ಮಾಧ್ಯಮಗಳು ಕೋವಿಡ್ ಕುರಿತು ಅನಗತ್ಯ ಭಯ ಹುಟ್ಟಿಸುತ್ತಿದೆ- ಡಾ. H.T ಆಂಜನಪ್ಪ
ರಾಜ್ಯ

ಮಾಧ್ಯಮಗಳು ಕೋವಿಡ್ ಕುರಿತು ಅನಗತ್ಯ ಭಯ ಹುಟ್ಟಿಸುತ್ತಿದೆ- ಡಾ. H.T ಆಂಜನಪ್ಪ

ಕರೋನಾ ಸೋಂಕಿನ ಕುರಿತು ʼಪ್ರತಿಧ್ವನಿʼಯೊಂದಿಗೆ ವಿಶೇಷ ಸಂದರ್ಶನ ನೀಡಿದ ಹಿರಿಯ ವೈದ್ಯ ಡಾ. ಆಂಜನಪ್ಪ, ಕರೋನಾ ಸೋಂಕು ಮಾರಣಾಂತಿಕ ರೋಗವಲ್ಲ. ಈ ಸೋಂಕಿನ ಮರಣ ಪ್ರಮಾಣ ಬಹಳ ಕಡಿಮೆ ಇದೆ. ಮಾಧ್ಯಮಗಳು ಕರೋನಾ ಕುರಿತು ರಂಜನೀಯ ವರದಿ ಮಾಡಿ ಜನರನ್ನು ಭಯಕ್ಕೆ ತಳ್ಳುತ್ತಿದೆ ಎಂದಿದ್ದಾರೆ.

ಫೈಝ್

ಫೈಝ್

ಕರೋನಾ ಸೋಂಕಿನ ಕುರಿತು ಜನರಲ್ಲಿ ಟಿ.ವಿ ಮಾಧ್ಯಮಗಳು ವಿಪರೀತ ಭಯ ಹುಟ್ಟಿಸುತ್ತಿದೆ. ಕರೋನಾ ಸೋಂಕು ಮಾಧ್ಯಮಗಳು ಬಿಂಬಿಸುವಷ್ಟು ಭೀಕರವಾಗಿಲ್ಲ. ಮಾಧ್ಯಮಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಲು ಕರೋನಾ ಸೋಂಕಿನ ಬಗ್ಗೆ ವಿಜೃಂಭಿಸಿ ಸುದ್ದಿ ಮಾಡುತ್ತಿದೆ ಎಂದು ಹಿರಿಯ ವೈದ್ಯ ಡಾ. ಎಚ್‌ ಟಿ ಆಂಜನಪ್ಪ ಹೇಳಿದ್ದಾರೆ.

ಕರೋನಾ ಸೋಂಕಿನ ಕುರಿತು ʼಪ್ರತಿಧ್ವನಿʼಯೊಂದಿಗೆ ವಿಶೇಷ ಸಂದರ್ಶನ ನೀಡಿದ ಆಂಜನಪ್ಪ, ಕರೋನಾ ಸೋಂಕು ಮಾರಣಾಂತಿಕ ರೋಗವಲ್ಲ. ಈ ಸೋಂಕಿನ ಮರಣ ಪ್ರಮಾಣ ಬಹಳ ಕಡಿಮೆ ಇದೆ. ಈ ಸೋಂಕು ತಗುಲಿದ 90 ರಿಂದ 95 ಶೇಕಡಾ ರೋಗಿಗಳಲ್ಲಿ ರೋಗ ಲಕ್ಷಣವೇ ಇರುವುದಿಲ್ಲ. ಬೇರೆ ಬೇರೆ ರೋಗಗಳಿಂದ ಬಳಲುತ್ತಿರುವವರಿಗೆ ಇದು ತೊಂದರೆ ನೀಡುತ್ತದೆ, ಅದೂ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಮಾತ್ರ ಹೆಚ್ಚಿನ ಪರಿಣಾಮ ಬೀರುತ್ತದೆ, ಉಳಿದಂತೆ ಇದರ ಕುರಿತು ಭಯ ಬೇಡ, ಎಚ್ಚರಿಕೆ ಇದ್ದರೆ ಸಾಕು ಎಂದಿದ್ದಾರೆ.

