ಮತ್ತೆ ನೆರೆ: ತತ್ತರಿಸಿದ ಉತ್ತರ ಕರ್ನಾಟಕಕ್ಕೆ ಬರೆ
ರಾಜ್ಯ

ಮತ್ತೆ ನೆರೆ: ತತ್ತರಿಸಿದ ಉತ್ತರ ಕರ್ನಾಟಕಕ್ಕೆ ಬರೆ

ರಾಜ್ಯದಲ್ಲಿ ಇನ್ನು ಮೂರು ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹವಾಮಾನ ಇಲಾಖೆ ನೀಡಿದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.

ಕೆ. ಶ್ರೀಕಾಂತ್

ಕಳೆದ ವರ್ಷ ಉತ್ತರ ಕರ್ನಾಟಕದ ಹಲವು ತಾಲೂಕುಗಳಲ್ಲಿ ನದಿ ಹಳ್ಳಗಳು ಉಕ್ಕಿ ಹರಿದು ಹೊಲ ಹಳ್ಳಿಗಳಿಗೆ ನುಗ್ಗಿ ಭಾರೀ ಪ್ರಮಾಣದ ಅನಾಹುತವನ್ನೇ ಸೃಷ್ಟಿಸಿದ್ದವು. ಈಗ ಮತ್ತೇ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಶರಾವತಿ, ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಉತ್ತರಕನ್ನಡ, ಬೆಳಗಾವಿ, ಬಾಗಲಕೋಟೆ, ಗದಗ್ ಹಾಗೂ ಹಾವೇರಿ ಜಿಲ್ಲೆಗಳ ಜನರು ಪ್ರವಾಹ ಭೀತಿಯಿಂದ ಕಂಗಾಲಾಗಿದ್ದಾರೆ. ಇನ್ನೇನು ಬೆಳೆಗಳು ಕೈಗೆ ಬಂದವು ಎಂದ ಸಮಯದಲ್ಲೇ ವರುಣಾಘಾತ ಹಾಗೂ ಪ್ರವಾಹ ಭೀತಿ ಎದುರಾಗಿದೆ.

ಬೆಳಗಾವಿಯಲ್ಲಿ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೇ ಪ್ರವಾಹ ಬಂತೆಂದು ತಿಳಿದಕೂಡಲೇ ಹಲವು ಜನರು ಗ್ರಾಮವನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ. ಖಾನಾಪುರ ತಾಲೂಕಿನಲ್ಲಿ 20 ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು 50 ಕ್ಕೂ ಹೆಚ್ಚು ಹಳ್ಳಿಗಳು ಸಂಪರ್ಕವನ್ನೇ ಕಡಿದುಕೊಂಡಿವೆ. ಧಾರವಾಡ ಸವದತ್ತಿ ರಸ್ತೆ ಸಂಪರ್ಕ ಈಗ ಬಂದ್ ಅಗಿದೆ. ಧಾರವಾಡದ ಬಳಿ ತುಪ್ಪರಿ ಹಳ್ಳ, ಹಾವೇರಿ ಬಳಿ ಬೆಣ್ಣೆ ಹಳ್ಳ ಹೀಗೆ ಉತ್ತರ ಕರ್ನಾಟಕದ ಕೆಲವು ದೊಡ್ಡ ದೊಡ್ಡ ಹಳ್ಳಗಳು ಉಕ್ಕಿ ಹರಿಯುತ್ತಿವೆ.

