ಬಿಜೆಪಿ ರಾಜ್ಯ ಘಟಕ ಪುನರ್ ರಚನೆ: ವಿಜಯೇಂದ್ರಗೆ ನಿಜಕ್ಕೂ ಸಿಕ್ಕಿದ್ದು ಬಡ್ತಿಯೇ?
ರಾಜ್ಯ

ಬಿಜೆಪಿ ರಾಜ್ಯ ಘಟಕ ಪುನರ್ ರಚನೆ: ವಿಜಯೇಂದ್ರಗೆ ನಿಜಕ್ಕೂ ಸಿಕ್ಕಿದ್ದು ಬಡ್ತಿಯೇ?

ರಾಜ್ಯ ಬಿಜೆಪಿ ಪದಾಧಿಕಾರಿಗಳ ಬದಲಾವಣೆ ಮೇಲ್ನೋಟಕ್ಕೆ ಒಂದು ಸಾಮಾನ್ಯ ಪ್ರಕ್ರಿಯೆ ಎನಿಸಿದರೂ, ಈಗಿನ ಬಿಜೆಪಿ ಪದಾಧಿಕಾರಿಗಳ ಬದಲಾವಣೆಯ ಪ್ರಕ್ರಿಯೆ ಆಳದಲ್ಲಿ ಪಕ್ಷದ ಅಧಿಕಾರಸ್ಥರು ಮತ್ತು ಅಧಿಕಾರ ಆಕಾಂಕ್ಷಿಗಳ ನಡುವಿನ ತೆರೆಮರೆಯ ಸಮರದ ನಿರ್ಣಾಯಕ ಘಟ್ಟವೇ ಎಂಬುದು ನಿರ್ವಿವಾದ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹೊಸ ಹೊಣೆಗಾರಿಕೆಯ ಪಟ್ಟಿಯಲ್ಲಿ ಹಲವರ ಭಾರ ಹಗುರವಾಗಿದ್ದರೆ, ಮತ್ತೆ ಕೆಲವರಿಗೆ ಹೆಚ್ಚಾಗಿದೆ. ಯಾವುದೇ ಸಂಘಟನೆಯ ಪದಾಧಿಕಾರಿಗಳ ಬದಲಾವಣೆಯಾದಾಗಲೂ ಇದು ಸಹಜ. ಆದರೆ, ಬಿಜೆಪಿ ವಿಷಯದಲ್ಲಿ ಯಾರಿಗೆ ಹೊಣೆ ಹೆಚ್ಚಿದೆ, ಯಾರಿಗೆ ಕಡಿಮೆಯಾಗಿದೆ ಎಂಬುದೇ ವಿಶೇಷ.

ಹೌದು, ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷದ ಪದಾಧಿಕಾರಿಗಳ ಬದಲಾವಣೆ ಎಂಬುದು ಕೇವಲ ಸಂಘಟನೆಯ ಭಾಗವಾಗಿಯಷ್ಟೇ ಇರುವುದಿಲ್ಲ. ಬದಲಾಗಿ ಪಕ್ಷದ ಅಧಿಕಾರಸ್ಥರು ಮತ್ತು ಅಧಿಕಾರ ವಂಚಿತರ ನಡುವಿನ ಪರೋಕ್ಷ- ಪ್ರತ್ಯಕ್ಷ ಪೈಪೋಟಿ, ಸೆಣೆಸಾಟದ ಸಂದರ್ಭವಾಗಿಯೂ ಬಳಕೆಯಾಗುತ್ತದೆ. ಈಗ ಬಿಜೆಪಿ ಬಿಡುಗಡೆ ಮಾಡಿರುವ ಹೊಸ ಪದಾಧಿಕಾರಿಗಳ ಪಟ್ಟಿಯ ಮೇಲೆ ಕಣ್ಣಾಡಿಸಿದರೆ, ಅಲ್ಲಿ ಸಂಘಟನೆಯ ಉದ್ದೇಶಕ್ಕಿಂತ ಅಧಿಕಾರಸ್ಥರ ಜೊತೆಗೆ ಸಂಘಟನೆ ಕಾಯ್ದುಕೊಳ್ಳಬೇಕಾದ ಸಮೀಕರಣದ ಲೆಕ್ಕಾಚಾರಗಳೇ ಢಾಳಾಗಿ ರಾಚುತ್ತಿವೆ. ಅದರಲ್ಲೂ ರಾಜ್ಯ ರಾಜಕಾರಣದ ಹಿಡಿತದ ವಿಷಯದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ನಡುವಿನ ಪೈಪೋಟಿಯ ಹಿನ್ನೆಲೆಯಲ್ಲಿ ನೋಡಿದರೆ ಇಂತಹ ಲೆಕ್ಕಾಚಾರಗಳು ಇನ್ನಷ್ಟು ಸ್ಪಷ್ಟವಾಗದೇ ಇರವು.

ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕರಿಸಿದ ಬರೋಬ್ಬರಿ ಒಂದು ವರ್ಷವೇ ಕಳೆಯುತ್ತಾ ಬಂದರೂ ಪಕ್ಷದ ರಾಜ್ಯ ಘಟಕದ ಪುನರ್ ರಚನೆ ಆಗಿರಲಿಲ್ಲ. ಇಷ್ಟು ದಿನವೂ ಸುಮ್ಮನಿದ್ದು, ಈಗ ದಿಢೀರನೇ ಪದಾಧಿಕಾರಿಗಳ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಗಮನಿಸಿದರೂ, ಅದೇ ಅಧಿಕಾರಸ್ಥರು ಮತ್ತು ಸಂಘಟನೆಯ ನಡುವಿನ ತೆರೆಮರೆಯ ಸಂಘರ್ಷವೇ ಕಾಣುತ್ತದೆ. ಸ್ವತಃ ಕಟೀಲ್ ನೇಮಕಕ್ಕೇ ಸಿಎಂ ಯಡಿಯೂರಪ್ಪ ಸಹಮತವಿರಲಿಲ್ಲ. ಬದಲಾಗಿ ಅರವಿಂದ ಲಿಂಬಾವಳಿ ಅಥವಾ ತಮ್ಮ ಆಪ್ತರಲ್ಲೇ ಒಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಆಗಲೂ ಯಡಿಯೂರಪ್ಪ ಪ್ರಯತ್ನಗಳು ಸೋತಿದ್ದವು. ಬದಲಾಗಿ ಅವರ ರಾಜಕೀಯ ಪ್ರತಿಸ್ಪರ್ಧಿ ಬಿ ಎಲ್ ಸಂತೋಷ್ ತಮ್ಮ ಬಣದ ಕಟೀಲ್ ನೇಮಕದ ಮೂಲಕ ಹೈಕಮಾಂಡ್ ಮಟ್ಟದಲ್ಲಿ ತಾವು ಹೊಂದಿರುವ ಪ್ರಭಾವವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು.