1975 ರಲ್ಲಿ ನಾನು MBBS ಓದೋವಾಗ ಈ ಕರೋನಾ ಸೋಂಕಿನ ಕುರಿತು ಪಠ್ಯಗಳಿತ್ತು, ಇದೇನು ಹೊಸದಾಗಿ ಉದ್ಭವಿಸಿದ ವೈರಾಣುವಲ್ಲ, ಇಂತಹ ಹಲವಾರು ವೈರಸ್‌ಗಳೊಂದಿಗೆ ನಾವು ಬದುಕುತ್ತಿದ್ದೇವೆ. ಕರೋನಾ ಸೋಂಕಿನ ಬಗ್ಗೆ ಡೆಡ್ಲಿ ವೈರಸ್, ಮರಣ ಮೃದಂಗ ಎಂಬೆಲ್ಲಾ ವಿಶೇಷಣಾ ಬಳಸಿ ವರದಿ ಮಾಡುವುದು ಸರಿಯಲ್ಲ, ಇದು ಜನರನ್ನು ಭಯಕ್ಕೆ ತಳ್ಳುತ್ತದೆ, ಮಾಧ್ಯಮಗಳು ಸೈಂಟಿಫಿಕ್‌ ವಿಚಾರಗಳ ಕುರಿತು ವರದಿ ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಇದು ಚೈನಾ ಮಾಡುತ್ತಿರುವ ಬಯೋ ವಾರ್‌ ಎಂದು ಹೇಳುತ್ತಿದ್ದಾರೆ. ಹೀಗೆಲ್ಲಾ ಹೇಳಬಾರದು. ವೈರಸನ್ನು ಸೃಷ್ಟಿಸೋದಕ್ಕೆ ಸಾಧ್ಯ ಇಲ್ಲ. ಇವತ್ತು ನಮಗೆ ಅಗತ್ಯ ಇರೋದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಮಾಸ್ಕ್‌ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಕೈಗಳನ್ನು ಸ್ವಚ್ಛಗೊಳಿಸುತ್ತಿರಿ ಎಂದಿದ್ದಾರೆ.

ಕರೋನಾ ಸೋಂಕು ಈಗಾಗಲೇ ಸಮುದಾಯ ಪ್ರಸರಣವಾಗಿದೆ. ರ‌್ಯಾಂಡಮ್ ಪರೀಕ್ಷೆ ನಡೆಸಿದರೂ ಕರೋನಾ ಸೋಂಕು ಇರುವುದು ಪತ್ತೆಯಾಗುತ್ತಿದೆ. ಯಾರ ಸಂಪರ್ಕದಿಂದ ಸೋಂಕು ಹರಡಿದೆಯೆಂದು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ತಜ್ಙರ ಪ್ರಕಾರ ಭಾರತದ ಅರ್ಧದಷ್ಟು ಜನರಿಗೆ ಸೋಂಕು ತಗುಲಬಹುದು, ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಆತಂಕ ಪಡಬೇಕಿಲ್ಲ, ಹಾಗೆಂದು ನಿರ್ಲಕ್ಷ್ಯ ವಹಿಸಬಾರದು, ನಮ್ಮ ಎಚ್ಚರಿಕೆಯನ್ನು ನಾವು ವಹಿಸಬೇಕು, ಆದರೆ ಯಾವುದೇ ಕಾರಣಕ್ಕು ಆತಂಕ ಪಡಬೇಕಿಲ್ಲ ಎಂದಿದ್ದಾರೆ.

ಡಾ. ಆಂಜನಪ್ಪರೊಂದಿಗೆ ಪ್ರತಿಧ್ವನಿ ನಡೆಸಿರುವ ಸಂಪೂರ್ಣ ಸಂದರ್ಶನದ ವೀಡಿಯೋ ಇಲ್ಲಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com