"ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ನಾವೇ"
ರಾಜ್ಯ

"ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ನಾವೇ"

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಲು ನಾವೇ ಕಾರಣರು ಎಂದು ರಮೇಶ್‌ ಜಾರಕಿಹೊಳಿ ಇಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಕೃಷ್ಣಮಣಿ

ಕಳೆದ ವರ್ಷ ಮೇ ಅಂತ್ಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಇದೇ ವೇಳೆಗೆ ಅಂದಿನ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಗದ್ದಲ ಗಲಾಟೆ ಶುರುವಾಗಿತ್ತು. ಕಾಂಗ್ರೆಸ್ ಶಾಸಕರು ಹಾಗೂ ಜೆಡಿಎಸ್ ಶಾಸಕರು ಆಪರೇಷನ್ ಸಕ್ಸಸ್ ಆಗುತ್ತೆ ಎನ್ನುವ ಎಲ್ಲಾ ಲೆಕ್ಕಾಚಾರಗಳು ನಡೆಯುತ್ತಿದ್ದವು, ಮೇಲ್ನೋಟಕ್ಕೆ ಯಾವುದೇ ಆಪರೇಷನ್ ಕಮಲ ಇಲ್ಲವೆಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಅದೇ ರೀತಿ ನಮ್ಮ ಪಕ್ಷದ ಶಾಸಕರು ಪಕ್ಷಕ್ಕೆ ನಿಷ್ಠಾವಂತರು ಎಂದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಹೇಳುತ್ತಿದ್ದವು. ಆದ್ರೆ ಜೂನ್ ಅಂತ್ಯದ ವೇಳೆಗೆ ಆಪರೇಷನ್ ಕಮಲ ರಂಗು ಪಡೆದುಕೊಂಡು ಜುಲೈನಲ್ಲಿ ಸರ್ಕಾರ ಪತನವಾಗಿತ್ತು.

ಈ ಪತನದ ಹಿಂದಿನ ಶಕ್ತಿ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಎನ್ನುವುದು ಮೇಲ್ನೋಟಕ್ಕೆ ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ ಅದೇ ರಮೇಶ್ ಜಾರಕಿಹೊಳಿ ಇದೀಗ ಮತ್ತೊಂದು ಹೆಸರನ್ನು ಬಹಿರಂಗ ಮಾಡಿದ್ದಾರೆ. ಅದುವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಧುಗಿರಿಯ ಕೆ.ಎನ್ ರಾಜಣ್ಣ.

ಕೆ.ಎನ್ ರಾಜಣ್ಣ ಲೋಕಸಭಾ ಚುನಾವಣೆ ವೇಳೆಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದರು. ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದು ಮಾಜಿ ಸಚಿವರನ್ನು ಕೆರಳಿಸಿತ್ತು. ತುಮಕೂರಿನಿಂದ ಲೋಕಸಭಾ ಅಖಾಡಕ್ಕೆ ಇಳಿದಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿದ್ದರು. ಮುದ್ದಹನುಮೇಗೌಡರ ಜೊತೆ ತಾನೂ ಕೂಡ ನಾಮಿನೇಷನ್ ಮಾಡುವ ಮೂಲಕ ಅಖಾಡ ರಂಗೇರುವಂತೆ ಮಾಡಿದ್ದರು. ಆದರೂ ನಾನು ಕಾಂಗ್ರೆಸ್ಸಿಗ, ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಆದರೆ ಸರ್ಕಾರ ಮಾತ್ರ ಇರೋದಿಲ್ಲ ಎಂದು ಸ್ಪಷ್ಟಪಡಿಸುತ್ತಲೇ ಇದ್ದರು. ಅದರಂತೆ ಸರ್ಕಾರ ಕುಸಿದುಬಿತ್ತು. ಆದ್ರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕುಸಿತದ ಹಿಂದೆ ರಾಜಣ್ಣ ಅವರ ಶ್ರಮ ಕೂಡ ಇತ್ತು ಎನ್ನುವುದನ್ನು ಜಲಸಂಪನ್ಮೂಲ ಇಲಾಖೆ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ತುಮಕೂರಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವ ರಮೇಶ್ ಜಾರಕಿಹೊಳಿ, K.N.ರಾಜಣ್ಣ ನಾನೂ ಸೇರಿ ಸರ್ಕಾರ ಬೀಳಿಸಿದ್ವಿ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಲು K.N.ರಾಜಣ್ಣ ಸಾಥ್ ನೀಡಿದ್ದರು. ಮೈತ್ರಿ ಸರ್ಕಾರ ಬೀಳಿಸಲು ಒಂದು ಉದ್ದೇಶ ಇತ್ತು. ಕೆ.ಎನ್.ರಾಜಣ್ಣ ಅವರು ಕೈ ಜೋಡಿಸಿ ಸರ್ಕಾರ ಬೀಳಿಸಿದ್ವಿ. ಲೋಕಸಭೆ ಚುನಾವಣೆ ವೇಳೆಯೇ ಈ ಬಗ್ಗೆ ರಾಜಣ್ಣ ಹೇಳಿಕೆ ಕೊಟ್ಟಿದ್ರು. ಸರ್ಕಾರದ ಪಥನದ ಬಳಿಕ ರಾಜಣ್ಣಗೆ ಬಿಜೆಪಿಗೆ ಬರಲು ಹೇಳಿದ್ವಿ. ಆದರೆ ರಾಜಣ್ಣ ಬಂದಿಲ್ಲ. ನಾವೂ ಬಾಲ್ಯದಿಂದಲೂ ಕಾಂಗ್ರೆಸ್‌ನಲ್ಲಿ ಇದ್ದೋರು. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲಿಲ್ಲವೇ..? ಮುಂದಿನ ದಿನಗಲ್ಲಿ ಅವರು ಬಿಜೆಪಿ ಸೇರಿದ್ರೆ ಒಳ್ಳೇದು ಎನ್ನುವ ಮೂಲಕ ರಾಜಣ್ಣಗೆ ಕಮಲ ಪಕ್ಷದ ಆಹ್ವಾನ ನೀಡಿದ್ದಾರೆ. ಒಟ್ಟಾರೆ, ನಾನು ಕಾಂಗ್ರೆಸ್ ಪಕ್ಷದ ಕಟ್ಟಾಳು ಎನ್ನುತ್ತಿದ್ದ ರಾಜಣ್ಣ ಬಣ್ಣ ಬೆಳಗಾವಿ ಸಾಹುಕಾರನಿಂದ ಬಯಲಾಗಿದೆ.

Click here Support Free Press and Independent Journalism

Pratidhvani
www.pratidhvani.com