ಕೇಂದ್ರದ ಅಸಹಕಾರದ ನಡುವೆ BSY ಕರ್ನಾಟಕವನ್ನು ಮುನ್ನಡೆಸಿದ್ದೇಗೆ.!?
ರಾಜ್ಯ

ಕೇಂದ್ರದ ಅಸಹಕಾರದ ನಡುವೆ BSY ಕರ್ನಾಟಕವನ್ನು ಮುನ್ನಡೆಸಿದ್ದೇಗೆ.!?

ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರಾಜ್ಯಗಳು ಕೂಡಾ ಶ್ರಮ ಪಟ್ಟವು. ದೇಶವಾಸಿಗಳು ಏದುರಿಸಿದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲಾ ರಾಜ್ಯಗಳು ಹೈರಾಣಾಗಿವೆ. ಈ ವೇಳೆ ರಾಜ್ಯದ ಬೆನ್ನಿಗೆ ನಿಲ್ಲ ಬೇಕಾದ ಕೇಂದ್ರ ಸರ್ಕಾರ ಸರಿಯಾಗಿ ನಡೆದುಕೊಂಡಿಲ್ಲ. ಅದ್ರಲ್ಲೂ ನಮ್ಮ ಕರ್ನಾಟಕಕ್ಕೆ ಈ ಅವಧಿಯಲ್ಲಿ ಕೇಂದ್ರದಿಂದ ಸಿಕ್ಕಿದ್ದಾದರು ಏನು..?

ಆಶಿಕ್‌ ಮುಲ್ಕಿ

ಮೇ 17ರಂದು ಮೂರನೇ ಹಂತದ ಲಾಕ್‌ ಡೌನ್‌ ಮುಕ್ತಾಯಗೊಳ್ಳಲಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ ನಾಲ್ಕನೇ ಹಂತದ ಲಾಕ್‌ ಡೌನ್‌ ಬಗ್ಗೆಯೂ ಸೂಚನೆ ನೀಡಿದ್ದಾರೆ. ಹೀಗಾಗಿ ನಾಲ್ಕನೇ ಹಂತದ ಲಾಕ್‌ ಡೌನ್‌ ಕೂಡ ಜಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಆದರೂ ಸಡಿಲಿಕೆಯಂತೂ ಇದ್ದೇ ಇದೆ. ಈಗಾಗಲೇ ರೈಲ್ವೇ ಸಂಚಾರವನ್ನು ಆರಂಭಿಸಲಾಗಿದೆ. ಷರತ್ತುಬದ್ಧವಾಗಿ ಪ್ರಯಾಣಿಸಲು ದೇಶವಾಸಿಗಳಿಗೆ ಅನುವು ಮಾಡಿ ಕೊಡಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರಾಜ್ಯಗಳು ಕೂಡಾ ಶ್ರಮ ಪಟ್ಟವು. ವಲಸೆ ಕಾರ್ಮಿಕರಿಂದ ಹಿಡಿದು ರೈತರು ಬೆಳೆದ ಫಸಲನ್ನು ಮಾರುಕಟ್ಟೆಗೆ ಸಾಗಿಸಲು ಸಾರಿಗೆ ಸಮಸ್ಯೆಯವರೆಗೆ ಹಲವಾರು ಸಮಸ್ಯೆಗಳು ರಾಜ್ಯ ಸರ್ಕಾರವನ್ನು ಹೈರಾಣಾಗಿಸಿವೆ. ಈ ವೇಳೆ ರಾಜ್ಯದ ಬೆನ್ನಿಗೆ ನಿಲ್ಲ ಬೇಕಾದ ಕೇಂದ್ರ ಸರ್ಕಾರ ಸರಿಯಾಗಿ ನಡೆದುಕೊಂಡಿಲ್ಲ. ಅದ್ರಲ್ಲೂ ನಮ್ಮ ಕರ್ನಾಟಕಕ್ಕೆ ಈ ಅವಧಿಯಲ್ಲಿ ಕೇಂದ್ರದಿಂದ ಸಿಕ್ಕಿದ್ದಾದರು ಏನು..?