ಇದೀಗ ಅದೇ ಕಟೀಲ್ ಅವರನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಸಂತೋಷ್, ರಾಜ್ಯ ಬಿಜೆಪಿಯಲ್ಲಿ ತಮ್ಮ ಕೈ ಮೇಲಾಗುವಂತೆ ವ್ಯವಸ್ಥಿತವಾಗಿ ರಾಜ್ಯ ಘಟಕ ಪುನರ್ ರಚನೆ ಮಾಡಿದ್ದಾರೆ. ಅದರಲ್ಲೂ ಯಡಿಯೂರಪ್ಪ ಆಡಳಿತಕ್ಕೆ ಒಂದು ವರ್ಷ ತುಂಬುತ್ತಿರುವ ಹೊತ್ತಿನಲ್ಲೇ ಈ ನೇಮಕವಾಗಿರುವುದು ಕೂಡ ರಾಜ್ಯ ಬಿಜೆಪಿ ವಲಯಕ್ಕೆ ಬೇರೆಯದೇ ಸಂದೇಶ ನೀಡಿದೆ. ಅದರಲ್ಲೂ ಕಳೆದ ವಾರದ ದಿಢೀರ್ ನಿಗಮ ಮಂಡಳಿ ನೇಮಕಾತಿ ಮತ್ತು ಆ ಬಳಿಕ ಅಷ್ಟೇ ವೇಗವಾಗಿ ಹೊರಹೊಮ್ಮಿದ ಅಸಮಾಧಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯವಿಧಾನ ಮತ್ತು ಅವರ ಆಪ್ತ ಬಳಗದ ವರಸೆಗೆ ಪ್ರತಿಯಾಗಿ ಬಿ ಎಲ್ ಸಂತೋಷ್, ರಾಜ್ಯ ಘಟಕದ ಪುನರ್ ರಚನೆಯ ಮೂಲಕ ತಿರುಗೇಟು ನೀಡಿದ್ದಾರೆ ಎಂಬುದು ಸ್ವತಃ ಬಿಜೆಪಿ ವಲಯದಲ್ಲೇ ಕೇಳಿಬರುತ್ತಿರುವ ಗುಸುಗುಸು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಲ್ಲೂ ನಿಗಮ ಮಂಡಳಿ ನೇಮಕಾತಿಯ ವಿಷಯದಲ್ಲಿ ಯಡಿಯೂರಪ್ಪ ಅವರು ಪಕ್ಷದ ಕೋರ್ ಕಮಿಟಿಯನ್ನೂ ವಿಶ್ವಾಸಕ್ಕೆ ಪಡೆಯದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡದ್ದು ಸಹಜವಾಗೇ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಅವರ ಮೂಲಕ ಬಿ ಎಲ್ ಸಂತೋಷ್ ಅವರನ್ನು ಕೆರಳಿಸಿತ್ತು. ಸಿಎಂ ಮತ್ತು ಅವರ ಬಳಗದ ಆ ವರಸೆಗೆ ಈಗ ಪ್ರತಿದಾಳ ಉರುಳಿಸಿದ್ದಾರೆ. ಹಾಗಾಗಿಯೇ ನಿಗಮ ಮಂಡಳಿ ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಅವರ ನಿರೀಕ್ಷೆಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಬದಲಾಗಿ ನಾಮಕಾವಸ್ಥೆಯ ಉಪಾಧ್ಯಕ್ಷ ಸ್ಥಾನಕ್ಕೆ ಸೀಮಿತಗೊಳಿಸಲಾಗಿದೆ. ವಾಸ್ತವವಾಗಿ ಕಳೆದ ಮಂಡ್ಯ ವಿಧಾನಸಭಾ ಉಪಚುನಾವಣೆಗೆ ಮುನ್ನ ಹೈಕಮಾಂಡ್ ಮುಂದೆ ವಿಜಯೇಂದ್ರ ಪ್ರಧಾನ ಕಾರ್ಯದರ್ಶಿಯಂತಹ ಪ್ರಭಾವಿ ಹುದ್ದೆಯ ಬೇಡಿಕೆ ಇಟ್ಟಿದ್ದರು. ಆದರೆ, ಇದೀಗ ಸಂತೋಷ್ ಆ ನಿರೀಕ್ಷೆಗೆ ತಣ್ಣೀರೆರಚಿದ್ದಾರೆ. ಅಷ್ಟೇ ಅಲ್ಲ; ಸಿಎಂ ಬಣದ ಪ್ರಮುಖವಾರದ ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿಯನ್ನು ಕೂಡ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಇಳಿಸಲಾಗಿದೆ. ಜೊತೆಗೆ ಸಂಸದ ಪ್ರತಾಪ ಸಿಂಹಗೆ ಕೂಡ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಹೆಸರಿಗೆ ಮಾತ್ರ ಸೀಮಿತವಾಗಿರುವ, ಯಾವುದೇ ಪ್ರಭಾವ ಹೊಂದಿರದ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಆ ಮೂಲಕ ಬಿ ಎಲ್ ಸಂತೋಷ್, ತಮ್ಮ ವಿರೋಧಿ ಗುಂಪಿನ ನಾಯಕರಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.

