ಕರೋನಾ: ಕಳೆದುಕೊಂಡ ಶ್ರಾವಣ ಕಳೆ
ರಾಜ್ಯ

ಕರೋನಾ: ಕಳೆದುಕೊಂಡ ಶ್ರಾವಣ ಕಳೆ

ಶ್ರಾವಣ ಅಂದರೆ ಹಬ್ಬಗಳ ಆಗಮನ. ಸಂಬಂಧಿಕರು, ಬಂಧು ಬಳಗ ಎಲ್ಲರೂ ಸೇರುವಂತಹ ಹಬ್ಬ. ಈ ಬಾರಿ ಮಾಸ್ಕು ಅಡ್ಡವಿದೆ, ಸೋಷಿಯಲ್ ಡಿಸ್ಟಂಸಿಂಗ್ ಎಂಬ ಗೋಡೆಯಿದೆ. ಕರೋನಾ ಎಂಬ ಚಿಕ್ಕ ವೈರಾಣು ಮಾಡಿದೆ ಹೈರಾಣು.

ಕೆ. ಶ್ರೀಕಾಂತ್

ನಮ್ಮಣ್ಣಾ ಬರಲಿಲ್ಲ ಕರಿಯಾಕ್, ಅವರೇನು ಸಾವ್ಕಾರು, ನಾವು ಬಡವ್ರು ಎಂಬ ಜಾನಪದ ಹಾಡು ಈಗ ಹಾಡುವಂತಿಲ್ಲ. ಕಾರಣ ಕ್ವಾರಾನಾ....ಹೌದು ಕರೊನಾ. ಒಂದು ಸಣ್ಣ ವೈರಸ್ ಸಹಸ್ರಾರು ಜನರ ಹಬ್ಬದ ಕಳೆಯನ್ನು ಕಳೆಯಿತು.

ಪ್ರತಿ ವರ್ಷ ಶ್ರಾವಣ ಬಂತೆಂದರೆ ಸಾಕು ಮೊದಲನೇಯ ಸೋಮವಾರದಿಂದಲೇ ಹಬ್ಬದ ಅಬ್ಬರ ಶುರು. ಗಂಡನ ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಕರೆದು ಅವರಿಗೆ ತವರಿನಲ್ಲಿ ಹಬ್ಬದೂಟ ಬಡಿಸಿ ವರುಷ ಪೂರ್ತಿ ನೆನಸುವಂತಹ ಕ್ಷಣಗಳ ಬುತ್ತಿ ಕಟ್ಟಿಕೊಡುವ ಈ ಶ್ರಾವಣ ಈ ಬಾರಿ ಒಣ ಒಣ ಠಣ ಠಣ.

ಮೂರು ದಶಕಗಳ ಹಿಂದೆ ಹಬ್ಬವನ್ನು ಆಚರಿಸುತ್ತಿದ್ದ ಬಗೆಯನ್ನು ನೆನಸಿಕೊಂಡರೆ ಮನದಾಳದ ಆಸೆಗಳು ಗರಿ ಬಿಚ್ಚುತ್ತವೆ. ಊರಿನ ಸುತ್ತಮುತ್ತಲಿನ ದೊಡ್ಡ ದೊಡ್ಡ ಆಲದ ಮರಗಳಿಗೆ ಜೋಕಾಳಿ ಕಟ್ಟಿ ಸಂಭ್ರಮದಾಚರಣೆಯಿಂದ ಹಬ್ಬದ ಅದ್ಭುತ ಕ್ಷಣಗಳನ್ನು ಆಚರಿಸುತ್ತಿದ್ದ ಕಾಲವದು. ದೊಡ್ಡ ದೊಡ್ಡ ಊರುಗಳಲ್ಲಿ ಶ್ರಾವಣದ ಸೊಗಡು ಕಡಿಮೆಯಾಗಿದ್ದರೂ ಹಳ್ಳಿಗಳಲ್ಲಿ ಮಾತ್ರ ಇನ್ನೂ ಜೀವಂತವಿದೆ.

ಈ ಬಾರಿಯಂತೂ ಅದಕ್ಕೆ ತದ್ವಿರುದ್ಧ ಎಂಬಂತಿದೆ. ದೇಶಾದ್ಯಂತ ಕರೋನಾದ ಅಬ್ಬರ ಜಾಸ್ತಿಯಾಗಿದೆ. ಸಾವು ನೋವುಗಳ ವರದಿಯೇ ಎಲ್ಲೆಡೆ ಈಗ. ಜನಜೀವನ ತತ್ತರಿಸಿದೆ. ಉತ್ತರ ಕರ್ನಾಟಕದ ನೂರಾರು ಪ್ರಸಿದ್ಧ ಜಾತ್ರೆಗಳನ್ನೇ ರದ್ದು ಮಾಡಿದೆ. ಸಾಮೂಹಿಕ ಪೂಜೆ ವ್ರತಾಚರಣೆಗಳಿಗೆ ನಿರ್ಬಂಧ ಹೇರಲಾಗಿದೆ. ಈ ಬಾರಿ ಸಾವಿರಾರು ಭಕ್ತರು ಮನೆಯಲ್ಲಿ ಹಬ್ಬ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮನೆಯಲ್ಲಿ ಹಬ್ಬ ಮಾಡೋಣ:

