ಮುಖ್ಯಮಂತ್ರಿ ಯಡಿಯೂರಪ್ಪ ಈ ವರ್ಷ  90,000 ಕೋಟಿ ಸಾಲ ಮಾಡಬಹುದು!
ರಾಜ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಈ ವರ್ಷ 90,000 ಕೋಟಿ ಸಾಲ ಮಾಡಬಹುದು!

ಒಂದು ಸಮಾಧಾನದ ಸಂಗತಿ ಎಂದರೆ, ಕರ್ನಾಟಕ ರಾಜ್ಯವು ಎಂದೂ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ವಿಧಿಸಿದ ಮಿತಿಯನ್ನು ಮೀರಿಲ್ಲ. ಅದು ವಿತ್ತೀಯ ಕೊರತೆಯಾಗಲೀ, ಸಾಲ ಪಡೆಯುವುದಾಗಲೀ, ನಿಯಮಗಳನ್ನು ಪಾಲಿಸುತ್ತಲೇ ಬಂದಿದೆ.

ರೇಣುಕಾ ಪ್ರಸಾದ್ ಹಾಡ್ಯ

ಕರೋನಾ ಸೋಂಕು ತಡೆಯಲು ದೇಶವ್ಯಾಪಿ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವಷ್ಟೇ ಅಲ್ಲದೇ ರಾಜ್ಯ ಸರ್ಕಾರಗಳೂ ಹಣಕಾಸು ಸಂಪನ್ಮೂಲಗಳ ಕೊರತೆ ಎದುರಿಸುತ್ತಿವೆ. ಪ್ರಸಕ್ತ ವಿತ್ತೀಯ ವರ್ಷದ ಅಂದರೆ 2020-21ನೇ ಸಾಲಿನ ಮೊದಲ ತಿಂಗಳಲ್ಲಿ ತೆರಿಗೆ ಸಂಗ್ರಹ ಬಹುತೇಕ ಶೂನ್ಯಮಟ್ಟಕ್ಕೆ ಇಳಿದಿದೆ. ಕೇಂದ್ರ ಸರ್ಕಾರವು ಈ ಮೊದಲೇ ತನ್ನ ಸಾಲ ಎತ್ತುವ ಪ್ರಮಾಣವನ್ನು 12 ಲಕ್ಷ ಕೋಟಿ ರುಪಾಯಿಗೆ ಏರಿಸಿದೆ.

ರಾಜ್ಯಸರ್ಕಾರಗಳು ಸಹ ಸಾಲ ಪಡೆಯುವ ಮಿತಿಯನ್ನು ಏರಿಸುವಂತೆ ಕೇಂದ್ರದ ಮೇಲೆ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಈ ಹಿಂದಿನಿಂದಲೂ ಒತ್ತಡ ಹೇರುತ್ತಲೇ ಬಂದಿದ್ದರು. ಕೇಂದ್ರ ಸರ್ಕಾರ ಕೊನೆಗೂ ರಾಜ್ಯಗಳ ಸಾಲ ಪಡೆಯುವ ಮಿತಿಯನ್ನು ಹೆಚ್ಚಳ ಮಾಡಲು ಒಪ್ಪಿದೆ. ಪ್ರಸಕ್ತ ರಾಜ್ಯಗಳು ಆಯಾ ವಿತ್ತೀಯ ವರ್ಷದ ಎಸ್ಜಿಡಿಪಿಯ ಶೇ.3ರಷ್ಟು ಮೊತ್ತವನ್ನು ಸಾಲವಾಗಿ ಪಡೆಯಲು ಅವಕಾಶ ಇದೆ. ಈ ಮಿತಿಯನ್ನು ಕೇಂದ್ರ ಸರ್ಕಾರವು ಶೇ.5ಕ್ಕೆ ಹೆಚ್ಚಿಸಿದೆ.

ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಪ್ರಕಾರ, ಕಾಲಕಾಲಕ್ಕೆ ಕೇಂದ್ರವು(RBI ಸಮಾಲೋಚನೆಯೊಂದಿಗೆ) ನಿಗದಿ ಮಾಡುವ ಪ್ರಮಾಣದ ಸಾಲ ಮತ್ತು ವಿತ್ತೀಯ ಕೊರತೆ ಮಿತಿಯನ್ನು ಎಲ್ಲಾ ರಾಜ್ಯಗಳೂ ಕಾಯ್ದುಕೊಳ್ಳಬೇಕು.

ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ವಿತ್ತೀಯ ಕೊರತೆ ಮಿತಿ ಮತ್ತು ಸಾಲದ ಮಿತಿಯನ್ನು ಮೀರಿದರೆ ಆಂತರಿಕ ಸಮಸ್ಯೆ ಎಂದರೆ ಹಣದುಬ್ಬರ ಹೆಚ್ಚಳವಾಗುತ್ತದೆ, ಬಾಹ್ಯ ಸಮಸ್ಯೆ ಎಂದರೆ, ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳದೇ ಇದ್ದಲ್ಲಿ ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ರೆಟಿಂಗ್ಸ್ ತಗ್ಗಿಸುತ್ತವೆ, ಇದರಿಂದ ವಿದೇಶಿ ನೇರಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಈಗ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಾಲದ ಮಿತಿಯನ್ನು ಎಸ್ಜಿಡಿಪಿಯ ಶೇ.5ರಷ್ಟಕ್ಕೆ ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಜ್ಯಗಳಿಗೆ ಖಂಡಿತಾ ಅನುಕೂಲವಾಗಲಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ರಾಜ್ಯಗಳಿಗೆ ಇದು ವರದಾನವೇ ಹೌದು. ಪ್ರಸಕ್ತ ವಿತ್ತೀಯ ವರ್ಷದಲ್ಲಾಗುವ ತೆರಿಗೆ ಸಂಪನ್ಮೂಲದ ಕೊರತೆಯನ್ನು ಸಾಲದ ಮೂಲಕ ಸರಿದೂಗಿಸಿಕೊಳ್ಳುತ್ತವೆ. ಅಲ್ಲದೇ ಬೊಕ್ಕಸ ಪೂರ್ಣ ಬರಿದಾದಾಗ ಗರಿಷ್ಠ ಪ್ರಮಾಣದಲ್ಲಿ ಆಪತ್ಕಾಲೀನ ಸಾಲ (ವೇಸ್ ಅಂಡ್ ಮೀನ್ಸ್ ಲೋನ್) ಪಡೆಯಲು ಅವಕಾಶವಾಗುತ್ತದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಷ್ಟು ಕೋಟಿ ಹೆಚ್ಚುವರಿಯಾಗಿ ಸಾಲ ಮಾಡಬಹುದು?

ಒಂದು ಸಮಾಧಾನದ ಸಂಗತಿ ಎಂದರೆ, ಕರ್ನಾಟಕ ರಾಜ್ಯವು ಎಂದೂ ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ವಿಧಿಸಿದ ಮಿತಿಯನ್ನು ಮೀರಿಲ್ಲ. ಅದು ವಿತ್ತೀಯ ಕೊರತೆಯಾಗಲೀ, ಸಾಲ ಪಡೆಯುವುದಾಗಲೀ, ನಿಯಮಗಳನ್ನು ಪಾಲಿಸುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ಅತಿಹೆಚ್ಚು ಬಾರಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ ಅವರಿಗೂ, ಮುಖ್ಯಮಂತ್ರಿ ಆಗಿದ್ದಾಗಲೆಲ್ಲ ಹಣಕಾಸು ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹಾಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ವಿತ್ತೀಯ ಶಿಸ್ತು ಕಾಯ್ದುಕೊಂಡಿರುವುದಕ್ಕೆ ಅಭಿನಂದಿಸಲೇ ಬೇಕು.

2020-21ನೇ ಸಾಲಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ಬಜೆಟ್ ನಲ್ಲಿ 53,917.50 ಕೋಟಿ ರುಪಾಯಿ ಸಾಲ ಪಡೆಯುವ ಪ್ರಸ್ತಾಪ ಮಾಡಿದ್ದಾರೆ. 46,071.66 ಕೋಟಿ ವಿತ್ತೀಯ ಕೊರತೆಯನ್ನು ಪ್ರಸ್ತಾಪಿಸಿದ್ದಾರೆ. ರಾಜ್ಯ ಸರ್ಕಾರ ಪ್ರಕಟಿಸಿರುವ ಮಧ್ಯಮಾವಧಿ ವಿತ್ತೀಯ ಯೋಜನಾ (2020-2024) ವರದಿಯಲ್ಲಿ ರಾಜ್ಯದ ಜಿಡಿಪಿ (SGDP) ಮೌಲ್ಯವು 2020-21ನೇ ಸಾಲಿನಲ್ಲಿ 18,05,742 ಕೋಟಿ ರುಪಾಯಿಗಳು ಎಂದು ಮುನ್ನಂದಾಜು ಮಾಡಿದೆ. ಈ ಪ್ರಕಾರ, ರಾಜ್ಯ ಸರ್ಕಾರವು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಎಸ್ಜಿಡಿಪಿ 18,05,742 ಕೋಟಿ ರುಪಾಯಿಗಳ ಶೇ.5ರಷ್ಟು ಅಂದರೆ, 90,287 ಕೋಟಿ ರುಪಾಯಿಗಳಷ್ಟು ಸಾಲ ಪಡೆಯಬಹುದಾಗಿದೆ. ಅಂದರೆ, ಈಗಾಗಲೇ ಬಜೆಟ್ ನಲ್ಲಿ ಪ್ರಸ್ತಾಪಿಸಿದ ಪ್ರಮಾಣ 53,917.50 ಕೋಟಿ ರುಪಾಯಿಗಳ ಜತೆಗೆ ಯಡಿಯೂರಪ್ಪ ನವರು ಇನ್ನೂ ಹೆಚ್ಚುವರಿಯಾಗಿ 36,370 ಕೋಟಿ ರುಪಾಯಿಗಳನ್ನು ಸಾಲ ಪಡೆಯಬಹುದಾಗಿದೆ.

