ಕೋವಿಡ್‌ಗೆ ಆತ್ಮಹತ್ಯೆ ಪರಿಹಾರವಲ್ಲ; ಆತ್ಮಸ್ಥೈರ್ಯದಿಂದ ಎದುರಿಸೋಣ
ರಾಜ್ಯ

ಕೋವಿಡ್‌ಗೆ ಆತ್ಮಹತ್ಯೆ ಪರಿಹಾರವಲ್ಲ; ಆತ್ಮಸ್ಥೈರ್ಯದಿಂದ ಎದುರಿಸೋಣ

ಸಿಎಂ ಯಡಿಯೂರಪ್ಪನವರು ಕೂಡಾ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದು, ಸೋಂಕಿತರಲ್ಲಿ ಶೇ. 98 ಜನರು ಗುಣಮುಖರಾಗುತ್ತಿದ್ದಾರೆ. ಹಾಗಾಗಿ, ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಕೃಷ್ಣಮಣಿ

ಇಡೀ ಕರ್ನಾಟಕದ ಉದ್ದಗಲಕ್ಕೂ ಕರೋನಾ ಸೋಂಕು ಎನ್ನುವ ವಿಪರೀತವಾಗಿ ಹರಡುತ್ತಲೇ ಸಾಗುತ್ತಿದೆ. ರಾಜ್ಯದಲ್ಲಿ ಪತ್ತೆಯಾಗಿರುವ ಅರ್ಧದಷ್ಟು ಪ್ರಕರಣ ಬೆಂಗಳೂರಿನಲ್ಲೇ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಸೋಂಕು ಹಾಗೂ ಸಾವಿನ ನಡುವೆ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕರೋನಾದಿಂದ ಸಾವು ಬರುವ ಮುನ್ನವೇ ಜನರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಇನ್ನೂ ಕೆಲವು ಕಡೆ ಸಮಾಜಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಸಾವನ್ನಪ್ಪಿದವರ ಹೆಣಗಳ ಅಂತ್ಯಕ್ರಿಯೆಗೂ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಜನರು ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇದೆಲ್ಲವನ್ನೂ ನೋಡುತ್ತಿರುವ ಸೂಕ್ಷ್ಮ ಮನಸ್ಸಿನ ಜನರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ಬೆಂಗಳೂರಿನ ಮತ್ತಿಕೆರೆಯ 2ನೇ ಮುಖ್ಯ ರಸ್ತೆಯ ದೇವಸಂದ್ರದಲ್ಲಿ ಕರೋನಾ ಪಾಸಿಟಿವ್ ಬಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ವಾರ ಮೃತನ ಅಣ್ಣನಿಗೆ ಕರೋನಾ ಪಾಸಿಟಿವ್ ಬಂದಿತ್ತು. ಪ್ರಾಥಮಿಕ ಸಂಪರ್ಕದಲ್ಲಿದ್ದ ತಮ್ಮನಿಗೂ ಪಾಸಿಟಿವ್ ಬಂದಿತ್ತು. ಅದೇ ಭೀತಿಯಲ್ಲಿ ಬ್ಲೇಡ್ನಿಂದ ಕೈ ಹಾಗೂ ಕಾಲಿನ ನರವನ್ನು ತುಂಡರಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆದರೆ ಮೃತದೇಹ ಕೊಂಡೊಯ್ಯಲು ಆ್ಯಂಬುಲೆನ್ಸ್ ಬಂದಿರಲಿಲ್ಲ. ಬೆಳಗ್ಗೆಯಿಂದ ಮೃತದೇಹ ಮಹಡಿ ಮೇಲೇಯೇ ಬಿದ್ದಿತ್ತು. ಸ್ಥಳೀಯರು ಬಿಬಿಎಂಪಿಗೆ ಮಾಹಿತಿ ನೀಡಿದರೂ ತಕ್ಷಣಕ್ಕೆ ಯಾವ ಸಿಬ್ಬಂದಿಯೂ ಬಂದಿರಲಿಲ್ಲ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನೊಂದು ಪ್ರಕರಣದಲ್ಲಿ ಸಮಾಜಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ನಿವಾಸಿ 56 ವರ್ಷದ ನಾಗರಾಜು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟನಾಗಿದ್ದಾರೆ. ಪತ್ನಿ ಹಾಗೂ ಮಗನಿಗೆ ಕರೋನಾ ಸೋಂಕು ಬಂದಿದ್ದರಿಂದ ನೊಂದ ತಂದೆ ನೇಣು ಹಾಕಿಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ.

