ನಾವು ಲೆಕ್ಕ ಕೊಡ್ತೇವೆ.. ನೀವು ಲೆಕ್ಕ ಕೊಡ್ತೀರಾ..? 
B L ಸಂತೋಷ್‌ಗೆ ಸಿದ್ದರಾಮಯ್ಯ ಸವಾಲು
ರಾಜ್ಯ

ನಾವು ಲೆಕ್ಕ ಕೊಡ್ತೇವೆ.. ನೀವು ಲೆಕ್ಕ ಕೊಡ್ತೀರಾ..? B L ಸಂತೋಷ್‌ಗೆ ಸಿದ್ದರಾಮಯ್ಯ ಸವಾಲು

ಚೀನಾ ಸೈನಿಕರು ದೇಶದ ಗಡಿಯೊಳಗೆ ಒಳ ನುಸುಳಿಲ್ಲ ಎಂದು ಪ್ರಧಾನಿ ಹೇಳಿದ್ದರು. ಇದೀಗ ಚೀನಾ ಸೈನಿಕರು 2 ಕಿಲೋ ಮೀಟರ್‌ ಹಿಂದೆ ಸರಿದಿದ್ದಾರೆ ಎನ್ನಲಾಗ್ತಿದೆ. ಗಡಿಯೊಳಕ್ಕೆ ನುಸುಳಿಲ್ಲ ಎಂದಾದರೆ ಹಿಂದೆ ಸರಿದಿದ್ದು ಎಲ್ಲಿಂದ..? ಎನ್ನುವುದನ್ನೂ ತಿಳಿಸಲಿ

ಕೃಷ್ಣಮಣಿ

ಕೋವಿಡ್ ನಿಯಂತ್ರಣ ಮಾಡುವುದಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿರುವ ಹಣದಲ್ಲಿ ಕೋಟಿ ಕೋಟಿ ಹಣ ಲೂಟಿಯಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದರು. ಈ ಬಗ್ಗೆ ʼಪ್ರತಿಧ್ವನಿʼ ಮೌನವೇ ಉತ್ತರವೇ..? ಎಂದು ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿತ್ತು. ಆ ಬಳಿಕ ಸೋಮವಾರ ಬಿಜೆಪಿಯ ಜನ ಸಂವಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಸಿದ್ದರಾಮಯ್ಯ ಆರೋಪಕ್ಕೆ ಖಡಕ್‌ ಉತ್ತರ ಕೊಟ್ಟಿದ್ದರು.

ಭಾರತದಲ್ಲಿ ಕರೋನಾ ತಡೆದಿದ್ದು ಪ್ರಧಾನಿ ಮೋದಿ..!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಯಲ್ಲಿ ಹಮ್ಮಿಕೊಂಡಿದ್ದ ಜನ ಸಂವಾದ ಱಲಿಯಲ್ಲಿ ಮಾತನಾಡಿದ ಬಿ.ಎಲ್‌ ಸಂತೋಷ್‌, ಈ ಒಬ್ಬ ಮನುಷ್ಯ ಇಲ್ಲದಿದ್ದಿದ್ರೆ, ಭಾರತ ಕರೋನಾದಿಂದ ಈ ರೀತಿ ಬಚಾವಾಗುತ್ತಿರಲಿಲ್ಲ. ಇದನ್ನು ದೇಶದ ಹಲವು ಗಣ್ಯರು, ವಿವಿಧ ವಲಯಗಳ ತಜ್ಞರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕರೋನಾ ಸಂದರ್ಭದಲ್ಲಿ ಅಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಎನ್ನುವ ಮೂಲಕ ಪ್ರಧಾನಿ ಮೋದಿಗೆ ಶಹಬ್ಬಾರ್‌ಗಿರಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಪಕ್ಷ ನಾಯಕರ ಮೆಚ್ಚುಗೆ ಕಾರ್ಯ..!

