ಜನರಿಗೆ ಹೊಡಿಯುವುದನ್ನು ಸಂಭ್ರಮಿಸುವ ಮಾಧ್ಯಮಗಳು ತಿಳಿಯದ ಸತ್ಯಗಳು..!
ರಾಜ್ಯ

ಜನರಿಗೆ ಹೊಡಿಯುವುದನ್ನು ಸಂಭ್ರಮಿಸುವ ಮಾಧ್ಯಮಗಳು ತಿಳಿಯದ ಸತ್ಯಗಳು..!

ಮಾಧ್ಯಮಗಳು ಮಾತ್ರ ರಸ್ತೆಯಲ್ಲಿ ಕಂಡವರನ್ನೆಲ್ಲಾ ಬಡಿಯಿರಿ, ಬಾರಿಸಿರಿ ಎಂದು ಉದ್ರೇಕಿಸುವಂತೆ ವರದಿ ಮಾಡುತ್ತಿದ್ದವು. ಅದರಲ್ಲಿಯೂ ಜನಸಾಮಾನ್ಯರ ಪರವಾಗಿ ದನಿ ಎತ್ತುತ್ತೇನೆ ಎಂದು ಬೊಗಳೆ ಬಿಡುವ ಓರ್ವ ‘ಕ್ಯಾಪ್ಟನ್’ ಆಸಾಮಿಯಂತೂ ಪೊಲೀಸ್‌ಇಲಾಖೆಗೆ ತಾನೇ ಪರೋಕ್ಷವಾಗಿ ಮಹಾನಿರ್ದೇಶಕ ಎನ್ನುವಂತೆ ಹೊಣೆಗೇಡಿತನದಿಂದ ಕಳೆದೆರಡು ದಿನಗಳಲ್ಲಿವರ್ತಿಸಿದ್ದಾನೆ.

ನಟರಾಜು

ಜನಸಾಮಾನ್ಯರ ಮೇಲೆ, ವ್ಯವಸ್ಥೆಯ ಮೇಲೆ ಎಂತಹದ್ದೇ ಅಸಹನೆ, ರೇಜಿಗೆ, ಇದ್ದರೂ ಮಾಧ್ಯಮದಲ್ಲಿರುವವರು, ವಿಶೇಷವಾಗಿ ಇಲೆಕ್ಟ್ರಾನಿಕ್ ಮಾಧ್ಯಮದ ಮಂದಿ ಸ್ಟುಡಿಯೋದಲ್ಲಿ ಕೂತು ಬಾಯಿಗೆ ಬಂದಂತೆ ಬಡಬಡಿಸುವುದನ್ನೂ, ತಾಳ್ಮೆ ಕಳೆದುಕೊಳ್ಳುವುದನ್ನು, ತಮಗೆ ದೊರೆತಿರುವ ಹುದ್ದೆಯನ್ನು ‘ಪ್ರಿವಿಲೇಜ್’ ಎಂದು ಭಾವಿಸಿ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆಯನ್ನು ಜನತೆಯ ವಿರುದ್ಧ ಉದ್ರೇಕಿಸುವುದನ್ನೂ ಮಾಡಬಾರದು. ಕಳೆದೆರಡು ದಿನಗಳಿಂದ ನಮ್ಮ ಕೆಲವು ಮಾಧ್ಯಮಗಳು ಕೋವಿಡ್‌ ವಿರುದ್ಧದ ಭಾರತದ ಸಮರವನ್ನು ತಮಗರಿವಿದ್ದೋ, ಇಲ್ಲದೆಯೋ ‘ಜನತೆಯ ಅಶಿಸ್ತಿನ ವಿರುದ್ಧ ಪೊಲೀಸರ ಸಮರ’ ಎಂದೇ ಬಿಂಬಿಸಿವೆ.ಜನರೆಲ್ಲರೂ ಯುಗಾದಿ ಹಬ್ಬದ ಆಚರಣೆಗೆಂದು ಬೆಂಗಳೂರು ತೊರೆದು ಊರುಗಳಿಗೆ ಹೊರಟರು, ಮೋಜು-ಮಸ್ತಿ ಮಾಡಲೆಂದೇ ಬೀದಿಬೀದಿಗಳಲ್ಲಿ ಅಲೆದರು ಎಂದೆಲ್ಲಾ ಈ ಮಾಧ್ಯಮಗಳು ಎರಡೂ ದಿನ ಬಡಬಡಿಸಿದವು. ಸಿಕ್ಕಸಿಕ್ಕವರಿಗೆಲ್ಲಾ ನಾಲ್ಕು ಬಾರಿಸಿ ಮನೆಗೆ ಓಡಿಸುವಂತೆ ಪೊಲೀಸರನ್ನು ತಾವೇ ಉದ್ರೇಕಿಸತೊಡಗಿದವು. ಇನ್ನು ಕೆಲವು ಮಾಧ್ಯಮಗಳಂತೂ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯೇ ತಮ್ಮ ಸ್ಟುಡಿಯೋದಲ್ಲಿದೆ ಎನ್ನುವಂತೆ ವರ್ತಿಸಿದವು.

