ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ
ರಾಜ್ಯ

ಕೃಷ್ಣನೂರಿನಲ್ಲಿ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ನೆರವಾದ MIT ವಿದ್ಯಾರ್ಥಿನಿ

ಲಾಕ್‌ಡೌನ್‌ನಿಂದಾಗಿ ಉಡುಪಿಯ ರೈಲ್ವೇ ನಿಲ್ದಾಣದ ಬಳಿ ಬಾಕಿಯಾಗಿದ್ದ ತೆಲಂಗಾಣದ 49 ವಲಸೆ ಕಾರ್ಮಿಕರು ಎರಡು ತಿಂಗಳ ಬಳಿಕ ಊರಿಗೆ ತೆರಳಲು ಸಿದ್ಧರಾಗಿದ್ದಾರೆ. ಅಚ್ಚರಿ ಅಂದ್ರೆ ಒಂದೂವರೆ ತಿಂಗಳಿನಿಂದ ನೆರವಿನ ನಿರೀಕ್ಷೆಯಲ್ಲಿದ್ದ ಈ ಕಾರ್ಮಿಕರಿಗೆ ಒಂದೇ ವಾರದಲ್ಲಿ ಊರಿಗೆ ತೆರಳಲು ಸಾಧ್ಯವಾಗುತ್ತಿರುವುದು ಮಣಿಪಾಲದ MIT ವಿದ್ಯಾರ್ಥಿನಿಯೊಬ್ಬಳಿಂದ. ಈಕೆಯ ತೆರೆಮರೆಯ ಪರಿಶ್ರಮವನ್ನ ʼಪ್ರತಿಧ್ವನಿʼ ನಿಮ್ಮ ಮುಂದಿಡುತ್ತಿದೆ. 

ಮೊಹಮ್ಮದ್‌ ಇರ್ಷಾದ್‌

ದೇಶಾದ್ಯಂತ ಲಾಕ್‌ಡೌನ್‌ ಆದ ಪರಿಣಾಮ ಅತ್ತ ಊರಿಗೂ ತೆರಳಲಾಗದೇ, ಇತ್ತ ಕರ್ಮಭೂಮಿಯಲ್ಲೂ ಇರಲಾಗದೇ ಸಂಕಷ್ಟ ಪಡುತ್ತಿರುವ ವಲಸೆ ಕಾರ್ಮಿಕರ ಕಥೆ-ವ್ಯಥೆಗಳನ್ನ ಪ್ರತಿದಿನ ಗಮನಿಸುತ್ತಿದ್ದೇವೆ. ಸರಕಾರ ಇಂತಹ ವಲಸೆ ಕಾರ್ಮಿಕರ, ಪ್ರವಾಸಿಗರ, ಯಾತ್ರಿಕರ ಅನುಕೂಲಕ್ಕಾಗಿಯೇ ʼಸೇವಾ ಸಿಂಧುʼ ವೆಬ್‌ಸೈಟ್ ಮುಖಾಂತರ ಹೆಸರು ನೋಂದಾಯಿಸಿ ಅವರನ್ನ ತವರು ರಾಜ್ಯಕ್ಕೆ ಕಳುಹಿಸಿ ಕೊಡುವ ಕೆಲಸ ಮಾಡುತ್ತಿದೆ. ಆದರೆ ಅಕ್ಷರ ಜ್ಞಾನವಿಲ್ಲದ ವಲಸೆ ಕಾರ್ಮಿಕರಿಗೆ ಇಂಟರ್‌ನೆಟ್‌ ನಲ್ಲಿ ಹೋಗಿ ʼಸೇವಾ ಸಿಂಧುʼ ವೆಬ್‌ ಸೈಟ್‌ ತೆರಳಿ ಹೆಸರು ನೋಂದಾಯಿಸಲು ಸಾಧ್ಯವೇ..? ಛಾನ್ಸೇ ಇಲ್ಲ.