ಮನೆ ಸೀಲ್ಡೌನ್ ಮಾಡುವಾಗ ನೆರೆಯವರು ಗಲಾಟೆ ಮಾಡಿದ್ದರು. ನಿಮ್ಮಿಂದ ನಮಗೆಲ್ಲಾ ಸಮಸ್ಯೆ ಎಂದು ಜನರು ಗಲಾಟೆ ಮಾಡಿದ್ದಾರೆ. ಗಲಾಟೆಗೆ ಬೇಸತ್ತು ಹೆಸರುಘಟ್ಟದ ಕೆರೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸೋಂಕಿತ ಪತ್ನಿ ದೊಡ್ಡಬಳ್ಳಾಪುರ ಅಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಬಳಿಕ ನಾಗರಾಜು ಮತ್ತು ಮಗ ಕ್ವಾರಂಟೈನ್ ಆಗಿದ್ದರು. ಅಕ್ಕಪಕ್ಕದ ಮನೆಯವರ ನಿಂದನೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಮೃತದೇಹದ ಕೋವಿಡ್ ಟೆಸ್ಟ್ ಮಾಡಲಾಗಿದೆ. ಕೋವಿಡ್ ವರದಿ ಬಂದ ನಂತರ ಮರಣೋತ್ತರ ಪರೀಕ್ಷೆ ಮಾಡಲು ನಿರ್ಧಾರ ಮಾಡಲಾಗಿದೆ.

ಈ ರೀತಿಯ ವ್ಯತಿರಿಕ್ತ ನಿರ್ಧಾರಗಳನ್ನು ಪಡೆಯುವುದು ಕೋವಿಡ್‌ನಿಂದ ಪಾರಾಗಲು ಇರುವ ದಾರಿಯಲ್ಲಿ. ಒಬ್ಬರ ಆತ್ಮಹತ್ಯೆಯಿಂದ ನೋವನ್ನು ಅನುಭವಿಸುವುದು ಅವರ ಕುಟುಂಬ. ಕ್ಷಣಿಕ ನೋವಿಗಾಗಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ಮುಂಚೆ ತಮ್ಮ ಕುಟುಂಬದವರ ಜೀವನದ ಕುರಿತಾಗಿ ಒಮ್ಮೆ ಯೋಚನೆ ಮಾಡುವುದು ಒಳಿತು.

ಸಿಎಂ ಯಡಿಯೂರಪ್ಪನವರು ಕೂಡಾ ಈ ಕುರಿತಾಗಿ ಮನವಿ ಮಾಡಿಕೊಂಡಿದ್ದು, ಸೋಂಕಿತರಲ್ಲಿ ಶೇ. 98 ಜನರು ಗುಣಮುಖರಾಗುತ್ತಿದ್ದಾರೆ. ಹಾಗಾಗಿ, ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ಕರೋನಾದಂತಹ ಸಾಕಷ್ಟು ಸಂಕಷ್ಟಗಳು ಜೀವನದಲ್ಲಿ ಬಂದು ಹೋಗುತ್ತವೆ. ಆದರೆ, ಆ ಕಾರಣಕ್ಕಾಗಿ ಜೀವವನ್ನೇ ಬಲಿ ಪಡೆಯುವಂತಹ ಯೋಚನೆ ನಿಜಕ್ಕೂ ತಪ್ಪಾದದು. ಕರೋನಾವನ್ನು ದಿಟ್ಟವಾಗಿ ಎದುರಿಸಿ ಅದನ್ನು ಗೆಲ್ಲುವ ಪ್ರಯತ್ನವನ್ನು ಮಾಡಬೇಕಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com