ಜನ ಅಷ್ಟಕ್ಕೂ ತಮ್ಮ ಊರುಗಳಿಗೆ ಏಕೆ ಹೊರಟರು? ಅವರಿಗೆ ಇಲ್ಲಿಯೇ ಉಳಿಯಲು ಇದ್ದ ಸಮಸ್ಯೆಗಳೇನು? ಮುಗಿಬಿದ್ದು ಏಕೆ ದಿನಸಿ, ತರಕಾರಿ ಖರೀದಿ ಮಾಡಿದರು? ಈ ಯಾವುದೇ ಪ್ರಶ್ನೆಗಳು ನಮ್ಮ ದೃಶ್ಯ ಮಾಧ್ಯಮಗಳಿಗೆ ಮುಖ್ಯವಾಗಲೇ ಇಲ್ಲ. ಈ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಕೋವಿಡ್‌-19ಗಿಂತಲೂ ಗಂಭೀರವಾದ ಸಾಮಾಜಿಕ ಪರಿಸ್ಥಿತಿಗಳನ್ನು ಸಮಾಜ ಎದುರಿಸಬೇಕಾಗುತ್ತದೆ ಎನ್ನುವ ಕಿಂಚಿತ್ ಅರಿವೂ ಅವುಗಳಿಗೆ ಇಲ್ಲದಾಯಿತು.