ಅದೇ ಹೊತ್ತಿಗೆ, ತಮ್ಮ ಬಣದ ಪ್ರಮುಖರನ್ನೇ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ನೇಮಿಸುವ ಮೂಲಕ ಇಡೀ ರಾಜ್ಯ ಘಟಕದಲ್ಲಿ ತಮ್ಮವರೇ ಆಯಕಟ್ಟಿನ ಸ್ಥಾನಗಳಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಎನ್ ರವಿಕುಮಾರ್ ಮತ್ತು ಮಹೇಶ್ ಟೆಂಗಿನಕಾಯಿ ಪ್ರಧಾನ ಕಾರ್ಯದರ್ಶಿ ಹುದ್ದೆಗಳಲ್ಲೇ ಮುಂದುವರಿದ್ದರೆ, ಜೊತೆಗೆ ಮೈಸೂರಿನ ಸಿದ್ದರಾಜು ಮತ್ತು ಮಾಜಿ ಎಂಎಲ್ಸಿ ಅಶ್ವಥನಾರಾಯಣ ಅವರನ್ನು ಹೊಸದಾಗಿ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. ಈ ಇಬ್ಬರೂ ಸಂತೋಷ್ ಬಣದವರೇ ಎಂಬುದು ಗಮನಾರ್ಹ. ಹಾಗೇ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗಿನಿಂದಲೂ ಅವರ ಕಟು ಟೀಕಾಕಾರರಾಗಿದ್ದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುನರ್ ಪ್ರವೇಶದೊಂದಿಗೆ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಶಿವಮೊಗ್ಗದ ಭಾನುಪ್ರಕಾಶ್ ಮತ್ತು ದಾವಣಗೆರೆಯ ಶಿವಯೋಗಿಸ್ವಾಮಿ ಅವರಿಗೆ ವಿವಿಧ ಪ್ರಕೋಷ್ಠಗಳ ಹೊಣೆ ನೀಡುವ ಮೂಲಕ ಸಂಘಟನೆಯಲ್ಲಿ ಮುಂಚೂಣಿಗೆ ತರಲಾಗಿದೆ.

ಜೊತೆಗೆ ಇತ್ತೀಚೆಗೆ ತಾನೆ ಯಡಿಯೂರಪ್ಪ ಪಟ್ಟಿಯನ್ನು ತಿರಸ್ಕರಿಸಿ ಅಚ್ಚರಿಯ ಆಯ್ಕೆಯಾಗಿ ರಾಜ್ಯಸಭೆಗೆ ನೇಮಕಗೊಂಡಿರುವ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅವರನ್ನು ಕ್ರಮವಾಗಿ ಹಿಂದುಳಿದ ವರ್ಗ ಮತ್ತು ರೈತ ಮೋರ್ಚಾಗಳ ಹೊಣೆಗಾರಿಕೆ ವಹಿಸಲಾಗಿದೆ. ಈ ಆಯ್ಕೆ ಕೂಡ ಪಕ್ಷದಲ್ಲಿ ಸಿಎಂ ವಿರುದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪ್ರತ್ಯಾಸ್ತ್ರ ಪ್ರಯೋಗದ ಭಾಗವೇ ಎನ್ನಲಾಗುತ್ತಿದೆ. ಇಷ್ಟೇ ಅಲ್ಲದೆ, ಪಕ್ಷದ ಹನ್ನೊಂದು ಮಂದಿ ನೂತನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಮುಖ್ಯಸ್ಥರುಗಳಲ್ಲೂ ಬಹುತೇಕರು ಸಂತೋಷ್ ಅವರ ಬಣದವರೇ ಎಂಬುದು ವಿಶೇಷ.

ಹೀಗೆ ಇಡಿಯಾಗಿ ಒಂದೇ ಏಟಿಗೆ ಇಡೀ ರಾಜ್ಯ ಬಿಜೆಪಿ ಸಂಘಟನೆಯ ಆಯಕಟ್ಟಿನ ಸ್ಥಾನಗಳನ್ನು ತಮ್ಮ ಕಬ್ಜಕ್ಕೆ ತೆಗೆದುಕೊಂಡು, ಸಿಎಂ ಯಡಿಯೂರಪ್ಪ ಬಣವನ್ನು ಬಹುತೇಕ ನಾಮಕಾವಸ್ಥೆ ಸ್ಥಾನಗಳಿಗೆ ನೇಮಿಸಿ ಬದಿಗೆ ಸರಿಸಿರುವುದು ಸಹಜವಾಗೇ ಪಕ್ಷದ ಆಂತರಿಕ ವಲಯದಲ್ಲಿ ಎಲ್ಲರ ಹುಬ್ಬೇರಿಸಿದೆ. ಅದರಲ್ಲೂ ಸಿಎಂ ಯಡಿಯೂರಪ್ಪ ಪುತ್ರ ಪಕ್ಷದ ಸಂಘಟನೆ ಮತ್ತು ಸರ್ಕಾರದ ಮಟ್ಟದಲ್ಲಿ ನಡೆಸುತ್ತಿರುವ ತೀವ್ರ ಹಸ್ತಕ್ಷೇಪ ಮತ್ತು ಅದರಿಂದಾಗಿ ಸರ್ಕಾರ ಮತ್ತು ಪಕ್ಷಕ್ಕೆ ಆಗುತ್ತಿರುವ ಮುಜಗರದ ಹಿನ್ನೆಲೆಯಲ್ಲಿ ಬಿ ಎಲ್ ಸಂತೋಷ್ ಸ್ವತಃ ಈ ಪದಾಧಿಕಾರಿಗಳ ನೇಮಕಾತಿಯಲ್ಲಿ ನೇರವಾಗಿ ನಿರ್ಧಾರ ಕೈಗೊಂಡಿದ್ದು, ಪಕ್ಷದ ಹೈಕಮಾಂಡ್ ಮಟ್ಟದಲ್ಲಿಯೂ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಕಣಕ್ಕೆ ನೇರವಾಗಿ ಇಳಿಯುವ ಲೆಕ್ಕಾಚಾರದಲ್ಲಿರುವ ಅವರು, ಈ ಮೂಲಕ ವೇದಿಕೆ ಸಜ್ಜುಗೊಳಿಸಿದ್ದಾರೆ. ಪಕ್ಷದ ತಮ್ಮ ಬೆಂಬಲಿಗರ ನೆಲೆ ವಿಸ್ತರಿಸಲು ಈ ನೇಮಕಾತಿ ಅವಕಾಶ ಬಳಸಿಕೊಂಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.

