ಲಾಕ್‌ಡೌನ್‌ 4.0 ನಲ್ಲಿ ಭಾರಿ ವಿನಾಯಿತಿ; ಭಾನುವಾರ ಮಾತ್ರ ಕಂಪ್ಲೀಟ್‌ ಲಾಕ್‌ಡೌನ್
ರಾಜ್ಯ

ಲಾಕ್‌ಡೌನ್‌ 4.0 ನಲ್ಲಿ ಭಾರಿ ವಿನಾಯಿತಿ; ಭಾನುವಾರ ಮಾತ್ರ ಕಂಪ್ಲೀಟ್‌ ಲಾಕ್‌ಡೌನ್

ಮೇ 18ರಿಂದ ಆರಂಭವಾದ 4ನೇ ಹಂತದ ಲಾಕ್‌ಡೌನ್‌ ಹಿನ್ನೆಲೆ ಸಿಎಂ ಬಿಎಸ್‌ವೈ ಹಿರಿಯ ಅಧಿಕಾರಿ, ಸಚಿವರ ಜೊತೆ ಚರ್ಚಿಸಿ ಮಹತ್ವದ ನಿರ್ಧಾರ ಕೈ ಗೊಂಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಶೇಕಡಾ 80 ರಷ್ಟು ಸಾರ್ವಜನಿಕ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿವೆ. ಆದರೆ ಭಾನುವಾರ ಮಾತ್ರ ಸಂಪೂರ್ಣ ಲಾಕ್‌ಡೌನ್‌ ಮಾಡುವುದಾಗಿಯೂ ಸಿಎಂ ತಿಳಿಸಿದ್ದಾರೆ. 

ಕೃಷ್ಣಮಣಿ

ಕರೋನಾ ಸಂಕಷ್ಟದಿಂದ ಹೊರ ಬರುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದಿನಿಂದ ಮೇ 31ರ ತನಕ ಲಾಕ್‌ಡೌನ್ 4 ಜಾರಿ ಮಾಡಿದೆ. ನಿನ್ನೆ ಸಂಜೆಯೇ ನಾಲ್ಕನೇ ಹಂತದ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಹೊರಡಿಸಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಯಾವೆಲ್ಲಾ ರೀತಿಯ ವಿನಾಯ್ತಿಗಳನ್ನು ಕೊಡಬಹುದು ಎನ್ನುವ ಬಗ್ಗೆ ಸಿಎಂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಕೇಂದ್ರದ ಮಾರ್ಗಸೂಚಿ ಅನ್ವಯ ಲಾಕ್ ಡೌನ್ 4 ರಾಜ್ಯದಲ್ಲಿ ಹೇಗಿರಬೇಕು..? ರಾಜ್ಯದಲ್ಲಿ ಇನ್ನಷ್ಟು ಲಾಕ್‌ಡೌನ್ ಸಡಿಲಿಕೆ ಮಾಡುವ ಬಗ್ಗೆ ಮಾರ್ಗಸೂಚಿ ಹೊರಡಿಸುವ ನಿಟ್ಟಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಯಣ್, ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಪುಟ ಸಚಿವರು ಭಾಗಿಯಾಗಿದ್ದರು. ಮಂಗಳವಾರ ಅಂದರೆ ನಾಳೆಯಿಂದ ರಾಜ್ಯದಲ್ಲಿ ಶೇಕಡ 75 ರಿಂದ 80ರಷ್ಟು ಚಟುವಟಿಕೆಗಳಿಗೆ ಮುಕ್ತ ಅವಕಾಶ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ, ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯಾದ ಬಿಎಂಟಿಸಿ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ಕೊಡಲಾಗಿದೆ. ಇನ್ನೂ ಕ್ಯಾಬ್‌ಗಳ ಸಂಚಾರಕ್ಕೂ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ ಕೆಂಪು ವಲಯ, ಕಿತ್ತಳೆ ವಲಯ ಹಾಗೂ ಹಸಿರು ವಲಯಗಳ ವಿಂಗಡಣೆ ಬಗ್ಗೆ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿರುವುದರಿಂದ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕಂಟೇನ್ಮೆಂಟ್ ಪ್ರದೇಶಗಳ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲು ನಿರ್ಧಾರ ಮಾಡಲಾಯ್ತು.

ಸಭೆಯಲ್ಲಿ ಪ್ರಮುಖವಾಗಿ ಸಾರಿಗೆ ಸಂಚಾರದ ಬಗ್ಗೆಯೇ ಹೆಚ್ಚು ಚರ್ಚೆಯಾಗಿದ್ದು, ಅಂತರ್ ಜಿಲ್ಲೆ ಬಸ್ ಸಂಚಾರದ ಬಗ್ಗೆ ಅಪಸ್ವರವೂ ಕೇಳಿಬಂತು. ಗ್ರೀನ್ ಝೋನ್ ಜಿಲ್ಲೆಗಳಿಗೆ ಮಾತ್ರ ಬಸ್ ಸಂಚಾರ ಮಾಡಬೇಕೆಂದು ಸಲಹೆಯೂ ಬಂತು. ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಕಲ್ಪಿಸುವುದು ಬೇಡ ಎಂದು ಹಿರಿಯ ಅಧಿಕಾರಿಗಳು ಸಲಹೆ ನೀಡಿದರು. ಅಧಿಕಾರಿಗಳ ಮಾತಿಗೆ ಮಧ್ಯಪ್ರವೇಶಿಸಿದ ಸಿಎಂ ಬಿ.ಎಸ್‌ ಯಡಿಯೂರಪ್ಪ ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯದ ಅನೇಕ ಕಾರ್ಮಿಕರು ನೌಕರರು ಕೆಲಸ ಮಾಡ್ತಿದ್ದಾರೆ. ಅವರನ್ನ ವಾಪಸ್ ರಾಜ್ಯಕ್ಕೆ ಕರೆತರಬೇಕಾಗಿದೆ. ಮುಂಬೈನಲ್ಲಿ ಉಟ, ವಸತಿ ಸಮಸ್ಯೆಯಿಂದ ದಿನಗೂಲಿ ನೌಕರರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕನ್ನಡಿಗರನ್ನ ಕರೆತರಲು ಸಾಕಷ್ಟು ಒತ್ತಡವಿದೆ. ಅವರಿಗೆ ಬಸ್ ಸಂಚಾರ ಅಗತ್ಯವಿದೆ ಎಂದರು.

ಸಭೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್‌ ಯಡಿಯೂರಪ್ಪ ಲಾಕ್‌ಡೌನ್‌ 04, ಮೇ 31ರ ತನಕ ಮುಂದುವರೆಯುತ್ತೆ. ಕಂಟೈನ್ಮೆಂಟ್‌ ಜೋನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತದೆ. ಸರ್ಕಾರ ನಿಯಮ ಮೀರಿದ್ರೆ ಕ್ರಿಮಿನಲ್‌ ಕೇಸ್ ಕೂಡ ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ. ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ರೆಡ್ ಜೋನ್ ಬಿಟ್ಟು ಉಳಿದ ಕಡೆ ಬಸ್‌ ಓಡಾಟ ಮಾಡಲಿದ್ದು, ನಾಳೆಯಿಂದಲೇ ಬಸ್ ಸಂಚಾರ ಪ್ರಾರಂಭ ಆಗುತ್ತದೆ. ಖಾಸಗಿ ಬಸ್ ಸಹ ಪ್ರಾರಂಭ ಮಾಡುತ್ತೇವೆ ಎಂದಿದ್ದಾರೆ. ಒಂದು ಬಸ್‌ನಲ್ಲಿ 30 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಎಲ್ಲಾ ಕಡೆ ಮಾಸ್ಕ್ ಕಡ್ಡಾಯ. ಹೊರ ರಾಜ್ಯದಿಂದ ಬರೋರಿಗೆ ಹಂತ ಹಂತವಾಗಿ ಕ್ವಾರಂಟೈನ್ ಕ್ರಮ ಮುಂದುವರಿಸಲು ತೀರ್ಮಾನ ಮಾಡಲಾಗಿದೆ. ಅನಿವಾರ್ಯ ಕಾರಣ ಬಿಟ್ಟು ಬೇರೆ ಕಾರಣಕ್ಕೆ ಓಡಾಡುವಂತಿಲ್ಲ. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕರನ್ನು ಹೊರತುಪಡಿಸಿ ಇಬ್ಬರು ಮಾತ್ರ ಇರಬೇಕು. ನಾಳೆಯಿಂದಲೇ ಆಟೋ ಟ್ಯಾಕ್ಸಿ ಓಡಾಟಕ್ಕೂ ಅನುಮತಿ ಕೊಡಲಾಗಿದೆ ಎಂದಿದ್ದಾರೆ.

ಜಿಮ್‌, ಮಾಲ್, ಸಿನಿಮಾ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ತೆರೆಯಬಹುದು. ಬೀದಿ ಬದಿ ವ್ಯಾಪಾರಿಗಳೂ ವ್ಯಾಪಾರ ಮಾಡಬಹುದು. ನಮ್ಮ ರಾಜ್ಯದ ಒಳಗೆ ರೈಲು ಸಂಚಾರ ಮಾಡಬಹದು. ಬ್ಯೂಟಿ ಪಾರ್ಲರ್‌, ಸೆಲೂನ್ ಓಪನ್‌ ಮಾಡಬಹುದು. ಪ್ರತಿ ಭಾನುವಾರ ಮಾತ್ರ ಇಡೀ ರಾಜ್ಯವೇ ಕಂಪ್ಲೀಟ್ ಲಾಕ್‌ಡೌನ್ ಆಗಿರಲಿದೆ. ಯಾರೂ ಓಡಾಡುವಂತಿಲ್ಲ, ಕಂಪ್ಲೀಟ್ ರೆಸ್ಟ್ ಎಂದಿದ್ದಾರೆ. ಇನ್ನೂ ಪಾರ್ಕ್‌ಗಳಲ್ಲಿ ಬೆಳಗ್ಗೆ 7 ರಿಂದ 9.30 ಹಾಗೂ ಸಂಜೆ 5ರಿಂದ 7 ಗಂಟೆ ತನಕ ಓಡಾಡಲು ಅವಕಾಶ ಕೊಡಲಾಗ್ತಿದೆ. ಬೆಂಗಳೂರಲ್ಲಿ ಹೆಚ್ಚು ಕೋವಿಡ್ 19 ಕೇಸ್ ಇರುವ ಪ್ರದೇಶಗಳನ್ನು ಬಿಟ್ಟು ಉಳಿದ ಕಡೆ ಸಂಚಾರ‌ ಮಾಡಬಹುದು. ಮೇ 31 ವರೆಗೂ ಎಲ್ಲಾ ಚಟುವಟಿಕೆ ಮೇಲೂ ನಿಗಾ ವಹಿಸಿ ನೋಡ್ತೀವಿ. ಆ ಬಳಿಕ ಏನು ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡ್ತೇವೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಬಸ್ ಚಾರ್ಜ್ ಜಾಸ್ತಿ ಮಾಡಲ್ಲ. ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಏಳು ಗಂಟೆ ತನಕ ಕರ್ಫ್ಯೂ ಜಾರಿಯಲ್ಲಿ ಇರುತ್ತೆ ಎಂದಿದ್ದಾರೆ.

Click here Support Free Press and Independent Journalism

Pratidhvani
www.pratidhvani.com