ಹೊಸ ಅಲೆಗೆ ನಾಂದಿಯಾದ ‘ಸಂಸ್ಕಾರ’ಕ್ಕೆ 50 ವರುಷ    
ರಾಜ್ಯ

ಹೊಸ ಅಲೆಗೆ ನಾಂದಿಯಾದ ‘ಸಂಸ್ಕಾರ’ಕ್ಕೆ 50 ವರುಷ   

1970ರ ಮೇ 13ರಂದು ‘ಸಂಸ್ಕಾರ’ ತೆರೆಕಂಡಿತ್ತು. ಭಾರತೀಯ ಚಿತ್ರರಂಗದ ಗಮನಸೆಳೆದಿದ್ದ ‘ಸಂಸ್ಕಾರ’ ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿಯಾದ ಪ್ರಯೋಗ. ಇಂದಿಗೆ ಚಿತ್ರ ತೆರೆಕಂಡು ಐವತ್ತು ವರ್ಷ! ಹಿರಿಯ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ‘ಸಂಸ್ಕಾರ‘ಕ್ಕೆ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದ ಖ್ಯಾತ ಚಿತ್ರಕಲಾವಿದ ಎಸ್.ಜಿ.ವಾಸುದೇವ್ ಚಿತ್ರದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.     

ಶಶಿಧರ್‌ ಚಿತ್ರದುರ್ಗ

ಶಶಿಧರ್‌ ಚಿತ್ರದುರ್ಗ

- ಗಿರೀಶ್‌ ಕಾಸರವಳ್ಳಿ

ಕನ್ನಡದಲ್ಲಿ ಭಿನ್ನ ಧಾಟಿಯ ಚಿತ್ರಗಳಿಗೆ ಪ್ರೇರಣೆ ನೀಡಿದ್ದು 'ಸಂಸ್ಕಾರ'. ಆವತ್ತಿನ ಚಿಂತನ ಕ್ರಮ ಏನಿತ್ತು, ಅಲ್ಲೀವರೆಗೆ ಬಂದಂಥ ಸಿನಿಮಾಗಳು ಹಾಗೆಯೇ ಇರುತ್ತಿದ್ದವು. ಆಗ ಎಮೋಷನಲ್ ಫ್ರೇಮ್'ನಲ್ಲಿ ಸಿನಿಮಾ ಕಟ್ತಾ ಇದ್ರು. ಅಲ್ಲಿ ಭಾವನೆಗಳಿಗೆ ಒತ್ತು ಇರುತ್ತಿತ್ತೇ ಹೊರತು ವೈಚಾರಿಕತೆಗೆ ಪ್ರಾಮುಖ್ಯತೆ ಇರಲಿಲ್ಲ. ಒಂದು ವಿಷಯದ ಹಿಂದಿನ ಸಾಮಾಜಿಕ ಸ್ಥಿತಿ-ಗತಿಗಳ ಬಗ್ಗೆ ಹೇಳ್ತಾ ಇರಲಿಲ್ಲ. 'ಬೆಳ್ಳಿಮೋಡ' ಪುರುಷಪ್ರಧಾನ ಸಮಾಜದ ಬಗ್ಗೆ, 'ಗೆಜ್ಜೆಪೂಜೆ' ವೇಶ್ಯಾವಾಟಿಕೆ ಬಗ್ಗೆ ಹೇಳುತ್ತವೆ. ಆದರೆ ಅಲ್ಲಿ ವಿಶ್ಲೇಷಣಾತ್ಮಕ ಭಾವನೆ ಇರಲಿಲ್ಲ. 'ಗೆಜ್ಜೆಪೂಜೆ'ಯಲ್ಲಿ ವೇಶ್ಯಾವಾಟಿಕೆಯನ್ನ ಸಮಸ್ಯೆ ಆಗಿ ಅಷ್ಟೇ ನೋಡಿದ್ರೇ ಹೊರತು, ಒಟ್ಟು ಸಾಮಾಜಿಕ ಸಂರಚನೆಯಲ್ಲೇ ಏನಾದರೂ ಸಮಸ್ಯೆ ಇದ್ಯಾ ಅನ್ನೋ ಕಲ್ಪನೆ ಇರಲಿಲ್ಲ. ಆಗ ಸಾಹಿತ್ಯವೂ ಹಾಗೆಯೇ ಇತ್ತು. ಇದು ನಿರ್ದೇಶಕನ ಮೂಲಕ ಸಿನಿಮಾಗೂ ಬಂತು. ಈ ರೀತಿಯ ಸಿದ್ಧಮಾದರಿ ಒಡೆದ 'ಸಂಸ್ಕಾರ' ಬಹು ಪ್ರಮುಖವಾದ ಸಿನಿಮಾ ಆಗಿ ನಿಲ್ಲುತ್ತದೆ.

