ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಒಂದು ವಾರ ಲಾಕ್‌ಡೌನ್‌
ರಾಜ್ಯ

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಒಂದು ವಾರ ಲಾಕ್‌ಡೌನ್‌

ಮಂಗಳವಾರ ರಾತ್ರಿ 8 ಗಂಟೆಯಿಂದ 22ರ ಮುಂಜಾನೆ 5 ಗಂಟೆ ತನಕ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿ ಸಿಎಂ ಬಿಎಸ್‌ ಯಡಿಯೂರಪ್ಪ ಆದೇಶ ಮಾಡಿದ್ದಾರೆ.

ಕೃಷ್ಣಮಣಿ

ಬೆಂಗಳೂರಿನಲ್ಲಿ ಶನಿವಾರವೂ ಕೂಡ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗದ ಸೋಂಕಿತರೇ ಹೆಚ್ಚಾಗಿದ್ದಾರೆ. ಹೀಗಾಗಿ ಸೋಂಕು ತಡೆಗೆ ಇರುವ ಏಕೈಕ ಮಾರ್ಗ ಸಾಮಾಜಿಕ ಅಂತರ. ಅದಕ್ಕೆ ಅನಿವಾರ್ಯವಾಗಿ ಲಾಕ್‌ಡೌನ್‌ ಮಾಡಲೇಬೇಕಾದ ಸ್ಥಿತಿಗೆ ತಲುಪಿದ ರಾಜ್ಯ ಸರ್ಕಾರ ಅಂತಿಮವಾಗಿ ಲಾಕ್‌ಡೌನ್‌ಗೆ ಅಸ್ತು ಎಂದಿದ್ದಾರೆ.

ಬೆಂಗಳೂರಿನಲ್ಲಿ ಪ್ರಕರಣಗಳ ಹತೋಟಿ ಇರುವ ಏಕೈಕ ಮಾರ್ಗದ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ಸಿಎಂ ಬಿಎಸ್‌ ಯಡಿಯೂರಪ್ಪ, ಅಂತಿಮವಾಗಿ ಮಂಗಳವಾರ ರಾತ್ರಿ 8 ಗಂಟೆಯಿಂದ 22ರ ಮುಂಜಾನೆ 5 ಗಂಟೆ ತನಕ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿ ಆದೇಶ ಮಾಡಿದ್ದಾರೆ. ಆದರೆ ಕೇವಲ 7 ದಿನಗಳ ಕಾಲ ಲಾಕ್‌ಡೌನ್‌ ಮಾಡುವುದರಿಂದ ಅನುಕೂಲ ಆಗುತ್ತಾ..? ಅಥವಾ ಮತ್ತೆ ಸರ್ಕಾರ ಎಡವಟ್ಟು ಮಾಡಿಕೊಳ್ಳುತ್ತಾ? ಎನ್ನುವ ಅನುಮಾನಗಳು ಕಾಣಿಸುತ್ತಿವೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡಿದ್ದಾರೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಿದ್ದಾರೆ. ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ, ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ. ಕರೋನಾ ವೈರಸ್ ಸಮುದಾಯಕ್ಕೆ ಹಬ್ಬುತ್ತಿದೆ. ಈ ಪರಿಸ್ಥಿತಿಯನ್ನು ಮನಗಂಡು ಇತರೆ ಜಿಲ್ಲೆಗಳ ಬಗ್ಗೆಯೂ ಗಂಭೀರ ಚಿಂತನೆ ಮಾಡಬೇಕಿದೆ. ಮತ್ತೆ ಲಾಕ್‌ಡೌನ್ ಜಾರಿಗೊಳಿಸಿದರೆ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಾನು ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಸರ್ಕಾರದ ಒಂದು ವಾರದ ಲಾಕ್‌ಡೌನ್‌ ಮಾಡುವುದು ಒಳ್ಳೆಯ ನಿರ್ಧಾರ ಎನ್ನುತ್ತಿದ್ದಾರೆ ತಜ್ಞರು. ಕರೋನಾ ವೈರಸ್ ಬೆಂಗಳೂರಿನಲ್ಲಿ ವೇಗ ಪಡೆದುಕೊಂಡಿದೆ. ಈ ಲಾಕ್‌ಡೌನ್ ಕರೋನಾ ವೇಗವನ್ನು ತಗ್ಗಿಸುತ್ತದೆ. ಜನರ ಸಂಪರ್ಕ ಕಡಿಮೆಯಾಗುವುದರಿಂದ ಖಂಡಿತವಾಗಿ ಸೋಂಕಿನ ಹರಡುವಿಕೆ ಕಡಿಮೆಯಾಗುತ್ತದೆ. ಇದೇ ಸಂದರ್ಭದಲ್ಲಿ ಅಗತ್ಯ ಸೌಕರ್ಯಗಳನ್ನು ಸರ್ಕಾರ ಸಿದ್ಧತೆ ಮಾಡಿಕೊಳ್ಳುವುದಕ್ಕೂ ಸಮಯ ಸಿಕ್ಕಂತಾಗುತ್ತದೆ. ಕೈಮೀರಿ ಹೋಗುತ್ತಿರುವ ಬೆಂಗಳೂರಿನ ಪ್ರಕರಣಗಳಿಗೆ ನಿಯಂತ್ರಣ ಮಾಡುವಲ್ಲಿ ಲಾಕ್‌ಡೌನ್ ಯಶಸ್ವಿಯಾಗುವ ಆಶಾಭಾವನೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಏನೇನು ಮಾಡ್ಬೇಕು..?