ಮೂರು ಹಂತದ ಲಾಕ್‌ ಡೌನ್‌ ನಿಂದಾಗಿ ರಾಜ್ಯದಲ್ಲಾದ ಬದಲಾವಣೆ ಏನು ಅನ್ನೋದು ರಾಜ್ಯದ ಮುಂದಿರುವ ಪ್ರಶ್ನೆ. ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆ ಏನು ಅನ್ನೋದು ಮತ್ತೊಂದು ವಿಚಾರ. ಈ ಲಾಕ್‌ ಡೌನ್‌ ಅವಧಿಯಲ್ಲಿ ಬಿಎಸ್‌ ವೈ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಅಲ್ಪಮಟ್ಟದ ಸುಧಾರಣೆ ಆಗಿದೆ. ಕೋವಿಡ್‌ 19 ರಾಜ್ಯದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಲು ಹೊರಡುವ ಸಮಯದಲ್ಲಿ ಇದರ ಸಾಧಕ ಬಾಧಕ ಗೊತ್ತಿಲ್ಲದೆ ಬಿಜೆಪಿ ಸರ್ಕಾರ ಕಂಗಾಲಾಗಿ ಹೋಯ್ತು. ಅದಾದ ಬಳಿಕ ತಕ್ಷಣವೇ ರಾಜ್ಯದ ಕೆಲವು ಆಸ್ಪತ್ರೆಗಳನ್ನು ಕೋವಿಡ್‌ 19 ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಲಾಯ್ತು. ಮುಖ್ಯವಾಗಿ ಬೆಂಗಳೂರಿನಲ್ಲಿನ ವಿಕ್ಟೋರಿಯಾ ಆಸ್ಪತ್ರೆ, ರಾಜೀವ್‌ ಗಾಂಧಿ ಮೆಡಿಕಲ್‌ ಕಾಲೇಜು, ಕೆಸಿ ಜನರಲ್‌ ಮುಂತಾದ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ರಾಮಯ್ಯ ಆಸ್ಪತ್ರೆಯಂಥಾ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯನ್ನೂ ರಾಜ್ಯ ಆರೋಗ್ಯ ಇಲಾಖೆ ಕೋವಿಡ್‌ 19 ವಿಶೇಷ ಆಸ್ಪತ್ರೆಯೆಂದು ಘೋಷಿಸಿಕೊಂಡಿತು. ಇದಾದ ಬಳಿಕ ಜಿಲ್ಲೆಯಲ್ಲಿರುವ ಎಲ್ಲಾ ಜಿಲ್ಲಾಸ್ಪತ್ರೆಗಳನ್ನೂ ಕೋವಿಡ್‌ 19 ವಿಶೇಷ ಆಸ್ಪತ್ರೆಯಿಂದು ಆದೇಶ ಹೊರಡಿಸಿತು.

ಇವಿಷ್ಟು ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ರಾಜ್ಯ ಯಡಿಯೂರಪ್ಪ ಸರ್ಕಾರ ಇಂಥಾ ಸಮಯದಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆಯನ್ನು ಬಹಳ ಸೂಕ್ತ ರೀತಿಯಲ್ಲೇ ಬಳಸಿಕೊಂಡಿದ್ದಾರೆ. ಆರಂಭದಲ್ಲಿ ಕೆಲ ಪೊಲೀಸರ ನಡೆ ಕೋಮುದ್ವೇಷಕ್ಕೆ ಕಾರಣವಾಯ್ತು.‌ ಈತನ್ಮಧ್ಯೆ ದೆಹಲಿಯ ತಬ್ಲೀಘಿ ಸಮಾವೇಶದ ಪರಿಣಾಮ ರಾಜ್ಯ ಮೇಲೂ ನಾವು ಕಂಡೆವು. ಮಾಧ್ಯಮಗಳ ಕೊಡುಗೆಯಿಂದ ರಾಜ್ಯದಲ್ಲಿ ಕೋಮುದ್ವೇಷ ಹರಡಿತು. ಬೇಧಭಾವವಿಲ್ಲದೆ ಜನರನ್ನು ಅಟ್ಟಾಡಿಸುತ್ತಿದ್ದ ಕರೋನಾಗೆ ಧರ್ಮದ ಬಣ್ಣ ಬಳಿಯಲಾಯ್ತು. ತಮ್ಮ ಸ್ವಪಕ್ಷ ನಾಯಕರುಗಳೇ ಕೋಮು ಹೇಳಿಕೆ ನೀಡಿ ಬಿಎಸ್‌ ವೈ ಅನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಈ ಸಮಯದಲ್ಲಿ ಕರ್ತವ್ಯ ಪ್ರಜ್ಙೆ ಮೆರೆದ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪಸಂಖ್ಯಾತರ ಮೇಲೆ ಈ ಪ್ರಕರಣವನ್ನು ಕಟ್ಟಿದರೆ ಮತ್ತು ಈ ಪ್ರಕರಣಕ್ಕೆ ಕೋಮು ಬಣ್ಣ ಬಳಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದಕ್ಕೆ ತೆರೆ ಎಳೆದರು.

