ರಾಜ್ಯ ಸರ್ಕಾರದಿಂದ ಮುಂಬೈ ಕನ್ನಡಿಗರ ನಿರ್ಲಕ್ಷ್ಯ! ಡಿ ಕೆ ಶಿವಕುಮಾರ್ ಕಿಡಿ!
ರಾಜ್ಯ

ರಾಜ್ಯ ಸರ್ಕಾರದಿಂದ ಮುಂಬೈ ಕನ್ನಡಿಗರ ನಿರ್ಲಕ್ಷ್ಯ! ಡಿ ಕೆ ಶಿವಕುಮಾರ್ ಕಿಡಿ!

ಮುಂಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ಕೂಡಾ ಕನ್ನಡಿಗರು ಎನ್ನುವುದನ್ನು ಕಂದಾಯ ಸಚಿವರು ಮರೆತಂತಿದೆ.

ಕೃಷ್ಣಮಣಿ

ಮುಂಬೈನಲ್ಲಿ ಕನ್ನಡಿಗರು ತಿನ್ನಲು ಅನ್ನವೂ ಇಲ್ಲದೆ, ಮನೆ ಬಾಡಿಗೆಯನ್ನೂ ಕಟ್ಟಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನೊಂದು ಸ್ವಲ್ಪ ದಿನದ ಬಳಿಕ ನಾವು ಕರೋನಾ ಬಂದು ಸಾಯುವುದಿಲ್ಲ. ಹಸಿವಿನಿಂದಲೇ ಸಾಯುತ್ತೇವೆ. ನಮ್ಮನ್ನು ನಮ್ಮ ಊರುಗಳಿಗೆ ಕರೆಸಿಕೊಳ್ಳಿ, ಕರೋನಾ ತಪಾಸಣೆಯನ್ನು 2 ಬಾರಿ ಬೇಕಿದ್ದರೂ ಮಾಡಿ. ಇಲ್ಲಿಂದ ಕರೆದುಕೊಂಡು ಹೋದ ಬಳಿಕ ನಮ್ಮನ್ನು ಕ್ವಾರಂಟೈನ್ ಬೇಕಿದ್ದರೂ ಮಾಡಿ. ಊರುಗಳಲ್ಲಿ ವಯಸ್ಸಾದ ನಮ್ಮ ತಂದೆ ತಾಯಿ ಇದ್ದಾರೆ. ನಾವು ಇಲ್ಲಿ ಸಾವು ನೋವಿನ ನಡುವೆ ಒದ್ದಾಡುತ್ತಿದ್ದರೆ, ಊರುಗಳಲ್ಲಿ ನಾವು ಕಳುಹಿಸುವ ಹಣವನ್ನೇ ನಂಬಿಕೊಂಡಿದ್ದ ನಮ್ಮ ವಯಸ್ಸಾದ ಪೋಷಕರು ಪರದಾಡುತ್ತಿದ್ದಾರೆ. ನಾವು ಇಲ್ಲಿಂದ ಹೋಗಿಯಾದರೂ ಅವರನ್ನು ನೋಡಿಕೊಳ್ಳಬೇಕಿದೆ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ನಮ್ಮ ಕನ್ನಡಿಗರನ್ನು ಕರೆಸಿಕೊಳ್ಳುವ ಬಗ್ಗೆ ಚಕಾರ ಎತ್ತುತ್ತಿಲ್ಲ.

