COVID-19; ಮಾಧ್ಯಮ ವರದಿಗಾರರು, ಪತ್ರಿಕಾ ವಿತರಕರ ಕುಟುಂಬಿಕರಿಗೂ ಪರಿಹಾರ ನೀಡಲು ಹೈಕೋರ್ಟ್‌ ನಿರ್ದೇಶನ
ರಾಜ್ಯ

COVID-19; ಮಾಧ್ಯಮ ವರದಿಗಾರರು, ಪತ್ರಿಕಾ ವಿತರಕರ ಕುಟುಂಬಿಕರಿಗೂ ಪರಿಹಾರ ನೀಡಲು ಹೈಕೋರ್ಟ್‌ ನಿರ್ದೇಶನ

ಕರೋನಾ ಸೋಂಕಿನ ವಿರುದ್ಧ ವೈದ್ಯಕೀಯ ಸಿಬ್ಬಂದಿ, ಪೊಲೀಸರಂತೆ ಮುಂಚೂಣಿಯಲ್ಲಿರುವ ಮಾಧ್ಯಮ ಪ್ರತಿನಿಧಿಗಳ ಹಾಗೂ ಪತ್ರಿಕಾ ವಿತರಕರ ಕುಟುಂಬಿಕರಿಗೂ ಕೋವಿಡ್‌-19ನಿಂದ ಮೃತಪಟ್ಟರೆ ಪರಿಹಾರ ನೀಡುವಂತೆ ರಾಜ್ಯ ಹೈಕೋರ್ಟ್‌, ಸರಕಾರ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಆದೇಶವಿತ್ತಿದೆ. ಜೊತೆಗೆ ವರದಿಗಾರರ ಸುರಕ್ಷತೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲವು ಮಹತ್ವದ ಸೂಚನೆಗಳನ್ನ ನೀಡಿವೆ.

ಮೊಹಮ್ಮದ್‌ ಇರ್ಷಾದ್‌

ಕೋವಿಡ್-19‌ ವರದಿಗಾರಿಕೆ ಅಥವಾ ಈ ಸಮಯದಲ್ಲಿ ಪತ್ರಿಕಾ ವಿತರಣೆ ಮಾಡುವವರು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದರೆ ಅಂತಹ ಮಾಧ್ಯಮ ಪ್ರತಿನಿಧಿಗಳ ಅಥವಾ ಪತ್ರಿಕಾ ವಿತರಕರ ಕುಟುಂಬಗಳಿಗೆ 5ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ ಮಾಧ್ಯಮ ಸಂಸ್ಥೆಗಳು 50 ಸಾವಿರ ರೂಪಾಯಿ ಪರಿಹಾರ ನೀಡುವಂತೆಯೂ ಹೈ ಕೋರ್ಟ್‌ ತಿಳಿಸಿದೆ.

ಬೆಂಗಳೂರು ನಿವಾಸಿ ಜಾಕೊಬ್‌ ಜಾರ್ಜ್‌ ಅವರು ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ ನ ವಿಭಾಗೀಯ ಪೀಠದ ನ್ಯಾಯಾಧೀಶರಾದ ಬಿವಿ ನಾಗರತ್ನ ಹಾಗೂ ಸೂರಜ್‌ ಗೋವಿಂದರಾಜ್‌ ಅವರು ಈ ನಿರ್ದೇಶನವನ್ನ ನೀಡಿದ್ದಾರೆ. ಅರ್ಜಿದಾರರು ದಿನಪತ್ರಿಕೆ, ನ್ಯೂಸ್‌ ಚಾನೆಲ್‌ ಹಾಗೂ ಮ್ಯಾಗಜಿನ್‌ ಸಹಿತ ಒಟ್ಟು 30 ಸಂಸ್ಥೆಗಳನ್ನ ಫಿರ್ಯಾದಿದಾರರನ್ನಾಗಿ ಅರ್ಜಿ ಸಲ್ಲಿಸಿದ್ದು, ಅದರಂತೆ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೆ ಅನ್ವಯಿಸುವಂತೆ ನ್ಯಾಯಾಲಯವು ಸೂಚಿಸಿದೆ.

ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರಂತೆಯೇ ಮಾಧ್ಯಮದ ಪ್ರತಿನಿಧಿಗಳೂ ಕರೋನಾ ವಿರುದ್ಧದ ಜಾಗೃತಿಗಾಗಿ ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಇದನ್ನ ಪರಿಗಣಿಸಿರುವ ನ್ಯಾಯಾಲಯವು ಈ ಮಹತ್ವದ ಆದೇಶವನ್ನ ನೀಡಿದೆ.

ಇನ್ನು ಅರ್ಜಿಯಲ್ಲಿ ಅರ್ಜಿದಾರರು ವಿಶೇಷವಾಗಿ ಉಲ್ಲೇಖಿಸಿರುವ ಅಂಶಗಳೇನೆಂದರೆ, “ ಮಾಧ್ಯಮ ಪ್ರತಿನಿಧಿಗಳು ಕರೋನಾದ ಈ ಸಮಯದಲ್ಲಿ ವೈದ್ಯರು, ಪೊಲೀಸ್‌ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು, ರೋಗಿಗಳನ್ನ ಹಾಗೂ ಅವರ ಕುಟುಂಬ ಸದಸ್ಯರನ್ನ ಸಂದರ್ಶನ ನಡೆಸಿ ವರದಿ ತಯಾರಿಸುತ್ತಾರೆ. ಇಂತಹ ಸಂದರ್ಭಗಳೆಲ್ಲ ವರದಿಗಾರರು ಹೆಚ್ಚಿನ ಅಪಾಯವನ್ನ ಎದುರಿಸುವ ಸಾಧ್ಯತೆ ಇದೆ” ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

