ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗೆ ವರ್ಗಾಯಿಸುವ ಮಾರ್ಗಸೂಚಿ ಬಿಡುಗಡೆಗೊಳಿಸಿದ ಬಿಬಿಎಂಪಿ
ರಾಜ್ಯ

ಕೋವಿಡ್‌ ರೋಗಿಗಳನ್ನು ಆಸ್ಪತ್ರೆಗೆ ವರ್ಗಾಯಿಸುವ ಮಾರ್ಗಸೂಚಿ ಬಿಡುಗಡೆಗೊಳಿಸಿದ ಬಿಬಿಎಂಪಿ

ಕೋವಿಡ್-19 ರ ರೋಗಿಗಳನ್ನು ಆಸ್ಪತ್ರೆಗಳಿಗೆ ಅಥವಾ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ವರ್ಗಾವಣೆ ಸಂಬಂಧ ಸಾರ್ವಜನಿಕರಿಗೆ ಸಾಮಾನ್ಯ ಮಾಹಿತಿಯನ್ನು ಬಿಬಿಎಂಪಿ ಕಮಿಷನರ್‌ ನೀಡಿದ್ದಾರೆ.

ಪ್ರತಿಧ್ವನಿ ವರದಿ

ಕೋವಿಡ್-19 ರ ರೋಗಿಗಳನ್ನು ಆಸ್ಪತ್ರೆಗಳಿಗೆ ಅಥವಾ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ವರ್ಗಾವಣೆ ಸಂಬಂಧ ಸಾರ್ವಜನಿಕರಿಗೆ ಸಾಮಾನ್ಯ ಮಾಹಿತಿಯನ್ನು ಬಿಬಿಎಂಪಿ ಕಮಿಷನರ್‌ ನೀಡಿದ್ದಾರೆ.

ಮಾಹಿತಿಗಳು ಈ ಕೆಳಗಿನಂತಿವೆ.

1. ಯಾವುದೇ ಸಾರ್ವಜನಿಕರು ಬಿ.ಬಿ.ಎಂ.ಪಿಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸರ್ಕಾರ ಗರಿಷ್ಟ ರೂ.3000/-ಗಳ ದರವನ್ನು ನಿಗದಿಪಡಿಸಿದೆ.

2. ಪರೀಕ್ಷೆ ಮಾಡಿಸುವಾಗ ಎಲ್ಲರ ಮೊಬೈಲ್‌ಗೆ Sample Referral Form (SRF) ಸಂಖ್ಯೆ ಹಾಗೂ ಪಾಸಿಟಿವ್ ಫಲಿತಾಂಶ ಬಂದ ನಂತರ ಬಿ.ಬಿ.ಎಂ.ಪಿ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಸಂಕೇತವಾಗಿ BU.....ನಂಬರ್ ಮಾಹಿತಿಯ ಸಂದೇಶ ಬರುತ್ತದೆ. ಈ ಸಂಖ್ಯೆಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು

3. ಪರೀಕ್ಷೆ ಮಾಡಿಸಿದ ನಂತರ ಯಾವುದೇ ತೀವ್ರವಾದ ರೋಗ ಲಕ್ಷಣಗಳು ಇಲ್ಲದೆ ಇದ್ದಲ್ಲಿ ಪರೀಕ್ಷೆ ಫಲಿತಾಂಶ ಬರುವವರೆಗೆ ತಾವು ಮನೆಯಲ್ಲಿಯೇ ಇರಬೇಕು.

