ಜನರಿಗೆ ಕರೋನಾ ಅಂಟಿಸಿರುವುದು ಸರ್ಕಾರ, ಸರ್ಕಾರವೇ ಜನರ ಜವಾಬ್ದಾರಿ ವಹಿಸಬೇಕು- ಡಿಕೆಶಿ
ರಾಜ್ಯ

ಜನರಿಗೆ ಕರೋನಾ ಅಂಟಿಸಿರುವುದು ಸರ್ಕಾರ, ಸರ್ಕಾರವೇ ಜನರ ಜವಾಬ್ದಾರಿ ವಹಿಸಬೇಕು- ಡಿಕೆಶಿ

ಕೋವಿಡ್‌ ಚಿಕಿತ್ಸೆಗೆಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಬೇಡಿ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಿ, ಕರೋನಾ ಸೋಂಕಿತರಿಗೆ ಇನ್ಸುರೆನ್ಸ್‌ ಮಾಡಿಸಬೇಕು. ಜನರು ಯಾವ ತಪ್ಪನ್ನೂ ಮಾಡಿಲ್ಲ, ಎಲ್ಲೋ ಇದ್ದ ಕರೋನಾವನ್ನು ತಂದು ಜನರಿಗೆ ಅಂಟಿಸಿರುವುದು ಸರ್ಕಾರ, ಸರ್ಕಾರವೇ ಜನರ ಆರೋಗ್ಯದ ಕಾಳಜಿ ವಹಿಸಬೇಕು

ಪ್ರತಿಧ್ವನಿ ವರದಿ

ಕರ್ನಾಟಕದಲ್ಲಿ ಕರೋನಾ ಸೋಂಕು ಹರಡುವಿಕೆ ತಡೆಗಟ್ಟಲು ವಿಫಲವಾಗಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಮಂತ್ರಿ, ಮುಖ್ಯಮಂತ್ರಿಗಳು ಆಸ್ಪತ್ರೆಗೆ ತೆರಳಿ ವ್ಯವಸ್ಥೆಯನ್ನು ಖುದ್ದು ಗಮನಿಸಬೇಕು. ರೋಗಿಗಳ ಜೊತೆಗೆ ಮಾತನಾಡಿ, ಅವರ ಸಮಸ್ಯೆ ಆಲಿಸಬೇಕು. ಅವರ ಜೊತೆಗೆ ಸರ್ಕಾರವಿದೆ ಎಂಬ ಧೈರ್ಯವನ್ನು ಜನರಿಗೆ ನೀಡಬೇಕು ಎಂದು ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ್ದಾರೆ.

ವೈದ್ಯರನ್ನು, ನರ್ಸುಗಳನ್ನು ಸೇರಿದಂತೆ ಆರೋಗ್ಯ ಕಾರ್ಯಕರ್ತರನ್ನು ಸರಿಯಾಗಿ ಗಮನಿಸುತ್ತಿಲ್ಲ. ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಆರೋಗ್ಯ ಕಾರ್ಯಕರ್ತರ ಕಾಳಜಿಯೇ ವಹಿಸದ ಸರ್ಕಾರ ವೈದ್ಯಕೀಯ ಉಪರಣಗಳಲ್ಲಿ ದುಡ್ಡು ಮಾಡುವಲ್ಲಿ ನಿರತವಾಗಿದೆ ಎಂದು ವೈದ್ಯಕೀಯ ಉಪಕರಣದ ಹಗರಣದ ಕುರಿತು ಟೀಕೆ ಮಾಡಿದ್ದಾರೆ.

ಕರೋನಾದಿಂದಾಗಿ ಮೃತಪಟ್ಟವರಿಗೆ ಸರಿಯಾದ ಅಂತ್ಯಕ್ರಿಯೆ ನಡೆಸುತ್ತಿಲ್ಲ. ಮೃತದೇಹಗಳಿಗೆ ಕನಿಷ್ಟ ಗೌರವ ನೀಡುವುದನ್ನು ಕಲಿಯಿರಿ. ಮೃತದೇಹಗಳಿಗೆ ಗೌರವ ಕೊಡದೆ ಇರುವುದು ಭಾರತದ ಸಂಸ್ಕೃತಿಯಲ್ಲ. ಮೃತಪಟ್ಟವರ ಸಂಪ್ರದಾಯದಂತೆ ಅವರ ಅಂತಿಮ ವಿಧಿ ವಿಧಾನ ನೆರವೇರಿಸಬೇಕೆಂದು ಸರ್ಕಾರವನ್ನು ಕೇಳಿಕೊಂಡಿದ್ದಾರೆ.

ಕೋವಿಡ್‌ ಚಿಕಿತ್ಸೆಗೆಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿಪಡಿಸಬೇಡಿ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆಗಳನ್ನು ಉಚಿತವಾಗಿ ನೀಡಿ, ಕರೋನಾ ಸೋಂಕಿತರಿಗೆ ಇನ್ಸುರೆನ್ಸ್‌ ಮಾಡಿಸಬೇಕು. ಜನರು ಯಾವ ತಪ್ಪನ್ನೂ ಮಾಡಿಲ್ಲ, ಎಲ್ಲೋ ಇದ್ದ ಕರೋನಾವನ್ನು ತಂದು ಜನರಿಗೆ ಅಂಟಿಸಿರುವುದು ಸರ್ಕಾರ, ಸರ್ಕಾರವೇ ಜನರ ಆರೋಗ್ಯದ ಕಾಳಜಿ ವಹಿಸಬೇಕು, ಜನರ ಜವಾಬ್ದಾರಿಯನ್ನು ಮುಖ್ಯಮಂತ್ರಿ- ಸರ್ಕಾರವೇ ಹೊರಬೇಕೆಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ.

ಬೆಂಗಳೂರಲ್ಲಿ ವಿಪರೀತವಾಗಿ ಕರೋನಾ ಪ್ರಕರಣ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಜನರು ಊರು ಬಿಡುತ್ತಿದ್ದಾರೆ. ಜನರು ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ನಗರ ತೊರೆಯುತ್ತಿದ್ದಾರೆ. ಹೀಗಾದರೆ ಬೆಂಗಳೂರು ನಗರ ಕಟ್ಟುವವರು ಯಾರು? ಬೆಂಗಳೂರು ಏನಾಗಬೇಕು ಎಂದು ಕೇಳಿದ್ದಾರೆ.

ಇನ್ನು ಕೇಂದ್ರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್‌ ಕುರಿತು ಲೆಕ್ಕ ಕೇಳಿದ ಡಿಕೆಶಿ, ಘೋಷಿಸಿದ ಹಣವನ್ನು ಎಲ್ಲಿ ಖರ್ಚು ಮಾಡಿದ್ದೀರಿ, ಪ್ಯಾಕೇಜಿನಿಂದ ಕರ್ನಾಟಕಕ್ಕೆ ಏನು ತಲುಪಿದೆ. ಖರ್ಚು ಮಾಡಿರುವ ಕುರಿತು ಲೆಕ್ಕ ಕೊಡಿ ನಾವು ನೋಡುತ್ತೇವೆ ಎಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Pratidhvani
www.pratidhvani.com