PIL_for_media_persons_compensation.pdf
Preview

ಇನ್ನು ಅರ್ಜಿಯಲ್ಲಿ ಪತ್ರಕರ್ತರ ಅಭದ್ರತೆಯನ್ನೂ ಹೈಕೋರ್ಟ್‌ ಗೆ ಅರ್ಜಿದಾರರು ಮನವರಿಕೆ ಮಾಡಿದ್ದಾರೆ. ದುರಾದೃಷ್ಟವಶಾತ್‌ ವರದಿಗಾರ ಅಥವಾ ಪತ್ರಿಕಾ ವಿತರಕರು ಕೆಲಸದ ಅವಧಿಯಲ್ಲಿ ಸೋಂಕು ಬಾಧಿತರಾಗಿ ಸಾವನ್ನಪ್ಪಿದರೆ ಅಂತಹವರು ಆಡಳಿತ ವರ್ಗದಿಂದಿರಲಿ ಇಲ್ಲವೇ ಸರಕಾರದಿಂದಿರಲಿ ಯಾವುದೇ ಪರಿಹಾರ ಪಡೆಯುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. ಅಲ್ಲದೇ ದೆಹಲಿ ಸರಕಾರ ಕರೋನಾ ಸೋಂಕು ಹೆಚ್ಚಾಗುತ್ತಿದ್ದಂತೆ ಆರೋಗ್ಯ ಸಿಬ್ಬಂದಿ, ಪೊಲೀಸ್‌, ಸಿವಿಲ್‌ ಡಿಫೆನ್ಸ್‌ ಸ್ವಯಂ ಸೇವಕರು, ಶಿಕ್ಷಕ ವೃಂದ, ಅಗ್ನಿಶಾಮಕದಳ ಸಿಬ್ಬಂದಿಗಳಿಗೆ ಕರ್ತವ್ಯ ಅವಧಿಯಲ್ಲಿ ಸೋಂಕು ಕಾಣಿಸಿಕೊಂಡು ಸಾವನ್ನಪ್ಪಿದ್ದಲ್ಲಿ ಅವರ ಕುಟುಂಬಿಕರಿಗೆ 1 ಕೋಟಿ ಪರಿಹಾರ ನೀಡುವ ಘೋಷಣೆ ಮಾಡಿರುವುದನ್ನೂ ಅರ್ಜಿದಾರರು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರಕಾರ ಪೊಲೀಸರ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಘೋಷಿಸಿರುವ 50 ಲಕ್ಷ ಮೊತ್ತವನ್ನೂ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಪೊಲೀಸ್‌ ಹಾಗೂ ಆರೋಗ್ಯ ಕಾರ್ಯಕರ್ತರಿಗೂ ನೀಡಿದಂತೆ ಮಾಧ್ಯಮವರಿಗೂ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಅದು ಸಂವಿಧಾನದ 14 ಹಾಗೂ 21 ನೇ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ. ಕಾರಣ, ಮಾಧ್ಯಮ ವರದಿಗಾರರು ಕೂಡಾ ಅಷ್ಟೇ ರಿಸ್ಕ್‌ ತೆಗೆದುಕೊಂಡು ಕೆಲಸ ನಿರ್ವಹಿಸುವುದಾಗಿ ಹೈಕೋರ್ಟ್‌ ಗೆ ಮನವರಿಕೆ ಮಾಡಲಾಯಿತು. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಹೈಕೋರ್ಟ್‌ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಜೊತೆಗೆ ಮಾಧ್ಯಮ ಸಂಸ್ಥೆಗಳಿಗೂ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

ಅದಲ್ಲದೇ ನ್ಯಾಯಾಲಯವು ರಾಜ್ಯ ಸರಕಾರ ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಪ್ರಮುಖ ಸೂಚನೆಗಳನ್ನೂ ನೀಡಿದೆ. ಅದೇನೆಂದರೆ..

ಎಲ್ಲಾ ಮಾಧ್ಯಮ ಪ್ರತಿನಿಧಿಗಳನ್ನ, ಅದರಲ್ಲೂ ವಿಶೇಷವಾಗಿ ಸೋಂಕಿತ ಕರೋನಾ ಹೊಂದಿದ ವ್ಯಕ್ತಿ ಹಾಗೂ ಆತನ ಜೊತೆಗಿದ್ದವರೆಲ್ಲರ ಕೋವಿಡ್-19‌ ಪರೀಕ್ಷೆ ನಡೆಸಬೇಕು.

ಅಲ್ಲದೇ ಸುರಕ್ಷಿತಾ ಕಿಟ್‌ ಮಾಸ್ಕ್‌, ಗ್ಲೌಸ್‌, ಪಿಪಿಇ ಕಿಟ್‌ಗಳನ್ನ ಒದಗಿಸುವಂತೆ ಸೂಚಿಸಿದೆ.

ಇನ್ನು ಲಾಕ್‌ಡೌನ್‌ ಅವಧಿಯಲ್ಲಿ ಮುದ್ರಣ ಅಥವಾ ದೃಶ್ಯ ಮಾಧ್ಯಮಗಳು ಯಾವುದೇ ಆಗಲಿ ತನ್ನ ವರದಿಗಾರರನ್ನ ಅಥವಾ ಸಿಬ್ಬಂದಿಗಳನ್ನ ಕರ್ತವ್ಯದಿಂದ ತೆಗೆಯುವಂತಿಲ್ಲ. ಹಾಗೂ ವೇತನ ಕಡಿಮೆ ಮಾಡುವಂತಿಲ್ಲ ಎಂದು ಆದೇಶವನ್ನ ಇತ್ತಿದೆ.

Click here Support Free Press and Independent Journalism

Pratidhvani
www.pratidhvani.com