ಆದರೆ ಈ ಸಂದರ್ಭದಲ್ಲಿ ಆಯಾಯ ಜಿಲ್ಲಾಡಳಿತ ತಮ್ಮ ಜಿಲ್ಲೆಯೊಳಗಿರುವ ವಲಸೆ ಕಾರ್ಮಿಕರನ್ನ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಸಹಕಾರಿಯಾಗಬೇಕಿತ್ತು. ಆದರೆ ಜಿಲ್ಲಾಡಳಿತಗಳು ವಿಫಲಗೊಂಡ ಪರಿಣಾಮ, ರಾಜ್ಯದ ಅದೆಷ್ಟೋ ಜಿಲ್ಲೆಗಳಲ್ಲಿ ಇಂದಿಗೂ ನೂರಾರು ವಲಸೆ ಕಾರ್ಮಿಕರು ಸಂಕಷ್ಟಪಡುತ್ತಲೇ ಇದ್ದಾರೆ. ʼಸೇವಾ ಸಿಂಧುʼ ಅಂದರೇನು? ಅದರಲ್ಲಿ ಅರ್ಜಿ ಸಲ್ಲಿಸುವ ಕ್ರಮ ಹೇಗೆ ಅನ್ನೋದು ಶಾಲೆ ಮೆಟ್ಟಿಲೇ ಹತ್ತದ ಈ ಬಡಪಾಯಿ ವಲಸೆ ಕಾರ್ಮಿಕರಿಗೆ ಗೊತ್ತಿರಲು ಅಸಾಧ್ಯ.

ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ತಂಗಿರುವ ತೆಲಂಗಾಣ ಮೂಲದ ವಲಸೆ ಕಾರ್ಮಿಕರು
ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ತಂಗಿರುವ ತೆಲಂಗಾಣ ಮೂಲದ ವಲಸೆ ಕಾರ್ಮಿಕರು

ಇಂತಹದ್ದೇ ಸಂದಿಗ್ಧ ಸ್ಥಿತಿಯಲ್ಲಿ ಕಳೆದ ಎರಡು ತಿಂಗಳುಗಳನ್ನ ಕಳೆದಿದ್ದ ತೆಲಂಗಾಣ ಮೂಲದ 49 ವಲಸೆ ಕಾರ್ಮಿಕರು ಇದೀಗ ಉಡುಪಿ ಜಿಲ್ಲೆಯಿಂದ ತಮ್ಮ ತವರು ರಾಜ್ಯ ತೆಲಂಗಾಣಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಅಚ್ಚರಿ ಅಂದ್ರೆ, ಈ ರೀತಿ ತೆರಳುತ್ತಿರುವ ಆ 49 ವಲಸೆ ಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತದಿಂದಾಗಲೀ, ಕರ್ನಾಟಕ ಸರಕಾರದಿಂದಾಗಲೀ ಸೂಕ್ತವಾದ ಸ್ಪಂದನೆ ಸಿಗಲಿಲ್ಲ. ಬದಲಿಗೆ ಅವರೆಲ್ಲರಿಗೂ ಸ್ಪಂದಿಸಿ ಅವರನ್ನ ಊರಿಗೆ ತಲುಪಿಸಿಯೇ ತಲುಪಿಸ್ತೀನಿ ಅಂತಾ ಪಣ ತೊಟ್ಟ ಓರ್ವ ಹೆಣ್ಣು ಮಗಳ ಶ್ರಮ ಮಾತ್ರ ಇಲ್ಲಿ ಕೆಲಸ ಮಾಡಿದೆ. ಅದರ ಜೊತೆಗೆ ಆಕೆಗೆ ಮಣಿಪಾಲ ಪೊಲೀಸರು ಸಾಥ್‌ ನೀಡಿದ್ದು, ಕೆಲಸ ಇನ್ನಷ್ಟು ಸುಲಭವಾಗಿಸಿದೆ.