ಆ ಬಳಿಕ ಪೊಲೀಸರು ಮತ್ತು ವೈದ್ಯರು ಸ್ವಯಂ ಸೇವಕರ ರೀತಿಯಲ್ಲಿ ಹಗಲು ರಾತ್ರಿ ಎಂಬಂತೆ ಕೆಲಸ ಮಾಡಿದ್ದು ಕಣ್ಣಾರೆ ಕಂಡಿದ್ದೇವೆ. ಈ ಮಧ್ಯೆ ಸೋಶಿಯಲ್‌ ಮೀಡಿಯಾದಲ್ಲಿ ಹಬ್ಬಿದ ವಿಡಿಯೋ ಫೂಟೇಜ್‌ ಗಳು ಮತ್ತು ಸುದ್ದಿಗಳ ಒಟ್ಟು ಹುರಳೇನು ಅನ್ನುವುದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತಿರುವ ಸಂಗತಿ. ಯಾವುದರಲ್ಲೂ ಸ್ಪಷ್ಟತೆ ಇಲ್ಲ. ಆದರೂ ಸರ್ಕಾರದ ಮಾತು ಮೀರಿ ಕೆಲ ಪೊಲೀಸರು ನಡೆದುಕೊಂಡಿದ್ದಾರೆ.

ಇವೆಲ್ಲದರ ಮಧ್ಯೆ ಈ ಲಾಕ್‌ ಡೌನ್‌ ಸಮಯದಲ್ಲಿ ರಾಜ್ಯ ಸರ್ಕಾರ ಮಾಡಿದ ಎಡವಟ್ಟು ಒಂದೆರಡಲ್ಲ. ಹೀಗೆಂದ ಮಾತ್ರಕ್ಕೆ ಅವೆಲ್ಲವೂ ಬಿಎಸ್‌ ಯಡಿಯೂರಪ್ಪನವರ ಸರ್ಕಾರದ ತಪ್ಪುಗಳೆಂದಲ್ಲ. ಬದಲಿಗೆ ರಾಜ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದ್ದ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ಅಸಲಿಗೆ ರಾಜ್ಯಕ್ಕೆ ಸುಮಾರು 2 ರಿಂದ 3 ಸಾವಿರ ಕೋಟಿ ರೂಪಾಯಿ ಪ್ರತಿ ಮೂರು ತಿಂಗಳಿಗೊಮ್ಮೆ ಜಿಎಸ್‌ಟಿಯ ಪಾಲು ಕೇಂದ್ರದಿಂದ ಸಂದಾಯವಾಗಬೇಕು. ಕನಿಷ್ಠ ಪಕ್ಷ ಒಂದು ಕಂತಿನ ಜಿಎಸ್‌ಟಿಯ 28 ಕೋಟಿ ಮರುಪಾವತಿಯನ್ನೂ ಮಾಡದೆ, ನಯಾ ಪೈಸೆಯೂ ನಮ್ಮ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂಬುದು ಒಟ್ಟು ರಾಜಕೀಯ ಪಡಸಾಲೆಯ ಮಾತು. ಇದರ ಜತೆಗೆ, 15ನೇ ಹಣಕಾಸು ಆಯೋಗದ ಅನ್ವಯ ರಾಜ್ಯ 36 ಸಾವಿರ ಕೋಟಿ ಅನುದಾನದ ಹಕ್ಕನ್ನು ಹೊಂದಿದೆ. ಆದರೆ ಇಂಥಾ ವಿಷಮ ಸಮಯದಲ್ಲಿ ಅದು ಕೂಡ ಕೇಂದ್ರ ಸರ್ಕಾರ ನೀಡಲಿಲ್ಲ. ಇದರ ಹಿನ್ನೆಲೆ ಹಣಕಾಸು ಆಯೋಗ ರಾಜ್ಯಕ್ಕೆ 4 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿಮಾಡಿತ್ತು. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅದನ್ನು ನಿರ್ಧಾಕ್ಷಿಣ್ಯವಾಗಿ ತಿರಸ್ಕರಿಸಿದರು. ಹೀಗೆ ಕೈಗೆ ಬಿಡಿಗಾಸು ಬರದೆ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳುವಲ್ಲಿ ಬಿಎಸ್‌ ವೈ ಸರ್ಕಾರ ಎಡವಿತು.

