ಕಾರ್ಮಿಕರ ಪರ ಅಧಿಕಾರಿ ಮಣಿವಣ್ಣನ್ ವರ್ಗಾವಣೆಯ ಸುತ್ತ ಅನುಮಾನದ ಹುತ್ತ!
ರಾಜ್ಯ

ಕಾರ್ಮಿಕರ ಪರ ಅಧಿಕಾರಿ ಮಣಿವಣ್ಣನ್ ವರ್ಗಾವಣೆಯ ಸುತ್ತ ಅನುಮಾನದ ಹುತ್ತ!

ಐಎಎಸ್ ಅಧಿಕಾರಿ ಮಣಿವಣ್ಣನ್ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸಲು ಸ್ವಯಂ ಸೇವಕರ ಗುಂಪೊಂದನ್ನು ರಚಿಸಿದ್ದರು. ಸದ್ಯಕ್ಕೆ ವರ್ಗಾವಣೆ ಬೇಡ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕೂಡ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಆದರೆ ಸಿಎಂ ಮಾತ್ರ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಸಿಲುಕಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಕೃಷ್ಣಮಣಿ

ಕರೋನಾ ಸೋಂಕು ಕಳೆದ 2 ತಿಂಗಳನ್ನು ಬಲಿ ಪಡೆದುಕೊಂಡಿದೆ. ಲಕ್ಷಾಂತರ ಕಾರ್ಮಿಕರು ಕಳೆದ 2 ತಿಂಗಳಿಂದ ವೇತನ ಸಿಗದೆ ಕಂಗಾಲಾಗಿದ್ದಾರೆ. ಕಟ್ಟಿಕೊಂಡಿದ್ದ ಬದುಕು ಕರೋನಾ ಸೋಂಕಿನಲ್ಲಿ ಕೊಚ್ಚಿಹೋದ ಬಳಿಕ ಮುಂದಿನ ದಾರಿ ಯಾವುದು ಎಂದು ಚಿಂತಿಸುವಂತಾಗಿದೆ. ಈ ನಡುವೆ ಲಕ್ಷಾಂತರ ಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುವ ಭೀತಿಯೂ ಶುರುವಾಗಿದೆ. ಈಗಾಗಲೇ ಕಳೆದ 2 ತಿಂಗಳಿಂದ ಉತ್ಪಾದನಾ ವಲಯ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು, ಮತ್ತೆ ಚೇತರಿಸಿಕೊಳ್ಳಲು ಕನಿಷ್ಠ 6 ರಿಂದ 12 ತಿಂಗಳ ಕಾಲಾವಧಿಯಾದರು ಬೇಕು ಎನ್ನುತ್ತಿದ್ದಾರೆ ಉತ್ಪಾದಕರು. ಅಲ್ಲೀವರೆಗೂ ಈಗ ಇದ್ದಷ್ಟೇ ನೌಕರನ್ನು ಇಟ್ಟುಕೊಂಡು ಕೆಲಸ ಮಾಡುವುದು ಸಾಧ್ಯವೇ ಇಲ್ಲ. ಅದರಿಂದ ನಷ್ಟವೇ ಹೆಚ್ಚು. ಕಾರ್ಖಾನೆಗಳು ಆದಷ್ಟು ಶೀಘ್ರವಾಗಿ ಚೇತರಿಕೆ ಕಾಣಬೇಕಿದ್ದರೆ ವೆಚ್ಚವನ್ನು ಕಡಿತ ಮಾಡಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಉತ್ಪಾದನೆ ಹಾಗೂ ಮಾರುಕಟ್ಟೆಯ ಬೇಡಿಕೆಯನ್ನು ಹೊಂದಾಣಿಕೆ ಮಾಡುವುದು ಕಷ್ಟ ಎನ್ನುತ್ತಿದ್ದಾರೆ. ಈ ಎಲ್ಲಾ ಸಂಕಷ್ಟಗಳ ನಡುವೆ ಸಿಲುಕಿರುವ ಕಾರ್ಮಿಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾರ್ಮಿಕರ ಹಿತ ಕಾಯುವ ಉದ್ದೇಶದಿಂದ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಅಧಿಕಾರಿ ಮಣಿವಣ್ಣನ್‌ ಅವರನ್ನು ಎತ್ತಂಗಡಿ ಮಾಡಲಾಗಿದೆ.

ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಇಲಾಖೆಯಿಂದ ಐಎಎಸ್‌ ಅಧಿಕಾರಿ ಪಿ ಮಣಿವಣ್ಣನ್ ಎತ್ತಂಗಡಿ ಮಾಡಲಾಗಿದೆ. ಎರಡು ಇಲಾಖೆಯ ಪ್ರಧಾ‌ನ ಕಾರ್ಯದರ್ಶಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಈಗಾಗಲೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ವರ್ ರಾವ್ ಅವರಿಗೆ ಹೆಚ್ಚುವರಿಯಾಗಿ ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ. ಆದರೆ ದಕ್ಷ ಅಧಿಕಾರಿ ಎಂಬ ಖ್ಯಾತಿ ಪಡೆದಿದ್ದ ಕಾರ್ಮಿಕ ಇಲಾಖೆ ಹಾಗೂ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಧಾ‌ನ ಕಾರ್ಯದರ್ಶಿಯಾಗಿದ್ದ ಮಣಿವಣ್ಣನ್ ಅವರಿಗೆ ವರ್ಗಾವಣೆ ಮಾಡಲಾಗಿದ್ದರೂ ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲದೆ ಇರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ವರ್ಗಾವಣೆ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಮಣಿವಣ್ಣನ್‌ ನಿನ್ನೆ ರಾತ್ರಿ 9 ಗಂಟೆಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಇದೀಗ ಮಣಿವಣ್ಣನ್‌ ಪರವಾಗಿ ಕಾರ್ಮಿಕ ಸಂಘಟನೆಗಳು ಹೋರಾಟ ರೂಪಿಸಲು ಮುಂದಾಗಿದ್ದು, ಸರ್ಕಾರದ ನಿರ್ಧಾರ ಕಾರ್ಮಿಕ ವಲಯದ ಕೆಂಗಣ್ಣಿಗೆ ಕಾರಣವಾಗಿದೆ.

ಕರೋನಾ ಸೋಂಕು ಹರಡುತ್ತಿದ್ದಾಗ ಮೊದಲು ಸಮಸ್ಯೆಗೆ ಗುರಿಯಾಗಿದ್ದು ಕಾರ್ಮಿಕರು. ಕಾರ್ಮಿಕ ನೀತಿ ಪರವಾಗಿದ್ದ ಐಎಎಸ್‌ ಅಧಿಕಾರಿ ಮಣಿವಣ್ಣನ್, ಕಾರ್ಮಿಕರ ಪರವಾದ ಹಲವಾರು ನಿಲುವುಗಳನ್ನು ತಳೆಯುತ್ತಿದ್ದರು. ವೇತನ ಕಡಿತ ಮಾಡಬಾರದು, ಕೆಲಸದಿಂದ ಯಾವುದೇ ಕಾರಣಕ್ಕೂ ವಜಾ ಮಾಡುವ ಮೂಲಕ ಕಾರ್ಮಿಕರನ್ನು ಬೀದಿಗೆ ತಳ್ಳಬಾರದು ಎಂದೆಲ್ಲಾ ಕೈಗಾರಿಕೋದ್ಯಮಿಗಳಿಗೆ ಸೂಚನೆ ಕೊಟ್ಟಿದ್ದರು. ಈ ಕೆಲಸ ಕೈಗಾರಿಕಾ ಮುಖ್ಯಸ್ಥರ ನಿದ್ದೆಗೆಡಿಸಿತ್ತು ಎನ್ನಲಾಗಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಸಂಬಳ ಕಡಿತದ ಬಗ್ಗೆ 700ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳು ಮಣಿವಣ್ಣನ್‌ ಅವರಿಗೆ ದೂರು ನೀಡಿದ್ದರು. ಎರಡು ತಿಂಗಳಿಂದ ಸಂಬಳ ನೀಡಿಲ್ಲ, ಕುಟುಂಬ ನಿರ್ವಹಣೆ ತೊಂದರೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನು ತುಂಬಾ ಗಂಭಿರವಾಗಿ ಪರಿಗಣಿಸಿದ ಮಣಿವಣ್ಣನ್‌, ಕೈಗಾರಿಕೋದ್ಯಮಿಗಳಿಗೆ ನೋಟಿಸ್ ಕೊಡುವಂತೆ ಸೂಚನೆ ಕೊಟ್ಟಿದ್ದರು. ನೋಟೀಸ್ ಕೊಡುವ ತಯಾರಿ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕೈಗಾರಿಕೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮೇಲೆ ಒತ್ತಡ ಹೇರಿ ವರ್ಗಾವಣೆ ಮಾಡಿಸಿದ್ದಾರೆ ಎನ್ನುವ ಬಹುದೊಡ್ಡ ಆರೋಪ ಕೇಳಿಬಂದಿದೆ.