ವಾಸ್ತವದ ಸಂಗತಿಯೆಂದರೆ ಹಳ್ಳಿಗಳಿಂದ ಬೆಂಗಳೂರಿಗೆ ವಲಸೆ ಬಂದು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಹುತೇಕ ಉದ್ಯೋಗಿಗಳಿಗೆ, ಕೂಲಿಕಾರ್ಮಿಕರಿಗೆ ಇಂದಿಗೂ ಪಡಿತರ ವ್ಯವಸ್ಥೆಯ ಮೂಲಕ ದೊರೆಯುವ ಆಹಾರ ಧಾನ್ಯಗಳೇ ಹೊಟ್ಟೆಗೆ ಆಧಾರ. ಇವರಲ್ಲಿ ಬಹುತೇಕರು ತಮ್ಮ ಪಡಿತರ ಚೀಟಿಗಳನ್ನು ಹೊಂದಿರುವುದು ತಮ್ಮ ಊರಿನ ವಿಳಾಸದಲ್ಲಿ. ಈ ಮಂದಿ ಪಡಿತರ ವಿತರಣೆಯಾಗಿದೆ ಎನ್ನುವುದನ್ನು ಫೋನ್‌ ಮೂಲಕ ತಿಳಿದುಕೊಂಡು, ತಿಂಗಳಿಗೊಮ್ಮೆ ಊರಿಗೆ ತೆರಳಿ ತಮಗೆ ಅಗತ್ಯವಿರುವ ದವಸ ಧಾನ್ಯಗಳನ್ನು ಅಲ್ಲಿಂದ ತಂದುಕೊಳ್ಳುತ್ತಾರೆ. ಉಳಿದಂತೆ ಸಣ್ಣಪುಟ್ಟ ದಿನಸಿ ಸಾಮಾನುಗಳನ್ನು ಮಾತ್ರವೇ ಇಲ್ಲಿ ಕೊಳ್ಳುತ್ತಾರೆ. ತಮಗೆ ಬರುವ ಹತ್ತು-ಹದಿನೈದು ಸಾವಿರ ರೂಪಾಯಿ ವೇತನದಲ್ಲಿ ಸಣ್ಣ ಕುಟುಂಬವನ್ನು ನಡೆಸಬೇಕಿರುವ ಹೊಣೆ ಹೊತ್ತ ಇವರೆಲ್ಲರೂ ಹೀಗೆ ಜೀವನ ನಡೆಸಬೇಕಾದ್ದು ಅನಿವಾರ್ಯ. ಹೀಗಿರುವಾಗ ಕರೋನಾ ಭಯ, ಲಾಕ್ ಡೌನ್ ಭೀತಿ ಈ ಜನತೆಯನ್ನು ಅವರಿಸುತ್ತದೆ. ತಿಂಗಳ ಕೊನೆ ಬೇರೆ, ಕೈಯಲ್ಲಿ ದುಡ್ಡೂ ಇಲ್ಲ, ಮುಂದಿನ ತಿಂಗಳ ಸಂಬಳದ ನೆಚ್ಚಿಗೆಯೂ ಇಲ್ಲ, ಬೆಂಗಳೂರಿನ ವಿಳಾಸದಲ್ಲಿ ಪಡಿತರ ಚೀಟಿಯೂ ಇಲ್ಲ, ಏನು ಮಾಡುವುದು? ಯಾರನ್ನು ದುಡ್ಡು ಕೇಳುವುದು? ಸಹಾಯಕ್ಕಾಗಿ ಯಾರ ಕಡೆ ನೋಡುವುದು? ನಿನ್ನೆ ಬೆಂಗಳೂರಿನಿಂದ ಊರುಗಳಿಗೆ ಹೊರಟಿದ್ದ ಕೆಳ ಮಧ್ಯಮ ವರ್ಗದ ಬಹುತೇಕರಲ್ಲಿ ಇದ್ದದ್ದು ಇಂತಹ ದುಗುಡವೇ ಹೊರತು ಮೋಜುಮಸ್ತಿ ಮಾಡಬೇಕು ಎನ್ನುವ ಉತ್ಸಾಹವಲ್ಲ! ಆದರೆ, ಇದು ನಮ್ಮ ದೃಶ್ಯ ಮಾಧ್ಯಮಗಳ ಕಣ್ಣಿಗೆ ಬೀಳಲಿಲ್ಲ.

ಇನ್ನು ಬೆಂಗಳೂರಿನಲ್ಲಿಯೇ ನೆಲೆಸಿರುವ ಬಹುತೇಕರೂ ಕೂಡ ಮಾಸಿಕ ವೇತನ ಪಡೆಯುವವರೇನಲ್ಲ, ಇವರು ದಿನಸಿಯನ್ನು ತಿಂಗಳಿಗೊಮ್ಮೆ ತಂದು ಇಟ್ಟುಕೊಳ್ಳುವುದೂ ಇಲ್ಲ. ಬಹುತೇಕ ಕುಟುಂಬಗಳು ಐದು-ಹತ್ತು ದಿನಕ್ಕಾಗುವಷ್ಟು ದಿನಸಿಯನ್ನು ಮನೆಯಲ್ಲಿರಿಸಿಕೊಂಡಿದ್ದರೆ ಅದು ಹೆಚ್ಚು. ಇವರೆಲ್ಲರಿಗೂ ಬೀದಿಯ ಕೊನೆಗಳಲ್ಲಿರುವ ದಿನಸಿ ಅಂಗಡಿಗಳೇ ಆಧಾರ. ಬಹುತೇಕ ಮಂದಿ ಅಲ್ಲಿ ಲೆಕ್ಕ ಬರೆಸಿ, ದಿನಸಿ ತರುತ್ತಾರೆ. ತಿಂಗಳಿಗೊಮ್ಮೆ ಚುಕ್ತಾ ಮಾಡುತ್ತಾರೆ. ಹೀಗಿರುವ ಕಡೆ, ದಿನಸಿ ಅಂಗಡಿಯವ ವಾರ-ಹತ್ತು ದಿನ ಬಾಗಿಲು ತೆಗೆಯದೆ ಹೋದರೆ ಏನು ಮಾಡುವುದು ಎನ್ನುವ ಆತಂಕ, ದುಗುಡ ನಿನ್ನೆ ಅವರಲ್ಲಿ ಅನೇಕರನ್ನು ರಸ್ತೆಗೆ ಬಂದು ಪರದಾಡುವಂತೆ ಮಾಡಿತು. ಆದರೆ, ಮಾಧ್ಯಮಗಳು ಮಾತ್ರ ರಸ್ತೆಯಲ್ಲಿ ಕಂಡವರನ್ನೆಲ್ಲಾ ಬಡಿಯಿರಿ, ಬಾರಿಸಿರಿ ಎಂದು ಉದ್ರೇಕಿಸುವಂತೆ ವರದಿ ಮಾಡುತ್ತಿದ್ದವು. ಅದರಲ್ಲಿಯೂ ಜನಸಾಮಾನ್ಯರ ಪರವಾಗಿ ದನಿ ಎತ್ತುತ್ತೇನೆ ಎಂದು ಬೊಗಳೆ ಬಿಡುವ ಓರ್ವ ‘ಕ್ಯಾಪ್ಟನ್’ ಆಸಾಮಿಯಂತೂ ಪೊಲೀಸ್‌ ಇಲಾಖೆಗೆ ತಾನೇ ಪರೋಕ್ಷವಾಗಿ ಮಹಾನಿರ್ದೇಶಕ ಎನ್ನುವಂತೆ ಹೊಣೆಗೇಡಿತನದಿಂದ ಕಳೆದೆರಡು ದಿನಗಳಲ್ಲಿ ವರ್ತಿಸಿದ್ದಾನೆ.

