ಮನೆಯೇ ಪಾಠಶಾಲೆ, ಪೋಷಕರೇ ಶಿಕ್ಷಕರು.. ಇದೊಂದೇ ಮಾರ್ಗ..!
ರಾಜ್ಯ

ಮನೆಯೇ ಪಾಠಶಾಲೆ, ಪೋಷಕರೇ ಶಿಕ್ಷಕರು.. ಇದೊಂದೇ ಮಾರ್ಗ..!

ಮೊದಲನೆಯದು ಆನ್ಲೈನ್ ಮೂಲಕ ತರಗತಿಗಳನ್ನು ಶುರು ಮಾಡುವ ಬಗ್ಗೆಯೂ ಚಿಂತನೆ ಇದೆ. ಇನ್ನೂ ಎರಡನೆಯದಾಗಿ ಒಂದು ದಿನ ಶಾಲೆಯಲ್ಲೇ ತರಗತಿ ಹಾಗೂ ಮತ್ತೊಂದು ದಿನ ಮನೆಯಲ್ಲೇ ದೂರದರ್ಶನದ ಮೂಲಕ ತರಗತಿ ಕೊಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಈ ಆಯ್ಕೆಗಳಲ್ಲಿ ಯಾವುದು ಸೂಕ್ತ ಎನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಿನ ವಾರ ಅಂತಿಮ ನಿರ್ಧಾರ ಪ್ರಕಟ ಮಾಡಲಿದ್ದಾರೆ.

ಕೃಷ್ಣಮಣಿ

ಕರೋನಾ ಸಂಕಷ್ಟಕ್ಕೆ ಸಿಲುಕಿರುವ ಇಡೀ ವಿಶ್ವ ತಲ್ಲಣಿಸುತ್ತಿದೆ. ಸದ್ಯಕ್ಕೆ ಯಾವುದೇ ಸವಾಲು ಎದುರಿಸಲು ಎಲ್ಲಾ ದೇಶಗಳು ಸಜ್ಜಾಗುತ್ತಿವೆ. ದೇಶದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರವೂ ಶಾಲಾ ಕಾಲೇಜುಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಗಸ್ಟ್ ತಿಂಗಳಿನಿಂದ ಶಾಲೆಗಳನ್ನು ಆರಂಭ ಮಾಡಬಹುದಾ..? ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು..? ಒಂದೊಮ್ಮೆ ಶಾಲೆಗಳನ್ನು ಆರಂಭ ಮಾಡಿದರೆ ಅದರಿಂದ ಆಗುವ ಅನಾಹುತಗಳು ಯಾವುವು..? ಎನ್ನುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಮಗ್ರವಾಗಿ ಶಿಕ್ಷಣ ತಜ್ಞರ ಜೊತೆಗೆ ಸಭೆ ನಡೆಸುತ್ತಲೇ ಇದ್ದಾರೆ. ಅಂತಿಮವಾಗಿ ಆಗಸ್ಟ್‌ನಿಂದ ಶಾಲಾ ಕಾಲೇಜು ಆರಂಭ ಮಾಡುವ ಬಗ್ಗೆ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಮಾಡಿಕೊಳ್ಳುತ್ತಿವೆ.

ಶಾಲೆ ಆರಂಭಕ್ಕೆ ಸರ್ಕಾರದ ಮುಂದಿರುವ ಆಯ್ಕೆಗಳೇನು..?

ಕರ್ನಾಟಕದಲ್ಲಿ ಶಾಲಾ ಕಾಲೇಜು ಆರಂಭಕ್ಕೆ ತಯಾರಿ ನಡೆದಿದ್ದು, ಆಗಸ್ಟ್ 01 ರಿಂದ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಸರ್ಕಾರದ ಮುಂದೆ ಮೂರು ಆಯ್ಕೆಗಳಿದ್ದು, ಯಾವುದನ್ನೂ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಲಾಗ್ತಿದೆ. ಮೊದಲನೆಯದು ಆನ್ಲೈನ್ ಮೂಲಕ ತರಗತಿಗಳನ್ನು ಶುರು ಮಾಡುವ ಬಗ್ಗೆಯೂ ಚಿಂತನೆ ಇದೆ. ಇನ್ನೂ ಎರಡನೆಯದಾಗಿ ಒಂದು ದಿನ ಶಾಲೆಯಲ್ಲೇ ತರಗತಿ ಹಾಗೂ ಮತ್ತೊಂದು ದಿನ ಮನೆಯಲ್ಲೇ ದೂರದರ್ಶನದ ಮೂಲಕ ತರಗತಿ ಕೊಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಈ ಆಯ್ಕೆಗಳಲ್ಲಿ ಯಾವುದು ಸೂಕ್ತ ಎನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಿನ ವಾರ ಅಂತಿಮ ನಿರ್ಧಾರ ಪ್ರಕಟ ಮಾಡಲಿದ್ದಾರೆ.