ಈಗಲೇ ನಮಗೆ ಕರೋನಾ ಸೋಂಕು ಉಲ್ಬಣಿಸಿದ ಬಳಿಕ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಇದೀಗ ಕೈಗಾರಿಕೆಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿದೆ. ನಾವು ಕಾರ್ಮಿಕರ ಜೊತೆ ಮಾತುಕತೆ ನಡೆಸಿ ನಮ್ಮದೇ ರೀತಿಯಲ್ಲಿ ಸೆಟಲ್‌ಮೆಂಟ್ ಮಾಡಿಕೊಳ್ಳುತ್ತೇವೆ. ಕಾರ್ಮಿಕರ ಪರವಾಗಿ ಮಣಿವಣ್ಣನ್ ಅಖಾಡಕ್ಕೆ ಇಳಿದರೆ ನಮಗೆ ಕಿರುಕುಳವಾಗಲಿದೆ. ನಾವು ಕೈಗಾರಿಕೆ ನಡೆಸೋದು ಕಷ್ಟವಾಗುತ್ತದೆ ಎಂದು ಸಿಎಂ ಬಿ ಎಸ್‌ ಯಡಿಯೂರಪ್ಪಗೆ ಕೈಗಾರಿಕೋದ್ಯಮಿಗಳ ಸಂಘಟನೆ ಪ್ರಮುಖರು ದೂರು ನೀಡಿದ್ದರು ಎನ್ನಲಾಗಿದೆ. ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದ ಸಿಎಂ ಯಡಿಯೂರಪ್ಪ, ಮಣಿವಣ್ಣನ್ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ. ಇದೀಗ ಮಣಿವಣ್ಣನ್ ವರ್ಗಾವಣೆಗೆ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರಕ್ಕೆ ಕಾರ್ಖಾನೆಗಳ ಹಿತವಷ್ಟೇ ಮುಖ್ಯವಾಗಿದೆ. ಸಾಮಾನ್ಯ ಕಾರ್ಮಿಕರ ಕಣ್ಣೀರು ಒರೆಸುವ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಕೆಂಡಕಾರಿದ್ದಾರೆ. ಕಾರ್ಮಿಕ ಸಂಘಟನೆಗಳಿಂದ ಹೋರಾಟಕ್ಕೆ ನಿರ್ಧಾರ ಮಾಡಿದ್ದು, ಮಣಿವಣ್ಣನ್ ವರ್ಗಾವಣೆಯನ್ನೇ ತಡೆ ಹಿಡಿಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಐಎಎಸ್‌ ಅಧಿಕಾರಿ ಮಣಿವಣ್ಣನ್ ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸಲು ಸ್ವಯಂ ಸೇವಕರ ಗುಂಪೊಂದನ್ನು ರಚಿಸಿದ್ದರು. ಇದೀಗ ಕಾರ್ಮಿಕ ಸಂಘಟನೆಗಳ ಬೆನ್ನಿಗೆ ಕರೋನಾ ವಾರಿಯರ್ಸ್ ಕೂಡ ನಿಂತಿದ್ದು, ನಿಷ್ಠಾವಂತ ಅಧಿಕಾರಿ ವರ್ಗಾವಣೆ ಯಾವ ನ್ಯಾಯ ಎಂದು ಸಾಮಾಜಿಕ ಜಾಲ ತಾಣದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ಯಾಪ್ಟನ್‌ ಮಣಿವಣ್ಣನ್‌ ನೀವು ಯಾವಾಗಲು ನಮ್ಮ ಹೃದಯಲ್ಲಿ ಸ್ಥಾನ ಕೊಟ್ಟಿದ್ದೇವೆ ಎಂದು ಬೆಂಬಲಿಸುತ್ತಿದ್ದಾರೆ. ಮಣಿವಣ್ಣನ್‌ ವರ್ಗಾವಣೆ ವಿಚಾರ ಸ್ವತಃ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರಿಗೂ ಕಿರಿಕಿರಿ ಉಂಟು ಮಾಡಿದೆ ಎನ್ನಲಾಗಿದೆ. ಪ್ರತಿದಿನ ಕಾರ್ಮಿಕ ಇಲಾಖೆ ವತಿಯಿಂದ 1,30,000 ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರ್ಮಿಕರಿಗೆ ಬೆಂಬಲವಾಗಿ ನಿಂತಿದ್ದರು. 