ಮಹಾರಾಷ್ಟ್ರದಲ್ಲಿರುವ ಬಿಜೆಪಿಯೇತರ ಮೈತ್ರಿಕೂಟ ಸರ್ಕಾರದ ಬಗ್ಗೆ ಮಾತನಾಡಿರುವ ಬಿ.ಎಲ್‌ ಸಂತೋಷ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಹೊರಗೆ ಕಾಣ್ತಿಲ್ಲ, ಆದರೆ ವಿಪಕ್ಷ ನಾಯಕ ದೇವೇಂದ್ರ ಪಡ್ನಾವಿಸ್ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಭೆ ಮಾಡ್ತಿದ್ದಾರೆ. ನಮ್ಮ ರಾಜ್ಯದಲ್ಲೂ ವಿಪಕ್ಷ ಇದೆ, ನಾನು ಮುಖ್ಯಮಂತ್ರಿ ಆದ್ರೆ ಐದು ಸಾವಿರ ಹತ್ತು ಸಾವಿರ ಕೊಡುತ್ತಿದ್ದೆ ಎನ್ನುತ್ತಿದ್ದಾರೆ ಎನ್ನುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದರು. ಹಾಗಿದ್ರೆ ಸಿಎಂ ಆಗಿದ್ದಾಗ ಮಾಡಿದ್ದು ಏನು..? ಟಿಪ್ಪು ಜಯಂತಿ, ಶಾದಿ ಭಾಗ್ಯ ತಂದರು. ಮೊನ್ನೆ ಚೆಕ್ ಹಿಡ್ಕೊಂಡು ಓಡಾಡಿದ್ರು, ಆ ಚೆಕ್ ಹಣ ಜಮೆ ಆಗಿದ್ದು ಎಲ್ಲಿಗೆ ಎಂಬುದನ್ನು ನೋಡಿದ್ರಾ..? ಎಂದು ಪ್ರಶ್ನೆ ಮಾಡಿದ ಬಿ.ಎಲ್‌ ಸಂತೋಷ್‌, ಕೇಂದ್ರದಲ್ಲಿ ಸೋನಿಯಾ ಗಾಂಧಿಯೂ ಅಷ್ಟೇ ರಾಜ್ಯದಲ್ಲಿ ವಿಪಕ್ಷ ನಾಯಕರು ಅಷ್ಟೇ ಎಂದು ಸಿದ್ದರಾಮಯ್ಯಗೆ ಚಾಟಿ ಬೀಸಿದರು.

ಗ್ಯಾಸ್‌, ಕರೆಂಟ್‌ ಕಲ್ಪನೆ ತಂದಿದ್ದು ಮೋದಿ..!

ದೇಶದಲ್ಲಿ ಪ್ರತಿಯೊಬ್ಬರ ಮನೆಗೆ ಕರೆಂಟ್, ಗ್ಯಾಸ್ ಕಲ್ಪನೆ ತಂದವರು ಪ್ರಧಾನಿ ನರೇಂದ್ರ ಮೋದಿ ಎಂದ ಸಂತೋಷ್‌, ಬಲಿ ಚಕ್ರವರ್ತಿ ಬಳಿಕ ಅತಿ ಹೆಚ್ಚು ಭೂದಾನ ಮಾಡಿದವರು ಕಾಂಗ್ರೆಸ್ನವರು. ಯಾರಿಗೆ, ಚೀನಾಕ್ಕೆ ಭೂದಾನ ಮಾಡಿದ್ರು..? ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ, ವ್ಯಕ್ತಿ ವಿದೇಶಿ, ಪಕ್ಷ ವಿದೇಶಿ, ಅರ್ಧ ಜನ ವಿದೇಶಿ ಅಂಥವರು ಮಾತ್ರ ಸಾವರ್ಕರ್ ಯಾರು ಎಂದು ಕೇಳ್ತಾರೆ. ಮುಂದೊಂದು ದಿನ ಕಾಂಗ್ರೆಸ್ ಕಸದ ಬುಟ್ಟಿಗೆ ಸೇರತ್ತೆ ಎಂದು ನೇರವಾಗಿ ವಾಗ್ದಾಳಿ ಮಾಡಿದ್ದರು. ಇನ್ನೂ ಪ್ರಧಾನಿ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಫೋಟೋ ತೆಗೆಸಿಕೊಂಡಿದ್ದ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದ ಸಂತೋಷ್‌, ನಾವು ಏನು ಎನ್ನುವುದನ್ನು ಗಡಿಯಲ್ಲಿ ತೋರಿಸಿದ್ದೇವೆ ಎಂದಿದ್ದರು.