ಆಕೆಯ ಹೆಸರು ಸಾಯಿಶ್ರೀ ಅಕೊಂಡಿ. ಮೂಲತಃ ಮುಂಬೈಯವರಾಗಿರುವ ಇವರು 2018 ರಲ್ಲಿ ಮಣಿಪಾಲ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (MIT) Btech ಮುಗಿಸಿಕೊಂಡವರು. ಇತ್ತೀಚೆಗೆ ಮತ್ತೆ ಕೆಲಸ ನಿಮಿತ್ತ ಮಣಿಪಾಲಕ್ಕೆ ಆಗಮಿಸಿದ್ದ ಸಾಯಿಶ್ರೀ ಕೂಡಾ ಲಾಕ್‌ಡೌನ್‌ನಿಂದಾಗಿ ಮಣಿಪಾಲದಲ್ಲಿಯೇ ಉಳಿಯುವಂತಾಗಿದೆ. ಹೀಗೆ ಉಳಿದವರೇ ಕೆಲ ದಿನಗಳ ಹಿಂದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ವಲಸೆ ಕಾರ್ಮಿಕರ ಸ್ಥಿತಿ ಕಂಡು ಮರುಗಿದ್ದಾರೆ. ತನ್ನ ಸ್ನೇಹಿತ ವಿನೀತ್‌ ಜೊತೆಗೂಡಿ ಅವರ ಸಹಾಯಕ್ಕಾಗಿ ಇಳಿದಿದ್ದಾರೆ. ಮೊದಲೇ ಭಾಷಾ ಸಮಸ್ಯೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳಲು ಪರದಾಡುತ್ತಿದ್ದ ತೆಲಂಗಾಣದ ಕಾರ್ಮಿಕರಿಗೆ ಸಾಯಿಶ್ರೀ ಸಹಾಯಹಸ್ತ ನೀಡಿದ್ದಾರೆ. ತೆಲುಗು ಭಾಷಾ ಬಲ್ಲ ಸಾಯಿಶ್ರೀ ವಲಸೆ ಕಾರ್ಮಿಕರನ್ನ ಊರಿಗೆ ತಲುಪಿಸುವ ಪಣ ತೊಟ್ಟಿದ್ದಾರೆ.

ಮೇ 12 ರಂದು ʼಸೇವಾ ಸಿಂಧುʼ ವೆಬ್‌ಸೈಟ್‌ ಗೆ ತೆರಳಿ ಆ ಎಲ್ಲಾ 49 ಜನ ವಲಸೆ ಕಾರ್ಮಿಕರ ಹೆಸರು ನೋಂದಾಯಿಸಿದ್ದಾರೆ. ಅದಕ್ಕೂ ಜಾಸ್ತಿ ತನ್ನ ಟ್ವಿಟ್ಟರ್‌ ಖಾತೆಯ ಮೂಲಕ ತೆಲಂಗಾಣ ಸಿಎಂ, TRS ಪಕ್ಷದ ನಾಯಕಿ ಕವಿತಾ, ಬಾಲಿವುಡ್‌ ನಟ ಸೋನು ಸೂದ್‌ ಅವರಿಗೂ, ಮಣಿಪಾಲದ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ಪರದಾಡುತ್ತಿದ್ದ ವಲಸೆ ಕಾರ್ಮಿಕರ ಸಂಕಷ್ಟದ ಬಗ್ಗೆ ಟ್ಯಾಗ್‌ ಮಾಡುವ ಮೂಲಕ ಗಮನಸೆಳೆದಿದ್ದಾರೆ. “ ಇತ್ತೀಚೆಗೆ ಮುಂಬೈನಲ್ಲಿದ್ದ ವಲಸೆ ಕಾರ್ಮಿಕರಿಗೆ ಸೋನು ಸೂದ್‌ ಅವರು ನೀಡಿದ ಸಹಾಯ ಹಸ್ತವೇ, ಆ ಬಾಲಿವುಡ್‌ ನಟನಿಗೂ ಟ್ವೀಟ್‌ ಟ್ಯಾಗ್‌ ಮಾಡಲು ಪ್ರೇರೇಪಿಸಿತು. ಆದರೆ ನನ್ನ ಟ್ವೀಟ್‌ಗೆ ತಕ್ಷಣವೇ ತೆಲಂಗಾಣ ಸಿಎಂ ಕಚೇರಿಯಿಂದ 24 ಗಂಟೆಯೊಳಗಾಗಿ ಪ್ರತಿಕ್ರಿಯೆಯೂ ಬಂತು. ಕರೆ ಮಾಡಿ ಮಾತನಾಡಿದ ಅವರು, ಅವರ ರಾಜ್ಯದ ಕಾರ್ಮಿಕರಿಗೆ ಸ್ಪಂದಿಸುವ ಭರವಸೆ ನೀಡಿದರು. ಮಾತ್ರವಲ್ಲದೇ ತಕ್ಷಣವೇ KSRTC ಬಸ್‌ಗಳನ್ನೂ ಸಂಪರ್ಕಿಸಲು ತಿಳಿಸಿದರು. ಜೊತೆಗೆ ರಾಜ್ಯಕ್ಕೆ ಆಗಮಿಸಲು ಅವರಿಗೆ ಅವಕಾಶ ನೀಡುವುದಾಗಿಯೂ ತಿಳಿಸಿದರು.” ಎಂದು ಸಾಯಿಶ್ರೀ ʼಪ್ರತಿಧ್ವನಿʼ ಗೆ ತಿಳಿಸಿದ್ದಾರೆ.