ಬೆಂಗಳೂರಿನ ಬಹುತೇಕ ಹಿರಿಯ ನಾಗರಿಕರು ಒಂದಿಲ್ಲೊಂದು ಖಾಯಿಲೆಗಳಿಂದ ಬಳಲುತ್ತಿರುವಂತಹವರು. ಮಧುಮೇಹ, ರಕ್ತದೊತ್ತಡ ಇಲ್ಲಿ ಸಾಮಾನ್ಯ. ಇವರಿಗೆ ವಾಕಿಂಗ್‌ ಮಾಡಬೇಕಾದ್ದು ಅನಿವಾರ್ಯ. ಮಾತ್ರೆಗಳು ಅಗತ್ಯ. ಇವರು ಸಹ ನಿನ್ನೆ ಬೀದಿಗಳಲ್ಲಿ ಮಾತ್ರೆಗಳಿಗಾಗಿ ಪರದಾಡುತ್ತಿದ್ದರು. ಇದಲ್ಲದೆ, ಡಯಾಲಿಸಿಸ್‌ ನಲ್ಲಿರುವವರು, ಫಿಸಿಯೋಥೆರಪಿ ಅಗತ್ಯವಿರುವವರು, ಒಂದಿಲ್ಲೊಂದು ಕಾರಣಕ್ಕೆ ವಾರಕ್ಕೆ, ಹತ್ತು ದಿನಕ್ಕೆ ಆಸ್ಪತ್ರೆಗಳಿಗೆ ಎಡತಾಕುವ ಅಗತ್ಯವಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರೆಲ್ಲರೂ ಗಾಬರಿಗೊಳಗಾದವರೇ ಆಗಿದ್ದಾರೆ, ಇಂತಹವರನ್ನು ನೋಡಿಕೊಳ್ಳುವ ಹೊಣೆಹೊತ್ತ ಕುಟುಂಬದವರು ನಿನ್ನೆಯಿಡೀ ಆಸ್ಪತ್ರೆಗಳನ್ನು ಎಡತಾಕಿ ಮಾತ್ರೆ, ತುರ್ತು ಚಿಕಿತ್ಸಾ ಕ್ರಮಗಳ ಬಗ್ಗೆ ವೈದ್ಯರ ಸಲಹೆಗಳನ್ನು ಪಡೆದಿದ್ದಾರೆ. ಬಹುತೇಕ ಖಾಸಗಿ ವೈದ್ಯರು ತಮ್ಮ ಬಳಿ ನಿಯಮಿತವಾಗಿ ಬರುವ ರೋಗಿಗಳಿಗೆ, “ಇವರಿಗೆ ಶುಶ್ರೂಷೆಯ ಅಗತ್ಯವಿದೆ, ಇವರು ಚಿಕಿತ್ಸೆಗೆ ಬರಲು ಅನುವು ಮಾಡಿಕೊಡುವುದು” ಎಂದು ಮೆಸೇಜ್ ಗಳನ್ನು, ಚೀಟಿಗಳನ್ನು ರೋಗಿಗಳಿಗೆ ಅಥವಾ ಅವರ ಪರವಾಗಿ ತಮ್ಮ ಬಳಿಗೆ ಬಂದಿದ್ದ ಅವರ ಕುಟುಂಬದ ಆಪ್ತರಿಗೆ ನೀಡಿದ್ದಾರೆ. ಇವರೂ ಸಹ ನಿನ್ನೆ ಬೆಂಗಳೂರಿನ ರಸ್ತೆಗಳ ಮೇಲಿದ್ದರು. ಆದರೆ, ಇವರಾರೂ ಸ್ಟುಡಿಯೋದಲ್ಲಿ ಕೂತು ಸಿಕ್ಕಸಿಕ್ಕಲ್ಲಿ ಜನರಿಗೆ ಬಾರಿಸಿ ಎಂದು ಕೇಕೆ ಹಾಕುತ್ತಿದ್ದವರ ಕಣ್ಣಿಗೆ ಕಾಣಲಿಲ್ಲ.