ಸಂತೋಷ್‌ ಭಾಷಣಕ್ಕೆ ಸಿದ್ದರಾಮಯ್ಯ ಅಸಂತೋಷ..!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಾಷಣದ ಬಗ್ಗೆ ವಿವರವಾಗಿ ಮಾಧ್ಯಮಗಳಲ್ಲಿ ನೋಡಿದ ಬಳಿಕ ಕೆಂಡಾಮಂಡಲರಾಗಿರುವ ಸಿದ್ದರಾಮಯ್ಯ, ಟ್ವಿಟರ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಚೀನಾ ಸೇನೆ ಎರಡು ಕಿಲೋ ಮೀಟರ್‌ ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್‌ ಸಂತೋಷ್‌ ಅವರೇನು ರಕ್ಷಣಾ ಸಚಿವರೇ..? ಇಲ್ಲವೇ ಸೇನಾ ಮುಖ್ಯಸ್ಥರೇ..? ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿ ಮೋದಿ ಅವರಿಂದ ಹೇಳಿಕೆ ಕೊಡಿಸಿ ಎಂದು ಕಿಡಿಕಾರಿದ್ದಾರೆ.

ಚೀನಾ ಸೈನಿಕರು ದೇಶದ ಗಡಿಯೊಳಗೆ ಒಳ ನುಸುಳಿಲ್ಲ ಎಂದು ಪ್ರಧಾನಿ ಹೇಳಿದ್ದರು. ಇದೀಗ ಚೀನಾ ಸೈನಿಕರು 2 ಕಿಲೋ ಮೀಟರ್‌ ಹಿಂದೆ ಸರಿದಿದ್ದಾರೆ ಎನ್ನಲಾಗ್ತಿದೆ. ಗಡಿಯೊಳಕ್ಕೆ ನುಸುಳಿಲ್ಲ ಎಂದಾದರೆ ಹಿಂದೆ ಸರಿದಿದ್ದು ಎಲ್ಲಿಂದ..? ಎನ್ನುವುದನ್ನೂ ತಿಳಿಸಲಿ ಎಂದು ಕಿಚಾಯಿಸಿದ್ದಾರೆ. ಇನ್ನೂ ಮಹಾರಾಷ್ಟ್ರ ವಿಪಕ್ಷ ನಾಯಕ ಕೆಲಸ ಮಾಡ್ತಿದ್ದಾರೆ, ಸಿದ್ದರಾಮಯ್ಯ ಮಾಡುತ್ತಿಲ್ಲ ಎಂದಿರುವ ಮಾತಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ನನ್ನ ಕಚೇರಿಗೆ ಬಂದರೆ ಸಂಪೂರ್ಣ ವಿವರವಿದೆ. ಎಲ್ಲವನ್ನೂ ತೋರಿಸಲು ಸಿದ್ಧವಿದ್ದೇನೆ ಬನ್ನಿ ಎಂದು ಸ್ವಾಗತ ಮಾಡಿದ್ದಾರೆ.

ನಾವು ಲೆಕ್ಕ ಹೇಳ್ತೀವಿ..! ನೀವೂ ಹೇಳ್ತೀರಾ..?