ಉತ್ತರ ಕರ್ನಾಟಕದ ಜನರೇ ಹಂಗೆ. ಬರ ಇರಲಿ, ನೆರೆ ಇರಲಿ, ಕರೋನಾ ಇರಲಿ ಹಬ್ಬ ಮಾಡುವುದೇ ಎಂದು ಪಣ ತೊಟ್ಟಿದ್ದಾರೆ. ಆದರೆ ಈ ಬಾರಿ ಮನೆಯಲ್ಲಿ ಎಂಬ ಫಾರ್ಮುಲಾ ಜೊತೆಗೆ. ಇದೊಂದೆ ಹಬ್ಬ ಅಲ್ವರ್ರಿ..ಮುಂದೆ ನವರಾತ್ರಿ, ಗಣಪ್ಪನ ಹಬ್ಬ ಹಾಗೂ ದೀಪಾವಳಿ ಕೂಡ ಇದೆ. ಕರೋನಾ ಇದೆ ಅಂತ ಇವೆಲ್ಲ ಹಬ್ಬ ಬಿಡಲು ಸಾಧ್ಯವೇ ಅಂತಾರೆ ಇಲ್ಲಿನ ಜನರು.

ರೈತ ಶಿವಶಂಕರ ಜೀವನಗೌಡರ ಅವರನ್ನು ಪ್ರತಿಧ್ವನಿ ತಂಡ ಕೇಳಿದಾಗ, “ಜೀವನ ನಾಲ್ಕು ದಿನ. ಒಂದು ದಿನ ಬರ, ಮತ್ತೊಂದು ನೆರೆ ಹೀಗೆ ಕಳೆದು ಹೋದರೆ ಹಬ್ಬ ಮಾಡುವುದ ಯಾವಾಗ! ಹೋದ ಬಾರಿ ನೆರೆ ಬಂದಿದ್ದರಿಂದ ಗಣಪನ ಹಬ್ಬದ ಪಟಾಕಿಗಳು ಹಾಗೆ ಉಳಿದವು. ತರಾತುರಿಯಲ್ಲಿ ಗಣಪ್ಪನನ್ನು ಮನೆಯ ಪಕ್ಕಕ್ಕೆ ಬಂದಿದ್ದ ನದಿಗೆ ಹಾಕುವಂತಾಯಿತು. ಜೀವನ ಅಂದ್ರೆ ಹಬ್ಬ. ಅದು ಬಿಟ್ಟು ಕರೋನಾ ಬಂತು ಅದು ಬಂತು ಇದು ಬಂತು ಅಂತ ಕುಳಿತರೆ ಜೀವನ ಮಾಡೊಕಾಗತ್ತ” ಹಾಗಂತ ನಾವು ಹೌದೆಂದು ತಲೆಯಾಡಿಸಿದಾಗ ಅವರದಿನ್ನೂ ಮುಗಿದಿರಲಿಲ್ಲ !

“ಈ ಕರೋನಾ ಬಗ್ಗೆ ಎಷ್ಟೊಂದು ಹೆದರಿಕೆ ಹುಟ್ಸಾರ್ ಅಂದ್ರ ವಿಚಿತ್ರ ಅನಿಸ್ತೈತಿ. ನಾವೂ ಪ್ಲೇಗ್ ಕಂಡೆವಿ, ಸಾರ್ಸ್ ಕಂಡೇವಿ, ಎಚ್ 1 ಎನ್ 1, ಚಿಕುನ್ ಗುನ್ಯಾ, ಡೆಂಗ್ಯೂ, ಕಾಲೇರಾ ಕಾನ್ಸರ್ ಎಲ್ಲಾ ನೋಡೇವಿ, ಇದೇನು ಮಹಾ ಕರೋನಾ” ಅಂತ ಅಂದರು.

ವಿಜಯಪುರದ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದು ಹೀಗೆ, “ಜನರಿಗೆ ಹಬ್ಬ ಮಾಡಲು ಬಿಡಿವುದು ಕಷ್ಟ. ಕಾರಣ ಹಳ್ಳಿ ಜನರು ಹಬ್ಬದ ಬರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕರೋನಾ ಹಬ್ಬಲು ದಾರಿ ಮಾಡಿಕೊಟ್ಟರೆ ಹೇಗೆ ಎಂಬ ಭಯ”.

ಬ್ಯುಸಿ ಇರುತ್ತಿದ್ದ ಮಹಿಳೆಯರು ಇಂದು ಭಯದಲ್ಲಿ:

ಶ್ರಾವಣ ಬಂತೆಂದರೆ ಸಾಕು ಮಾತನಾಡಲು ಪುರುಸೊತ್ತಿಲ್ಲದ ಮಹಿಳೆಯರು ಇಂದು ಕರೋನಾ ಬಗ್ಗೆ, ಪ್ರತಿದಿನ ಅವುಗಳು ಹೆಚ್ಚುತ್ತಿರುವ ಸಂಖ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತ ಸುದ್ದಿ ನೋಡುತ್ತ ಕುಳಿತಿರುವುದು ಸಾಮಾನ್ಯವಾಗಿದೆ. ಈ ಬಾರಿ ಉಂಡಿ ಮಾಡುವ ಹುರುಪು, ಅಳ್ಳಿಟ್ಟು ಸುಡುವ ಹುಮ್ಮಸ್ಸು ತುಸು ಕಮ್ಮಿಯಾಗಿದೆ. ಆದರೂ ಹಬ್ಬ ಮಾಡೋಣ. ಸಾಮಾಜಿಕ ಅಂತರ ಕಾಪಿಟ್ಟುಕೊಳ್ಳೋಣ, ಮಾಸ್ಕ್ ತಪ್ಪದೇ ಹಾಕಿಕೊಳ್ಳೋಣ.

Click here to follow us on Facebook , Twitter, YouTube, Telegram

Pratidhvani
www.pratidhvani.com