4. BU.... ನಂಬರ್‌ ಹೊಂದಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ಬಿ.ಬಿ.ಎಂ.ಪಿ ವಲಯ ಆರೋಗ್ಯಾಧಿಕಾರಿಗಳು ಸಂಪರ್ಕಿಸುತ್ತಾರೆ. ಒಂದು ವೇಳೆ ಬಿ.ಬಿ.ಎಂ.ಪಿ ಅಧಿಕಾರಿಗಳು ಸಂಪರ್ಕಿಸುವ ಮೊದಲೇ ರೋಗ ಲಕ್ಷಣಗಳು ಉಲ್ಬಣಗೊಂಡು ತುರ್ತು ವೈದ್ಯಕೀಯ ಚಿಕಿತ್ಸೆ ಅವಶ್ಯವಿದ್ದಲ್ಲಿ ರೋಗಿಗಳು ತಕ್ಷಣ 108ಗೆ ಕರೆ ಮಾಡಿದರೆ ರೋಗ ಲಕ್ಷಣದ ತೀವ್ರತೆಗೆ ಅನುಗುಣವಾಗಿ SRF ಸಂಖ್ಯೆ ಪಡೆದು ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ.

5. ಒಂದು ವೇಳೆ ಪಾಸಿಟಿವ್ ವರದಿ ಬಂದಿರುವ ಬಗ್ಗೆ ಯಾವುದೇ ದಾಖಲೆಯಿದ್ದು, ಆರೋಗ್ಯ ಆರೈಕೆ ಕೇಂದ್ರಗಳಿಗೆ ದಾಖಲಾಗಲು ಇಚ್ಚಿಸಿದಲ್ಲಿ 108ಗೆ ಕರೆ ಮಾಡಬಹುದು. ತದನಂತರ 108 ರವರು ರೋಗ ಲಕ್ಷಣದ ಅನುಗುಣವಾಗಿ ಸರ್ಕಾರದ ಕೋವಿಡ್ ಆರೈಕೆ ಕೇಂದ್ರಕ್ಕೆ(CCC) ಅಥವಾ ಆಸ್ಪತ್ರೆಗೆ ಸ್ಥಳಾಂತರಿಸುತ್ತಾರೆ.

6. ಬಿ.ಬಿ.ಎಂ.ಪಿ ವತಿಯಿಂದ ಕೋವಿಡ್ ಪಾಸಿಟಿವ್ ರೋಗಿಗಳಿಗೆ ರೋಗ ಲಕ್ಷಣದ ತೀವ್ರತೆ ಆಧಾರದಲ್ಲಿ ಮತ್ತು ಲಭ್ಯತೆಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರದ CCCಗೆ ಆನ್‌ಲೈನ್ ತಂತ್ರಾಂಶದ ಮೂಲಕ ಹಾಸಿಗೆ ಕಾಯ್ದಿರಿಸಲಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

7. ಬಿ.ಬಿ.ಎಂ.ಪಿ ಹಾಗೂ 108 ಮೂಲಕ ದಾಖಲಾಗುವ ಎಲ್ಲಾ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಮಾತ್ರ ಸರ್ಕಾರವು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಭರಿಸುತ್ತದೆ. ಪ್ರತೀ ಆಸ್ಪತ್ರೆಯಲ್ಲಿ ಈ ಸಂಬಂಧ ನೆರವಿಗಾಗಿ ಆರೋಗ್ಯ ಮಿತ್ರರನ್ನು ಸಹ ನೇಮಿಸಲಾಗಿದೆ.

8. ಬಿ.ಬಿ.ಎಂ.ಪಿ ಆರೋಗ್ಯಾಧಿಕಾರಿಗಳು ರೋಗಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮನೆಯ ಪರಿಸ್ಥಿತಿ ಮತ್ತು ಆರೋಗ್ಯ ಸ್ಥಿತಿ ಸರಿಯಿದ್ದರೆ ಹೋಮ್ ಐಸೊಲೇಶನ್‌ಗೆ ಒಳಗಾಗಲು ಅವಕಾಶ ಕಲ್ಪಿಸುತ್ತಾರೆ. ನಂತರ ಮನೆಯ ಸೂಕ್ತತೆ ಬಗ್ಗೆ ಸ್ಥಳ ತಪಾಸಣೆ ನಡೆಸಿದಾಗ ಮತ್ತು ತದನಂತರದ ಆರೋಗ್ಯ ತಪಾಸಣೆಯಲ್ಲಿ (Clinical Triage) ಹೋಮ್ ಐಸೊಲೇಶನ್‌ಗೆ ಅರ್ಹವಿಲ್ಲ ಎಂದು ಕಂಡುಬಂದಲ್ಲಿ ಬಿ.ಬಿ.ಎಂ.ಪಿ ವತಿಯಿಂದಲೇ ಸರ್ಕಾರದ ಕೋವಿಡ್ ಆರೈಕೆ ಕೇಂದ್ರಕ್ಕೆ (CCC) ಅಥವಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು.