80 ಸಾವಿರ ಕಾರ್ಮಿಕರನ್ನು ರಾಜ್ಯದಿಂದ ಸುರಕ್ಷಿತವಾಗಿ ಅವರ ಜಾಗಕ್ಕೆ ತಲುಪಿಸಿದ್ದಾರೆ. ಪ್ರತಿಯೊಂದು ವಿಚಾರಗಳನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕರೋನಾ ವಾರಿಯರ್ಸ್ ಟೀಮ್ ಮೂಲಕ ಕರೋನಾ ತಡೆಗೆ ಉತ್ತಮ ಕೆಲಸ ಮಾಡುತ್ತಿದ್ದರು. ಸದ್ಯಕ್ಕೆ ವರ್ಗಾವಣೆ ಬೇಡ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕೂಡ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಆದರೆ ಸಿಎಂ ಮಾತ್ರ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಸಿಲುಕಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಲೇಬರ್‌ ಆಕ್ಟ್‌ ತಾತ್ಕಾಲಿಕ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತಿದ್ದಾರೆ. ಇದರಿಂದ ಕೈಗಾರಿಕೊದ್ಯಮಿಗಳಿಗೆ ಬಹಳ ಅನುಕೂಲ ಆಗಲಿದ್ದು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನಲಾಗಿದೆ. ಅದೇ ರೀತಿಯ ಕಾನೂನು ಕೂಡ ಕರ್ನಾಟಕದಲ್ಲೂ ಜಾರಿಯಾಗುವ ಸಂಭವವಿದೆ. ಆದರೆ ಈ ನಿರ್ಧಾರವನ್ನು ಮಣಿವಣ್ಣನ್‌ ತೀವ್ರವಾಗಿ ವಿರೋಧಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ವರ್ಗಾವಣೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗ್ತಿದೆ. ಪ್ರತಿಧ್ವನಿ ಜೊತೆ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಮಹಾಂತೇಶ್‌, ಮಣಿವಣ್ಣನ್‌ ವರ್ಗಾವಣೆ ಮಾಡಿದ್ದಕ್ಕೆ ನಮಗೆ ಬೇಸರವಿಲ್ಲ. ಆದರೆ ಕೋವಿಡ್‌ 19 ವಿರುದ್ಧ ಉತ್ತಮವಾಗಿ ಹೋರಾಟ ನಡೆಸುತ್ತಿದ್ದರು. ಕಾರ್ಮಿಕರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದರು. ಅಂತಹ ಅಧಿಕಾರಿಯನ್ನು ಯಾವುದೇ ಹುದ್ದೆಯನ್ನೂ ತೋರಿಸದೆ ರಾತ್ರೋ ರಾತ್ರಿ ವರ್ಗಾವಣೆ ಮಾಡಿದ್ದು ಬೇಸರದ ಸಂಗತಿ. ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ವಾಟ್ಸಪ್‌, ಟೆಲಿಗ್ರಾಂ ಮೂಲಕವೂ ಕಾರ್ಮಿಕರ ಸಮಸ್ಯೆಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದರು. ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಬಾಗಿಲು ಸದಾ ತೆರೆದಿತ್ತು. ಕರ್ನಾಟಕ ಕೈಗಾರಿಕಾ ಮಾಲೀಕ ಸಂಘದ ಲೀಗಲ್‌ ಅಡ್ವೈಸರ್‌ ಡಿ ಸಿ ಪ್ರಭಾಕರ್‌ ಎಂಬುವರ ನೇತೃತ್ವದಲ್ಲಿ ಜಗದೀಶ್‌ ಶೆಟ್ಟರ್‌ ಮೂಲಕ ಒತ್ತಡ ಹೇರಿದ್ದಾರೆ. ಕರೋನಾ ಸಂಕಷ್ಟದ ಸಂಧರ್ಭದಲ್ಲಿ ಕಾರ್ಮಿಕರಿಗೆ ಸ್ಪಂದಿಸುವ ಅಧಿಕಾರಿಯನ್ನು ಅವಮಾನಕರ ರೀತಿಯಲ್ಲಿ ಟ್ರಾನ್ಸ್‌ಫರ್‌ ಮಾಡಿದ್ದು ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದಿದ್ದಾರೆ.