ಇಷ್ಟೇ ಅಲ್ಲ, ವಿವಿಧ ಉದ್ಯೋಗಗಳನ್ನು ಅರಸಿ ಬೆಂಗಳೂರಿಗೆ ಬಂದು, ಪೇಯಿಂಗ್ ಗೆಸ್ಟ್‌ ಹೌಸ್‌ (ಪಿಜಿ)ಗಳಲ್ಲಿ ನೆಲೆಸಿರುವವರ ಸಂಖ್ಯೆ ಇಂದು ವ್ಯಾಪಕವಾಗಿದೆ. ಪಿಜಿಗಳನ್ನು ನಡೆಸುವುದೆಂದರೆ ಸಣ್ಣ ಮಟ್ಟದ ಹಾಸ್ಟೆಲ್‌ ಗಳನ್ನು ನಡೆಸಿದಂತೆಯೇ ಸರಿ. ಇವುಗಳಿಗೆ ದಿನನಿತ್ಯವೂ ತರಕಾರಿ, ಹಾಲು, ದಿನಸಿ ಬೇಕೇಬೇಕು. ದಿನಸಿಯನ್ನು ಸ್ಟೋರ್ ಮಾಡಬಹುದಾದರೂ, ತರಕಾರಿ ಅಂದಂದೇ ಕೊಳ್ಳುವುದು ಅನಿವಾರ್ಯ. ಕೋವಿಡ್‌-19 ಆತಂಕದಿಂದ ಅತ್ತ ಸರ್ಕಾರವೇ ಹಾಸ್ಟೆಲ್‌ ಗಳನ್ನು ಬಂದ್‌ ಮಾಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದೆ. ಅದರೆ, ಅದೇ ಕೆಲಸವನ್ನು ಪಿಜಿಗಳು ಮಾಡಲು ಹೊರಟಾಗ ಅದಕ್ಕೆ ‘ಮಾನವೀಯತೆ’ಯ ಪ್ರಶ್ನೆ ಜ್ಞಾಪಕಕ್ಕೆ ಬಂದಿದೆ! ಹಾಗಾಗಿ, ಪಿಜಿಗಳಲ್ಲಿ ನೆಲೆಸಿರುವವರನ್ನು ಬಲವಂತದಿಂದ ತೆರವುಗೊಳಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಒಳ್ಳೆಯ ನಿರ್ಧಾರ. ಆದರೆ, ಅವರಿಗೆಲ್ಲಾ ಊಟ ಹಾಕುವುದು ಹೇಗೆ? ತರಕಾರಿ, ದಿನಸಿ ತರುವುದು ಹೇಗೆ? ಎನ್ನುವ ಇಕ್ಕಟ್ಟು ಪಿಜಿಗಳಿಗೆ ಎದುರಾಗಿದೆ. ಅಲ್ಲದೆ, ಒಂದೊಮ್ಮೆ ಯಾರಿಗಾದರೂ ಪಿಜಿಯಲ್ಲಿ ಸೋಂಕು ತಗುಲಿದರೆ ಆಗ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎನ್ನುವ ಆತಂಕವೂ ಇವುಗಳನ್ನು ನಡೆಸುತ್ತಿರುವವರಲ್ಲಿದೆ. ಇದನ್ನೆಲ್ಲಾ ಆಲೋಚಿಸಿಯೇ, ಅನೇಕ ಪಿಜಿಗಳು ಮನೆಗಳಿಗೆ ತೆರಳಲು ಸಾಧ್ಯವಿರುವಂತಹ ತಮ್ಮ ಬಾಡಿಗೆದಾರರಿಗೆ ಮನೆಗಳಿಗೆ ತೆರಳುವಂತೆ ವಿನಂತಿಸಿವೆ ಕೂಡ.