ರಾಜ್ಯದಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ಜಿಲ್ಲೆಗಳು ಎಂದರೆ, ದಾವಣೆಗೆರೆ, ದಕ್ಷಿಣ ಕನ್ನಡ, ಬೀದರ್‌, ಕಲಬುರ್ಗಿ ಮತ್ತು ಬಾಗಲಕೋಟೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು. ಆದರೆ ಕೇಂದ್ರ ಸರ್ಕಾರ ರೆಡ್‌ ಝೋನ್‌ ಪಟ್ಟಿ ಬಿಡುಗಡೆ ಮಾಡುವಾಗ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಮಾತ್ರ ರೆಡ್‌ ಝೋನ್‌ ಎಂದು ಘೋಷಿಸಿತು. ಇದು ಉಳಿದ ಜಿಲ್ಲೆಗಳಿಗೆ ಕೊಡಬಹುದಾದ ಪ್ರಾಮುಖ್ಯತೆಯನ್ನು ಕಡಿತಗೊಳಿಸಿತು. ಇದು ಕೇಂದ್ರ ಸರ್ಕಾರ ಏಕಪಕ್ಷೀಯ ರೀತಿಯಲ್ಲಿ ವರ್ತಿಸಿದೆ ಎಂಬುದುಕ್ಕಿರುವ ಸೂಕ್ತ ನಿದರ್ಶನ. ಯಾಕೆಂದರೆ, ವಾಸ್ತವದಲ್ಲಿ ಜಿಲ್ಲೆಗಳ ಸ್ಥಿತಿಗತಿ ಹೇಗಿದೆ ಅನ್ನುವುದು ಕೇಂದ್ರಕ್ಕಿಂತ ಚೆನ್ನಾಗಿ ಬಲ್ಲವರು ರಾಜ್ಯ ಸರ್ಕಾರ. ಆದರೂ ರಾಜ್ಯ ಸರ್ಕಾರದ ಮಾತನ್ನು ಗಾಳಿಗೆ ತೂರಿದ ಕೇಂದ್ರ ಸರ್ಕಾರ ತನ್ನ ಮಾತೇ ವೇದ ವಾಕ್ಯ ಎಂಬಂತೆ ನಡೆದುಕೊಂಡಿತು. ಈ ಮೂಲಕ ವಿನಾಕಾರಣವಾಗಿ ರಾಜ್ಯ ಸರ್ಕಾರ ಈ ಮೂರು ಜಿಲ್ಲೆಗಳ ಜೊತೆಗೆ ಇರುವ ಅಲ್ಪ ಸಂಪನ್ಮೂಲಗಳನ್ನ ಬಳಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗದುಕೊಳ್ಳಲು ಹೆಣಗಾಡಿತು.

