ವಿಶೇಷ ಪ್ಯಾಕೇಜ್‌ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿ: ಸಿಎಂ ಗೆ ಸ್ಲಂ ಜನಾಂದೋಲನ ಒತ್ತಾಯ
ರಾಜ್ಯ

ವಿಶೇಷ ಪ್ಯಾಕೇಜ್‌ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿ: ಸಿಎಂ ಗೆ ಸ್ಲಂ ಜನಾಂದೋಲನ ಒತ್ತಾಯ

ರಾಜ್ಯ ಸರಕಾರವು ಕೆಲವು ವರ್ಗಗಳ ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ 1,610 ಕೋಟಿ ರೂಪಾಯಿ ವಿಶೇಷ ಪ್ಯಾಕೆಜ್‌ ಘೋಷಿಸಿದ್ದು, ಅದರಲ್ಲಿ ಸ್ಲಂ ನಿವಾಸಿ, ಅಸಂಘಟಿತ ಕಾರ್ಮಿಕರನ್ನ ಹಾಗೂ ತೃತೀಯ ಲಿಂಗಿಗಳನ್ನ ಕೈ ಬಿಡಲಾಗಿದ್ದು, ಇದೊಂದು ತಾರತಮ್ಯದ ನೆರವು ಪ್ಯಾಕೆಜ್‌ ಎಂದು ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ಆರೋಪಿಸಿದೆ. ಮಾತ್ರವಲ್ಲದೇ ಬೆಂಗಳೂರಿನ ಲಗ್ಗೆರಿ ಯಲ್ಲಿ ಪ್ರತಿಭಟನೆ ನಡೆಸಿದೆ. 

ಪ್ರತಿಧ್ವನಿ ವರದಿ

ಕೋವಿಡ್-19 ನಿಂದ ಲಾಕ್ ಡೌನ್‌ನಲ್ಲಿ ಸಿಲುಕಿರುವ ಕೆಲವೊಂದು ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿರುವ 1,610 ಕೋಟಿ ವಿಶೇಷ ಪ್ಯಾಕೇಜ್ ನಲ್ಲಿ ಸ್ಲಂ ನಿವಾಸಿಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯು ಬೆಂಗಳೂರಿನ ಲಗ್ಗೆರಿ ಜೈಭೀಮ್ ನಗರ ಸ್ಲಂ ನಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿತು.

ಕೋವಿಡ್-19 ಲಾಕ್ ಡೌನ್ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ಕ್ಷೌರಿಕರು, ಅಗಸರು, ಆಟೋ/ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು, ನೇಕಾರರು , ಹೂಗಳನ್ನು ಬೆಳೆದ ರೈತರು ಹಾಗೂ ಇತರರಿಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 1,610 ಕೋಟಿ ನೆರವು ಘೋಷಣೆ ಮಾಡಿರುವುದು ಸ್ವಾಗತಾರ್ಹ.ಆದರೆ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಸ್ಲಂ ಜನರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೆರವು ನೀಡದೆ ಕಡೆಗಣಿಸಿರುವುದನ್ನು ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ಖಂಡಿಸುತ್ತದೆ ಎಂದು ಜಿಲ್ಲಾ ಸಂಚಾಲಕರಾದ ಚಂದ್ರಮ್ಮ ಹೇಳಿದರು.

