ದೇಶಾದ್ಯಂತ ಭಯದ ಆಳ್ವಿಕೆ ನಡೆಯುತ್ತಿದೆ; ಕೇಂದ್ರದ ವಿರುದ್ದ ದೀದಿ ಕಿಡಿ
ರಾಜ್ಯ

ದೇಶಾದ್ಯಂತ ಭಯದ ಆಳ್ವಿಕೆ ನಡೆಯುತ್ತಿದೆ; ಕೇಂದ್ರದ ವಿರುದ್ದ ದೀದಿ ಕಿಡಿ

ಉತ್ತರ ಪ್ರದೇಶದಲ್ಲಿ ಜನರು ಪೊಲೀಸರ ಬಳಿ ಹೋಗಲು ಹೆದರುತ್ತಾರೆ. ಇನ್ನೊಂದು ಕಡೆ ಒಂದೇ ಪ್ರಕರಣದಲ್ಲಿ ಹಲವಾರು ಪೊಲೀಸರು ಪ್ರಾಣ ಕಳೆದುಕೊಳ್ಳುತ್ತಾರೆ

ಪ್ರತಿಧ್ವನಿ ವರದಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಬಿಜೆಪಿಯ ವಿರುದ್ದ ಗುಡುಗಿದ್ದಾರೆ. ದೇಶಾದ್ಯಂತ ಭಯದ ಆಳ್ವಿಕೆ ನಡೆಯುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜನರಿಗೆ ಮಾತನಾಡಲು ಕೂಡಾ ಭಯ ಹುಟ್ಟಿಸುವಂತಹ ಸನ್ನಿವೇಶ ಎದುರಾಗಿದೆ. ಬಿಜೆಪಿ ಪಶ್ಚಿಮ ಬಂಗಾಳದವರ ಪಕ್ಷವಲ್ಲ. ಏನೇ ಆದರೂ ಅವರು ʼಹೊರಗಿನವರುʼ. ಅವರು ಎಂದೂ ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು, ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಇದು ಬಿಂಬಿತವಾಗಿದೆ. ಹೀಗಾಗಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪ್ರಚಾರ ಈಗಿನಿಂದಲೇ ಶುರುವಾಗಿದೆ. ಕೋವಿಡ್‌ ಸಂಕಷ್ಟದಲ್ಲೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಮ್ಮ ತಮ್ಮ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ.

ಇದೇ ಹೊತ್ತಿನಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಮಮತಾ ಬ್ಯಾನರ್ಜಿ ಬಿಜೆಪಿಯ ವಿರುದ್ದ ಕೆಂಡಾ ಮಂಡಲವಾಗಿದ್ದಾರೆ. ರಾಜಕೀಯದಲ್ಲಿ ಅನುಭವವಿಲ್ಲದ ಕೆಲವು ಜನರಿದ್ದಾರೆ. ಅವರು ಜನರನ್ನು ಕೊಲ್ಲುವುದು ಹಾಗೂ ಅವರಿಗೆ ಬೆಂಕಿ ಹಚ್ಚುವುದರ ಕುರಿತೇ ಮಾತನಾಡುತ್ತಾರೆ ಎಂದು ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗೃಹ ಸಚಿವ ಅಮಿತ್‌ ಶಾ ತಮ್ಮ ರ‌್ಯಾಲಿಯಲ್ಲಿ ಬಂಗಾಳದಲ್ಲಿ ಪ್ರತೀ ದಿನ ಅಹಿಂಸಾತ್ಮಕ ಘಟನೆಗಳು ನಡೆಯುತ್ತವೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಪ್ರತ್ಯುತ್ತರವಾಗಿ ಉತ್ತರ ಪ್ರದೇಶದೆಡೆಗೆ ಬೊಟ್ಟು ಮಾಡಿ ತೋರಿಸಿರುವ ದೀದಿ ಉತ್ತರ ಪ್ರದೇಶದ ಜಂಗಲ್‌ ರಾಜ್‌ನ ಕಥೆ ಏನು ಎಂದು ಪ್ರಶ್ನಿಸಿದ್ದಾರೆ.

"ಉತ್ತರ ಪ್ರದೇಶದಲ್ಲಿ ಜನರು ಪೊಲೀಸರ ಬಳಿ ಹೋಗಲು ಹೆದರುತ್ತಾರೆ. ಇನ್ನೊಂದು ಕಡೆ ಒಂದೇ ಪ್ರಕರಣದಲ್ಲಿ ಹಲವಾರು ಪೊಲೀಸರು ಪ್ರಾಣ ಕಳೆದುಕೊಳ್ಳುತ್ತಾರೆ," ಎಂದು ಹೇಳಿದ್ದಾರೆ.

ಇನ್ನು ಕೇಂದ್ರದಿಂದ ಪಶ್ಚಿಮ ಬಂಗಾಳಕ್ಕಾದ ಅನ್ಯಾಯದ ಕುರಿತು ಮಾತನಾಡಿದ ಅವರು, ಪಶ್ಚಿಮ ಬಂಗಾಳಕ್ಕೆ ಸೇರಬೇಕಾದ ಸಂಪನ್ಮೂಲಗಳು ಸರಿಯಾದ ರೀತಿಯಲ್ಲಿ ದೊರಕದಂತೆ ಕೇಂದ್ರ ಅನ್ಯಾಯ ಮಾಡಿದೆ. ಈ ಅನ್ಯಾಯಕ್ಕೆ ಇಲ್ಲಿನ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಗುಡುಗಿದ್ದಾರೆ.

ಒಟ್ಟಿನಲ್ಲಿ, ಎರಡೂ ಪಕ್ಷಗಳು ತಮ್ಮ ತಮ್ಮ ರಾಜಕೀಯ ಚಕ್ರವ್ಯೂಹಗಳನ್ನು ರಚಿಸಲು ಆರಂಭಿಸಿದ್ದು, ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬಿಹಾರ ಚುನಾವಣೆ ಮುಗಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಚುನಾವಣೆಗೂ ಮುಹೂರ್ತ ಒದಗಿ ಬರಲಿದ್ದು ಅದಕ್ಕೂ ಮುಂಚಿತವಾಗಿ ತಮ್ಮ ಪ್ರಚಾರ ಸಭೆಗಳಿಗೆ ಅನುಕೂಲವಾಗುವಂತೆ ಕಾರ್ಯಕರ್ತಲ್ಲಿ ಈಗಿನಿಂದಲೇ ಹುಮ್ಮಸ್ಸು ತುಂಬಿಸುವ ಕೆಲಸ ಭರದಿಂದ ಸಾಗುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com