ಇಂದ್ರಾಳಿ ರೈಲ್ವೇ ನಿಲ್ದಾಣ ಬಳಿಯೇ ʼಸೇವಾ ಸಿಂಧುʼ ಮೂಲಕ ವಲಸೆ ಕಾರ್ಮಿಕರ ಹೆಸರು ನೋಂದಾಯಿಸುತ್ತಿರುವ ಸಾಯಿಶ್ರೀ ಹಾಗೂ ಆಕೆಯ ಸಹಪಾಠಿ. ಇವರಿಗೆ ಮಣಿಪಾಲ ಠಾಣಾ ಪೊಲೀಸ್‌ ಸಿಬ್ಬಂದಿಗಳ ಸಾಥ್.‌ 
ಇಂದ್ರಾಳಿ ರೈಲ್ವೇ ನಿಲ್ದಾಣ ಬಳಿಯೇ ʼಸೇವಾ ಸಿಂಧುʼ ಮೂಲಕ ವಲಸೆ ಕಾರ್ಮಿಕರ ಹೆಸರು ನೋಂದಾಯಿಸುತ್ತಿರುವ ಸಾಯಿಶ್ರೀ ಹಾಗೂ ಆಕೆಯ ಸಹಪಾಠಿ. ಇವರಿಗೆ ಮಣಿಪಾಲ ಠಾಣಾ ಪೊಲೀಸ್‌ ಸಿಬ್ಬಂದಿಗಳ ಸಾಥ್.‌ 

ಆದರೆ KSRTC ಬಸ್‌ ಸಂಪರ್ಕಿಸಿದಾಗ 2 ಬಸ್‌ಗಳನ್ನು ನೀಡಲು ಮುಂದಾಗಿದ್ದಾರೆ. ಆದರೆ 1,98,200 ರೂಪಾಯಿ ಬಸ್‌ ದರವನ್ನು ನಿಗದಿಪಡಿಸಿದರು. ಆದರೆ ಸಾಯಿಶ್ರೀ ಅಕೊಂಡಿ ಇದನ್ನ ಒಪ್ಪಲಿಲ್ಲ. ಮೊದಲೇ ಕೆಲಸ, ವೇತನವಿಲ್ಲದ ಅವರಿಂದ ಹಣ ಪಡೆಯುವುದು ಸರಿಯಲ್ಲವೆಂದು ತೆಲಂಗಾಣ ಸರಕಾರದಿಂದ ಸಹಾಯ ಯಾಚಿಸಿದ್ದಾರೆ. ಜೊತೆಗೆ ಸಾಯಿಶ್ರೀ ತಾನೇ ಸಾರ್ವಜನಿಕರಿಂದ 50 ಸಾವಿರ ರೂಪಾಯಿ ಸಂಗ್ರಹಿಸಿದ್ದಾರೆ. ಆದರೆ ಸ್ವಾಭಿಮಾನಿಗಳಾಗಿದ್ದ ವಲಸೆ ಕಾರ್ಮಿಕರು ವೇತನವಿಲ್ಲದೇ ಹೋದರೂ 50 ಸಾವಿರ ರೂಪಾಯಿ ನೀಡಲು ಮುಂದಾಗಿದ್ದಾರೆ. ಆದರೆ ಸಾಯಿಶ್ರೀ ಇದನ್ನ ಪಡೆಯಲು ನಿರಾಕರಿಸಿದ್ದಾರೆ. ಬದಲಿಗೆ ಕಾರ್ಮಿಕರನ್ನ ಉಚಿತವಾಗಿಯೇ ರಾಜ್ಯಕ್ಕೆ ಕರೆಸಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಕೊನೆಗೆ ತೆಲಂಗಾಣ ಸರಕಾರವೇ ಉಳಿದ ಹಣವನ್ನ ನೀಡುವುದಾಗಿ ಹೇಳಿದೆ.

