ವೈದ್ಯಕೀಯ ಅವ್ಯವಹಾರದ ಬಗ್ಗೆ ಯಾವುದೇ ತನಿಖೆಯಿಲ್ಲ DCM ಅಶ್ವತ್ಥ ನಾರಾಯಣ
ರಾಜ್ಯ

ವೈದ್ಯಕೀಯ ಅವ್ಯವಹಾರದ ಬಗ್ಗೆ ಯಾವುದೇ ತನಿಖೆಯಿಲ್ಲ DCM ಅಶ್ವತ್ಥ ನಾರಾಯಣ

ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಗಳಿಗೆ ತನಿಖೆ ನಡೆಸುವ ಪ್ರಶ್ನೆಯೇ ಇಲ್ಲ. ಸದನದಲ್ಲಿ ಉತ್ತರ ನೀಡಲು ನಾವು ಸಿದ್ಧ. ನಮ್ಮಲ್ಲಿ ಎಳ್ಳಷ್ಟು ತಪ್ಪಿಲ್ಲ. ತಪ್ಪನ್ನೇ ಮಾಡಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ

ಕೃಷ್ಣಮಣಿ

ಕೋವಿಡ್ 19 ಅಬ್ಬರಿಸುತ್ತಿರುವಾಗ ರಾಜ್ಯ ಸರ್ಕಾರ ನಿಯಂತ್ರಣ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿದೆ. ಆದರೆ ಕೋವಿಡ್‌ ಹೆಸರಲ್ಲಿ ಕೋಟಿ ಕೋಟಿ ರೂಪಾಯಿ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಮಾತ್ರ ಎಗ್ಗಿಲ್ಲದೆ ಸಾಗುತ್ತಿದೆ. ಮಾರುಕಟ್ಟೆ ದರಕ್ಕಿಂತ ಎರಡು ಮೂರು ಪಟ್ಟು ಹೆಚ್ಚಿಗೆ ಹಣವನ್ನು ಸಂದಾಯ ಮಾಡಿ ಆರೋಗ್ಯ ಸಲಕರಣೆಗಳನ್ನು ಕೊಂಡುಕೊಳ್ಳಲಾಗಿದೆ. ಸರ್ಕಾರದ ಮೂಲಗಳೇ ಹೈಕೋರ್ಟ್‌ಗೆ ಕೊಟ್ಟಿರುವ ಮಾಹಿತಿಯನ್ನು ಹಿಡಿದು ಆರೋಪ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಂಭೀರ ಆರೋಪ ಮಾಡಿದ್ದರು. ಸರ್ಕಾರ ಲೆಕ್ಕ ಕೊಡಲೇ ಬೇಕು. ಜನರ ಮುಂದೆ ಸರ್ಕಾರದ ಭ್ರಷ್ಟಾಚಾರ ಎಂದು ಆಗ್ರಹ ಮಾಡಿದ್ದರು.

ವಿಕಾಸಸೌಧದಲ್ಲಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಬಿ. ಶ್ರೀರಾಮುಲು ಜಂಟಿ ಸುದ್ದಿಗೋಷ್ಟಿ ನಡೆಸಿದ್ದರು. ವಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮುಖ್ಯವಾಗಿ ಆರೋಗ್ಯ ಇಲಾಖೆ ಮೂಲಕ ಕೋವಿಡ್‌ 19 ಅವಧಿಯಲ್ಲಿ ಸಲಕರಣೆಗಳನ್ನು ಖರೀದಿ ಮಾಡಿರುವ ಬಗ್ಗೆ ವಿಚಾರ ಪ್ರಸ್ತಾಪಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಪರಿಕರಗಳನ್ನು ಖರೀದಿ ವಿಚಾರದಲ್ಲಿ ಇಲ್ಲಸಲ್ಲದ ಆರೋಪವನ್ನೂ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಚಿವರು, ಪ್ರಧಾನ ಕಾರ್ಯದರ್ಶಿ ಜಾವೇದ್ ಆಖ್ತರ್ ಹಾಗೂ ಮಂಜುಶ್ರೀ ಭಾಗಿಯಾಗಿದ್ದಾರೆ. ನಿಮ್ಮ ಎಲ್ಲಾ ಅನುಮಾನಗಳಿಗೆ ಉತ್ತರ ಕೊಡುತ್ತಾರೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಜಾವೇದ್ ಆಖ್ತರ್ ಮಾತನಾಡಿ, ಕೋವಿಡ್-19 ಸಲುವಾಗಿ ಪರಿಕರಗಳನ್ನು ಮಾರ್ಚ್ ಮೊದಲ ವಾರದಿಂದ ಖರೀದಿ ಮಾಡಿದ್ದೇವೆ. ಡ್ರಗ್ಸ್ ಲಾಜಿಸ್ಟಿಕ್‌ನಿಂದ ಎಲ್ಲಾ ಪರಿಕರಗಳ ಖರೀದಿ ಮಾಡಲಾಗಿದೆ. ಆ ಸಮಯದಲ್ಲಿ ಪಿಪಿಇ ಕಿಟ್ ನಮ್ಮಲ್ಲಿ ಉತ್ಪಾದನೆ ಆಗುತ್ತಿರಲಿಲ್ಲ. ಸ್ಯಾನಿಟೈಸರ್ ನಮ್ಮಲ್ಲಿ ಉತ್ಪಾದನೆ ಇತ್ತು, ಆದರೆ ಬೇಡಿಕೆಗೆ ತಕ್ಕಷ್ಟು ಇರಲಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಸ್ಯಾನಿಟೈಸರ್‌ ಸಿಗದಿದ್ದ ಸಮಯದಲ್ಲಿ ಅರ್ಧ ಲೀಟರ್ಗೆ 250 ರೂಪಾಯಿಯಂತೆ ಖರೀದಿ ಮಾಡಿದ್ದೇವೆ. N - 95 ಮಾಸ್ಕ್‌ ಖರೀದಿಯನ್ನು 147 ರೂಪಾಯಿಂತೆ ಮಾಡಿದ್ದೇವೆ. ಈಗ 44 ರೂಪಾಯಿಗೆ ಖರೀದಿ ಮಾಡಲಾಗ್ತಿದೆ ಎಂದಿದ್ದಾರೆ.

ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ಈ ಪರಿಸ್ಥಿತಿಯನ್ನು ಯಾರು ನಿರೀಕ್ಷೆ ಮಾಡಿರಲಿಲ್ಲ. ಕೋವಿಡ್-19 ಇವತ್ತು ಸಿಎಂ ಬಿ.ಎಸ್‌ ಯಡಿಯೂರಪ್ಪ ಹಾಗೂ ಸಂಪುಟದ ಸಚಿವರಿಗೆ ಸವಾಲಾಗಿದೆ. ಡಿಮ್ಯಾಂಡ್ ಹೆಚ್ಚಾಗಿದ್ದಾಗ ಸಪ್ಲೈ ಮಾಡುವವರು ಕಡಿಮೆ ಇದ್ದರು. ಡಿಮ್ಯಾಂಡ್ ಹೆಚ್ಚಾದಂತೆ ಇದೀಗ ಉತ್ಪಾದನೆ ಹೆಚ್ಚಾಗಿದೆ. ಆದಾದ ಬಳಿಕ ದರ ಕಡಿಮೆ ಆಗಿದೆ. ವಿಪಕ್ಷದ ನಾಯಕರು ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ಆಗಿದೆ ಎನ್ನುತ್ತಿದ್ದಾರೆ. ವೆಂಟಿಲೇಟರ್‌ ಖರೀದಿಯನ್ನು ತಾಂತ್ರಿಕತೆಯ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. 4 ಲಕ್ಷದಿಂದ 50-60 ಲಕ್ಷದ ವೆಂಟಿಲೇಟರ್‌ ಕೂಡ ಖರೀದಿ ಮಾಡಲಾಗಿದೆ. 4 ಲಕ್ಷದ ಬಿಲ್‌ನಲ್ಲೇ ಎಲ್ಲಾ ವೆಂಟಿಲೇಟರ್ ಖರೀದಿ ಮಾಡಿಲ್ಲ. ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‌ಗೆ 18 ಲಕ್ಷ ವೆಚ್ಚ ತಗುಲಿದೆ ಎಂದಿದ್ದಾರೆ. ವೆಂಟಿಲೇಟರ್ ಒಂದರಲ್ಲೇ 120 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಸಿದ್ಧರಾಮಯ್ಯ ಆರೋಪ ಮಾಡಿದ್ದಾರೆ, ಆದರೆ ಈವರೆಗೂ 10.61 ಕೋಟಿ ಮೌಲ್ಯದ ವೆಂಟಿಲೇಟರ್ ಮಾತ್ರ ಖರೀದಿಯಾಗಿದೆ ಎಂದಿದ್ದಾರೆ.

