ಯಾವುದೇ ಸರ್ಕಾರಿ ಸಂಸ್ಥೆ ಸೀಲ್ ಡೌನ್ ಆಗಿಲ್ಲ: ಶಿವಮೊಗ್ಗ ಡಿಸಿ ಸ್ಪಷ್ಟನೆ
ರಾಜ್ಯ

ಯಾವುದೇ ಸರ್ಕಾರಿ ಸಂಸ್ಥೆ ಸೀಲ್ ಡೌನ್ ಆಗಿಲ್ಲ: ಶಿವಮೊಗ್ಗ ಡಿಸಿ ಸ್ಪಷ್ಟನೆ

ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಎಸ್ಪಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಶಿವಮೊಗ್ಗ ಎಸ್ಪಿ ಕಚೇರಿ ಸೀಲ್‌ ಡೌನ್‌ ವದಂತಿ ಹಿನ್ನೆಲೆ ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಮೂರು ಮಂದಿ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿದ್ದಾರೆ. ಇನ್ನುಳಿದಂತೆ ಯಾವುದೇ ಪೊಲೀಸ್ ಅಧಿಕಾರಿಗಳು ಕ್ವಾರೆಂಟೈನ್‍ನಲ್ಲಿರುವುದಿಲ್ಲ. ಆದರೆ ಮುಂಜಾಗರೂಕಾ ಕ್ರಮವಾಗಿ ಈಗಾಗಲೇ 11ಮಂದಿ ಪೊಲೀಸ್ ಅಧಿಕಾರಿಗಳ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ವಿಶೇಷ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಹೆಚ್ಚುವರಿ ಕರ್ತವ್ಯಕ್ಕಾಗಿ ಬೇರೆ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸುವುದು ಸಾಮಾನ್ಯವಾಗಿದ್ದು, ಆದರೂ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಹೊರ ಜಿಲ್ಲೆಯ ಅಧಿಕಾರಿಗಳು ಹೆಚ್ವುವರಿ ಕರ್ತವ್ಯ ವಹಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲಾ ಸರ್ಕಾರಿ ಕಚೇರಿಗಳನ್ನು ನಿಗದಿತ ಅವಧಿಯಲ್ಲಿ ಸಂಪೂರ್ಣ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪರೀಕ್ಷೆಯಲ್ಲಿ ಹೆಚ್ಚಳ: ಜಿಲ್ಲೆಯಲ್ಲಿ ಇದುವರೆಗೆ 5172 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಇದರ ಪೈಕಿ 4828 ಫಲಿತಾಂಶ ಬಂದಿದ್ದು, 320 ಬರಬೇಕಿದೆ. 4804 ನೆಗೆಟಿವ್ ಬಂದಿದೆ. ಹೊರ ರಾಜ್ಯಗಳಿಂದ ಆಗಮಿಸಿದ್ದ 1158 ಜನರನ್ನು ಕ್ವಾರೆಂಟೈನ್ ಮಾಡಿ ಪರೀಕ್ಷೆ ನಡೆಸಲಾಗಿದೆ. 943 ಫಲಿತಾಂಶ ಬಂದಿದೆ. ಪ್ರಸ್ತುತ ಜಿಲ್ಲೆಗೆ ಪ್ರತಿದಿನ 50ರಿಂದ 70ಮಂದಿ ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ ಎಂದರು.

ನಿನ್ನೆ (ಮೇ 19) ಒಂದೇ ದಿನ ಜಿಲ್ಲೆಯಲ್ಲಿ 329 ಮಂದಿಯ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಕಂಡು ಬಂದಿದ್ದ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಎಲ್ಲರ ಗಂಟಲ ದ್ರವ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಂತದ ಸಂಪರ್ಕ ಹೊಂದಿದ್ದವರ ತಪಾಸಣೆ ನಡೆಸಲಾಗುವುದು.

ಅಂತರ ಜಿಲ್ಲಾ ಪಯಣಕ್ಕೆ ಪಾಸ್ ಬೇಡ: ರಾಜ್ಯದಲ್ಲಿ ಲಾಕ್‍ಡೌನ್ ತೆರವುಗೊಳಿಸಿದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತರ ಜಿಲ್ಲಾ ಪಯಣಕ್ಕೆ ಯಾವುದೇ ಪಾಸ್ ಅಗತ್ಯವಿಲ್ಲ. ಖಾಸಗಿ ವಾಹನಗಳಲ್ಲಿ ಸಹ ಜನರು ಮಾರ್ಗಸೂಚಿ ಪ್ರಕಾರ ಪ್ರಯಾಣಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಪ್ರಕರಣ ದಾಖಲು: ಕೋವಿಡ್ ಫಲಿತಾಂಶಕ್ಕೆ ಸಂಬಂಧಿಸಿದಂತೆ ಪಾಸಿಟಿವ್ ಬಂದಿರುವ ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಈ ಕರ್ತವ್ಯದಲ್ಲಿದ್ದ ತಂಡವನ್ನು ಈಗಾಗಲೇ ಬದಲಾಯಿಸಲಾಗಿದೆ. ಈ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.

ಮನವಿ: ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ, ಯಾರೂ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮಾಸ್ಕ್ ಧರಿಸಬೇಕು. ಜಿಲ್ಲೆಯ ಜನರು ಜಾಗರೂಕರಾಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

Click here Support Free Press and Independent Journalism

Pratidhvani
www.pratidhvani.com