ದೇವದಾಸಿ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ!!
ರಾಜ್ಯ

ದೇವದಾಸಿ ಪದ್ಧತಿ ಇನ್ನೂ ಅಸ್ತಿತ್ವದಲ್ಲಿದೆ!!

ಆಯೋಜಕರು ಏನಿಲ್ಲ ಹೋಗಿ ಎಂದು ಯುವಕರನ್ನು ಕಳುಹಿಸಲು ಪ್ರಯತ್ನಿಸಿದರು. ಇದರಿಂದ ವಿಚಲಿತಗೊಂಡ ಯುವಕರು, ಅಕ್ಕ ಪಕ್ಕದಲ್ಲಿ ವಿಚಾರಿಸಿದಾಗ ಗೊತ್ತಾಗಿದ್ದು ಒಬ್ಬ ಯುವತಿಯ ದೇವದಾಸಿ ಯನ್ನಾಗಿ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಅಂಶ ಬೆಳಕಿಗೆ ಬಂತು

ಕೆ. ಶ್ರೀಕಾಂತ್

ಜಗತ್ತು ಮೊಬೈಲ್ ಇಂಟರ್ ನೆಟ್ ಹೀಗೆ ನವಯುಗದ ಪಥದಲ್ಲಿ ಸಾಗುತ್ತಿವೆ. ಅಸಂಖ್ಯ ಅವಿಷ್ಕಾರಗಳು ನಡೆಯುತ್ತಿವೆ. ಜನಜೀವನದ ಗುಣಮಟ್ಟ ಸುಧಾರಿಸುತ್ತಿದೆ. ಹೀಗಿರುವಾಗ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ದೇವದಾಸಿಯಂತ ಪದ್ಧತಿಗಳು ಇನ್ನೂ ಜೀವಂತ ಇದೆ ಎನ್ನುವುದು ಮಾತ್ರ ದುರದುಷ್ಟಕರ.

ಹೌದು, ಹೀಗೊಂದು ಘಟನೆ ನಿನ್ನೆ ಅಂದರೆ ಮಂಗಳವಾರ ಕೊಪ್ಪಳ ಜಿಲ್ಲೆಯ ಮುದಗಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸರಿಯಾದ ಸಮಯಕ್ಕೆ ಕೆಲವು ಗ್ರಾಮಸ್ಥರು ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದು ಯುವತಿಯ ರಕ್ಷಣೆ ಮಾಡಿ ಪುನರ್ ವಸತಿ ಕೇಂದ್ರದಲ್ಲಿ ಇರಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೊಂದು ಘಟನೆಯಲ್ಲ, ಹೀಗೆ ಎಷ್ಟೋ ಘಟನೆಗಳು ತೆರೆ ಮರೆಯಲ್ಲಿ ನಡೆಯುತ್ತಿವೆ. ಕೆಲವು ಗ್ರಾಮಗಳಲ್ಲಿ ಇಂತಹ ಅನಿಷ್ಟ ಪದ್ಧತಿಗಳು ಜೀವಂತ ಇದ್ದು, ಇಂತವುಗಳನ್ನು ತಡೆಯಲು ಜನರ ಸಹಕಾರ ಮುಖ್ಯ.

ಆ ಯುವತಿ ಅನಿತಾ (ಹೆಸರನ್ನು ಬದಲಾಯಿಸಲಾಗಿದೆ). ಈಗಿನ್ನು 25 ರ ಪ್ರಾಯ. ಬದುಕಿನ ಬಗ್ಗೆ ಸುಂದರ ಕನಸನ್ನು ಹೆಣೆಯುತ್ತಾ, ಜೀವನದಲ್ಲಿ ಸಾಧನೆ ಮಾಡಬೇಕು. ಒಳ್ಳೆ ಗಂಡ, ಉದ್ಯೋಗ, ಉತ್ತಮ ಕುಟುಂಬ, ಸುಂದರ ಬದುಕಿನ ಬಗ್ಗೆ ಕನಸನ್ನು ಮನದಲ್ಲಿ ಹೆಣೆಯುತ್ತಾ ಇರುವಾಗಲೇ, ಕೆಲ ಖಿನ್ನ ಮನಸಿನ ಕುಟುಂಬಸ್ಥರ ಹಾಗೂ ಸುತ್ತಮುತ್ತಲಿನ ಜನರ ಒತ್ತಾಸೆಗೆ ಮಣಿದು ದೇವದಾಸಿಯಾಗಬೇಕಾದ ಪರಿಸ್ಥಿತಿಗೆ ಬಗ್ಗಲೇ ಬೇಕಾಯಿತು.