‘ಸಣ್ಣ ಮಕ್ಕಳಿಗೆ ಈ ವರ್ಷ ಪಾಠಶಾಲೆ ಬೇಕಿಲ್ಲ’..!

ಸರ್ಕಾರಿ ಶಾಲೆಗಳಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳನ್ನ ಒಂದನೇ ತರಗತಿಗೆ ಸೇರಿಕೊಳ್ಳುವುದು ವಾಡಿಕೆ. ಆದರೆ ಆಂಗ್ಲ ಮಾಧ್ಯಮದ ಪ್ರಭಾವ ಹೆಚ್ಚಾಗುತ್ತಿದ್ದಂತೆ 3 ವರ್ಷಕ್ಕೆಲ್ಲಾ ಪ್ರೀ ಕೆಜಿ. ನಂತರ ಎಲ್ ಕೆಜಿ, ಯುಕೆಜಿ ತರಗತಿ ನಡೆಸಲಾಗುತ್ತದೆ. ಇದೀಗ ಕರೋನಾ ಸೋಂಕು ತನ್ನ ಆರ್ಭಟ ಶುರು ಮಾಡಿರುವ ಕಾರಣಕ್ಕೆ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಮಕ್ಕಳಿಗೆ 2002-21ನೇ ಶೈಕ್ಷಣಿಕ ವರ್ಷವನ್ನು ರದ್ದು ಮಾಡುವಂತೆ ಪೋಷಕರು ಒತ್ತಡ ಹೇರುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸಣ್ಣ ಮಕ್ಕಳ ಮೇಲೆ ಕರೋನಾ ಸೋಂಕು ಆವರಿಸಿದೆ ಅದರಿಂದ ಆಗುವ ಅನಾಹುತ ಹೆಚ್ಚಾಗಿರುತ್ತದೆ. ಹಾಗಾಗಿ ಈ ವರ್ಷ ಸಣ್ಣ ಮಕ್ಕಳನ್ನು ಶಾಲೆಗೆ ಕಳಹಿಸದೆ ಇರುವುದೇ ಸೂಕ್ತ ಎನ್ನುವ ಲೆಕ್ಕಾಚಾರ ಪೋಷಕರ ಆಯ್ಕೆಯಾಗಿದೆ. ಯಾವುದೇ ನಿರ್ಧಾರಕ್ಕೂ ಮೊದಲು ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದ ಬಗ್ಗೆ ಯಾವ ರೀತಿಯ ಮಾರ್ಗಸೂಚಿ ಹೊರಡಿಸುತ್ತದೆ ಎನ್ನುವುದನ್ನು ನೋಡಲು ರಾಜ್ಯ ಸರ್ಕಾರ ಕಾಯುತ್ತಿದೆ ಎನ್ನಲಾಗಿದೆ..

ಶಾಲೆ ಆರಂಭದ ಬಗ್ಗೆ ವೈದ್ಯಲೋಕ ಹೇಳೋದೇನು..?

ಶಾಲೆಗಳ ಆರಂಭ ಮಾಡುವ ಸರ್ಕಾರದ ಚಿಂತನೆಗೆ ವೈದ್ಯಲೋಕ ಆತಂಕ ವ್ಯಕ್ತಪಡಿಸಿದೆ. ತರಾತುರಿಯಲ್ಲಿ ಶಾಲೆ ಆರಂಭದ ನಿರ್ಧಾರ ಬೇಡ ಎಂದು ಸಲಹೆ ನೀಡಿದೆ. ಕರೋನಾ ವೈರಸ್ ನಿಯಂತ್ರಣ ಆಗುವ ತನಕ ಕಾಯಲು ಸಲಹೆ ನೀಡಲಾಗಿದ್ದು, ಮಕ್ಕಳು ಸಾಮಾಜಿಕ ಅಂತರ ಪಾಲನೆ ಮಾಡಲ್ಲ. ಶಾಲೆಯಲ್ಲಿ ಇವರ ನಿಯಂತ್ರಣ ದೊಡ್ಡ ಸವಾಲು ಆಗಿರುತ್ತದೆ. ಮಕ್ಕಳು ಮಾತ್ರವಲ್ಲ ಶಿಕ್ಷಕರ ಸುರಕ್ಷತೆಗೂ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಸಣ್ಣ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಿದರೂ ರೋಗ ನಿಯಂತ್ರಣ ಕಷ್ಟ ಎಂಬ ಎಚ್ಚರಿಕೆ ನೀಡಲಾಗಿದೆ.

