ಮಳೆ ಸೂಚನೆ ನೀಡುವ ಚಾತಕ ಪಕ್ಷಿ..!
SUNIL'S
ರಾಜ್ಯ

ಮಳೆ ಸೂಚನೆ ನೀಡುವ ಚಾತಕ ಪಕ್ಷಿ..!

ಚಾತಕ ಪಕ್ಷಿಯಂತೆ ಕಾಯುತ್ತಾರೆ ಎಂಬ ವಾಕ್ಯವನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಈ ಚಾತಕ ಪಕ್ಷಿಗಳ ಕೂಗು ಕೇಳಿದ ಮೇಲೆ ಬಿತ್ತನೆಗೆ ಮುಂದಾಗುವ ರೈತರನ್ನು ಉತ್ತರ ಕರ್ನಾಟಕದ ಬಹತೇಕ ಭಾಗಗಳಲ್ಲಿ ಕಾಣಬಹುದು. ಅದರ ಬಗ್ಗೆ ಒಂದು ಚಾತಕ ಪಕ್ಷಿ ನೋಟ..

ಕೆ. ಶ್ರೀಕಾಂತ್

ಚಾತಕ ಪಕ್ಷಿಯಂತೆ ಕಾಯುತ್ತಾರೆ ಎಂಬ ವಾಕ್ಯವನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಈ ಚಾತಕ ಪಕ್ಷಿಗಳ ಕೂಗು ಕೇಳಿದ ಮೇಲೆ ಬಿತ್ತನೆಗೆ ಮುಂದಾಗುವ ರೈತರನ್ನು ಉತ್ತರ ಕರ್ನಾಟಕದ ಬಹತೇಕ ಭಾಗಗಳಲ್ಲಿ ಕಾಣಬಹುದು. ಅದರ ಬಗ್ಗೆ ಒಂದು ಚಾತಕ ಪಕ್ಷಿ ನೋಟ.....

ಕರ್ನಾಟಕದ ಮುಂಗಾರಿಗೂ ಚಾತಕ ಪಕ್ಷಿಗೂ ಅವಿನಾಭಾವ ಸಂಬಂಧವಿದೆ. ಮುಂಗಾರ ಮಳೆಯ ಮೋಡ ಬರುವ ಸುಮಾರು ಒಂದು ವಾರದ ಮುಂಚೆ ಉತ್ತರ ಕರ್ನಾಟಕದ ಬಹು ಭಾಗಗಳಲ್ಲಿ ಕಾಣಿಸುವ ಈ ಹಕ್ಕಿ ಮುಂಚಿತವಾಗಿ ಮಳೆ ಆಗಮನವನ್ನು ಸೂಚಿಸುತ್ತದೆ. ಅದರಲ್ಲೂ ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡಲು ಆರಂಭಿಸಿದರೆ ಮಳೆ ಸುರಿದು ರೈತನ ದಾಹ ನೀಗಿಸುವ ಭರವಸೆಯನ್ನು ನೀಡುತ್ತವೆ ಎನ್ನುವ ಪ್ರತೀತಿ ಇದೆ.

ಈ ಚಾತಕ ಪಕ್ಷಿಯನ್ನು ಜುಟ್ಟು ಕೋಗಿಲೆ ಎಂದೂ ಕರೆಯಲಾಗುತ್ತದೆ. ಇವುಗಳು ವಲಸಿಗ ಹಕ್ಕಿಗಳು ಮತ್ತು ಹೆಚ್ಚಾಗಿ ಏಷ್ಯಾ ಹಾಗೂ ಆಫ್ರಿಕಾ ಖಂಡದಲ್ಲಿ ಕಾಣಸಿಗುತ್ತವೆ. ಇವು ಸದಾ ಮಳೆಯೊಂದಿಗೆ ಸಂಚಾರ ಮಾಡುತ್ತಿರುತ್ತವೆ. ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಆ ದಿಕ್ಕಿನತ್ತ ವಲಸೆ ಹೋಗುತ್ತವೆ. ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸುತ್ತಿ ಮೇ ಮತ್ತು ಜೂನ್ ತಿಂಗಳಿನ ಆರಂಭಕ್ಕೆ ಭಾರತಕ್ಕೆ ಆಗಮಿಸುತ್ತವೆ. ಮುಂಗಾರಿನ ಗಾಳಿಯಲ್ಲಿ ಅದೇ ದಿಕ್ಕಿನಲ್ಲಿ ಕ್ರಮಿಸಿ ಕರ್ನಾಟಕದ ವಿವಿಧೆಡೆ ಬಂದಿಳಿಯುತ್ತವೆ. ಈ ಪಕ್ಷಿಗಳು ಜೂನ್ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯಲು ಸಹಕರಿಸುವುದರಿಂದ ಇವುಗಳನ್ನು ’ಮಾರುತಗಳ ಮುಂಗಾಮಿ’ಎಂದೂ ಕರೆಯುತ್ತಾರೆ.