ಇನ್ನು ವಲಸೆ ಕಾರ್ಮಿಕರ ಸಂಕಷ್ಟವನ್ನ ʼಪ್ರತಿಧ್ವನಿʼ ಜೊತೆ ಹಂಚಿಕೊಂಡ ಸಾಯಿಶ್ರೀ, “49 ಕಾರ್ಮಿಕರಲ್ಲಿ 20 ಮಂದಿ ಮಹಿಳೆಯರಾಗಿದ್ದು, ಒಬ್ಬಾಕೆ ಗರ್ಭಿಣಿಯಾದರೆ, 10 ಮಕ್ಕಳಿದ್ದು ಅದರಲ್ಲಿ 5 ವರುಷದ ಕೆಳಗಿನವರು ಹಾಗೂ ಒಂದು ವರುಷದ ಎರಡು ಕಂದಮ್ಮಗಳಿದ್ದರು. ಫೆಬ್ರವರಿ 28 ರಂದು ರೈಲ್ವೇ ಟ್ರ್ಯಾಕ್‌ನ ಕಾಮಗಾರಿಗೆ ಸ್ಥಳೀಯ ಗುತ್ತಿಗೆದಾರನ ಮುಖಾಂತರ ಉಡುಪಿಯ ಮಣಿಪಾಲಕ್ಕೆ ಆಗಮಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಲಾಕ್‌ಡೌನ್‌ ಆಗುತ್ತಲೇ, ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಗುತ್ತಿಗೆದಾರ ಲಾಕ್‌ಡೌನ್‌ ನಡುವೆಯೂ ಕೆಲಸ ಮಾಡಲು ಒತ್ತಾಯಿಸಿದ್ದಾರೆ. ಆದರೆ ವಿಷಯ ತಿಳಿದಿದ್ದ ಮಣಿಪಾಲ ಠಾಣಾ ಪೊಲೀಸರು ಕೆಲಸ ನಿಲ್ಲಿಸುವಂತೆ ಮನವೊಲಿಸಿದ್ದರು. ಅದರಂತೆ ಅವರನ್ನ ಸ್ಥಳೀಯ RTO ಕಚೇರಿ ಕಡೆಗೆ ಶಿಫ್ಟ್‌ ಮಾಡಲಾಗಿತ್ತಾದರೂ, ಅಲ್ಲಿ ಅವರಿಗೆ ಇರಲು ಅವಕಾಶ ನೀಡಿಲ್ಲ. ಅತ್ತ ಆರಂಭದಲ್ಲಿ ವಸತಿ, ಆಹಾರ ನೀಡಿದ್ದ ಗುತ್ತಿಗೆದಾರ ಕೆಲಸ ಸ್ಥಗಿತವಾಗುತ್ತಿದ್ದಂತೆಯೇ ವಸತಿ, ಆಹಾರ ನೀಡಲು ಹಿಂದೇಟು ಹಾಕಿದ್ದಾನೆ. ಹೀಗೆ ಕಂಗಾಲಾದ ಕಾರ್ಮಿಕರು ಊರಿಗೆ ಕಾಲ್ನಡಿಗೆಯಲ್ಲೇ ನಡೆದು ಹೋಗಲು ಮುಂದಾಗಿದ್ದಾರೆ. ಆದರೆ ತುಂಬು ಗರ್ಭಿಣಿ, ಮಕ್ಕಳನ್ನ ಕಂಡ ಮಣಿಪಾಲ ಪೊಲೀಸರು ಅವರನ್ನ ಮನವೊಲಿಸಿ ರೈಲ್ವೇ ನಿಲ್ದಾಣದ ಬಳಿಯೇ ಅನುಮತಿ ಪಡೆದು ಇರಲು ಅವಕಾಶ ಒದಗಿಸಿದ್ದಾರೆ. ನಂತರ ಆಹಾರವನ್ನೂ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯೊಂದು ಕೈ ಜೋಡಿಸಿದ್ದು ಅವರಿಗೆ ದಿನನಿತ್ಯದ ಆಹಾರ ಒದಗಿಸಿದ್ದರು. ಆ ನಂತರ ನಾನು ಸ್ಥಳೀಯ ಅಧಿಕಾರಿಗಳ ಜೊತೆಗೆ ಸಂವಹನ ನಡೆಸಲು ಹಾಗೂ ವಿಶೇಷವಾಗಿ ಆಹಾರ ಒದಗಿಸುವಲ್ಲಿ ಮಣಿಪಾಲ ಪೊಲೀಸ್‌ ಠಾಣೆಯ ಸಿಬ್ಬಂದಿಗಳಾದ ಅಬ್ದುಲ್‌ ರಝಾಕ್‌, ವಿಶ್ವಜೀತ್‌, ASI ಶೈಲೇಶ್‌ ಅವರು ನೀಡಿರುವ ಸಹಕಾರ ಮರೆಯುವಂತದ್ದಲ್ಲ” ಎಂದು ಸಾಯಿಶ್ರೀ ʼಪ್ರತಿಧ್ವನಿʼಗೆ ತಿಳಿಸಿದರು.