9. ಕೋವಿಡ್ ಪರೀಕ್ಷೆ ಮಾಡಿಸದೆ ಇರುವ ವ್ಯಕ್ತಿಗಳಲ್ಲಿಯೂ ತೀವ್ರ ಉಸಿರಾಟದ ತೊಂದರೆ ಲಕ್ಷಣಗಳು(SARI) ಕಂಡುಬಂದಲ್ಲಿ, ಅಂತಹವರು 108ಗೆ ಕರೆ ಮಾಡಿದಲ್ಲಿ ಅವರನ್ನು ಕೋವಿಡ್ ಶಂಕಿತರೆಂದು ಪರಿಗಣಿಸಿ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಕೋವಿಡ್ ಪಾಸಿಟಿವ್ ಆದಲ್ಲಿ ರೋಗಿಯನ್ನು ಕೋವಿಡ್ ಹಾಸಿಗೆಗೆ ಸ್ಥಳಾಂತರಿಸಿ ಸಂಪೂರ್ಣ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಒಂದು ವೇಳೆ ಕೋವಿಡ್ ನೆಗೆಟಿವ್‌ ಆದಲ್ಲಿ, ಪರೀಕ್ಷೆ ಫಲಿತಾಂಶ ಬರುವವರೆಗಿನ ವೆಚ್ಚವನ್ನು ಮಾತ್ರ ಸರ್ಕಾರ ಭರಿಸುತ್ತದೆ.

10. ಯಾವುದೇ ವ್ಯಕ್ತಿಯು ಸರ್ಕಾರದ ಕೋವಿಡ್ ಆರೈಕೆ ಕೇಂದ್ರಕ್ಕೆ ನೇರವಾಗಿ ಹೋಗಿ ಕನಿಷ್ಠ SRF ಸಂಖ್ಯೆ ಮತ್ತು ಪಾಸಿಟಿವ್ ವರದಿ ಕುರಿತಾದ ಸಾಕ್ಷಿ ಒದಗಿಸಿದಲ್ಲಿ Walk-in ಮೂಲಕ ದಾಖಲಿಸಿಕೊಳ್ಳಲು ಅವಕಾಶವಿದೆ. ಆದರೆ ಆಸ್ಪತ್ರೆಗೆ ನೇರವಾಗಿ ಹೋಗಿ ಸರ್ಕಾರಿ ಸೌಲಭ್ಯದ ಹಾಸಿಗೆ ಪಡೆಯಲು ಅವಕಾಶವಿಲ್ಲ.

11. ಬಿ.ಬಿ.ಎಂ.ಪಿ ವತಿಯಿಂದ ಖಾಸಗಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಅವಕಾಶ ನೀಡಿದ್ದು, ಇಲ್ಲಿಯವರೆಗೆ ಖಾಸಗಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ತೆರಯಲಾಗಿರುವ ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳ ಮಾಹಿತಿಯನ್ನು http://apps.bbmpgov.in/covidbedstatus ರಲ್ಲಿ ಪಡೆಯಬಹುದು.

12. ಯಾವುದೇ ರೋಗಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಪಡೆಯಬಹುದು. ಆದರೆ ಆಸ್ಪತ್ರೆಯವರು ಸರ್ಕಾರ ನಿಗಧಿಪಡಿಸಿರುವ ಕೆಳಕಂಡ ದರಕ್ಕಿಂತ ಹೆಚ್ಚಿನ ದರ ಪಡೆಯುವಂತಿಲ್ಲ.

