ಶಿವಮೊಗ್ಗದಲ್ಲಿ ಆತಂಕ ಹುಟ್ಟಿಸಿದ ಹೊಸ ಪ್ರಕರಣ: P-995 ಹಿಸ್ಟರಿ ಮಿಸ್ಟರಿ ಏನು?
ರಾಜ್ಯ

ಶಿವಮೊಗ್ಗದಲ್ಲಿ ಆತಂಕ ಹುಟ್ಟಿಸಿದ ಹೊಸ ಪ್ರಕರಣ: P-995 ಹಿಸ್ಟರಿ ಮಿಸ್ಟರಿ ಏನು?

ಮಂಬೈನಂತಹ ಇಡೀ ದೇಶದಲ್ಲೇ ಅತಿ ಹೆಚ್ಚು ಸೋಂಕು ಹೊಂದಿರುವ ತೀರಾ ಅಪಾಯಕಾರಿ ಪ್ರದೇಶದಿಂದ ಬಂದ ವ್ಯಕ್ತಿಯನ್ನು ಆತನ ಮಾಹಿತಿ ತಿಳಿದ ನಾಲ್ಕು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡದಿರಲು ಕಾರಣವೇನು? ಎಂಬ ಪ್ರಶ್ನೆ ಆತಂಕಕ್ಕೆ ಕಾರಣವಾಗಿದೆ!

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಶುಕ್ರವಾರ ಮತ್ತೊಂದು ಕರೋನಾ ಸೋಂಕು ಪ್ರಕರಣ ದೃಢಪಟ್ಟಿದ್ದು, ಕಳೆದ ಭಾನುವಾರ ದೃಢಪಟ್ಟಿದ್ದು ಎಂಟು ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಒಂಭತ್ತು ಪ್ರಕರಣಗಳು ಖಚಿತವಾಗಿವೆ.

ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಸಮೀಪದ ಹಳ್ಳಿಬೈಲು ಗ್ರಾಮದ ವ್ಯಕ್ತಿಯೊಬ್ಬರು ಮುಂಬೈನಿಂದ ಆಗಮಿಸಿದ್ದು, ಅವರನ್ನು ಮೇ 11ರಂದೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರಿಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ 42 ವರ್ಷದ ಆತನನ್ನು ಪಿ-995 ಎಂದು ಗುರುತಿಸಲಾಗಿದೆ. ಸೋಂಕು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಗುರುವಾರ ರಾತ್ರಿಯೇ ಆತನ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಿ 12 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಿದೆ. ಜೊತೆಗೆ ಆತನ ತಂಗಿದ್ದ ಹಳ್ಳಿಬೈಲು, ಆತನ ಪ್ರಾಥಮಿಕ ಸಂಪರ್ಕಿತರು ಸಂಚರಿಸಿದ್ದ ರಂಜದಕಟ್ಟೆ, ಮುಳಬಾಗಿಲು ಮುಂತಾದ ಗ್ರಾಮಗಳಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಪಿ-995ನ್ನು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಆತನ ಸಂಪರ್ಕಕ್ಕೆ ಬಂದ 12 ಮಂದಿಯನ್ನು ಕೂಡ ವಿವಿಧಡೆ ಕ್ವಾರಂಟೈನ್ ಮಾಡಿದ್ದು, ಅವರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಸಂಜೆಯ ಹೊತ್ತಿಗೆ ಫಲಿತಾಂಶ ಬರಲಿದೆ. ಬಳಿಕ ಸೀಲ್ ಡೌನ್ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಸಂಪರ್ಕದಲ್ಲಿ ಪ್ರಮುಖವಾಗಿ ಪಿ 995 ಪತ್ನಿ, ಮಕ್ಕಳು, ಆತನ ಸಂಪರ್ಕಕ್ಕೆ ಬಂದ ಇತರರು ಸೇರಿದ್ದಾರೆ ಎನ್ನಲಾಗಿದೆ.

ಆದರೆ, ಇಡೀ ಪ್ರಕರಣದ ವಿಷಯದಲ್ಲಿ ಜಿಲ್ಲಾಡಳಿತ ಕೆಲವು ಸಂಗತಿಗಳನ್ನು ಮುಚ್ಚಿಡುತ್ತಿದ್ದು, ಮಂಬೈನಂತಹ ಹಾಟ್ ಸ್ಪಾಟ್ ನಿಂದ ಬಂದ ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡದೆ, ಮನೆಯಲ್ಲಿಯೇ ಕ್ವಾರಂಟೈನ್ ಮಾಡಿದ್ದು ಯಾಕೆ? ಕಳೆದ ಭಾನುವಾರ ಅಹಮದಾಬಾದಿನಿಂದ ಜಿಲ್ಲೆಗೆ ಬಂದಿದ್ದ 8 ಮಂದಿಯಲ್ಲಿ ಕರೋನಾ ಸೋಂಕು ದೃಢಪಟ್ಟ ಸಂಗತಿಯನ್ನು ಬಹಿರಂಗಪಡಿಸುವಾಗ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಕ್ವಾರಂಟೈನ್ ಕುರಿತ ಕಠಿಣ ನಿಯಮ ಪಾಲನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಆ ವೇಳೆ ಅವರು, ಹೆಚ್ಚು ಕರೋನಾ ಪ್ರಕರಣಗಳಿರುವ ಸೂಕ್ಷ್ಮಪ್ರದೇಶಗಳನ್ನು ಹೊಂದಿರುವ ರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೂ ಮತ್ತು ಸೂಕ್ಷ್ಮವಲ್ಲದ ಪ್ರದೇಶದಿಂದ ಬರುವವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡುವುದಾಗಿಯೂ ಹೇಳಿದ್ದರು.