ಎರಡನೆಯದಾಗಿ ಇದು ಸಿನಿಮಾದ ಭಾಷೆಯನ್ನೇ ಬದಲಿಸಿದ ಕೃತಿ. ಅಲ್ಲೀ ತನಕ ಒಂದು ರೀತಿಯಲ್ಲಿ ವಸ್ತುಸ್ಥಿತಿಗೆ ಪೂರಕವಾದ ದೃಶ್ಯಗಳು ಇರುತ್ತಿರಲಿಲ್ಲ. ಬಡತನ, ಭ್ರಷ್ಟಾಚಾರದ ಸನ್ನಿವೇಶಗಳನ್ನು ಕ್ಲೀಷೆಯಾಗಿ ಕಟ್ಟುತ್ತಾ ಇದ್ರು. ಅಲ್ಲಿ ವೈರುಧ್ಯಗಳನ್ನು ಹೇಳ್ತಾ ಇರಲಿಲ್ಲ. ಸಂಸ್ಕಾರದಲ್ಲಿ ಪ್ರಾಣೇಶಾಚಾರ್ಯರ ಪ್ರಬುದ್ಧತೆಗೆ ಪ್ರತಿಕ್ರಿಯೆಯಾಗಿ ಮಾಲೇರ ಪುಟ್ಟಣ್ಣ ತಾತ್ವಿಕ ನೆಲೆಗಟ್ಟನ್ನು ಕಟ್ಟುತ್ತಾರೆ. ಅಭಿನಯ, ಸಂಗೀತ, ಕಲಾ ನಿರ್ದೇಶನ, ಮೇಕಪ್ ಎಲ್ಲದರಲ್ಲೂ ಆ ಚಿತ್ರ ವಿಶೇಷವೆನಿಸುತ್ತದೆ. ಇನ್ನು ಅಭಿನಯಕ್ಕೆ ಬಂದರೆ ಅಲ್ಲಿ ಕಲಾವಿದರು ಪಾತ್ರಗಳನ್ನು 'ನಿರ್ವಹಿಸಿದ್ದಾರೆ'. ನಾವು ಕಲ್ಪನಾರನ್ನು ನಟನೆಗೆ ಹೊಗಳುತ್ತೇವೆ. ಆದರೆ ಅವರು ಪಾತ್ರವನ್ನು ಅಭಿನಯಿಸುತ್ತಾರೆ, ನಿರ್ವಹಿಸೋದಿಲ್ಲ. ತಾವು ಹೊರಗಡೆ ನಿಂತು ಪಾತ್ರ ಅಭಿನಯಿಸುತ್ತಾರೆ. 'ಪಾತ್ರ ನಿರ್ವಹಣೆ' ನನಗೆ ಮೊದಲು ಕಂಡದ್ದೇ ಮಾಲೇರ ಪುಟ್ಟ ಮತ್ತು ಉಳಿದ ಬ್ರಾಹ್ಮಣರ ಪಾತ್ರಗಳ ನಿರ್ವಹಣೆಯಲ್ಲಿ. ಉಳಿದಂತೆ ಹೊಸ ರೀತಿಯ ಕ್ಯಾಮರಾ ತಂತ್ರಗಳನ್ನು ಬಳಸಿದ್ದು.. ಈ ಎಲ್ಲಾ ಕಾರಣಗಳಿಮದಾಗಿ ಅದರು ಕನ್ನಡದ ಶ್ರೇಷ್ಠ ಸಿನಿಮಾ ಎನಿಸಿಕೊಳ್ಳುತ್ತದೆ. ಸಿನಿಮಾ ಮಾಡಲು ತಮಗೆ ನೇರ ಪ್ರೇರಣೆ ನೀಡಿದ್ದು 'ಸಂಸ್ಕಾರ' ಎಂದು ಖ್ಯಾತ ಚಿತ್ರನಿರ್ದೇಶಕ ಅಡೂರು ಗೋಪಾಲಕೃಷ್ಣ ಸಂದರ್ಶನವೊಂದರಲ್ಲಿ ಹೇಳಿದ್ದರು.