13. ಆಸ್ಪತ್ರೆಯಲ್ಲಿನ ಚಿಕಿತ್ಸೆ ನ್ಯೂನ್ಯತೆ ಹಾಗೂ ಚಿಕಿತ್ಸೆ ವೆಚ್ಚದ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ 1800 425 8330 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು ಅಥವಾ Sastgrievance@gmail.com ಗೆ ಇಮೇಲ್ ಕಳುಹಿಸಬಹುದು.

14. Rapid Antigen Test ಮೂಲಕ ಯಾವುದೇ ವ್ಯಕ್ತಿಯು ಪಾಸಿಟಿವ್ ಎಂದು ತಿಳಿದುಬಂದಲ್ಲಿ ತಕ್ಷಣ ಸ್ಥಳದಲ್ಲಿ ಲಭ್ಯವಿರುವ ಆರೋಗ್ಯಾಧಿಕಾರಿಗಳು ರೋಗಿಯ ರೋಗ ಲಕ್ಷಣಗಳನ್ನು ತಿಳಿದು ಹೋಮ್ ಐಸೋಲೇಶನ್‌ಗೆ ಅಥವಾ ಸರ್ಕಾರದ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸುವ ಬಗ್ಗೆ ಬಿ.ಬಿ.ಎಂ.ಪಿ ವತಿಯಿಂದ ಕ್ರಮವಹಿಸಲಾಗುವುದು. ಇದಕ್ಕಾಗಿ ಪ್ರತಿಯೊಂದು ಆರೋಗ್ಯ ಕೇಂದ್ರದ ಬಳಿ ಸೂಕ್ತ ಆಂಬ್ಯುಲೆನ್ಸ್‌ ಗಳ ವ್ಯವಸ್ಥೆ ಮಾಡಲಾಗಿದೆ.

15. ಒಂದು ವೇಳೆ ರೋಗಿಗೆ ತೀವ್ರ ಉಸಿರಾಟದ ತೊಂದರೆ ಸೇರಿದಂತೆ ತೀವ್ರವಾದ ರೋಗಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯಾಧಿಕಾರಿಗಳು 108ಕ್ಕೆ ಕರೆ ಮಾಡಿ, 108 ಮೂಲಕವೇ ಹಾಸಿಗೆ ಕಾಯ್ದಿರಿಸಿ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ವರ್ಗಾಯಿಸಲಾಗುವುದು.

16. ಹೋಮ್ ಐಸೊಲೇಶನ್ ರಲ್ಲಿರುವ ರೋಗಿಗಳ ವೈದ್ಯಕೀಯ ಸ್ಥಿತಿ ಬಗ್ಗೆ ಪ್ರತೀ ದಿನ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತದೆ. ಯಾವುದೇ ಹಂತದಲ್ಲಿ ರೋಗ ಲಕ್ಷಣಗಳು ಉಲ್ಬಣಗೊಂಡರೆ, ಆಯಾ ಬಿ.ಬಿ.ಎಂ.ಪಿ ವಲಯ ಅಧಿಕಾರಿಗಳು ರೋಗಿಯನ್ನು ಸರ್ಕಾರದ CCCಗೆ ಅಥವಾ ಆಸ್ಪತ್ರೆಗೆ ಸ್ಥಳಾಂತರಿಸಲಿದ್ದಾರೆ.

17. ಅದೇ ಸರ್ಕಾರದ CCC ಕೇಂದ್ರದಲ್ಲಿ ಇರುವಾಗ ಯಾವುದೇ ರೋಗ ಲಕ್ಷಣಗಳು ಉಲ್ಬಣಗೊಂಡಲ್ಲಿ ಅಲ್ಲಿಯೇ ಇರುವ 108 ಆಂಬ್ಯುಲೆನ್ಸ್ ಮೂಲಕ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com