀವಂತ ಸಮಾಧಿಯಾಗಿರುವ ಶಂಕೆಯೊಂದಿಗೆ 20ಕ್ಕೂ ಅಧಿಕ ದನಗಳು ಕೂಡ ಜೀವ ಕಳೆದುಕೊಂಡಿವೆ. ದುರ್ಘಟನೆ ಎಷ್ಟು ಹೊತ್ತಿನಲ್ಲಿ ಸಂಭವಿಸಿದೆ ಎಂದು ನಿಖರ ಮಾಹಿತಿ ಇಲ್ಲ. ಗುರುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾರಾಯಣಾಚಾರ್ ಅವರ ತೋಟ ನೋಡಿಕೊಂಡು ಚಾಲಕರಾಗಿರುವ ತಣ್ಣಿಮಾನಿಯ ಹೆಚ್. ಜಯಂತ್ ತಲಕಾವೇರಿ ಮನೆಗೆ ತೆರಳಿದಾಗ ಭಯಾನಕ ದೃಶ್ಯ ಎದುರಾಗಿದೆ.

ಕಳೆದ ನಾಲ್ಕು ದಶಕಗಳಿಂದಲೂ ತಲಕಾವೇರಿಯಲ್ಲೇ ನೆಲೆಸಿರುವ ಟಿ.ಎಸ್. ನಾರಾಯಣಾಚಾರ್ ಕ್ಷೇತ್ರದ ಅರ್ಚಕರಷ್ಟೇ ಆಗಿರದೆ ಒಂದೊಮ್ಮೆ ಭಾಗಮಂಡಲ ಪಂಚಾಯತ್ ಮಂಡಲ ಪ್ರಧಾನರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿಜೆಪಿ ಒಡನಾಡಿಯಾಗಿದ್ದರು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳುತ್ತಾರೆ. ತಲಕಾವೇರಿಗೆ ಬರುವ ಭಕ್ತರ ಸಹಿತ ಪ್ರತಿಯೊಬ್ಬರಿಗೆ ತಮ್ಮ ಮನೆಗೆ ಆಹ್ವಾನಿಸಿ ಕ್ಷೇತ್ರ ಮಹಿಮೆಯೊಂದಿಗೆ, ಹಸಿವು ನೀಗಿಸಿ ಕಳುಹಿಸಿಕೊಡುವ ಮೂಲಕ ಎಲ್ಲರಿಗೆ ಆಶ್ರಯಧಾತರಾಗಿದ್ದರು ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕಂಬನಿ ಮಿಡಿದರು. .

ಕಳೆದ ಜುಲೈ 23ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಗೆ ಕಾವೇರಿ ತೀರ್ಥ ಹಾಗೂ ಮೃತ್ತಿಕೆ ಕಳುಹಿಸಲು ನಾರಾಯಣಾಚಾರ್ ವಿಶೇಷ ಪ್ರಾರ್ಥನೆಯೊಂದಿಗೆ ಮೂರು ದಿನಗಳ ಹಿಂದೆ ಪರಿಸರ ಕಾಳಜಿಯಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಭಾಗಮಂಡಲ ಕ್ಷೇತ್ರದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ನೆನಪಿಸಿಕೊಂಡರು.

ನಾರಾಯಣಾಚಾರ್ ಅವರ ಜೀವಕ್ಕೆ ಮುಳುವಾಗಲು ಕಾರಣ ಏನು ಗೊತ್ತೆ? ಅತಿಯಾದ ದೈವ ಭಕ್ತಿಯೇ ಇದಕ್ಕೆ ಕಾರಣ. ಏಕೆಂದರೆ ಭಾಗಮಂಡಲ ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಅಶೋಕ್ ಅವರು ನಾರಾಯಣ ಆಚಾರ್ ಮನೆ ಗುಡ್ಡದಲ್ಲಿರುವುದರಿಂದ ಮನೆ ಖಾಲಿ ಮಾಡಿ ಬೇರೆಡೆ ತೆರಳುವಂತೆ ನೋಟೀಸ್ ಕೂಡ ನೀಡಿದ್ದರು. ಆದರೆ ತಾಯಿ ಕಾವೇರಮ್ಮ ನೋಡಿಕೊಳ್ಳುತ್ತಾಳೆ ಬಿಡಿ ಎಂದು ದೈರ್ಯದಿಂದ ಇದ್ದರು ಎಂದು ಅಶೋಕ್ ಹೇಳುತ್ತಾರೆ. ಆದರೆ ಅವರ ಪತ್ನಿ ಶಾಂತ ಅವರು ಬೇರೆಡೆ ಹೋಗಲು ಒಲವು ತೋರಿದ್ದರು ಎಂದೂ ಅವರು ಹೇಳಿದರು. ಇವರ ಇಬ್ಬರೂ ಹೆಣ್ಣು ಮಕ್ಕಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನೆಲೆಸಿದ್ದಾರೆ.

ಸಾಮಾನ್ಯವಾಗಿ ಭೂ ಸಮಾಧಿ ಆದ ಪ್ರಕರಣಗಳಲ್ಲಿ ದೇಹ ಪತ್ತೆ ಬಹಳ ಕ್ಲಿಷ್ಟಕರವಾದ ಕೆಲಸ. ಏಕೆಂದರೆ ಕಾಲಿಟ್ಟಲ್ಲಿ ಎರಡು-ಮೂರು ಅಡಿ ಹೂತುಕೊಳ್ಳುತ್ತದೆ. ರಕ್ಷಣೆ ಸಾದ್ಯವೇ ಇಲ್ಲ. ಈಗ ತಲಕಾವೇರಿಗೆ ತೆರಳಲು ಭಾಗಮಂಡಲದಲ್ಲಿ ಪ್ರವಾಹ ಇರುವುದರಿಂದ ಜೆಸಿಬಿ ಕೂಡ ಹೋಗಲಾಗುತ್ತಿಲ್ಲ. ಎನ್‌ಡಿಆರ್‌ಎಫ್‌ ತಂಡ, ಯಂತ್ರೋಪಕರಣಗಳು ಇದ್ದರೂ ಕೂಡ ಕೆಸರಿನೊಳಗೆ ಸಿಲುಕಿರುವವರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ ವಿ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು. ಆದರೂ ಕೂಡ ಅಧಿಕಾರಿಗಳು ಸುರಿವ ಮಳೆಯಲ್ಲೇ ಹುಡುಕಾಟ ಮುಂದುವರೆಸಿದ್ದಾರೆ.

(ಮುಂದಿನ ಸಂಚಿಕೆಯಲ್ಲಿ ಗುಡ್ಡ ಕುಸಿತಕ್ಕೆ ಕಾರಣಗಳ ವಿಶ್ಲೇಷಣೆ )

Click here to follow us on Facebook , Twitter, YouTube, Telegram

Pratidhvani
www.pratidhvani.com