ಚಿತ್ರ ಬಿಡುಗಡೆಯಾದಾಗ ನಾನು ಫಾರ್ಮಸಿ ಸ್ಟೂಡೆಂಟ್ ಆಗಿದ್ದೆ. ಮೊದಲ ಬಾರಿಗೆ ನೋಡಿದಾಗ ಸಿನಿಮಾ ಅರ್ಥವಾಗಿರಲಿಲ್ಲ. ಅಲ್ಲೀವರೆಗೂ ಒಂದೇ ಥರದ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದ ನಮಗೆ ಸಿದ್ಧ ಮಾದರಿಯನ್ನು ಒಡೆದ ಸಿನಿಮಾ ಅಗಗಿಸಿಕೊಳ್ಳಲು ಟೈಂ ತಗೋಳುತ್ತೆ, ಅದು ಸಹಜ. ಮೊದಲ ಬಾರಿ 'ಸಂಸ್ಕಾರ' ನೋಡಲು ಹೋದ ನಾನು ಇದು 'ಚಂದವಳ್ಳಿಯ ತೋಟ', 'ಗೆಜ್ಜೆಪೂಜೆ', 'ಬೆಳ್ಳಿಮೋಡ' ಚಿತ್ರಗಳಂಥ ಮತ್ತೊಂದು ಸಿನಿಮಾ ಎಂದುಕೊಂಡಿದ್ದೆ. ಈ ಸಿನಿಮಾ ಮೊದಲ ಪಟ್ಟಿಗೆ ನನಗೆ ದಕ್ಕಲಿಲ್ಲ. ಉಳಿದವರಿಗೆ ಅರ್ಥವಾದ ಸಿನಿಮಾ ನನಗ್ಯಾಕೆ ಅರ್ಥವಾಗಲಿಲ್ಲ ಎಂದುಕೊಂಡಿದ್ದೆ. ಕ್ರಮೇಣ ಈ ಚಿತ್ರದ ಈಡಿಯಂ, ಭಾಷೆ, ಪಾಲಿಟಿಕ್ಸ್ ಅರ್ಥ ಆಯ್ತು. ನಂತರ ಅದರ ಸೊಗಸು, ವೈಶಿಷ್ಟತೆ, ಪ್ರಾಮುಖ್ಯತೆ ಗೊತ್ತಾಯ್ತು. ಈ ಚಿತ್ರ ವಿಶ್ಲೇಷಣಾತ್ಮಕವಾಗಿ ನಮ್ಮ ಇರುವಿಕೆಯನ್ನು ನಿರ್ವಹಿಸುತ್ತೆ.

ಈ ಚಿತ್ರವನ್ನು ನಾನು ಇವತ್ತೂ ಕೂಡ ಆಗಾಗ ನೋಡುತ್ತಾ ಇರುತ್ತೇನೆ. ಅಲ್ಲಿನ ವಿಶ್ಯುಯಲ್ಸ್, ಸೆಟಿಂಗ್ಸ್ ಇನ್ನೂ ನಾವೆಲ್ಟಿ ಕಳೆದುಕೊಂಡಿಲ್ಲ. ಒಂದು ರೀತಿ ಈ ಚಿತ್ರ ನಮ್ಮ ಕಣ್ಣೆದುರೇ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಆ ಥರ ಕಟ್ಟುವ ಕ್ರಮ ತುಂಬಾ ಕಷ್ಟ. ಈ ಚಿತ್ರದ ಪ್ರೇರಣೆಯಿಂದ ಆನಂತರ ಹಲವಾರು ಹೊಸ ಅಲೆಯ ಚಿತ್ರಗಳು ತೆರೆಕಂಡವು. ಆದರೆ ಅಲ್ಲಿ ಸಂಸ್ಕಾರದಲ್ಲಿದ್ದ ಕತೆ ಕಟ್ಟುವ ಕ್ರಮ ಸಿಗೋಲ್ಲ. ಹೀಗೆ, ಹಲವಾರು ಕಾರಣಗಳಿಂದಾಗಿ ಸಂಸ್ಕಾರ ಕನ್ನಡದ ಅತ್ಯಂತ ಪ್ರಮುಖ ಚಿತ್ರವಾಗಿ ನಿಲ್ಲುತ್ತದೆ.

