ನರಸಿಂಹರಾಜು ಅವರ ಬಗ್ಗೆ ನನಗೆ ಅಪಾರ ಹೆಮ್ಮೆ
ರಾಜ್ಯ

ನರಸಿಂಹರಾಜು ಅವರ ಬಗ್ಗೆ ನನಗೆ ಅಪಾರ ಹೆಮ್ಮೆ

ಕನ್ನಡ ಚಿತ್ರರಂಗ ಭದ್ರ ನೆಲೆ ಕಂಡುಕೊಳ್ಳುವಲ್ಲಿ ನಟ ನರಸಿಂಹರಾಜು ಅವರ ಕೊಡುಗೆ ಅನನ್ಯವಾದುದು. ನಾಯಕನಟರಿಗೆ ಸರಿಗಟ್ಟುವ ವರ್ಚಸ್ಸಿನೊಂದಿಗೆ ಮಿಂಚಿದ ಹಾಸ್ಯ ಕಲಾವಿದ. ಅವರು ಅಗಲಿ ಇಂದಿಗೆ ನಲವತ್ತೊಂದು ವರ್ಷ. ಶಾರದಮ್ಮ ನರಸಿಂಹರಾಜು ಅವರು ತಾವು ಕಂಡ ಹಾಗೂ ಪತಿ ಹೇಳಿಕೊಂಡ ಶೂಟಿಂಗ್ ಸಂದರ್ಭದ ರಸಗಳಿಗೆಗಳನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

ಶಶಿಧರ್‌ ಚಿತ್ರದುರ್ಗ

ಶಶಿಧರ್‌ ಚಿತ್ರದುರ್ಗ

ಮದುವೆ ಆದಾಗ ನನಗೆ ಹದಿನಾಲ್ಕು ವರ್ಷ, ಅವರಿಗೆ (ನರಸಿಂಹರಾಜು) ಇಪ್ಪತ್ತೆಂಟು. ಆಗ ಅವರು ಸ್ಟಾರ್ ಕಲಾವಿದ. ಕೆಲವೊಮ್ಮೆ ನಾಟಕ, ಸಿನಿಮಾ ಶೂಟಿಂಗ್‌ಗೆಂದು ನನ್ನನ್ನೂ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಚಿಕ್ಕ ವಯಸ್ಸು, ಮುಗ್ಧ ಮನಸ್ಸಿನ ನನಗೆ ಸಿನಿಮಾರಂಗ ಸೋಜಿಗವೆನಿಸುತ್ತಿತ್ತು. ಚಿತ್ರೀಕರಣಕ್ಕೆ ಹೋದಾಗ ಕೆಲವು ಹೆಂಗಸರು, `ರೀ... ನೋಡಿ ನಿಮ್ ಯಜಮಾನ್ರು ಎಷ್ಟೊಂದು ನಟಿಯರ ಜತೆ ನಟಿಸ್ತಾರೆ... ನಿಮಗೆ ಏನೂ ಅನ್ಸೋಲ್ವೇನ್ರೀ?' ಅಂತ ಕಿವಿಯಲ್ಲಿ ಊದೋರು! ನಾನು ನೇರವಾಗಿ ಇವರಲ್ಲಿ ಬಂದು, `ರೀ ನೋಡ್ರಿ... ಹೀಗಂತಾರೆ..' ಎಂದು ಹೇಳುತ್ತಿದ್ದೆ. ನನ್ನ ಮುಗ್ಧತೆಗೆ ನಗುತ್ತಿದ್ದ ಪತಿದೇವರು, `ನೋಡು, ಅವ್ರು ನನ್ ಥರಾನೇ ಹೊಟ್ಟೆಪಾಡಿಗೆ ಬಂದು ಆ್ಯಕ್ಟ್ ಮಾಡ್ತಿದಾರೆ. ಒಳ್ಳೆ ಕುಟುಂಬದಿಂದ ಬಂದಂಥವರು. ಯಾರು ಏನೇ ಹೇಳಿದ್ರೂ ನನ್ನ ಜೀವನದ ಹಿರೋಯಿನ್ ನೀನೇ. ಯಾರು ಏನು ಹೇಳಿದ್ರೂ ತಲೆ ಕೆಡಿಸಿಕೊಳ್ಬೇಡ' ಅಂತ ಸಮಾಧಾನ ಹೇಳುತ್ತಿದ್ದರು.

ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಯಜಮಾನರ ನಾಟಕವಿತ್ತು. ಆ ನಾಟಕದಲ್ಲಿ ಅವರೊಂದಿಗೆ ನಟಿ ಎಂ ಎನ್ ಲಕ್ಷ್ಮೀದೇವಮ್ಮನವರು ಪಾತ್ರ ಮಾಡಿದ್ದರು. ಆಗ ಸಿನಿಮಾ ಮತ್ತು ನಾಟಕಗಳಲ್ಲಿ ನರಸಿಂಹರಾಜು ಮತ್ತು ಲಕ್ಷ್ಮೀದೇವಮ್ಮನವರದು ಜನಪ್ರಿಯ ಜೋಡಿ. ಅಂದು ನಾಟಕ ಮುಗಿದಾಗ ನಾನು, ಅವರು ಮತ್ತು ಲಕ್ಷ್ಮಿದೇವಮ್ಮನವರು ಕಲಾಕ್ಷೇತ್ರದ ಹೊರಗೆ ನಿಂತಿದ್ದೆವು. ಆ ವೇಳೆ ಅಲ್ಲಿಗೆ ಬಂದ ನಾಲ್ಕೈದು ಅಭಿಮಾನಿ ಹೆಣ್ಣುಮಕ್ಕಳು, `ಸಾರ್ ಸಿನಿಮಾ, ನಾಟಕಗಳಲ್ಲಿ ನೀವೂ ನಿಮ್ಮ ಹೆಂಡ್ತಿ ಎಷ್ಟು ಹೊಂದಾಣಿಕೆಯಿಂದ ನಟಿಸುತ್ತೀರಿ! ಆಹಾ, ನಿಮ್ ಜೋಡಿ ನಿಜವಾಗ್ಲೂ ಅಪರೂಪ ಕಣ್ರೀ...' ಎಂದರು.

ದ್ವಾರಕೀಶ್-ಅಂಬುಜ ದಂಪತಿ ಜೊತೆ ನರಸಿಂಹರಾಜು-ಶಾರದಮ್ಮ ದಂಪತಿ. ದ್ವಾರಕೀಶ್ ನೂರು ಸಿನಿಮಾ ಪೂರೈಸಿದ ಸಂದರ್ಭದಲ್ಲಿ ನಡೆದ ಔತಣಕೂಟದಲ್ಲಿ  ತೆಗೆದ ಚಿತ್ರ
ದ್ವಾರಕೀಶ್-ಅಂಬುಜ ದಂಪತಿ ಜೊತೆ ನರಸಿಂಹರಾಜು-ಶಾರದಮ್ಮ ದಂಪತಿ. ದ್ವಾರಕೀಶ್ ನೂರು ಸಿನಿಮಾ ಪೂರೈಸಿದ ಸಂದರ್ಭದಲ್ಲಿ ನಡೆದ ಔತಣಕೂಟದಲ್ಲಿ ತೆಗೆದ ಚಿತ್ರಚಿತ್ರಕೃಪೆ: ಅಶ್ವತ್ಥ ನಾರಾಯಣ