ಇನ್ನು ಪಿಪಿಇ ಕಿಟ್ 48.65 ಕೋಟಿ ಆಗಬೇಕಿತ್ತು. 1 ಲಕ್ಷ ಪಿಪಿಇ ಕಿಟ್ ನೀಡುವಂತೆ ಆರ್ಡರ್ ಕೊಟ್ಟಿದ್ದೆವು. ಆದರೆ ಈವರೆಗೂ ಕೇವಲ 40 ಸಾವಿರ ಕಿಟ್ ಮಾತ್ರ ಕೊಟ್ಟಿದ್ದಾರೆ. ನಾವು ಬಹಳ ಕಷ್ಟಪಟ್ಟು ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. ಪಿಪಿಇ ಕಿಟ್‌ನಲ್ಲಿ ಸಾಕಷ್ಟು ವಿಧಗಳಿದ್ದು, ವೈದ್ಯರ ಬೇಡಿಕೆಯಂತೆ ಚೀನಾ, ಸಿಂಗಾಪುರದಿಂದಲೂ ಖರೀದಿ ಮಾಡಿದ್ದೇವೆ. 3 ಕಂಪನಿಯಿಂದ 10 ಲಕ್ಷ ಕಿಟ್ ಖರೀದಿ ಮಾಡಿದ್ದೇವೆ. 79,35,16,816 ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಸಿದ್ಧರಾಮಯ್ಯ 150 ಕೋಟಿ ಅವ್ಯವಹಾರ ಅಂತಾರೆ, ಎಲ್ಲಿ ಆಗಿದೆ ಅಷ್ಟು ಅವ್ಯವಹಾರ..? ಎಂದು ಪ್ರಶ್ನೆ ಮಾಡಿದ್ದಾರೆ.

ಆಕಾಶ ಮತ್ತು ಭೂಮಿ ನಡುವೆ ಅಂತರ ಎಷ್ಟಿರಬಹುದೋ ಅಷ್ಟು ದೊಡ್ಡ ಅಂತರದ ಸುಳ್ಳನ್ನು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನನ್ನ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಭ್ರಷ್ಟಾಚಾರ ಸಾಬೀತಾದ್ರೆ, ಒಂದು ಕ್ಷಣವು ಸಚಿವ ಸ್ಥಾನದಲ್ಲಿ ಕೂರುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಸಾಬೀತಾಗುತ್ತಿದ್ದಂತೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದಿದ್ದಾರೆ ಆರೋಗ್ಯ ಸಚಿವ ಬಿ. ಶ್ರೀರಾಮುಲು. ನಾವೂ ಯಾವುದೇ ವಸ್ತುಗಳನ್ನು ಸ್ವಂತ ನಿರ್ಧಾರದಿಂದ ಖೀರೀದಿ ಮಾಡಿಲ್ಲ. ಕೇಂದ್ರ ಸರ್ಕಾರ ನಮಗೆ ಕೆಲವೊಂದು ಕಂಪೆನಿಗಳ ಪಟ್ಟಿ ಕೊಟ್ಟಿತ್ತು. ಆ ಕಂಪನಿಗಳ ಮೂಲಕವೇ ನಾವು ಖರೀದಿ ಮಾಡಿದ್ದೇವೆ ಎಂದಿದ್ದಾರೆ. ಈ ವರೆಗೂ ಬೇರೆ ಬೇರೆ ಕಂಪನಿಗಳಿಂದ 2,65,80,000 ರೂಪಾಯಿಯ ಸ್ಯಾನಿಟೈಸರ್‌ ಖರೀದಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸರ್ಕಾರದ ಮೇಲೆ ಇನ್ನೂ ಇದೆ ಅನುಮಾನ..!

ರಾಜ್ಯ ಸರ್ಕಾರ ಇಡೀ ಸುದ್ದಿಗೋಷ್ಟಿಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿತ್ತು. ಏನನ್ನೂ ಕೇಳಿದರೂ ಪ್ರಶ್ನೆ ಕೇಲಲು ಅವಕಾಶ ಕೊಡುತ್ತೇವೆ ಎನ್ನುತ್ತಲೇ ಲೆಕ್ಕದ ಪಟ್ಟಿಯನ್ನು ಮಾಧ್ಯಮಗಳ ಮುಂದಿಡುವ ಕೆಲಸ ಮಾಡಿತು. ಅಂತಿಮವಾಗಿ ಯಾವುದೇ ಪ್ರಶ್ನೆಗಳನ್ನು ಎದುರಿಸುವ ಕೆಲಸ ಮಾಡಲಿಲ್ಲ. ಕೇವಲ ಹಾಸಿಗೆಯನ್ನು ಬಾಡಿಗೆಗೆ ತಂದಿದ್ದಿರಿ. ಆ ಬಳಿಕ ಆ ನಿರ್ಧಾರದಿಂದ ಹಿಂದೆ ಸರಿಯಲಾಯ್ತು. ಇದು ಯಾರ ನಿರ್ಧಾರ ಎಂದು ಪ್ರಶ್ನೆ ಮಾಡುತ್ತಿದ್ದ ಹಾಗೆ ಅದರ ಬಗ್ಗೆ ಮೌನಕ್ಕೆ ಶರಣಾದ ಸಚಿವರು ಅಂತಿಮವಾಗಿ ಅದರಲ್ಲಿ ಯಾವುದೇ ಲೋಪವಾಗಿಲ್ಲ. ಮೊದಲು ಬಾಡಿಗೆಗೆ ತರಲು ತಯಾರಿ ಮಾಡಿಕೊಂಡಿದ್ದರು, ಆದರೆ ಹೊರೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದಷ್ಟೇ ಹೇಳಿ ನುಣುಚಿಕೊಂಡರು.

