ಸರ್ಕಾರದ ಹಗರಣಕ್ಕೆ ವಿರೋಧ ಪಕ್ಷದೊಳಗೆ ಜಟಾಪಟಿ
ರಾಜ್ಯ

ಸರ್ಕಾರದ ಹಗರಣಕ್ಕೆ ವಿರೋಧ ಪಕ್ಷದೊಳಗೆ ಜಟಾಪಟಿ

ಸರ್ಕಾರದ ವಿರುದ್ಧ ಆಗಿಂದಾಗ್ಗೆ ದಾಖಲೆ ಹಿಡಿದು ಅಕ್ರಮದ ಆರೋಪ ಮಾಡುತ್ತಿದ್ದ ಕುಮಾರಸ್ವಾಮಿ ಆಳುವ ಪಕ್ಷದ ಜೊತೆ ಸೇರಿಕೊಂಡರೇ ಎನ್ನುವ ಅನುಮಾನ ಮೂಡಿಸುತ್ತಿದೆ. ಗುರುವಾರ ಟ್ವಿಟರ್‌ನಲ್ಲಿ 11:50 ನಿಮಿಷದ ವಿಡಿಯೋ ಅಪ್‌ಲೋಡ್‌‌ ಮಾಡಿದ್ದು, ಸರ್ಕಾರಕ್ಕೆ ಸಲಹೆ ಸಾಕಷ್ಟು ಸಲಹೆ ನೀಡಿದ್ದಾರೆ.

ಕೃಷ್ಣಮಣಿ

ಕರೋನಾ ಸಂಕಷ್ಟವನ್ನು ಇಡೀ ಮನುಕುಲವೇ ಎದುರಿಸುತ್ತಿದೆ. ಈ ವೇಳೆ ರಾಜ್ಯ ಸರ್ಕಾರ ಸಾಕಷ್ಟು ಗೋಲ್‌ಮಾಲ್‌ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆ ಆರೋಪಕ್ಕೆ ಪೂರಕವಾಗಿ ಮುರುಗೇಶ್‌ ನಿರಾಣಿ ಹೇಳಿರುವ ಭ್ರಷ್ಟಾಚಾರದ ಮಾತನ್ನು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಹೇಳಿರುವ ಮಾತನ್ನು ಅಲ್ಲಗಳೆಯದ ಮುರುಗೇಶ್‌ ನಿರಾಣಿ ಹೌದೆಂದು ಒಪ್ಪಿಕೊಂಡಿದ್ದಾರೆ. ಆದರೆ, ಭ್ರಷ್ಟಚಾರಕ್ಕೆ ಸಂಬಂಧಿಸಿದ ದಾಖಲೆಗಳು ಇರುವ ಪೆನ್‌ಡ್ರೈವ್‌ನನ್ನ ಬಳಿ ಇಲ್ಲ ಎಂದು ಜಾರಿಕೊಂಡಿದ್ದಾರೆ. ಓರ್ವ ಪ್ರತಿಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಅದನ್ನು ಸರ್ಕಾರ ಎದುರಿಸುತ್ತದೆ. ಆದರೆ ಇವರಿಬ್ಬರ ಮಧ್ಯೆ ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ದಾರೆ. ಅದು ಸಮರಕ್ಕೆ ಆಹ್ವಾನ ಕೊಟ್ಟಂತಿದೆ.

ಅಕ್ರಮಕ್ಕೆ ಸೈ ಎಂದು ಬಿಟ್ಟರೆ ಕುಮಾರಸ್ವಾಮಿ..?

ಸರ್ಕಾರದ ವಿರುದ್ಧ ಆಗಿಂದಾಗ್ಗೆ ದಾಖಲೆ ಹಿಡಿದು ಅಕ್ರಮದ ಆರೋಪ ಮಾಡುತ್ತಿದ್ದ ಕುಮಾರಸ್ವಾಮಿ ಆಳುವ ಪಕ್ಷದ ಜೊತೆ ಸೇರಿಕೊಂಡರೇ ಎನ್ನುವ ಅನುಮಾನ ಮೂಡಿಸುತ್ತಿದೆ. ಗುರುವಾರ ಟ್ವಿಟರ್‌ನಲ್ಲಿ 11:50 ನಿಮಿಷದ ವಿಡಿಯೋ ಅಪ್‌ಲೋಡ್‌‌ ಮಾಡಿದ್ದು, ಸರ್ಕಾರಕ್ಕೆ ಸಲಹೆ ಸಾಕಷ್ಟು ಸಲಹೆ ನೀಡಿದ್ದಾರೆ. ಬಡವರ ಜೀವನದ ಜೊತೆಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ಎಲ್ಲಿ ಎಡವಿದ್ದೀರೋ ಅದನ್ನು ಸರಿ ಮಾಡಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸಿ ಎಂದಿದ್ದಾರೆ. ಈಗಾಗಲೇ ಸಚಿವರು ಸೇರಿದಂತೆ ಮುಖ್ಯಮಂತ್ರಿಗಳು ಕರೋನಾ ಕೈ ಮೀರಿ ಹೋಗುತ್ತಿದೆ ಎನ್ನುವ ಮೂಲಕ ಅಸಹಾಯಕತೆ ತೋಡಿಕೊಂಡಿದ್ದೀರಿ. ಇದೀಗ ಖಾಸಗಿ ಆಸ್ಪತ್ರೆಗಳನ್ನು ಬೆದರಿಸಿ ಕೆಲಸ ಮಾಡುವುದು ಸರಿಯಲ್ಲ, ಅದರ ಬದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಗೆ ಅಕ್ರಮ ಮಾಡ್ತಿದ್ದು, ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಲು ಇದು ಸಮಯವಲ್ಲ. ಕರೋನಾ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಸೋಂಕು ವಿರುದ್ಧ ಗೆಲ್ಲಬೇಕಿದೆ ಎಂದಿದ್ದಾರೆ. ಸಿದ್ದರಾಮಯ್ಯ ಅವರನ್ನು ಜೊತೆಗೆ ಸೇರಿಕೊಂಡು ಸರ್ಕಾರ ಕೆಲಸ ಮಾಡಲಿ, ಅವರನ್ನು ಯಾವುದಕ್ಕೂ ಕರೆಯದೆ ಇರುವುದಕ್ಕೆ ಬೇಸರವಿರಬಹುದು ಎನ್ನುವ ಮೂಲಕ ಕಾಂಗ್ರೆಸ್‌ಗೆ ಟಾಂಗ್‌ ಕೊಟ್ಟಿದ್ದರು.

ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ..!

ಕರೋನಾ ವಿರುದ್ಧ ಹೋರಾಟ ಮಾಡುವ ಸಮಯವೇ ಹೊರತು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದಕ್ಕೆ ಅಲ್ಲ ಎಂದಿದ್ದ ಕುಮಾರಸ್ವಾಮಿ ವಿರುದ್ಧ ಕುಟುಕಿದ್ದಾರೆ. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಪ್ರತಿಭಟನೆ ಮಾಡುವುದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ವೇತನ ರಹಿತವಾಗಿ ರಜೆ ಕೊಡಲು ಪ್ರಸ್ತಾವನೆ ಸಿದ್ಧವಾಗಿದೆ. ಕರೋನಾ ಸೋಂಕಿನ ವಿರುದ್ಧ ಹೋರಾಟ ಮಾಡಲು ಅಸಮರ್ಪಕವಾಗಿ ವೈದ್ಯರು ಹಾಗೂ ನರ್ಸ್‌ಗಳ ನೇಮಕವಾಗಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಫಲಿತಾಂಶವಾಗಿದೆ. ಹೀಗಿದ್ದರೂ ನಾವು ವಿರೋಧ ಪಕ್ಷವಾಗಿ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕೇ..? ಅದು ಅನ್ಯಾಯಕ್ಕೆ ಒಳಗಾದವರಿಗೆ ದುಬಾರಿ ಆಗುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಹೇಳಿದ್ದು ಎಷ್ಟು ಸರಿ..? ಎಷ್ಟು ತಪ್ಪು..?

ಕುಮಾರಸ್ವಾಮಿ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎನಿಸುತ್ತದೆ. ಇನ್ನೂ ರಾಜ್ಯದಲ್ಲಿ ಕರೋನಾ ಸೋಂಕು ಹರಡುತ್ತಿರುವಾಗಲೇ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೂಲಕ ಸರ್ಕಾರ ಕೆಲಸ ಮಾಡಲು ಅಡ್ಡಿ ಮಾಡಿದಂತಾಗುತ್ತದೆ. ಆದರೆ ದಾಖಲೆಗಳನ್ನು ಸಂಗ್ರಹ ಮಾಡಿಕೊಂಡು ಸರ್ಕಾರವನ್ನು ಎಚ್ಚರಿಸಬೇಕಾದ ಕೆಲಸ ವಿರೋಧ ಪಕ್ಷದ್ದು ಆಗಿದೆ. ಸರ್ಕಾರದಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವುದು ಓರ್ವ ವಿರೋಧ ಪಕ್ಷದ ನಾಯಕನಿಗೆ ಗೊತ್ತಾದರೂ ಸಾರ್ವಜನಿಕವಾಗಿ ಬಹಿರಂಗ ಮಾಡದೆ ಇದ್ದರೆ ಅದೂ ಕೂಡ ದ್ರೋಹ ಆಗುತ್ತದೆ. ಇನ್ನೊಂದು ಮೂಲಗಳ ಪ್ರಕಾರ ಅಧಿಕಾರಿಗಳಿಂದ ಯಾವಾಗಲೂ ತಾವೇ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದರು. ಯಾವುದೇ ರೋಪ ಮಾಡುವಾಗ ದಾಖಲೆಗಳನ್ನು ಹಿಡಿದು ಬರುತ್ತಿದ್ದರು. ಆದರೆ ಈ ಬಾರಿ ರಾಜ್ಯ ಸರ್ಕಾರ ಮಾಡಿರುವ ಘನಂಧಾರಿ ಕೆಲಸವನ್ನು ಸಿದ್ದರಾಮಯ್ಯ ಬಹಿರಂಗ ಮಾಡಿದ್ದಾರೆ. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ ಎನ್ನಲಾಗಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com