ಈ ಬಗ್ಗೆ ಪ್ರತಿಧ್ವನಿ ಕೂಡ ಸಚಿವ ಜಗದೀಶ್‌ ಶೆಟ್ಟರ್‌ ಅವರನ್ನು ಸಂಪರ್ಕ ಮಾಡಿದ್ದು, ಸರ್ಕಾರದ ಮಟ್ಟದಲ್ಲಿ ಕೆಲವೊಂದು ಪ್ರಕ್ರಿಯೆಗಳು ನಡೆತ್ತಲೇ ಇರುತ್ತದೆ. ಅದನ್ನೆಲ್ಲಾ ನಾನು ಬಹಿರಂಗ ಮಾಡಲು ಸಾಧ್ಯವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಒತ್ತಡ ಹೇರಿದ್ದನ್ನು ಒಪ್ಪಿಕೊಂಡಿದ್ದಾರೆ. ಮಣಿವಣ್ಣನ್‌ ವರ್ಗಾವಣೆ ಮಾಡಬಾರದು ಎಂದು ಈಗಾಗಲೇ ಆನ್‌ಲೈನ್‌ ಸಹಿ ಸಂಗ್ರಹ ಕೂಡ ನಡೆಯುತ್ತಿದ್ದು, ಸರ್ಕಾರ ಜನಾಭಿಪ್ರಾಯಕ್ಕೆ ಬೆಲೆ ಕೊಡುತ್ತಾ? ಕಾರ್ಮಿಕರ ಹಿತವನ್ನೂ ಗಮನದಲ್ಲಿ ಇಟ್ಟುಕೊಳ್ಳುತ್ತಾ ಅಥವಾ ಕಾರ್ಖಾನೆ ಮಾಲೀಕರ ಹಿತವೇ ಮುಖ್ಯ ಎಂದು ತನ್ನ ನಿರ್ಧಾರವನ್ನೇ ಮುಂದುವರಿಸುತ್ತಾ ಕಾದು ನೋಡಬೇಕಾಗಿದೆ.

CM Letter 12-05-2020.pdf
Preview

Click here Support Free Press and Independent Journalism

Pratidhvani
www.pratidhvani.com