ಅದರ ಜೊತೆಗೆ ಸಿದ್ದರಾಮಯ್ಯ ಆರೋಪಕ್ಕೆ ಎಲ್ಲಾ ಉತ್ತರ ಕೊಟ್ಟಿದ್ದೇವೆ ಎಂದ ಡಿಸಿಎಂ ಅಶ್ವತ್ಥ ನಾರಾಯಣ ಆರೋಪದ ಬಗ್ಗೆ ಯಾವುದಾದರೂ ತನಿಖೆ ಮಾಡಿಸುತ್ತೀರ ಎಂದಿದ್ದಕ್ಕೆ, ತನಿಖೆಯ ಪ್ರಶ್ನೆಯೇ ಇಲ್ಲ. ಸದನದಲ್ಲಿ ಉತ್ತರ ನೀಡಲು ನಾವು ಸಿದ್ಧ. ನಮ್ಮಲ್ಲಿ ಎಳ್ಳಷ್ಟು ತಪ್ಪಿಲ್ಲ. ತಪ್ಪನ್ನೇ ಮಾಡಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ ಎಂದು ತಾವು ಸಾಚಾಗಳು ಎಂದು ತಮಗೆ ತಾವೇ ಸರ್ಟಿಫಿಕೇಟ್‌ ಕೊಟ್ಟುಕೊಂಡರು. ಇನ್ನೂ ನಾವು ವಿರೋಧ ಪಕ್ಷದವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಆದರೆ, ಈಗಾಗಲೇ ಕೋವಿಡ್‌ ಖರ್ಚು ವೆಚ್ಚದಲ್ಲಿ ರಾಜ್ಯ ಸರ್ಕಾರ ಲೂಟಿ ಹೊಡೆದು ಕೆಲಸ ಮಾಡದೆ ಕೈಕಟ್ಟಿ ಕುಳಿತಿದೆ ಎನ್ನುವುದು ಜನಮಾನಸದಲ್ಲಿ ಮನೆ ಮಾಡಿದೆ. ಸರ್ಕಾರ ಮಾತ್ರ ನಾವು ತಪ್ಪು ಮಾಡಿಲ್ಲ ಎನ್ನುತ್ತಿದೆ. ಇದೆಲ್ಲದರ ನಡುವೆ ತಪ್ಪು ಮಾಡಿಲ್ಲ ಎಂದು ಬಾಯಿ ಮಾತಿನಲ್ಲಿ ಹೇಳುವ ಬದಲು ತನಿಖೆ ಮಾಡಿಸಿ ಆ ಮೂಲಕ ವಿರೋಧ ಪಕ್ಷಗಳ ಆರೋಪ ಎಂಬುದನ್ನು ಸಾಬೀತು ಮಾಡಬಹುದಲ್ಲವೇ..? ತಪ್ಪು ಮಾಡಿಲ್ಲ ಎಂದಾದ ಮೇಲೆ ಭಯವೇತಕೆ..? ಶ್ರೀರಾಮನು ಆರೋಪ ಮಾಡಿದವನ ಅನುಮಾನ ನಿವಾರಣೆಗಾಗಿ ಏನು ಮಾಡಿದನು..? ಎನ್ನುವುದು ರಾಮನನ್ನೇ ಆರಾಧಿಸುವ ಬಿಜೆಪಿ ಪಕ್ಷದ ನಾಯಕರಿಗೆ ತಿಳಿಯದಾಯಿತೇ..? ಇದು ಇಲ್ಲಿಗೆ ಮುಗಿದ ಅಧ್ಯಾಯವಲ್ಲ, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ತಾಳಲಿದೆ..? ಕಾಂಗ್ರೆಸ್‌ ನಾಯಕರು ಗುರುವಾರ ಮಾತನಾಡುತ್ತೇವೆ ಎಂದಿದ್ದಾರೆ, ಏನನ್ನು ಹೇಳುತ್ತಾರೆ..? ಯಾವ ದಾಖಲೆ ಬಿಡುಗಡೆ ಮಾಡುತ್ತಾರೆ..? ಕಾದು ನೋಡಬೇಕು.

Click here to follow us on Facebook , Twitter, YouTube, Telegram

Pratidhvani
www.pratidhvani.com