ಆದರೆ, ಇದೀಗ ಮಂಬೈನಂತಹ ಇಡೀ ದೇಶದಲ್ಲೇ ಅತಿ ಹೆಚ್ಚು ಸೋಂಕು ಹೊಂದಿರುವ ತೀರಾ ಅಪಾಯಕಾರಿ ಪ್ರದೇಶದಿಂದ ಬಂದ ವ್ಯಕ್ತಿಯನ್ನು ಆತನ ಮಾಹಿತಿ ತಿಳಿದ ನಾಲ್ಕು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡದಿರಲು ಕಾರಣವೇನು? ಹಾಗೆಯೇ, ಹೊರರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಿಯೇ ಒಳಬಿಟ್ಟುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ, ಈ ಪಿ 995 ಜಿಲ್ಲಾಡಳಿತದ ಮಾಹಿತಿ ಪ್ರಕಾರವೇ ಮೇ 11ರಂದೇ ತೀರ್ಥಹಳ್ಳಿಯ ಹಳ್ಳಿಬೈಲಿನಲ್ಲಿರುವುದು ಗೊತ್ತಾಗಿದೆ. ಹಾಗಾದರೆ ಆತ ಜಿಲ್ಲಾ ಗಡಿಗಳಲ್ಲಿ ಇನ್ನೂ ತಪಾಸಣೆ ಬಿಗಿಯಾಗಿದ್ದಗಲೂ ಹೇಗೆ ಯಾರ ಗಮನಕ್ಕೂ ಬಾರದೆ ತನ್ನ ಊರಿಗೆ ತಲುಪಲು ಸಾಧ್ಯವಾಯಿತು? ಎಂಬ ಪ್ರಶ್ನೆ ಕೂಡ ಎದ್ದಿದೆ

ಜೊತೆಗೆ, ಸ್ಥಳೀಯರ ಮಾಹಿತಿ ಪ್ರಕಾರ, ಪಿ 995 ಗ್ರಾಮಕ್ಕೆ ಬಂದದ್ದು ಮೇ 11ಕ್ಕೂ ಮೊದಲೇ. ವಾಸ್ತವವಾಗಿ ಆತ ಸೋಂಕು ಅತಿ ಹೆಚ್ಚು ಇರುವ ಮುಂಬೈನ ಧಾರಾವಿ ಪ್ರದೇಶದಲ್ಲೇ ಕೆಲಸ ಮಾಡಿಕೊಂಡಿದ್ದ. ಅಲ್ಲಿನ ಸರಣಿ ಸಾವುಗಳನ್ನು ಕಂಡು ಭಯಭೀತನಾಗಿ ತನ್ನ ಪತ್ನಿಗೆ ಕರೆ ಮಾಡಿ ಇಲ್ಲಿಂದಲೇ ಪಕ್ಕದ ಮನೆಯ ವ್ಯಕ್ತಿಯೊಬ್ಬರ ಕಾರು ತರಿಸಿಕೊಂಡು ಗ್ರಾಮಕ್ಕೆ ಬಂದಿದ್ದ. ಕಾರು ಚಾಲಕನೇ ಆತನ ಸಂಪರ್ಕಕ್ಕೆ ಬಂದ ಜಿಲ್ಲೆಯ ಮೊದಲ ವ್ಯಕ್ತಿ. ಆದರೆ, ಮೇ 11ರಂದು ಪಿ-995ನನ್ನು ಹೋಂ ಕ್ವಾರಂಟೈನ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಆತನ ಪ್ರಯಾಣ ಇತಿಹಾಸದ ಮಾಹಿತಿ ಪಡೆದೇ ಇಲ್ಲ ಜೊತೆಗೆ ಆತ ಹೇಗೆ ಮುಂಬೈನಿಂದ ಬಂದ ಎಂಬ ಮಾಹಿತಿ ಕೂಡ ಕಲೆಹಾಕಿಲ್ಲ. ಹಾಗಾಗಿ ಆತನನ್ನು ಹೊರತುಪಡಿಸಿ ಯಾರನ್ನೂ ಕ್ವಾರಂಟೈನ್ ಮಾಡಿರಲೇ ಇಲ್ಲ. ಮೇ 14ರಂದು ಆತನ ಪರೀಕ್ಷಾ ವರದಿ ಕರೋನಾ ಸೋಂಕನ್ನು ದೃಢಪಡಿಸಿದ ಬಳಿಕವಷ್ಟೇ ಕಾರು ಚಾಲಕ ಸೇರಿ 12 ಮಂದಿಯನ್ನು ಗುರುವಾರ ರಾತ್ರಿ ಕ್ವಾರಂಟೈನ್ ಮಾಡಲಾಗಿದೆ.