ಒಂದಲ್ಲ ಎರಡಲ್ಲ....ಹಲವು ಬಾರಿ ಕುಟುಂಬಸ್ಥರಿಗೆ ತನ್ನನ್ನು ಬದುಕಲು ಗ್ರಾಮ ಬಿಟ್ಟಾದರೂ ಸರಿ ದೂರ ಹೋಗಿ ಬದುಕಿಕೊಳ್ಳುತ್ತೇನೆ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಕೆಲವರು ಬಿಡಲಿಲ್ಲ. ನೀನು ದೇವದಾಸಿ ಆಗಲೇ ಬೇಕು ಇದು ಹಿಂದಿನಿಂದ ಅನುಸರಿಸಿಕೊಂಡ ಬಂದ ಪದ್ಧತಿ, ಬಿಡುವಂತಿಲ್ಲ, ಇದು ನಿಶ್ಚಿತ ಎಂದು ಕಷ್ಟದ ಕೂಪಕ್ಕೆ ದೂಡಿಯೇ ಬಿಡುತ್ತಿದ್ದರು.

ಏನು ನಡೆಯಿತ್ತಿತ್ತು?

ಅಂದು ಮಂಗಳವಾರ, ಮುದಗಲ್ ಹತ್ತಿರ ದೇವಸ್ಥಾನವೊಂದರಲ್ಲಿ ಕೆಲವು ಜನರು ಸೇರಿದ್ದರು. ಗ್ರಾಮದ ಕೆಲ ಯುವಕರು ವಿಚಾರಿಸಿದಾಗ ಅಲ್ಲಿ ಮದುವೆಯಿಲ್ಲ, ಮುಂಜಿ ಇಲ್ಲ, ಬೇರಾವ ಕಾರ್ಯಕ್ರಮವೂ ಇಲ್ಲ. ವಿಚಾರಿಸಿದಾಗ ಆಯೋಜಕರು ಏನಿಲ್ಲ ಹೋಗಿ ಎಂದು ಯುವಕರನ್ನು ಕಳುಹಿಸಲು ಪ್ರಯತ್ನಿಸಿದರು. ಇದರಿಂದ ವಿಚಲಿತಗೊಂಡ ಯುವಕರು, ಅಕ್ಕ ಪಕ್ಕದಲ್ಲಿ ವಿಚಾರಿಸಿದಾಗ ಗೊತ್ತಾಗಿದ್ದು ಒಬ್ಬ ಯುವತಿಯ ದೇವದಾಸಿ ಯನ್ನಾಗಿ ಮಾಡುವ ಕಾರ್ಯ ನಡೆಯುತ್ತಿದೆ ಎಂಬ ಅಂಶ ಬೆಳಕಿಗೆ ಬಂತು. ತಕ್ಷಣವೇ ಯುವಕರು ತಾವರಗೇರಾ ಪೋಲಿಸರಿಗೆ ಮಾಹಿತಿ ನೀಡಿದರು. ಪೋಲಿಸರು ಸರಿಯಾದ ಸಮಯಕ್ಕೆ ಬಂದು ಯುವತಿಯನ್ನು ರಕ್ಷಿಸಿದರು. ಹೆತ್ತವರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅನಿತಾ ರಂತಹ ಎಷ್ಟೋ ಯುವತಿಯರು ಇಂದು ಶೋಷಣೆಗೀಡಾಗುತ್ತಿರಬಹುದು. ನಿಮ್ಮ ಅಕ್ಕಪಕ್ಕದಲ್ಲಿ ಈ ರೀತಿ ಸಂಶಯ ಬರುವಂತಹ ಘಟನೆಗಳನ್ನು ನಡೆಯುತ್ತಿದ್ದರೆ ತಕ್ಷಣವೇ ಪೋಲಿಸರಿಗೆ ತಿಳಿಸಿರಿ ಎಂದು ಪ್ರತಿಧ್ವನಿ ತಂಡದಿಂದ ಸವಿನಯ ವಿನಂತಿ.....

Click here to follow us on Facebook , Twitter, YouTube, Telegram

Pratidhvani
www.pratidhvani.com