ಕೇಂದ್ರ ಸರ್ಕಾರ ಇದ್ದಕ್ಕಿದ್ದ ಹಾಗೆ ನಾಲ್ಕು ಗಂಟೆಗೆ ಮುಂಚಿತವಾಗಿ ಬಂದು ಸಂಪೂರ್ಣ ಲಾಕ್‌ ಡೌನ್‌ಗೆ ಆದೇಶಿಸಿತು. ಈ ವೇಳೆ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕಾದ ಸಿದ್ಧತೆಗಳಿಗೂ ಅನುವು ಮಾಡಿಕೊಡದೆ ಏಕಾಏಕಿಯಾಗಿ ಲಾಕ್‌ ಡೌನ್‌ ಹೇರಿತು. ಇದರ ಪರಿಣಾಮ ಎಲ್ಲಾ ರಾಜ್ಯಗಳಂತೆ ಕರ್ನಾಟಕದ ಮೇಲೂ ಬಿದ್ದಿದೆ. ಇದರಿಂದಾಗಿ ಎಲ್ಲಾ ವ್ಯಾಪಾರ ವಹಿವಾಟುಗಳ ಮೇಲೆ ಬಿದ್ದ ಹೊಡೆತ ಸಣ್ಣದೇನಲ್ಲ. ಎಷ್ಟರ ಮಟ್ಟಿಗೆ ಎಂದರೆ ಅಬಕಾರಿ, ಮೋಟಾರು ವಾಹನ ತೆರಿಗೆ, ಭೂ ನೊಂದಾಣಿಯ ಮೂಲಕ ರಾಜ್ಯದ ಬೊಕ್ಕಸಕ್ಕೆ ದೊಡ್ಡ ರೀತಿಯಲ್ಲಿ ತೆರಿಗೆ ಹರಿದು ಬರುತ್ತಿದ್ದವು. ಆದರೆ ಲಾಕ್‌ ಡೌನ್‌ ನಿಂದಾಗಿ ಈ ಎಲ್ಲಾ ವಹಿವಾಟು ಸ್ಥಗಿತಗೊಂಡು ರಾಜ್ಯದ ಖಜಾನೆಗೆ ಹೊರೆಯ ಬರೆ ಬಿತ್ತು. ಹೀಗೆ ಕೇಂದ್ರ ಸರ್ಕಾರ ರಾಜ್ಯವನ್ನು ಈ ದುರಿತ ಕಾಲದಲ್ಲಿ ಕಡೆಗಣಿಸಿತು.

ಇಷ್ಟೇ ಅಲ್ಲದೇ ರಾಜ್ಯ ಸರ್ಕಾರ ಕಳೆದ 54 ದಿನಗಳ ಕಾಲ ಲಾಕ್‌ ಡೌನ್‌ ಆಚರಣಯ ವೇಳೆ ಗೊಂದಲದ ಗೂಡಾಗಿತ್ತು. ಯಾವ ಸಮಯದಲ್ಲಿ ಎಂಥಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಅನ್ನೋ ಸ್ಪಷ್ಟತೆ ಬಿಎಸ್‌ ವೈ ಸರಕಾರಕ್ಕೆ ಇಲ್ಲದಂತಿತ್ತು. ಮೊದಲು ಲಾಕ್‌ ಡೌನ್‌ ಎಂಬುವುದನ್ನು ಸೀಲ್‌ ಡೌನ್‌ ಎಂದು ಹೇಳಿತ್ತು. ಅದಾಗಿ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತೆ ಲಾಕ್‌ ಡೌನ್‌ ಎಂದು ಹೇಳಿತು. ಈತನ್ಮಧ್ಯೆ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅನುಮತಿ ಎಂದು ಸ್ವತಃ ಸಿಎಂ ಯಡಿಯೂರಪ್ಪನವರೇ ಅಧಿಸೂಚನೆ ಹೊರಡಿಸಿದ್ರು. ಇದೂ ಕೂಡ ಕೆಲವೇ ಕೆಲವು ಸಮಯದಲ್ಲಿ ಹಿಂಪಡೆಯಲಾಯ್ತು. ಮತ್ತು ಮಧ್ಯ ಮಾರಟಕ್ಕೆ ಅನುಮತಿ ನೀಡಬೇಕೋ ಬೇಡವೋ ಎಂಬ ವಿಚಾರದಲ್ಲೂ ರಾಜ್ಯ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಿದ್ದು ಅಲ್ಪಸ್ವಲ್ಪವೇನಲ್ಲ. ಎರಡೆರಡು ಭಾರಿ ಮಧ್ಯ ಮಾರಾಟಕ್ಕೆ ಅನುಮತಿ ಕೊಟ್ಟು, ಅನುಮತಿ ಹಿಂಪಡೆಯಿತು.

ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುವುದು ಸ್ಪಷ್ಟವಾಗಿತ್ತು. ಪ್ರತಿ ದಿನ ಬಿಡುಗಡೆಗೊಳ್ಳುತ್ತಿದ್ದ ಹೆಲ್ತ್‌ ಬುಲೆಟಿನ್‌ನಲ್ಲಿ ಒಂದು ಅಂಕಿ ಅಂಶ ಮತ್ತು ಮಾನ್ಯ ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಹೇಳುತ್ತಿದ್ದ ಅಂಕಿ ಅಂಶವೇ ಬೇರೆಯಾಗಿತ್ತು. ಇಷ್ಟು ಗೊಂದಲ ಸಾಕಾಗದು ಅಂತ, ವೈಧ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್‌ ಹೇಳಿಕೆಯಲ್ಲೂ ಅಜಗಜಾಂತರ ವ್ಯತ್ಯಾಸ ಇತ್ತು. ಹೀಗೆ ಲಾಕ್‌ ಡೌನ್‌ ವೇಳೆ ತೆಗೆದುಕೊಳ್ಳಬೇಕಾದ ನಿರ್ಧಾರಗಳಲ್ಲಿಯೂ ಮತ್ತು ತಮ್ಮ ಅಂಗಗಳ ಜೊತೆಗೂ ನಿರಂತರ ಸಂಪರ್ಕವಿಲ್ಲದೆ ಬಿಜೆಪಿ ಸರ್ಕಾರ ಪೇಚಾಡಿತು.

ಹೀಗೆಲ್ಲಾ ಇದ್ದರೂ, ಮೇ 15ರಂದು ಮಾಧ್ಯಮಗೋಷ್ಠಿ ನಡೆಸಿದ ಮಾನ್ಯ ಮುಖ್ಯಮಂತ್ರಿಗಳು ರೈತರಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟರು. ನನ್ನ ಬೆಳೆ ನನ್ನ ಹಕ್ಕು ಎಂದು ಹೇಳಿದರು. ಅಂದರೆ, ರೈತರು ತಾವು ಬೆಳೆದ ಫಸಲನ್ನು ಎಪಿಎಂಸಿಯಲ್ಲಷ್ಟೇ ಮಾರಾಟ ಮಾಡಬೇಕೆಂದೇನಿಲ್ಲ. ಬದಲಿಗೆ ತಮಗೆ ಹೆಚ್ಚಿನ ಆದಾಯ ಸಿಗುವ ರೀತಿಯಲ್ಲಿ ತಮ್ಮಿಷ್ಟದಂತೆ ಎಲ್ಲಾದರೂ ಮಾರಾಟ ಮಾಡಿಕೊಳ್ಳಬಹುದು ಎಂದು ಸಿಎಂ ಹೇಳಿದ್ದಾರೆ. ಇದು ರೈತರು ಕೊಂಚ ಸಮಾಧಾನಿಸಿಕೊಳ್ಳುವ ಸಂಗತಿ. ಅಲ್ಲದೇ ನಾಲ್ಕನೇ ಹಂತದ ಲಾಕ್‌ ಡೌನ್‌ ಕುರಿತಾಗಿ ಕೇಂದ್ರದ ಅಧಿಸೂಚನೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಇಂಥಾ ದುರಿತ ಕಾಲದಲ್ಲಿ ರಾಜ್ಯ ಸರ್ಕಾರ ಬೆಂಬಲಕ್ಕೆ ನಿಲ್ಲಬೇಕಾದ ಕೇಂದ್ರ ಸರ್ಕಾರ ರಾಜ್ಯವನ್ನು ನಿರ್ಲಕ್ಷ್ಯ ಮಾಡಿದೆ ಅನ್ನುವುದಕ್ಕೆ ಮೇಲೆ ಹೇಳಲಾದ ಹಲವು ಉದಾಹರಣಗಳೇ ಸಾಕ್ಷ್ಯಗಳಾಗಿವೆ. ಹೀಗೆ ದೊಡ್ಡ ಮಟ್ಟದ ಆರ್ಥಿಕ ಹೊಡೆತ ತಿಂದಿರುವ ರಾಜ್ಯ ಸರ್ಕಾರ ತನ್ನ ಬಳಿ ಇರುವ ಖಜಾನೆಯನ್ನು ವಿನಯೋಗಿಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರಮವಹಿಸಿದೆ ಎಂಬುದು ಮಾತ್ರ ಸತ್ಯ. ಅಲ್ದೇ ಇಷ್ಟೆಲ್ಲಾ ಬರೆ ತನ್ನ ಮೈ ಮೇಲೆ ಬಿದ್ದಿದ್ದರೂ ಕೂಡ ಕರ್ನಾಟ ಕ ಕೋವಿಡ್‌ 19 ಹಿಮ್ಮೆಟ್ಟಿಸುವಲ್ಲಿ ಉತ್ತಮ ಸಾಧನೆ ತೋರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶ್ಲಾಘಿಸಿದೆ. ಅಲ್ಲದೇ ದೇಶದ ಇತರೆಡೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 11 ದಿನಗಳು ಬೇಕಿದ್ದರೆ ಕರ್ನಾಟಕದಲ್ಲಿ ಸೋಂಕಿತರು ದ್ವಿಗುಣವಾಗುವ ದಿನಗಳು 21 ಆಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಎಸಗಿದ ಈ ಅನ್ಯಾಯದ ಮಧ್ಯೆ ಯಡಿಯೂರಪ್ಪನವರು ಸರ್ಕಾರದ ಗಾಲಿ ತಿರುಗಿಸಿದರು.