ಇದೆಲ್ಲದರಿಂದಾಗಿ ನಿನ್ನೆ ಬೆಂಗಳೂರಿನ ಬಹುತೇಕ ಪಿಜಿಗಳಲ್ಲಿ ನೆಲೆಸಿರುವ ಉದ್ಯೋಗಿಗಳು ತಮ್ಮ ಊರುಗಳಿಗೆ ಹೊರಟಿದ್ದರು. ಇವರೆಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿನಿಂದ ಊರಿಗೆ ಹೊರಟರು. ಆದರೆ, ನಮ್ಮ ದೃಶ್ಯ ಮಾಧ್ಯಮದವರ ಕಣ್ಣಿಗೆ ಇವರೆಲ್ಲರೂ ಪುಂಡುಪೋಕರಿಗಳು, ಶೋಕಿ ಮಾಡಲು ಹೊರಟಿರುವವರಂತೆ ಕಂಡರು. ಪ್ರತಿದಿನ ರಾತ್ರಿ ಪ್ರೈಮ್‌ ಟೈಮ್‌ ವೇಳೆಯಲ್ಲಿ, “ಮೋದಿ ಏನ್ಮಾಡ್ತಾರೆ ಗೊತ್ತಾ, ಗೊತ್ತಾ ಗೊತ್ತಾ!” ಎಂದು ಗಂಟಲು ಹರಿಯುವಂತೆ ವಿಶೇಷ ಪ್ಯಾಕೇಜ್‌ಗಳನ್ನು ಮಾಡುವ ಈ ಮಂದಿಗೆ ತಾವೇನು ಮಾಡುತ್ತಿದ್ದೇವೆ ಎನ್ನುವ ಪ್ರಜ್ಞೆಯೇ ಇಲ್ಲ. ಹಾಗಾಗಿಯೇ, ಬೀದಿಗೆ ಬಂದವರೆಲ್ಲರಿಗೂ ಹೊಡೆಯಿರಿ, ಬಡಿಯಿರಿ ಎಂದು ರಣೋತ್ಸಾಹ ಮೆರೆದವು.