“ರಾಜಕೀಯ ಲೆಕ್ಕಚಾರವಿಟ್ಟುಕೊಂಡು ಒಂದು ವಿಭಾಗಕ್ಕೆ ಮಾತ್ರ ಪರಿಹಾರ ಘೋಷಣೆ ಮಾಡಿರುವುದು ಸರ್ವರನ್ನೊಳಗೊಂಡ ನೆರವಲ್ಲ. ಇದು ತಾರತಮ್ಯದ ಪರಿಹಾರ ಪ್ಯಾಕೇಜ್ ಆಗಿದೆ. ಆದ್ದರಿಂದ ನಗರದ ಕೊಳಗೇರಿಗಳಲ್ಲಿರುವ ಬೀದಿವ್ಯಾಪಾರಿಗಳು, ಮನೆಗೆಲಸದವರು, ಗಾರ್ಮೆಂಟ್ಸ್ ಕಾರ್ಮಿಕರು, ಬೀಡಿ ಕಾರ್ಮಿಕರು, ಹಮಾಲಿಗಳು, ಖಾಸಗಿ ಬಸ್ ಮತ್ತು ಟ್ರಕ್ ಚಾಲಕರು ಮೆಕಾನಿಕ್‌ಗಳು, ಚಿಂದಿ ಆಯುವವರು, ಲೈಂಗಿಕ ಕಾರ್ಯಕರ್ತೆಯರು, ಅಂಗವಿಕಲರು, ದೇವದಾಸಿಯರು, ಮತ್ತು ತೃತೀಯ ಲಿಂಗಿಗಳಿಗೆ ಪ್ಯಾಕೇಜ್‌ನಲ್ಲಿ ನೆರವು ನೀಡಬೇಕಾಗಿತ್ತು” ಎಂದು ಅವರು ಒತ್ತಾಯಿಸಿದ್ದಾರೆ.

ಅಲ್ಲದೇ ಲಾಕ್‌ಡೌನ್‌ನಿಂದ ತಮ್ಮ ನಿತ್ಯದ ದುಡಿಮೆ ಕಳೆದುಕೊಂಡಿರುವ ನಗರದ ವಂಚಿತ ಸಮುದಾಯಗಳಿಗೆ ಆರೋಗ್ಯ ಮತ್ತು ಮೂಲಭೂತ ಹಕ್ಕುಗಳನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ತನ್ನ ಕರ್ತವ್ಯವಾಗಿ ಈಗಾಗಲೇ ಹಸಿವು ಮತ್ತು ಅನಾರೋಗ್ಯದಿಂದ ತತ್ತರಿಸಿರುವ ಸ್ಲಂ ಕುಟುಂಬಗಳಿಗೆ ಆರೋಗ್ಯ ಕಾಪಾಡಿಕೊಳ್ಳಲು ಚಿಕಿತ್ಸೆ ಮತ್ತು ಔಷಧಿ ಹಾಗೂ ಮನೆ ಬಾಡಿಗೆ ಖರ್ಚು ಹಾಗೂ ಜೀವನೋಪಾಯ ನಿಭಾಯಿಸಲು ಎಲ್ಲಾ ಕುಟುಂಬಗಳಿಗೂ ಸೆಪ್ಟೆಂಬರ್ ವರೆಗೆ ಮಾಸಿಕ 9,600 ರೂಪಾಯಿಗಳ ವೇತನ/ಕೂಲಿ ನಷ್ಟ ಪರಿಹಾರ ಭತ್ಯೆಯನ್ನು ಕರ್ನಾಟಕ ಸರ್ಕಾರ ಘೋಷಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಅನುಷ್ಠಾನಕ್ಕೆ ತರಬೇಕು. ಹಾಗೂ ಲಾಕ್‌ಡೌನ್ ಸಂತ್ರಸ್ತ ಅಸಂಘಟಿತ ಕಾರ್ಮಿಕರು ಮತ್ತು ಸ್ಲಂ ಜನರ ಬದುಕು ಹಕ್ಕು ರಕ್ಷಣೆಗಾಗಿ ಸಿಎಂ ಬಿಎಸ್‌ವೈ ತಮ್ಮ ಬದ್ಧತೆ ಪ್ರದರ್ಶಿಸಬೇಕಿದೆ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಸ್ಲಂ ಸಮಿತಿಯ ಭಾಗ್ಯಮ್ಮ, ನೀಲಮ್ಮ, ಬಸಮ್ಮ, ಮಹದೇವಮ್ಮ, ಲಕ್ಷ್ಮಮ್ಮ, ಶಂಕ್ರಮ್ಮ, ವೆಂಕಟೇಶಪ್ಪ, ಗೂಳಿಯಪ್ಪ ಮತ್ತು ಇತರೆ ಸ್ಲಂ ನಿವಾಸಿಗಳು ಭಾಗವಹಿಸಿ ಹಕ್ಕುಗಳಿಗಾಗಿ ಆಗ್ರಹಿಸಿ ಪ್ರತಿಭಟಿಸಿದ್ದಾರೆ.

Click here Support Free Press and Independent Journalism

Pratidhvani
www.pratidhvani.com