ಸಿಎಂ ಜಿಲ್ಲೆಯಲ್ಲಿ ಕರೋನಾ ಅವಾಂತರ: ಉನ್ನತ ಪೊಲೀಸ್ ಅಧಿಕಾರಿಗಳೇ ಕ್ವಾರಂಟೈನ್!
ರಾಜ್ಯ

ಸಿಎಂ ಜಿಲ್ಲೆಯಲ್ಲಿ ಕರೋನಾ ಅವಾಂತರ: ಉನ್ನತ ಪೊಲೀಸ್ ಅಧಿಕಾರಿಗಳೇ ಕ್ವಾರಂಟೈನ್!

ಸಿಎಂ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕರೋನಾ ಪ್ರಕರಣಗಳ ದಿಢೀರ್ ಏರಿಕೆ ಆತಂಕ ಹುಟ್ಟಿಸಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೇರ ಸಂಪರ್ಕ ಹೊಂದಿದ್ದ ಜಿಲ್ಲಾ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳೇ ಈಗ ಕ್ವಾರಂಟೈನ್ ಗೆ ಒಳಗಾಗಿದ್ಧಾರೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕೇವಲ ಹತ್ತು ದಿನಗಳ ಹಿಂದಿನವರೆಗೆ ಒಂದೂ ಕರೋನಾ ಪ್ರಕರಣವಿಲ್ಲದೆ ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಇದೀಗ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಮಂಗಳವಾರದ ಆಘಾತಕಾರಿ ಬೆಳವಣಿಗೆಯಲ್ಲಿ ಕರೋನಾ ವಾರಿಯರ್ಸ್ ಆಗಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯ ಉನ್ನತಾಧಿಕಾರಿಗಳೇ ಹಲವರು ಈಗ ಕ್ವಾರಂಟೈನ್ ಗೆ ಒಳಗಾಗಿದ್ದಾರೆ!

ಪ್ರಮುಖವಾಗಿ ಅತ್ಯಾಚಾರ ಸಂತ್ರಸ್ತೆ ಅಪ್ರಾಪ್ತೆಯೊಬ್ಬರಿಗೆ ಕೋವಿಡ್-19 ಇರುವುದು ದೃಢಪಟ್ಟ ಬೆನ್ನಲ್ಲೇ ಪೊಲೀಸ್ ಪ್ರಕರಣದಲ್ಲಿ ದೂರು ದಾಖಲು, ವೈದ್ಯಕೀಯ ಪರೀಕ್ಷೆ, ಕೌನ್ಸಲಿಂಗ್ ಮತ್ತಿತರ ಕಾರ್ಯದಲ್ಲಿ ಆಕೆಯ ಸಂಪರ್ಕಕ್ಕೆ ಬಂದಿದ್ದ ಉನ್ನತ ಪೊಲೀಸ್ ಅಧಿಕಾರಿಗಳನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಪರೀಕ್ಷೆಗೊಳಪಡಿಸಿದಾಗ ಆಕೆಗೆ ಕರೋನಾ ದೃಢಪಟ್ಟಿದೆ. ಆದರೆ, ಅದಕ್ಕೂ ಮುನ್ನ ಆಕೆ ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇದ್ದಳು. ಅಲ್ಲದೆ ಆಕೆಗೆ ಕಾನೂನು ನೆರವು ನೀಡುವ ಸಖಿ ಕೇಂದ್ರದ ವಕೀಲರು ಮತ್ತು ಸಿಬ್ಬಂದಿಯೊಂದಿಗೂ ಆಕೆ ಪ್ರಾಥಮಿಕ ಸಂಪರ್ಕ ಹೊಂದಿದ್ದಳು. ಹಾಗೆಯೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಕೆಯ ತಪಾಸಣೆ ನಡೆಸಿದ ವೈದ್ಯಕೀಯ ಸಿಬ್ಬಂದಿ ಕೂಡ ನೇರ ಸಂಪರ್ಕಕ್ಕೆ ಬಂದಿದ್ದರು.

ಈ ನಡುವೆ, ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಡಿವೈಎಸ್ಪಿ, ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳನ್ನು ಕೂಡ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾಗಾಗಿ ಜಿಲ್ಲೆಗೆ ಬುಧವಾರದ ಹೊತ್ತಿಗೆ ಇಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ ಪೆಕ್ಟರುಗಳು ಹೊಸದಾಗಿ ಬರಲಿದ್ದು, ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಇಡೀ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಜಿಲ್ಲಾಡಳಿತ ಮತ್ತು ವೈದ್ಯಕೀಯ ಸಿಬ್ಬಂದಿ ಎಡವಿರುವುದೇ ಈ ಯಡವಟ್ಟಿಗೆ ಕಾರಣ. ಈಗಲೂ ಕೂಡ ಆಕೆಯ ಸಂಪರ್ಕಕ್ಕೆ ಬಂದಿದ್ದ ಸಖಿ ಕೇಂದ್ರದ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುವಲ್ಲಿ ಕೂಡ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ನಡುವೆ, ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಬಾಳೆಕೊಪ್ಪದ ಅಂಚೆ ಇಲಾಖೆಯ ನೌಕರರೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಅವರಿಗೆ ಸೋಂಕು ಹೇಗೆ ಹರಡಿತು ಎಂಬ ಗೊಂದಲ ಬಗೆಹರಿದಿಲ್ಲ. ಆದರೆ, ಆ ವ್ಯಕ್ತಿಯ ಪುತ್ರ ನಗರದ ಶಾಪಿಂಗ್ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಒಂದು ವೇಳೆ ಆತನಿಗೆ ಸೋಂಕು ಧೃಢಪಟ್ಟರೆ ಸೋಂಕು ನಗರದಲ್ಲಿ ಇನ್ನೆಷ್ಟು ಜನರಿಗೆ ಹರಡಿರಬಹುದು ಎಂಬ ಆತಂಕಕ್ಕೆ ಕಾರಣವಾಗಿದೆ.

ಸೋಂಕ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕಿನ ಬಾಳೆಕೊಪ್ಪವನ್ನು ಮತ್ತು ಪೋಕ್ಸೋ ಪ್ರಕರಣ ನಡೆದ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 10 ಪ್ರಕರಣಗಳು ಧೃಡಪಟ್ಟಿದ್ದು, ಈವರೆಗೆ ಒಟ್ಟು 24 ಪ್ರಕರಣಗಳು ಶಿವಮೊಗ್ಗದಲ್ಲಿ ದಾಖಲಾಗಿವೆ. ಆ ಪೈಕಿ ತೀರ್ಥಹಳ್ಳಿ, ತರಲಘಟ್ಟ ಮತ್ತು ಬಾಳೆಕೊಪ್ಪ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರುವವರಾಗಿದ್ದು, ಈ ಮೂರು ಪ್ರಕರಣಗಳು ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ದ್ವೀತೀಯ ಹಂತದ ಸಂಪರ್ಕ ಹೊಂದಿವೆ. ಈ ಮೂರು ಪ್ರಕರಣಗಳ ಸಂಪರ್ಕಗಳು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿವೆ.

Click here Support Free Press and Independent Journalism

Pratidhvani
www.pratidhvani.com