ಆದರೆ, ಈ ಕಾರು ಚಾಲಕ ಆ ಭಾಗದಲ್ಲಿ ಸದಾ ಜನಸಂಪರ್ಕದಲ್ಲಿದ್ದ. ರಂಜದ ಕಟ್ಟೆಯ ಮದುವೆ ಸಮಾರಂಭ, ತೀರ್ಥಹಳ್ಳಿಯ ಸಾವಿನ ಮನೆಯೊಂದಕ್ಕೂ ಹೋಗಿ ಬಂದಿದ್ದಾನೆ. ಜೊತೆಗೆ ಪಿ 995 ಪತ್ನಿ ಕೂಡ ಆತ ಮನೆಗೆ ಬಂದ ಬಳಿಕ ನಿರಂತರವಾಗಿ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ಹೋಗುತ್ತಲೇ ಇದ್ದರು. ಅಂಗಡಿಮುಂಗಟ್ಟುಗಳಿಗೂ ಹೋಗಿ ಬಂದಿದ್ದಾರೆ. ಹಾಗಾಗಿ ಈ ಪ್ರಾಥಮಿಕ ಸಂಪರ್ಕದ ಪರೀಕ್ಷಾ ವರದಿಯ ಫಲಿತಾಂಶವೇ ಈಗ ನಿರ್ಣಾಯಕ. ಆದರೆ, ಶುಕ್ರವಾರ ಸಂಜೆಯವರೆಗೆ ಈ ಪಿ 995 ಹೇಗೆ ಜಿಲ್ಲೆಯೊಳಗೆ ಪ್ರವೇಶ ಪಡೆದ, ಯಾವ ವಾಹನದಲ್ಲಿ, ಯಾವ ದಿನ ಬಂದ, ಆತನನ್ನು ಕರೆತಂದವರು ಯಾರು, ಈ ಕಾರು ಚಾಲಕ ಆತನನ್ನು ಕರೆತಂದಿದ್ದರೆ, ಎಲ್ಲಿಂದ ಕರೆತಂದ ಮತ್ತು ಆತ ಆ ಬಳಿಕ ಎಲ್ಲೆಲ್ಲಿ ಸುತ್ತಾಡಿದ್ದಾನೆ, ಯಾರೆಲ್ಲಾ ಆತನ ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿಲ್ಲ. ಮಾಧ್ಯಮಗಳು ಪಿ 995 ಪ್ರಯಾಣ ಇತಿಹಾಸ(ಟ್ರಾವೆಲ್ ಹಿಸ್ಟರಿ) ಕೇಳಿದಾಗ, ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದತ್ತ ಬೊಟ್ಟುಮಾಡಿ ನಿರಾಕರಿಸಿದ್ದಾರೆ. ಆದರೆ ಈ ಮೊದಲು ಅಹಮದಾಬಾದಿನಿಂದ ಬಂದಿದ್ದವರ ವಿಷಯದಲ್ಲಿ ಮಾತ್ರ ಪ್ರಯಾಣ ಇತಿಹಾಸದ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿಯೇ ನೀಡಲಾಗಿತ್ತು!

ಒಟ್ಟಾರೆ, ಪಿ 995 ಪ್ರಕರಣ ಜಿಲ್ಲೆಯಲ್ಲಿ ಈವರೆಗೆ ಇರದೇ ಇದ್ದ ಸ್ಥಳೀಯ ಸೋಂಕು ಹರಡುವಿಕೆಯ ಅಪಾಯಕ್ಕೆ ಜಿಲ್ಲೆಯನ್ನು ನೂಕಿದೆ. ಜಿಲ್ಲಾಡಳಿತ ಮುಂಬೈನಂಥ ಅಪಾಯಕಾರಿ ಪ್ರದೇಶದಿಂದ ಬಂದ ವ್ಯಕ್ತಿಯ ಮತ್ತು ಆತನ ಸಂಪರ್ಕಕ್ಕೆ ಬಂದವರ ವಿಷಯದಲ್ಲಿ ತಾಳಿದ ನಿರ್ಲಕ್ಷ್ಯ ದುಬಾರಿಯಾಗಿ ಪರಿಣಮಿಸುವ ಅಪಾಯ ಎದುರಾಗಿದೆ ಎಂಬುದು ತೀರ್ಥಹಳ್ಳಿ ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

Click here Support Free Press and Independent Journalism

Pratidhvani
www.pratidhvani.com