ತಜ್ಞರು ಹೇಳಿದಂತೆ ಲಾಕ್‌ಡೌನ್‌ ಸಮಯ ರಾಜ್ಯ ಸರ್ಕಾರಕ್ಕೆ ಸಿಕ್ಕಿರುವ ಅತ್ಯಮೂಲ್ಯ ಸಮಯ ಎಂದರೆ ತಪ್ಪಲ್ಲ. ಯಾಕೆಂದರೆ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಒಬ್ಬರನ್ನೂ ಬಿಡದಂತೆ ಎಲ್ಲರಿಗೂ ತಪಾಸಣೆ ಮಾಡುವ ಮೂಲಕ ಶಂಕಿತರು, ಸೋಂಕಿತರು ಎಂದು ವರ್ಗೀಕರಣ ಮಾಡುವ ಮೂಲಕ ಸೋಂಕು ಹರಡುತ್ತಿರುವ ಸರಣಿಯನ್ನು ಕತ್ತರಿಸುವ ಕೆಲಸ ಮಾಡಬೇಕಿದೆ. ಒಮ್ಮೆ ಸೋಂಕಿನ ಚೈನ್‌ ಕತ್ತರಿಸಿದರೆ ಸೋಂಕು ಮುಂದಕ್ಕೆ ಹರಡುವುದನ್ನು ನಿಲ್ಲಿಸಬೇಕು. ಆ ಬಳಿಕ ಇತರೆ ಜಿಲ್ಲೆಗಳಿಂದ ಆಗಮಿಸುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡುವ ಮೂಲಕ ಬೆಂಗಳೂರು ಒಳಕ್ಕೆ ಬಿಟ್ಟುಕೊಂಡರೆ ಮತ್ತೆ ಸೋಂಕು ಹರಡುವುದನ್ನೂ ತಪ್ಪಿಸಬಹುದು. ಇದೇ ರೀತಿ ಉಳಿದ ಜಿಲ್ಲೆಗಳಿಗೂ ಅನ್ವಯ ಮಾಡಿದರೆ ಸಂಪೂರ್ಣವಾಗಿ ಕರೋನಾಗೆ ಇತಿಶ್ರೀ ಹಾಡಬಹುದು.

Click here to follow us on Facebook , Twitter, YouTube, Telegram

Pratidhvani
www.pratidhvani.com