KSRTC ಬಸ್‌ನಲ್ಲಿ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ರಾಜ್ಯ ಸರ್ಕಾರ ಟಿಕೆಟ್‌ ಫಿಕ್ಸ್‌ ಮಾಡಿತ್ತು. ಆ ವೇಳೆ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ನಾನು ಭಿಕ್ಷೆ ಬೇಡಿಯಾದರೂ ಕೊಡ್ತೇನೆ ಎಂದಿದ್ದರು. ಆ ಬಳಿಕ 1 ಕೋಟಿ ರೂಪಾಯಿ ಚೆಕ್‌ ಬರೆದು ಕೆಎಸ್‌ಆರ್‌ಟಿಸಿ ಎಂಡಿಗೆ ಕೊಡಲು ಮುಂದಾಗಿದ್ದರು. ಅಷ್ಟರೊಳಗೆ ಎಚ್ಚೆತ್ತುಕೊಂಡ ಸರ್ಕಾರ ತಾನೇ ಉಚಿತವಾಗಿ ಕರೆದುಕೊಂಡು ಹೋಗಲು ಮುಂದಾಯಿತು. ಇದೀಗ ಆ ಚೆಕ್‌ ಏನಾಯಿತು..? ಯಾರ ಅಕೌಂಟ್‌ಗೆ ಜಮೆಯಾಯ್ತು ಎಂದು ಸಂತೋಷ್‌ ಪ್ರಶ್ನೆ ಎತ್ತಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಸಿದ್ದರಾಮಯ್ಯ, ನಾವು 1 ಕೋಟಿ ರೂಪಾಯಿ ಲೆಕ್ಕವನ್ನು ಕೊಡ್ತೇವೆ. ದೇಶದ ನಾಗರಿಕ ತನ್ನ ಸಂಪಾದನೆಯಲ್ಲಿ ಪಿಎಂ ಕೇರ್ಸ್‌ಗೆ ಕೊಟ್ಟಿರುವ ಹಣದ ಲೆಕ್ಕ ಕೊಡ್ತೀರಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಮುಂದುವರಿದು, ಮಾನ್ಯ ಸಂತೋಷ್‌ ಅವರೇ, ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ನೀವು ನೀಡಿರುವ ಶಹಬ್ಬಾಸ್‌ಗಿರಿ ಮನಸ್ಸಿನಿಂದ ಬಂದದ್ದೋ ಅಥವಾ ನಾಲಿಗೆಯಿಂದ ಬಂದಿದ್ದೋ..? ಎಂದು ಬಿಜೆಪಿ ಒಳಗಿನ ರಾಜಕೀಯವನ್ನು ಸಿದ್ದರಾಮಯ್ಯ ಕೆಣಕಿದ್ದಾರೆ. ಜೊತೆಗೆ ನೀವು ಆಗಾಗ ಕರ್ನಾಟಕಕ್ಕೆ ಬಂದು ಬಿ.ಎಸ್‌ ಯಡಿಯೂರಪ್ಪ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಬ್ಬಾಸ್‌ಗಿರಿ ಕೊಡಬಹುದೇನೋ..? ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯ ಜಟಾಪಟಿ ನಿಲ್ಲಲಿ, ಭ್ರಷ್ಟಾಚಾರ ಬಯಲಾಗಲಿ..!

ಕಾಂಗ್ರೆಸ್‌, ಬಿಜೆಪಿ ನಡುವಿನ ರಾಜಕೀಯ ಜಟಾಪಟಿ ಏನಾದರೂ ರಾಜ್ಯದ ಜನತೆಗೆ ಆಗಬೇಕಿರುವುದು ಏನಿಲ್ಲ. ಆದರೆ ಕರೋನಾ ನಿಯಂತ್ರಣ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಮಾಡಿರುವ ವೆಚ್ಚದಲ್ಲಿ ಭ್ರಷ್ಟಾಚಾರ ನಡೆದಿದೋ..? ಇಲ್ಲವೋ..? ಎನ್ನುವುದನ್ನು ಜನರ ಮುಂದಿಡಬೇಕಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪ ಸತ್ಯವೋ..? ಸುಳ್ಳೋ ಎನ್ನುವುದನ್ನು ಸರ್ಕಾರ ದಾಖಲೆ ಸಮೇತ ಬಿಡುಗಡೆ ಮಾಡಿದರೆ ಎಲ್ಲವೂ ಬಗೆಹರಿಯಲಿದೆ. ಹಾಗಿದ್ದ ಮೇಲೆ ಸುಖಾಸುಮ್ಮನೆ ರಾಜಕೀಯವಾಗಿ ವಾಗ್ದಾಳಿ ನಡೆಸುವ ಉದ್ದೇಶವೇನು..? ಏನಾದರೂ ಮುಚ್ಚಿಡಲು ಯತ್ನ ಮಾಡ್ತಿದ್ದಾರಾ ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com