------------

ಚಿತ್ರದ ಕಲಾನಿರ್ದೇಶಕ ಎಸ್.ಜಿ.ವಾಸುದೇವ್:

ಅದು 1963ರಲ್ಲಿ. ನಾನಾಗ ಮದರಾಸಿನ ಸ್ಕೂಲ್ ಆಫ್ ಆಟ್ರ್ಸ್ ಶಾಲೆಯಲ್ಲಿ ಮೂರನೇ ವರ್ಷದ ವಿದ್ಯಾರ್ಥಿ. ಪತ್ರಕರ್ತ ಮತ್ತು ಲೇಖಕ ವೈಎನ್‍ಕೆ ಅವರು ಮೊದಲ ಬಾರಿಗೆ ಗಿರೀಶ್ ಕಾರ್ನಾಡ್ ಅವರನ್ನು ಪರಿಚಯಿಸಿದರು. ಕಾರ್ನಾಡ್‍ಗೆ ಚಿತ್ರಕಲೆ ಬಗ್ಗೆ ಅಪಾರ ಆಸಕ್ತಿ. ನನಗೆ ಸಾಹಿತ್ಯದ ಅಭಿರುಚಿಯಿತ್ತು. ಸಮಾನಮನಸ್ಕರಾದ್ದರಿಂದ ಬಹುಬೇಗ ಆತ್ಮೀಯತೆ ಬೆಳೆಯಿತು. ಕಾರ್ನಾಡ್ ಅವರ ಸಂಗದಿಂದಾಗಿ ನನಗೆ ಕನ್ನಡ ಸಾಹಿತ್ಯದ ಪರಿಚಯವಾಯ್ತು. ಚೋಳಮಂಡಲಂನಲ್ಲಿನ ಆರ್ಟಿಸ್ಟ್ ವಿಲೇಜ್‍ನಲ್ಲಿ ನಾವು ಆಗಾಗ ಭೇಟಿಯಾಗುತ್ತಿದ್ದೆವು.

1967ರಲ್ಲಿ ಎನಿಸುತ್ತದೆ, ಕಾರ್ನಾಡರು ನನಗೆ ಓದಲೆಂದು ಅನಂತಮೂರ್ತಿಯವರ 'ಸಂಸ್ಕಾರ' ಕೃತಿ ಕೊಟ್ಟರು. ಇದನ್ನು ತೆರೆಗೆ ಅಳವಡಿಸುವ ಇರಾದೆ ವ್ಯಕ್ತಪಡಿಸಿದ್ದರು. ಕೃತಿ ಓದಿದ ನಾನು, ಸಿನಿಮಾ ಮಾಡಲು ಇದು ಅತ್ಯುತ್ತಮ ವಸ್ತು ಎಂದೆ. ಆದರೆ ಆಗ ನಮಗೆ ಸಿನಿಮಾ ಮಾಧ್ಯಮ ಹೊಸತು. ಸಿನಿಮಾ ವ್ಯಾಕರಣದ ಬಗ್ಗೆ ನಮಗೇನೂ ಗೊತ್ತಿರಲಿಲ್ಲ. ಈ ವೇಳೆ ಪಟ್ಟಾಭಿರಾಮಿ ರೆಡ್ಡಿ ಅವರ ಪರಿಚಯವಾಗಿ ಅವರಲ್ಲಿ ಈ ಬಗ್ಗೆ ಪ್ರಸ್ತಾಪಿಸಿದೆವು. ತಾವು ಈ ಸಿನಿಮಾ ನಿರ್ಮಿಸಿ, ನಿರ್ದೇಶಿಸುವುದಾಗಿ ಪಟ್ಟಾಭಿ ಹೇಳಿದಾಗ ಮುಂದಿನ ಕೆಲಸಗಳಿಗೆ ಚಾಲನೆ ಸಿಕ್ಕಿತು.

