ಮತ್ತೆ ಏರಿಕೆ ಕಂಡ ಕೋವಿಡ್-19‌ ಸೋಂಕಿತರ ಸಂಖ್ಯೆ; ರಾಜ್ಯದಲ್ಲಿ ಒಂದೇ ದಿನ 99 ಹೊಸ ಪ್ರಕರಣ
ರಾಜ್ಯ

ಮತ್ತೆ ಏರಿಕೆ ಕಂಡ ಕೋವಿಡ್-19‌ ಸೋಂಕಿತರ ಸಂಖ್ಯೆ; ರಾಜ್ಯದಲ್ಲಿ ಒಂದೇ ದಿನ 99 ಹೊಸ ಪ್ರಕರಣ

ಲಾಕ್‌ಡೌನ್‌ 4.0 ಮೊದಲ ದಿನವಾದ ಇಂದು ಕರ್ನಾಟಕ ರಾಜ್ಯದಲ್ಲಿ ಕೋವಿಡ್-19‌ ಸೋಂಕಿತ 99 ಹೊಸ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆ ಕಂಡಿದೆ. 

ಪ್ರತಿಧ್ವನಿ ವರದಿ

ಕಳೆದ 24 ಗಂಟೆಯಲ್ಲಿ ಮತ್ತೆ 99 ಹೊಸ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಇದರಿಂದ ಕೋವಿಡ್-19‌ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ನಾಲ್ಕನೇ ಹಂತದ ಲಾಕ್‌ಡೌನ್‌ ದಿನದ ಮೊದಲ ದಿನವೇ ಇಂದು ಕರೋನಾ ಸೋಂಕು ಏರಿಕೆ ಆಗಿದ್ದು ಆತಂಕ ಮೂಡಿಸಿದೆ. ಆದರೂ ಈ ಮಧ್ಯೆ ರಾಜ್ಯ ಸರಕಾರ ಹಲವು ಸಾರ್ವಜನಿಕ ವ್ಯಾಪಾರ ವಹಿವಾಟು ಹಾಗೂ ಚಟುವಟಿಕೆಗಳಿಗೆ ಅವಕಾಶವನ್ನ ನೀಡಿದೆ.

ಇನ್ನು ಇಂದು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 24 ಹೊಸ ಪ್ರಕರಣ ಪತ್ತೆಯಾದರೆ, ಕಲಬುರಗಿ 10, ಮಂಡ್ಯ 17, ಉತ್ತರ ಕನ್ನಡ 9, ಗದಗ, ಯಾದಗಿರಿ ಹಾಗೂ ವಿಜಯಪುರಗಳಲ್ಲಿ 5, ರಾಯಚೂರು 6, ಹಾಸನ 4, ಕೊಪ್ಪಳ 3, ದಾವಣಗೆರೆ, ಉಡುಪಿ, ಮೈಸೂರು, ಬೀದರ್‌, ಬಳ್ಳಾರಿಗಳಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ ರಾಜ್ಯದಲ್ಲಿ ಹೊಸ ಸಾವು ಪ್ರಕರಣ ವರದಿಯಾಗದಿದ್ದರೂ, ಇದುವರೆಗೂ 37 ಮಂದಿ ಕೋವಿಡ್-19 ತುತ್ತಾಗಿ ಅಸುನೀಗಿದ್ದಾರೆ.

ಮೇ 17 ರ ಸಂಜೆ 5 ಗಂಟೆವರೆಗಿನ 24 ಗಂಟೆಗಳ ವರದಿಯಲ್ಲಿ 55 ಹೊಸ ಪ್ರಕರಣ ದಾಖಲಾಗಿದ್ದರೆ, ಇಂದು ಸಂಖ್ಯೆ 99ಕ್ಕೆ ಏರಿದ್ದು ಆತಂಕ ಮೂಡಿಸಿದೆ. ಈ ಮಧ್ಯೆ ರಾಜ್ಯ ಸರಕಾರ ಲಾಕ್‌ಡೌನ್‌ 4.0 ನಲ್ಲಿ ಬಹಳಷ್ಟು ವಿನಾಯಿತಿ ನೀಡಿದ್ದು, ಬಸ್‌ಗಳ ಓಡಾಟಕ್ಕೂ ಅವಕಾಶವಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಬಗ್ಗೆ ಸಹಜವಾದ ಆತಂಕ ಮೂಡುವಂತೆ ಮಾಡಿದೆ.

Click here Support Free Press and Independent Journalism

Pratidhvani
www.pratidhvani.com