ಇನ್ನು ನಾಲ್ಕನೇ ಹಂತದ ಲಾಕ್‌ ಡೌನ್‌ ಬಗ್ಗೆ ಮೇ 17ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಲಿದೆ. ಈಗಾಗಲೇ ಬಸವಳಿದಿರುವ ರಾಜ್ಯ ಸರ್ಕಾರಕ್ಕೆ ಮತ್ತೊಂದು ಲಾಕ್‌ ಡೌನ್‌ ಸಹಿಸುವ ಶಕ್ತಿ ಇದೆಯೇ ಅನ್ನೋದು ಸದ್ಯದ ಯಕ್ಷ ಪ್ರಶ್ನೆ. ಸದ್ಯ ಅಬಕಾರಿ ಇಲಾಖೆ ಕಾರ್ಯ ಚಟುವಟಿಕೆ ಶುರು ಮಾಡಿಕೊಂಡಿದೆಯಾದರೂ, ಕೆಲಸವಿಲ್ಲದೆ, ಆದಾಯವಿಲ್ಲದೆ ಜನರು ಹಿಟ್ಟಿಗಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗಲೂ ಮುಂದೇನು ಮತ್ತು ಹೇಗೆ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂಬುದರ ಸ್ಪಷ್ಟ ಚಿತ್ರಣ ರಾಜ್ಯ ಸರ್ಕಾರ ಹೊಂದಿರಬೇಕು. ಒಂದು ವೇಳೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲ ಸಿಕ್ಕಿದ್ದರೆ ಖಂಡಿತವಾಗಿಯೂ ಹಲವಾರು ಅವಾಂತರಗಳನ್ನು ತಪ್ಪಿಸಬಹುದಿತ್ತು. ಆದರೆ, ಕೇಂದ್ರದ ಮಾತು ಧಿಕ್ಕರಿಸುವ ಸ್ಥಿತಿಯಲ್ಲಿರಲಿಲ್ಲ ಬಿಎಸ್‌ ವೈ ಸರ್ಕಾರ. ಲಾಕ್‌ ಡೌನ್‌ನಿಂದಾಗಿ ಕರೋನಾ ವೈರಸನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ. ಬದಲಿಗೆ ಸೋಂಕು ಹರಡುವುದರನ್ನು ತಡೆಗಟ್ಟಬಹುದು ಅನ್ನೋ ಪರಮಸತ್ಯವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕು.

Click here Support Free Press and Independent Journalism

Pratidhvani
www.pratidhvani.com