ಚಿತ್ರದ ಕಲಾನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ನಾನು ಲೊಕೇಶನ್ ಹುಡುಕಲು ಹೊರಟೆ. ಚಿಕ್ಕವನಿರುವಾಗ ಮೈಸೂರಿನಲ್ಲಿ ತಾತನೊಂದಿಗೆ ಬ್ರಾಹ್ಮಣರ ಅಗ್ರಹಾರಗಳಲ್ಲೆಲ್ಲಾ ಅಡ್ಡಾಡಿದ್ದೆ. ನನ್ನ ತಲೆಯಲ್ಲಿ ಅದು ರಿಜಿಸ್ಟರ್ ಆಗಿತ್ತು. ಲೊಕೇಶನ್ ಅಥೆಂಟಿಕ್ ಆಗಿರಬೇಕೆಂದು ಪಟ್ಟು ಬಿಡದೆ ಅಲೆದಾಡಿದ್ದೆ. ಶೃಂಗೇರಿ, ಕೊಪ್ಪದಲ್ಲಿ ನಮ್ಮ ಸಿನಿಮಾಗೆ ಸೂಕ್ತ ಲೊಕೇಶನ್ ಸಿಗುತ್ತಿದ್ದಂತೆ ಮದರಾಸಿಗೆ ವಾಪಸಾದೆ. ಪಟ್ಟಾಭಿ ನನ್ನೊಂದಿಗೆ ಒಬ್ಬ ಛಾಯಾಗ್ರಾಹಕನನ್ನು ಕಳುಹಿಸಿದರು. ಲೊಕೇಶನ್‍ಗೆ ಹೋದರೆ ಆತ ಸೆಟ್ ಹಾಕಿ ಚಿತ್ರಿಸಬೇಕು ಅಂದ. ಇವನು ಕ್ಯಾಮರಾ ಮಾಡಿದರೆ ಕೆಲಸ ಕೆಡುತ್ತದೆ ಎನಿಸಿದಾಗ ಆತ ಬೇಡವೆಂದು ಪಟ್ಟಾಭಿಯವರಿಗೆ ಹೇಳಿದೆ.

‘ಸಂಸ್ಕಾರ’ಸಿನಿಮಾ ಚಿತ್ರೀಕರಣ ಸಂದರ್ಭದ ಅಪರೂಪದ ಫೋಟೋ.(ಎಡದಿಂದ ಬಲಕ್ಕೆ, ಕೆಳಗೆ ಕುಳಿತವರು:ಚಿತ್ರದಲ್ಲಿ ‘ಚಂದ್ರಿ’ ಪಾತ್ರ ನಿರ್ವಹಿಸಿದ್ದ ನಟಿ ಸ್ನೇಹಲತಾ ರೆಡ್ಡಿ, ನಿರ್ದೇಶಕ ಪಟ್ಟಾಭಿರಾಮ ರೆಡ್ಡಿ, ಸಹಾಯಕ ನಿರ್ದೇಶಕ ಕಾನಕಾನಹಳ್ಳಿ ಗೋಪಿ, ಕಲಾನಿರ್ದೇಶಕ ಎಸ್.ಜಿ.ವಾಸುದೇವ್. ಜಗಲಿ ಮೇಲೆ ಕುಳಿತವರು: ಸಹನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್, ಛಾಯಾಗ್ರಾಹಕ ಟಾಮ್ ಕೋವನ್, ಲೇಖಕ ಡಾ.ಯು.ಆರ್.ಅನಂತಮೂರ್ತಿ, ನಟ ಗಿರೀಶ್ ಕಾರ್ನಾಡ್) (ಫೋಟೋ ಕೃಪೆ: ಜಗನ್ನಾಥ ಪ್ರಕಾಶ್)      
‘ಸಂಸ್ಕಾರ’ಸಿನಿಮಾ ಚಿತ್ರೀಕರಣ ಸಂದರ್ಭದ ಅಪರೂಪದ ಫೋಟೋ.(ಎಡದಿಂದ ಬಲಕ್ಕೆ, ಕೆಳಗೆ ಕುಳಿತವರು:ಚಿತ್ರದಲ್ಲಿ ‘ಚಂದ್ರಿ’ ಪಾತ್ರ ನಿರ್ವಹಿಸಿದ್ದ ನಟಿ ಸ್ನೇಹಲತಾ ರೆಡ್ಡಿ, ನಿರ್ದೇಶಕ ಪಟ್ಟಾಭಿರಾಮ ರೆಡ್ಡಿ, ಸಹಾಯಕ ನಿರ್ದೇಶಕ ಕಾನಕಾನಹಳ್ಳಿ ಗೋಪಿ, ಕಲಾನಿರ್ದೇಶಕ ಎಸ್.ಜಿ.ವಾಸುದೇವ್. ಜಗಲಿ ಮೇಲೆ ಕುಳಿತವರು: ಸಹನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್, ಛಾಯಾಗ್ರಾಹಕ ಟಾಮ್ ಕೋವನ್, ಲೇಖಕ ಡಾ.ಯು.ಆರ್.ಅನಂತಮೂರ್ತಿ, ನಟ ಗಿರೀಶ್ ಕಾರ್ನಾಡ್) (ಫೋಟೋ ಕೃಪೆ: ಜಗನ್ನಾಥ ಪ್ರಕಾಶ್)     