ಮಹಾಕವಿ ಕಾಳಿದಾಸ ತನ್ನ ಮೇಘದೂತ ಕಾವ್ಯದಲ್ಲಿ ವರ್ಣಿಸಿರುವಂತೆ ಚಾತಕ ಪಕ್ಷಿ ಮಳೆ ನೀರು ಕುಡಿದು ಮಾತ್ರ ಬದುಕುವಂತಹ ವಿಶಿಷ್ಟ ಹಕ್ಕಿ. ಮಳೆಗಾಲದಲ್ಲಿ ತನ್ನ ತಲೆ ಮೇಲಿರುವ ಕೊಕ್ಕೆ ತರಹದ ಪ್ರದೇಶದಿಂದ ಮಳೆ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ. ನೀರಡಿಕೆಯಾದಾಗ ವರುಣ ದೇವನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತವೆ. ಆದ್ದರಿಂದ ರೈತರು ಮುಂಗಾರು ಬಿತ್ತನೆ ಮಾಡಿದ ಮೇಲೆ ಚಾತಕ ಪಕ್ಷಿಯ ಹಾರಾಟಕ್ಕೆ ಕಾಯುತ್ತಾರೆ.

ಸಂತೋಷ ಕೆ, ಪರಿಸರವಾದಿಗಳು ರೋಣ ಇವರ ಪ್ರಕಾರ, “ಇಂದಿಗೂ ಹಲವಾರು ರೈತ ಕುಟುಂಬಗಳ ಚಾತಕ ಪಕ್ಷಿಯ ಕೂಗಿನ ನಂತರವೇ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ. ಮೊದಲಿನ ಜನರಿಗೆ ಹವಾಮಾನ ಇಲಾಖೆ ಹಾಗೂ ಗೂಗಲ್ ನ್ಯೂಸ್ ಹಾಗೂ ಇತರೆ ಮಾಧ್ಯಮಗಳಿರಲಿಲ್ಲ. ಆ ಸಮಯದಲ್ಲಿ ಈ ಚಾತಕ ಪಕ್ಷಿಗಳೇ ಅವರಿಗೆ ಮಳೆ ಬರುತ್ತದೆ ಎಂಬ ಸಂವಹನ ಮಾಡುವ ಮಾಧ್ಯಮಗಳಾಗಿದ್ದವು”.

ಜೀವ ವೈವಿಧ್ಯ ತಜ್ಞ ಮಂಜುನಾಥ ನಾಯಕ ಅವರ ಪ್ರಕಾರ, “ಚಾತಕ ಪಕ್ಷಿಯ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲ ಮೂಲಗಳ ಪ್ರಕಾರ, ವಾತಾವರಣದ ತೇವಾಂಶದಲ್ಲಿ ಬದಲಾದಾಗ ಸೂಕ್ಷ್ಮ ಜೀವಿಗಳು ಹಾಗೂ ಇರುವೆಗಳು ಭೂಮಿಯಿಂದ ಹೊರಬರುತ್ತವೆ. ಇಂತಹ ಜೀವಿಗಳೇ ಚಾತಕ ಪಕ್ಷಿಗಳಿಗೆ ಆಹಾರ, ಅದಕ್ಕೆ ಇವುಗಳನ್ನು ಮಳೆ ಸೂಚಕ ಎಂದು ನಮ್ಮ ಹಿರಿಯರು ಗುರುತಿಸಿದ್ದರು. ಇದರ ಇನ್ನೊಂದು ವಿಶೇಷತೆ ಏನೆಂದರೆ, ಇವು ಹೊಂಡ ಹಾಗೂ ಇನ್ನಿತರ ನೀರಿನ ಮೂಲದಿಂದ ನೀರನ್ನು ಕುಡಿಯುವುದಿಲ್ಲ. ತಿಂಗಳುಗಟ್ಟಲೇ ಮಳೆಗಾಗಿ ಕಾದು ಮಳೆಯ ನೀರನ್ನು ಜುಟ್ಟಿನ ಮೂಲಕ ಕುಡಿಯುತ್ತವೆ. ಅದಕ್ಕೆ ʼಚಾತಕ ಪಕ್ಷಿಯಂತೆ ಕಾಯುತ್ತʼ ಎಂಬ ವಾಕ್ಯವನ್ನು ನಾವೆಲ್ಲ ಕೇಳುತ್ತಿರುತ್ತೇವೆ".

Click here to follow us on Facebook , Twitter, YouTube, Telegram

Pratidhvani
www.pratidhvani.com