ಮುಖ್ಯವಾಗಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಹೊತ್ತಿನಲ್ಲೇ ಯಾಕೆ ಈ ನೇಮಕಾತಿ ಹೊರಬಿದ್ದಿದೆ ಎಂಬ ಹಿನ್ನೆಲೆಯಲ್ಲಿ ನೋಡಿದರೆ, ಪ್ರಮುಖವಾಗಿ ಬಹುಕೋಟಿ ಹಗರಣದ ಹಿಂದೆ ನಿಜವಾಗಿಯೂ ಯಾರಿದ್ದಾರೆ? ಔಷಧಿ ಮತ್ತು ವೈದ್ಯಕೀಯ ಖರೀದಿ ಹಗರಣದ ವಿಷಯದಲ್ಲಿ ಸಚಿವರು ಮತ್ತು ಅಧಿಕಾರಿಗಳ ಹಿಂದೆ ಸರ್ಕಾರದ ಚುಕ್ಕಾಣಿ ಹಿಡಿದವರ ನೆರಳು ಇದೆಯೇ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿಯೂ ಸಂತೋಷ್ ಅವರು ಸಾಕಷ್ಟು ಮಾಹಿತಿ ಪಡೆದಿದ್ದಾರೆ. ಅಂತಹ ಮಾಹಿತಿಯನ್ನು ಹೈಕಮಾಂಡ್ ಮಟ್ಟಕ್ಕೂ ತಲುಪಿಸಿದ ಬಳಿಕವೇ ಪಕ್ಷದ ರಾಜ್ಯ ಘಟಕದ ದಿಢೀರ್ ಬದಲಾವಣೆಯ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಈ ಬದಲಾವಣೆ, ಸಿಎಂ ಮತ್ತು ಅವರ ಆಪ್ತರಿಗೆ ಪ್ರಬಲ ಸಂದೇಶದ ಅವಕಾಶವಾಗಿ ಬಳಕೆಯಾಗಿದೆ ಎಂಬ ವಿಶ್ಲೇಷಣೆಯೂ ಇದೆ.

ಹಾಗಾಗಿ, ಮೇಲ್ನೋಟಕ್ಕೆ ಒಂದು ಸಾಮಾನ್ಯ ಪ್ರಕ್ರಿಯೆ ಎನಿಸಿದರೂ, ಈಗಿನ ಬಿಜೆಪಿ ಪದಾಧಿಕಾರಿಗಳ ಬದಲಾವಣೆಯ ಪ್ರಕ್ರಿಯೆ ಆಳದಲ್ಲಿ ಪಕ್ಷದ ಅಧಿಕಾರಸ್ಥರು ಮತ್ತು ಅಧಿಕಾರ ಆಕಾಂಕ್ಷಿಗಳ ನಡುವಿನ ತೆರೆಮರೆಯ ಸಮರದ ನಿರ್ಣಾಯಕ ಘಟ್ಟವೇ ಎಂಬುದು ನಿರ್ವಿವಾದ!

Click here to follow us on Facebook , Twitter, YouTube, Telegram

Pratidhvani
www.pratidhvani.com