ಬೆಳಗಾವಿ ಭಾಗದಲ್ಲಿ ಬಾರಿ ಹೆಚ್ಚು ಮಳೆಯಾಗುತ್ತಿರುವುದರಿಂದ ಹಿಡಕಲ್ ಜಲಾಶಯ ಮತ್ತು ದೂಪದಾಳ ಡ್ಯಾಮ್ ನಿಂದ ಹೆಚ್ಚು ನೀರು ಹರಿದು ಬರುತ್ತಿದೆ. ಆದ್ದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಘಟಪ್ರಭಾ ನದಿಯ ಹಳೆ ರಸ್ತೆ ಸೇತುವೆ ಜಲಾವೃತಗೊಂಡಿದೆ. ಇದರಿಂದ ಮಲ್ಲಾಪುರ, ಮರ್ಜಿ, ಚನಾಳ, ಒಂಟಗೋಡಿಯಿಂದ ಮಹಾಲಿಂಗಪುರ ಪಟ್ಟಣ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ವರ್ಷದ ಪ್ರವಾಹ, ಕೋವಿಡಾತಂಕ ಈಗ ಮತ್ತೆ ನೆರೆ ರೈತಾಪಿ ವರ್ಗದವರಿಗಂತೂ ಅತೀವ ಸಂಕಷ್ಟಕ್ಕೆ ಈಡು ಮಾಡಿದೆ. ಇತ್ತ ವರಮಾನವೂ ಇಲ್ಲ, ಕೋವಿಡಾತಂಕದಿಂದ ಉದ್ಯೋಗವೂ ಇಲ್ಲ. ಇನ್ನು ಮಳೆ ಹೀಗೆ ಮುಂದುವರೆದರೆ ಬದುಕೇ ದುಸ್ತರ ಎನ್ನುವ ಪರಿಸ್ಥಿತಿ ಬಂದೊದಗಿದೆ.

ರಾಜ್ಯದಲ್ಲಿ ಇನ್ನು ಮೂರು ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹವಾಮಾನ ಇಲಾಖೆ ನೀಡಿದ್ದು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಈಗಾಗಲೇ ಹಲವು ಕಡೆಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು ಮಳೆ ಮುಂದುವರಿದರೆ ಇನ್ನೂ ನಷ್ಟ ಮಾತ್ರ ಖಾತ್ರಿ.

ಸಿಎಂ ಯಡಿಯೂರಪ್ಪ ಅವರು ಈಗಾಗಲೇ 50 ಕೋಟಿ ಹಣ ಬಿಡುಗಡೆ ಮಾಡಿದ್ದು, ಅಗತ್ಯ ಇದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಪ್ರವಾಹ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸರ್ಕಾರದ ಮುಖಕಾರ್ಯದರ್ಶಿ ವಿಜಯಭಾಸ್ಕರ್, ಆಯಾ ಜಿಲ್ಲೆಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ ಸಿಗಲಿ. ಕಳೆದ ಬಾರಿ ಹಲವು ಸಂತ್ರಸ್ತರಿಗೆ ಸರಿಯಾದ ಸಮಯದಲ್ಲಿ ಸಹಾಯ ಸಿಗಲಿಲ್ಲ. ಅದರಲ್ಲಿಯೂ ಬಹಳಷ್ಟು ಗೋಲ್ ಮಾಲ್ ಗಳು ನಡೆದವು. ಸುದ್ದಿ ಮಾಧ್ಯಮಗಳು ಅವುಗಳನ್ನು ಬೆಳಕಿಗೆ ತಂದರೂ ‘ಪರಿಶೀಲಿಸಿ ನಂತರ ತಿಳಿಸುತ್ತೇವೆ’ ಎಂಬ ಸಿದ್ಧ ಉತ್ತರ ಮಾತ್ರ ಸಿಕ್ಕಿತು. ಮುಂದೇನಾಯಿತೋ...ಏನೋ...

ಬೆಳಗಾವಿ ರೈತ ಪರಮೇಶ್ವರಪ್ಪ ವಟನೂರ ಅವರು, “ಕಳೆದ ಬಾರಿ ಪ್ರವಾಹದ ಹೊಡೆತದಿಂದ ಇನ್ನೂ ಹೊರಬಂದಿಲ್ಲ. ಮನೆ ಬಿದ್ದು ಹೋಯಿತು. ಬೆಳೆ ನಾಶವಾಯಿತು. ಈ ಬಾರಿಯೂ ಮತ್ತೇ ಬೆಳೆ ನಾಶ. ಸರ್ಕಾರದ ಹತ್ತಿರ ಹೋಗಿ ಹಣ ಕೇಳುವ ಜಾಯಮಾನದವರು ನಾವಲ್ಲ. ನೋಡೋಣ ಜೀವನ ಹೀಗೆ ಅಂತ ಇದ್ದರೆ ಯಾರು ಏನು ಮಾಡಲಾಗುತ್ತದೆ!” ಎಂದು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com