ತವರಿಗೆ ತೆರಳಲು ಬಸ್ ಟಿಕೆಟ್‌ ಖಾತ್ರಿಯಾದ  ನಂತರ ಕೃತಜ್ಞತಾ ದ್ಯೋತಕವಾಗಿ ಸಾಯಿಶ್ರೀ ಅವರಿಗೆ ವಲಸೆ ಕಾರ್ಮಿಕ ಯುವತಿಯೊಬ್ಬಳು ಗುಲಾಬಿ ಹೂ ನೀಡುತ್ತಿರುವುದು.
ತವರಿಗೆ ತೆರಳಲು ಬಸ್ ಟಿಕೆಟ್‌ ಖಾತ್ರಿಯಾದ  ನಂತರ ಕೃತಜ್ಞತಾ ದ್ಯೋತಕವಾಗಿ ಸಾಯಿಶ್ರೀ ಅವರಿಗೆ ವಲಸೆ ಕಾರ್ಮಿಕ ಯುವತಿಯೊಬ್ಬಳು ಗುಲಾಬಿ ಹೂ ನೀಡುತ್ತಿರುವುದು.
ವಲಸೆ ಕಾರ್ಮಿಕರಿಗೆ ಮಣಿಪಾಲ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಊಟೋಪಚಾರದ ವ್ಯವಸ್ಥೆ. 
ವಲಸೆ ಕಾರ್ಮಿಕರಿಗೆ ಮಣಿಪಾಲ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಊಟೋಪಚಾರದ ವ್ಯವಸ್ಥೆ. 

ಇದೀಗ ಸಾಯಿಶ್ರೀ ಅಕೊಂಡಿ ವಾರದಿಂದ ಹಿಡಿದ ಹಠಕ್ಕೆ ಪ್ರತಿಫಲ ಸಿಕ್ಕಿದೆ. ಇಂದು (ಮೇ 19) ಮಧ್ಯಾಹ್ನ ಎರಡು KSRTC ಬಸ್‌ಗಳ ಮೂಲಕ ವಲಸೆ ಕಾರ್ಮಿಕರು ತಮ್ಮ ಊರಿಗೆ ವಾಪಾಸ್‌ ಆಗಲಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಆಡಳಿತ ಯಂತ್ರಗಳೇ ಕೈ ಕಟ್ಟಿ ಕುಳಿತಿರುವಾಗ ಸಾಯಿಶ್ರೀ ಮಾಡಿದ ಪರಿಶ್ರಮದಿಂದ ತೆಲಂಗಾಣದ 49 ವಲಸೆ ಕಾರ್ಮಿಕರು ತಮ್ಮ ಊರಲು ಸೇರಲಿದ್ದಾರೆ. “ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಕಳೆದ ಹಲವು ದಿನಗಳಿಂದ ಭರವಸೆ ನೀಡಿ ಹೋಗಿದ್ದರೇ ವಿನಃ ಯಾವುದೇ ಪ್ರತಿಫಲ ಸಿಕ್ಕಿರಲಿಲ್ಲ. ಆದರೆ ಸಾಯಿಶ್ರೀ ಮೇಡಂ ಅವರು ನಿರಂತರವಾಗಿ ನಮ್ಮ ಪರವಾಗಿ ಕೆಲಸ ಮಾಡಿದ್ದು, ವಾರದಲ್ಲಿಯೇ ನಮಗೆ ಊರಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಸ್‌ ವ್ಯವಸ್ಥೆಗಳನ್ನೂ ಮಾಡಿಕೊಟ್ಟಿದ್ದಾರೆ. ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದೇ ತಿಳಿಯುತ್ತಿಲ್ಲ” ಎಂದು ʼಪ್ರತಿಧ್ವನಿʼ ಜೊತೆ ದೂರವಾಣಿ ಸಂಪರ್ಕದಲ್ಲಿ ಕಾರ್ಮಿಕರೊಬ್ಬರು ಭಾವುಕರಾಗಿ ನುಡಿದರು.

Click here Support Free Press and Independent Journalism

Pratidhvani
www.pratidhvani.com