ಪೋಷಕರು ಹಾಗೂ ಸರ್ಕಾರ ಏನು ಮಾಡಬಹುದು..?

ಕರೋನಾ ಸೋಂಕಿನ ನಡುವೆ ಮಕ್ಕಳನ್ನು ಓದಿಸಿ ದೊಡ್ಡ ಅಧಿಕಾರಿಯನ್ನಾಗಿ ಮಾಡುವ ಕನಸು ಯಾವುದೇ ಪೋಷಕರಲ್ಲಿಯೂ ಇರುವುದಿಲ್ಲ. ಮೊದಲು ಸೋಂಕು ನಿಯಂತ್ರಣವಾಗಿ ಮಕ್ಕಳು ಯಾವುದೇ ಭಯವಿಲ್ಲದೆ ಶಾಲೆಗಳಿಗೆ ಓದಿ ಓದಬಹುದು ಎನ್ನುವುದು ಖಾತರಿ ಆಗದೆ ಮಕ್ಕಳನ್ನು ಗುಂಪಾಗಿ ಇರುವ ಶಾಲೆಗಳಿಗೆ ಕಳುಹಿಸಲು ಸಾಧ್ಯವೇ ಇಲ್ಲ. ಹಾಗಾಗಿ ಮಕ್ಕಳನ್ನು ಈ ಬಾರಿ ಮನೆಯಲ್ಲೇ ಓದಿಸುವ ಸಂಕಲ್ಪ ಮಾಡಬಹುದು. ಸರ್ಕಾರಗಳೂ ಒಂದು ಟಿವಿ ಮಾಧ್ಯಮದ ಮೂಲಕ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ರೂಪಿಸಬಹುದು. ತಿಂಗಳಿಗೊಮ್ಮೆ ಆನ್ಲೈನ್ನಲ್ಲೇ ಪರೀಕ್ಷೆಗಳನ್ನೂ ಮಾಡಬಹುದು. ಹಳ್ಳಿಗಾಡಿನಲ್ಲಿ ಆನ್ಲೈನ್ ಪರೀಕ್ಷೆ ಸಾಧ್ಯವಿಲ್ಲ ಎಂದರೆ ಸರ್ಕಾರಿ ಶಾಲಾ ಶಿಕ್ಷಕರನ್ನೇ ಬಳಸಿಕೊಂಡು ಸಾಮಾಜಿಕ ಅಂತರದಲ್ಲಿ ಮಕ್ಕಳಿಗೆ ಪರೀಕ್ಷೆ ಎದುರಿಸುವಂತೆ ಮಾಡಬಹುದು. ಈ ಶೈಕ್ಷಣಿಕ ವರ್ಷಕ್ಕೆ ಅಗತ್ಯವಿರುವ ಪಠ್ಯವನ್ನೂ ಆದಷ್ಟೂ ಬೇಗ ರೂಪಿಸಿ ಮಕ್ಕಳಿಗೆ ಹಂಚಿಕೆ ಮಾಡಬೇಕು. ಒಂದು ವರ್ಷದ ಅವಧಿ ವ್ಯರ್ಥ ಮಾಡುವ ಬದಲು ಗುಣಮಟ್ಟದ ಶಿಕ್ಷಣ ಹಾಗೂ ಕಡಿಮೆ ಪಠ್ಯದ ಮೂಲಕ ಈ ವರ್ಷದ ಪಠ್ಯವನ್ನೂ ರೂಪಿಸಬೇಕಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಕರೋನಾ ನಿಯಂತ್ರಣಕ್ಕೆ ಬರುವ ವಿಶ್ವಾಸವಿದ್ದು, ಶಾಲೆಗಳನ್ನು ಆರಂಭ ಮಾಡಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ಬದಲಿ ಮಾರ್ಗದ ಬಗ್ಗೆ ಆಲೋಚನೆ ಮಾಡುವುದೇ ಒಳಿತು. ಮನೆಯೇ ಪಾಠಶಾಲೆ, ಪೋಷಕರೇ ಶಿಕ್ಷಕರು ಎಂಬ ಧ್ಯೇಯವಾಕ್ಯವನ್ನು ಸರ್ಕಾರವೇ ಘೋಷಣೆ ಮಾಡಬೇಕಿದೆ.

Click here Support Free Press and Independent Journalism

Pratidhvani
www.pratidhvani.com