`ನೀವು ಯಾರ ಬಗ್ಗೆ ಮಾತಾಡ್ತಿದ್ದೀರಿ?' ಎಂದರು ಪತಿ. ಆ ಹೆಣ್ಣುಮಕ್ಕಳು ಲಕ್ಷ್ಮೀದೇವಮ್ಮನವರನ್ನು ತೋರಿಸಿದರು! ಅಲ್ಲೇ ಇದ್ದ ನನಗೆ ನಗು ತಡೆಯಲಾರದೆ ಬಾಯಿಗೆ ಸೆರಗು ಮುಚ್ಚಿಕೊಂಡೆ. ಪಾಪ, ಲಕ್ಷ್ಮೀದೇವಮ್ಮನವರಿಗೂ ನಾಚಿಕೆಯಾದಂತಾಯಿತು. ಕೂಡಲೇ ಪತಿದೇವರು, `ರೀ, ನಮಸ್ಕಾರ. ಅವ್ರು ನನ್ ಜೊತೆ ನಟಿಸುವ ಸಹಕಲಾವಿದೆ ಅಷ್ಟೇ... ನೋಡಿ ನಿಂತಿದ್ದಾರಲ್ಲ, ಇವ್ರೇ ನಮ್ಮನೆಯವ್ರು' ಎಂದು ನನ್ನ ಕೈಹಿಡಿದು ಪಕ್ಕಕ್ಕೆ ಕರೆದುಕೊಂಡರು. ಆ ಹೆಣ್ಣುಮಕ್ಕಳೂ ನಾಚಿಕೊಂಡು ಹೊರಟುಹೋದರು. ಆಗ ನರಸಿಂಹರಾಜು-ಲಕ್ಷ್ಮೀದೇವಿ ಜನಪ್ರಿಯ ಜೋಡಿಯಾದ್ದರಿಂದ ಜನರು ಇವರನ್ನು ಪತಿ-ಪತ್ನಿಯೆಂದೇ ಭಾವಿಸಿದ್ದರು! ಆತ್ಮೀಯ ಗೆಳತಿಯಾದ ಲಕ್ಷ್ಮೀದೇವಮ್ಮನವರು ಈಗಲೂ ಆ ಸನ್ನಿವೇಶ ನೆನಪು ಮಾಡಿಕೊಂಡು ನಗುತ್ತಾರೆ.

ನರಸಿಂಹರಾಜು ಅವರು ಎರಡು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. `ಚೋರಿ ಚೋರಿ' (1956) ಮತ್ತು `ಮಿಸ್ ಮೇರಿ' (1957) ಚಿತ್ರಗಳ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಮುಂದೊಮ್ಮೆ ಇವರು ಮತ್ತು ರಾಜ್ಕಪೂರ್ ಭೇಟಿಯಾದಾಗ ಆ ಘಟನೆ ನೆನಪು ಮಾಡಿಕೊಂಡು ಮನಸಾರೆ ನಕ್ಕಿದ್ದರು. `ಚೋರಿ ಚೋರಿ' ಶೂಟಿಂಗ್ ಸಂದರ್ಭದಲ್ಲಿ ರಾಜ್‌ಕಪೂರ್, `ನರಸಿಂಹರಾಜು ಜೀ, ಆಪ್ ಚೆಲೋ ಹಮಾರೆ ಸಾಥ್... ಹಿಂದಿ ಸಿನೆಮಾ ಮೆ ಆಪ್ ಬಡೇ ಸೇ ಬಡೇ ಸ್ಟಾರ್ ಬನ್ಜಾವೋಗೆ' ಎಂದು ಇವರನ್ನು ಮುಂಬಯಿಗೆ ಆಹ್ವಾನಿಸಿದ್ದರಂತೆ. ಆಗ ಇವರು, `ನಾನು ಕನ್ನಡ ಚಿತ್ರರಂಗದಲ್ಲೇ ಖುಷಿಯಾಗಿದ್ದೇನೆ. ತಮ್ಮ ಆಹ್ವಾನಕ್ಕೆ ಧನ್ಯವಾದ' ಎಂದು ಹೇಳಿದ್ದರಂತೆ. ಇಂಥ ಅನೇಕ ಸಂಗತಿಗಳು ನನ್ನಲ್ಲಿ ಪತಿಯ ಬಗ್ಗೆ ಹೆಮ್ಮೆ ತಂದಿವೆ.

Click here to follow us on Facebook , Twitter, YouTube, Telegram

Pratidhvani
www.pratidhvani.com