ಕಾರ್ನಾಡರು ನಟ-ನಟಿಯರು ಯಾರಿರಬೇಕೆಂದು ಪಟ್ಟಿ ಮಾಡುತ್ತಿದ್ದರು. ಕಲಾನಿರ್ದೇಶಕನಾದ ನನಗೆ ಕ್ಯಾಮರಾಮನ್ ಹುಡುಕುವ ದೊಡ್ಡ ಜವಾಬ್ದಾರಿ ಇತ್ತು. ಅದೇ ವೇಳೆ ಆಸ್ಟ್ರೇಲಿಯಾ ಮೂಲದ ಛಾಯಾಗ್ರಾಹಕ ಟಾಮ್ ಕೋವನ್ ಭಾರತಕ್ಕೆ ಬಂದಿದ್ದರು. ಚಿತ್ರನಿರ್ದೇಶಕ ಸತ್ಯಜಿತ್ ರೇ ಅವರನ್ನು ಭೇಟಿ ಮಾಡುವುದು ಅವರ ಉದ್ದೇಶವಾಗಿತ್ತು. ಈ ಮಧ್ಯೆ ಮದರಾಸಿಗೆ ಬಂದಿದ್ದ ಅವರು ಆರ್ಟಿಸ್ಟ್ ವಿಲೇಜ್‍ಗೆ ಬಂದಿದ್ದರು. ಮಾತಿನ ಮಧ್ಯೆ 'ಸಂಸ್ಕಾರ' ಸಿನಿಮಾ ಬಗ್ಗೆ ಪ್ರಸ್ತಾಪವಾಯ್ತು. ತಾವು ಚಿತ್ರಕ್ಕೆ ಕ್ಯಾಮರಾ ಮಾಡುವ ಇಚ್ಛೇ ವ್ಯಕ್ತಪಡಿಸಿದು ಟಾಮ್ ಕೋವನ್. ಅವರು ಮಾಡಿದ್ದ ಡಾಕ್ಯುಮೆಂಟರಿಗಳನ್ನು ತರಿಸಿ ನೋಡಿ ಅವರೇ ನಮ್ಮ ಚಿತ್ರಕ್ಕೆ ಸೂಕ್ತ ಛಾಯಾಗ್ರಾಹಕ ಎಂದು ನಿರ್ಧರಿಸಿದೆವು.

ಲೊಕೇಶನ್‍ಗೆ ಕರೆದೊಯ್ಯುತ್ತಿದ್ದಂತೆ ಟಾಮ್ ತುಂಬಾ ಎಕ್ಸೈಟ್ ಆಗಿದ್ದರು. ನಾವು ಚಿತ್ರದ ಕತೆ, ಸಂದರ್ಭ, ಆಶಯಗಳನ್ನೆಲ್ಲಾ ವಿವರಿಸಿದೆವು. ನಮ್ಮ ಆಲೋಚನೆಗಳು ಹೊಂದಾಣಿಕೆಯಾದ್ದರಿಂದಲೇ ಚಿತ್ರಕ್ಕೆ ಅವಶ್ಯವಾದ ಕ್ಯಾಮರಾ ಚೌಕಟ್ಟು ಸಿಕ್ಕಿದ್ದು. ಖಂಡಿತವಾಗಿ ಚಿತ್ರದ ಗೆಲುವಿನಲ್ಲಿ ಶೇ.50ರಷ್ಟು ಪಾಲು ಛಾಯಾಗ್ರಾಹಕ ಟಾಮ್‍ಗೆ ಸಲ್ಲಬೇಕು. ಅನಂತಮೂರ್ತಿಯವರ ಫೆಂಟಾಸ್ಟಿಕ್ ಕತೆ, ಕಾರ್ನಾಡರ ಸದೃಢ ಸ್ಕ್ರಿಪ್ಟ್, ನಿರ್ದೇಶನದಲ್ಲಿ ಪಟ್ಟಾಭಿಯವರಿಗೆ ಕಾನಕಾನಹಳ್ಳಿ ಗೋಪಿ ಮತ್ತು ಸಿಂಗೀತಂ ಶ್ರೀನಿವಾಸರಾವ್ ಅವರ ಉತ್ತಮ ಸಹಕಾರ, ರಾಜೀವ್ ತಾರಾನಾಥರ ಸಂಗೀತ ಸಂಯೋಜನೆ... ಎಲ್ಲವೂ ಮೇಳೈಸಿ ಒಂದು ಸುಂದರ ಕಲಾಕೃತಿ ರೂಪುಗೊಂಡಿತು.