ದೇಶದ ಮೂಲೆ ಮೂಲೆಯ ಜನರನ್ನು ಕರ್ನಾಟಕದಿಂದ ವಾಪಸ್ ಕಳುಹಿಸಲು ಶ್ರಮಿಕ್ ಟ್ರೈನ್ ವ್ಯವಸ್ಥೆ ಮಾಡುತ್ತಿದೆ. ಆದರೆ ನಮ್ಮ ರಾಜ್ಯದವರೇ ಆದ ಮುಂಬೈ ಕನ್ನಡಿಗರನ್ನು ಕರೆಸಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುವ ಮನಸ್ಸು ಮಾಡುತ್ತಿಲ್ಲ.ಮುಂಬೈನಲ್ಲಿ ಈಗಾಗಲೇ ಕರೋನಾ ಪ್ರಕರಣಗಳ ರುದ್ರ ನರ್ತನ ನಡೆಯುತ್ತಿದೆ. ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ನಿಯಂತ್ರಣ ಮಾಡಲು ಹಣಕಾಸಿನ ಸಂಕಷ್ಟವೂ ಎದುರಾಗಿದ್ದು, ಬಜೆಟ್‌ನ ಶೇಕಡ 53ರಷ್ಟು ಹಣವನ್ನು ಸಾಲದ ರೂಪದಲ್ಲಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮೊರೆ ಇಟ್ಟಿದೆ.

ಅಲ್ಲಿನ ಸಂತ್ರಸ್ಥರ ಹೊಟ್ಟೆಗೆ ಅನ್ನವನ್ನಾದರೂ ಕೊಡುವ ಔದಾರ್ಯವನ್ನು ಮಹಾರಾಷ್ಟ್ರ ಸರ್ಕಾರ ತೋರಿಸುತ್ತಿಲ್ಲ. ಈ ನಡುವೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಬಡ ಕೂಲಿ ಕಾರ್ಮಿಕರನ್ನು ಸುಲಿಗೆ ಮಾಡಲು ಒಕ್ಕಲಿಗರ ಸಂಘ ಮುಂದಾಗಿದೆ. ಕರ್ನಾಟಕಕ್ಕೆ ವಾಪಸ್ ಕರೆತರುವ ಬಗ್ಗೆ ಯೋಜನೆ ರೂಪಿಸಿದ್ದು, 5 ವರ್ಷ ಮೇಲ್ಪಟ್ಟ ಎಲ್ಲರಿಗೂ ತಲಾ 5600 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದೆ. ಈ ಬಗ್ಗೆ ಪ್ರತಿಧ್ವನಿ ನಿರಂತರ ವರದಿ ಮಾಡುತ್ತಿದ್ದು, ಒಕ್ಕಲಿಗರ ಸಂಘದ ಸುಲಿಗೆ ಬಗ್ಗೆಯೂ ವರದಿ ಮಾಡಲಾಗಿತ್ತು.

ಒಂದು ವೇಳೆ ರಾಜ್ಯ ಸರ್ಕಾರ ಮುಂಬೈ ಕನ್ನಡಿಗರನ್ನು ಕರೆತರಲಾಗದೆ ಸುಮ್ಮನಾದರೆ ಒಕ್ಕಲಿಗ ನಾಯಕರು ಎನಿಸಿಕೊಂಡವರು ಸ್ವಂತ ಖರ್ಚಿನಿಂದ ಕರೆದುಕೊಂಡು ಬರಲಾಗುವುದಿಲ್ಲವೇ ಎಂದು ಪ್ರಶ್ನೆಯನ್ನೂ ಮಾಡಿತ್ತು. ಪ್ರತಿಧ್ವನಿ ದನಿಗೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ದನಿಗೂಡಿಸಿದ್ದಾರೆ.ನಮ್ಮ ಕನ್ನಡಿಗರು, ನಮ್ಮ ಅಣ್ಣ ತಮ್ಮಂದಿರು ಹೊರ ರಾಜ್ಯಗಳಲ್ಲಿ ಸಿಲುಕಿದ್ದಾರೆ. ತವರೂರಿಗೆ ಬರಬೇಕೆಂದು ಮನವಿ ಮಾಡುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಹೊರ ದೇಶಗಳಿಂದ ಜನರನ್ನು ಕರೆ ತರುವ ಕೆಲಸ ನಡೀತಿದೆ.

ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರುವ ಬಗ್ಗೆ ಇಲ್ಲೀವರೆಗೂ ಯಾವುದೇ ಯೋಜನೆ ರೂಪಿಸಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ತೇನೆ. ದಯಮಾಡಿ ಕನ್ನಡಿಗರನ್ನು ನಮ್ಮ ರಾಜ್ಯಕ್ಕೆ ವಾಪಸ್ ಕರೆತರುವ ವ್ಯವಸ್ಥೆ ಮಾಡಿ. ಕಾಂಗ್ರೆಸ್ ಪಕ್ಷ ಕೂಡ ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧವಿದೆ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋ ಸಂದೇಶವನ್ನೂ ನೀಡಿದ್ದಾರೆ.

ಈಗಲಾದರೂ ರಾಜ್ಯ ಸರ್ಕಾರ ಮಹಾರಾಷ್ಟ್ರದ ಮಹಾನಗರಿ ಮುಂಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮುಂದಾಗುತ್ತದೆಯೇ ಎಂದು ಕಾದರೆ, ಇಲ್ಲಿಯವರೆಗೂ ಆ ತರಹದ ಯೌವುದೇ ಸೂಚನೆಗಳು ಲಭಿಸಿಲ್ಲ.ನಿನ್ನೆ ರಾತ್ರಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕಂದಾಯ ಸಚಿವ ಆರ್ ಅಶೋಕ್, ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ಕರೆತರಲು ಎಲ್ಲಾ ತಯಾರಿ ಮಾಡಿಕೊಂಡಿದ್ದು, ಹೊರ ರಾಜ್ಯದಿಂದ ಬರುವ ಕನ್ನಡಿಗರ ಟ್ರೈನ್ ಟಿಕೆಟ್ ದರದ ಶೇಕಡ 15ರಷ್ಟನ್ನು ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ. ಇನ್ನುಳಿದ ಶೇಕಡ 85ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

“ಹೊರ ರಾಜ್ಯದಲ್ಲಿರುವ "ನಮ್ಮವರು" ಮರಳಿ ರಾಜ್ಯಕ್ಕೆ ಬರಲು, ಟ್ರೈನ್ ಟಿಕೆಟ್ ದರ ಭರಿಸುತ್ತೇವೆ ಎಂದಿದ್ದಾರೆ. ಆದರೆ ಮಧ್ಯಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ, ಜಮ್ಮುಕಾಶ್ಮೀರ ರಾಜ್ಯಗಳಲ್ಲಿ ಇರುವ ಕನ್ನಡಿಗರು ಸೇರಿದಂತೆ ಬೇರೆ ರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರು,” ಎಂದಿದ್ದಾರೆ.

ಇದೀಗ ಮುಂಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ಕೂಡಾ ಕನ್ನಡಿಗರು ಎನ್ನುವುದನ್ನು ಕಂದಾಯ ಸಚಿವರು ಮರೆತಂತಿದೆ. ಲಕ್ಷಾಂತರ ಜನರು ಮಹಾರಾಷ್ಟ್ರ ಮಹಾನಗರಿ ಮುಂಬೈನಲ್ಲಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಬರ ಪ್ರದೇಶವಾದ ನಾಗಮಂಗಲ, ಕೆ ಆರ್ ಪೇಟೆ, ಚನ್ನರಾಯಪಟ್ಟಣ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನ ಮುಂಬೈ ನಗರವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಸಚಿವರು ಮಾತ್ರ ಈ ಬಗ್ಗೆ ಚಕಾರ ಎತ್ತಿಲ್ಲ. ಇನ್ನಾದರೂ ಮುಂಬೈ ಕನ್ನಡಿಗರ ಕಣ್ಣೀರು ಒರೆಸಲು ರಾಜ್ಯ ಸರ್ಕಾರ ಮುಂದಾಗುತ್ತಾ ಎನ್ನುವುದನ್ನು ಕಾದು ನೋಡ್ಬೇಕು.

Click here Support Free Press and Independent Journalism

Pratidhvani
www.pratidhvani.com