ಅಂದರೆ, ಒಂದು ವೇಳೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಮತ್ತು ತೆರಿಗೆಯೇತರ ಮೂಲದ ಆದಾಯ ಬಾರದೇ ಇದ್ದರೂ ಯಾವುದೇ ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚಗಳನ್ನು ತಗ್ಗಿಸದೇ ಅಭಿವೃದ್ಧಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಹಾಗಾದರೆ ಪ್ರತಿ ವರ್ಷ ಹೀಗೆ ಸಾಲ ಮಾಡುತ್ತಾ ಹೋದರೆ ಸಾಲದ ಪ್ರಮಾಣ ಹೆಚ್ಚುವುದಿಲ್ಲವೇ? ಹೌದು. ಹೆಚ್ಚುತ್ತದೆ. ಆದರೆ, ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ಪ್ರಕಾರ ಯಾವುದೇ ರಾಜ್ಯಗಳು ತಮ್ಮ ಎಸ್ಜಿಡಿಪಿಯ ಶೇ.25ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಾಡುವಂತಿಲ್ಲ. ಸಾಲದ ಮಿತಿಯನ್ನು ಮೀರಿದರೆ, ಈ ಸಾಲಗಳಿಗೆ ಗ್ಯಾರಂಟಿ ನೀಡಬೇಕಾದ, ಕೇಂದ್ರ ಸರ್ಕಾರ ಮತ್ತು ಸಾಲವನ್ನು ಪಡೆಯಲು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಸಾಲ ಪಡೆಯದಂತೆ ಕಡಿವಾಣ ಹಾಕುತ್ತವೆ.

ರಾಜ್ಯ ಸರ್ಕಾರಗಳು ಪ್ರತಿ ಬಜೆಟ್ ನಲ್ಲಿಯೂ ಈ ಹಿಂದೆ ಮಾಡಿರುವ ಸಾಲದ ಮರುಪಾವತಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗೆ ಅನುದಾನವನ್ನು ಕಡ್ಡಾಯವಾಗಿ ಮೀಸಲಿಡುತ್ತವೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಸಾಲ ಮರುಪಾವತಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗಾಗಿಯೇ ಮುಖ್ಯಮಂತ್ರಿಯಡಿಯೂರಪ್ಪ ಅವರು ಬಜೆಟ್ ನಲ್ಲಿ 11,605.28 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿತ್ತೀಯ ನಿರ್ವಹಣೆ ಮತ್ತು ಪರಿಶೀಲನಾ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ರಾಜ್ಯ ಸರ್ಕಾರದ ಸಾಲ ಪ್ರಮಾಣವು ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆ ವಿಧಿಸಿರುವ ಮಿತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸುತ್ತದೆ.

ರಾಜ್ಯ ಸರ್ಕಾರವು SGDPಯ ಶೇ.25ರಷ್ಟು ಪ್ರಮಾಣದಲ್ಲಿ ಸಾಲ ಮಾಡುವ ಅವಕಾಶ ಇದ್ದರೂ, ರಾಜ್ಯದಲ್ಲಿ ಹಣಕಾಸು ಖಾತೆ ನಿರ್ವಹಿಸಿದವರ ವಿತ್ತೀಯ ಶಿಸ್ತಿನಿಂದಾಗಿ ಶೇ.20ರಷ್ಟರ ಗಡಿಯನ್ನು ದಾಟಿದ ಉದಾಹರಣೆಗಳು ಅತಿ ವಿರಳ. 2016-17ರಲ್ಲಿ ಶೇ.19.81 ರಷ್ಟು, 2017-18ರಲ್ಲಿ ಶೇ.18.75, 2018-19ರಲ್ಲಿ ಶೇ.20.26 ಮತ್ತು 2019-20ರಲ್ಲಿ ಶೇ.19.19ರಷ್ಟಿತ್ತು. ವಿತ್ತೀಯ ಶಿಸ್ತಿನ ಲೆಕ್ಕದಲ್ಲಿ ಕರ್ನಾಟಕ ಯಾವಾಗಲೂ ಅಗ್ರಪಂಕ್ತಿಯಲ್ಲಿದೆ.

Click here Support Free Press and Independent Journalism

Pratidhvani
www.pratidhvani.com