ನಾನು ಆ ವೇಳೆಗೆ ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಸಿನಮಾ ನೋಡಿ ಪ್ರಭಾವಿತನಾಗಿದ್ದೆ. ರಿಯಲಿಸ್ಟ್ ವಿಶ್ಯುಯಲ್ ಬಗ್ಗೆ ನನ್ನದೇ ಆದ ಕಲ್ಪನೆಗಳಿದ್ದವು. ಅದಕ್ಕೆ ಸರಿಯಾಗಿ ಛಾಯಾಗ್ರಾಹಕ ಟಾಮ್ ಸಹಕಾರ ನೀಡಿದರು. ಸೆಟ್‍ಗೆ ಭೇಟಿ ನೀಡಿದ್ದ ಲೇಖಕ ಅನಂತಮೂರ್ತಿಯವರು ಲೊಕೇಶನ್‍ಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಕಲ್ಪನೆಯ ಲೊಕೇಶನ್‍ಗಳನ್ನೇ ಆಯ್ಕೆ ಮಾಡಿದ್ದೀರಿ ಎಂದಾಗ, ನಾನು ಸಿನಿಮಾ ಮಾಧ್ಯಮದ ಮಿತಿಗಳ ಬಗ್ಗೆಯೂ ಹೇಳಿದ್ದೆ. ಇಂದಿಗೆ ಸಿನಿಮಾ ಬಿಡುಗಡೆಯಾಗಿ ಐವತ್ತು ವರ್ಷ! ಪ್ರತಿಭಾವಂತರ ತಂಡದೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದನ್ನು ಅದೃಷ್ಟವೆಂದೇ ಭಾವಿಸಿದ್ದೇನೆ. ಇವರೊಂದಿಗೆ ಬೆರೆತು ನನ್ನ ವ್ಯಕ್ತಿತ್ವವೂ ಅರಳಿದೆ. 'ಸಂಸ್ಕಾರ' ನಂತರ 'ವಂಶವೃಕ್ಷ'ಕ್ಕೆ ಕಲಾ ನಿರ್ದೇಶನ ಮಾಡಿದೆ. ಕಲಾನಿರ್ದೇಶನ ತುಂಬಾ ಸಮಯ ಬೇಡುತ್ತದೆ. ಎರಡು ಚಿತ್ರಗಳ ನಂತರ ಮತ್ತೆ ಕಲಾನಿರ್ದೇಶನ ಮಾಡಲಿಲ್ಲ. ಆದರೆ ಕಾರ್ನಾಡರು ಹಾಗೂ ಕೆಲವು ಆತ್ಮೀಯರ ಸ್ನೇಹಕ್ಕೆ ಕಟ್ಟುಬಿದ್ದು ಸಿನಿಮಾಗಳಿಗೆ ಟೈಟಲ್, ಪಬ್ಲಿಸಿಟಿ ಡಿಸೈನ್‍ನಲ್ಲಿ ಕೆಲಸ ಮಾಡಿದ್ದೇನೆ. ಕಲಾನಿರ್ದೇಶಕನಾಗಿ 'ಸಂಸ್ಕಾರ' ನನ್ನ ಜೀವನದ ಬಹುದೊಡ್ಡ ಅವಕಾಶ. ಇದಕ್ಕಾಗಿ ಕಾರ್ನಾಡರಿಗೆ ನಾನು ಎಂದಿಗೂ ಆಭಾರಿಯಾಗಿರುತ್ತೇನೆ.

Click here Support Free Press and Independent Journalism

Pratidhvani
www.pratidhvani.com