ಇನ್ನು ಕೋವಿಡ್‌ ಶಂಕಿತರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಿಸುವ ಬಗ್ಗೆ -ಕ್ವಾರಂಟೈನ್- ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಎಷ್ಟು ಕುಟುಂಬಗಳು ಎರಡು ಅಥವಾ ಮೂರು ಪ್ರತ್ಯೇಕ ಕೋಣೆಗಳುಳ್ಳ (ಬೆಡ್‌ರೂಂ) ಮನೆಗಳಲ್ಲಿ ವಾಸಿಸುತ್ತಿವೆ? ಬೆಂಗಳೂರಿನ ಬಹುತೇಕ ಕೆಳ ಮಧ್ಯಮವರ್ಗದ ಮಂದಿ ವಾಸಿಸುವ ಮನೆಗಳು ಸಿಂಗಲ್ ಬೆಡ್‌ರೂಂ ಇರುವಂತಹವು. ಇಂತಹ ಮನೆಗಳಲ್ಲಿ ಐದಾರು ಮಂದಿ ವಾಸಿಸುವುದು ಸಾಮಾನ್ಯ. ಇಷ್ಟು ಮಾತ್ರವೇ ಅಲ್ಲ, ಪ್ರತ್ಯೇಕ ಕೊಠಡಿ ಇರದ, ಕೇವಲ ಒಂದು ಹಾಲ್, ಅಡುಗೆಮನೆ, ಬಚ್ಚಲು, ಶೌಚಾಲಯ ಇರುವ, ಶ್ರೀಮಂತರ ಪಾಲಿಗೆ ‘ಹಂದಿಗೂಡು’ಗಳು ಎನಿಸುವ ವಾಸಸ್ಥಳಗಳಲ್ಲಿ, ಕೊಳಗೇರಿಗಳಲ್ಲಿ ಲಕ್ಷಾಂತರ ಸಂಖ್ಯೆಯ ಕೆಳಮಧ್ಯಮವರ್ಗ, ದಿನಗೂಲಿವರ್ಗ ಈ ನಗರದಲ್ಲಿ ತನ್ನ ಬದುಕು ಸವೆಸುತ್ತಿದೆ. ಇಷ್ಟೇ ಜಾಗದಲ್ಲಿಯೇ ೬-೮ ಮಂದಿ ಸರದಿ ಪ್ರಕಾರ ಮಲಗೆದ್ದು, ಕೆಲಸಕ್ಕೆ ಅಣಿಯಾಗಿ ಹೋಗುವ ದಿನಚರಿಯೂ ಇಲ್ಲಿದೆ. ಇದರಲ್ಲಿ ಎಲ್ಲ ಧರ್ಮದವರೂ, ಜಾತಿಯವರೂ ಇದ್ದಾರೆ. ಕೇವಲ ಶಿವಾಜಿನಗರದತ್ತಲೇ ನೋಡುವುದು ಬೇಡ! ಇಂತಹ ಕಡೆ ‘ಕ್ವಾರಂಟೈನ್’ ಹೇಗೆ ಉಪಯೋಗಕ್ಕೆ ಬರುತ್ತದೆ ಹೇಳಿ? ಒಮ್ಮೆ ಸಮುದಾಯದಲ್ಲಿ ರೋಗ ಹರಡಲು ಪ್ರಾರಂಭಿಸಿದರೆ ಇಂತಹ ಪುಟ್ಟಗೂಡುಗಳಲ್ಲಿ ಇರುವ ಮಂದಿಯನ್ನು ಸೋಂಕಿನಿಂದ ದೂರ ಇರಿಸುವ ಬಗ್ಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆಯೇ? ಮೇಲೆ ಚರ್ಚಿಸಿದ ಇಂತಹ ಸಮಸ್ಯೆಗಳೆಲ್ಲದರ ಬಗ್ಗೆ ದೃಶ್ಯ ಮಾಧ್ಯಮಗಳು ಮಾತನಾಡಬೇಕಲ್ಲವೇ?

ಜನರಿಗೆ ಹೊಡಿಯುವುದನ್ನು ಸಂಭ್ರಮಿಸುವ ಮಾಧ್ಯಮಗಳು ತಿಳಿಯದ ಸತ್ಯಗಳು..!

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಲಾಕ್‌ ಡೌನ್ ಅನಿವಾರ್ಯ. ಆದರೆ, ಅದನ್ನು‌ ಮಾಡುವ ಸಂದರ್ಭದಲ್ಲಿ ಸರ್ಕಾರ ತುರ್ತಾಗಿ ಏನೆಲ್ಲಾ ಕ್ರಮ ಕೈಗೊಳ್ಳುವ ಅಗತ್ಯವಿದೆ, ಜನತೆಗೆ ಎದುರಾಗಿರುವ ಸಮಸ್ಯೆಗಳೇನು ಎನ್ನುವ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕಿತ್ತು, ವರದಿಗಳನ್ನು ಮಾಡಬೇಕಿತ್ತು. ಅದನ್ನು ಮರೆತು, ರಸ್ತೆಯ ಮೇಲಿರುವವರೆಲ್ಲರೂ ಪುಂಡುಪೋಕರಿಗಳೇ ಅವರಿಗೆ ಬೆತ್ತದ ರುಚಿ ತೋರಿಸಿ ಎಂದು ಪೊಲೀಸರನ್ನು ಹುರಿದುಂಬಿಸುವುದರಲ್ಲೇ ಅವು ಕಾಲಹರಣ ಮಾಡಿದವು. ಮುಂದಿನ ೨೧ ದಿನ ಈ ದೃಶ್ಯ ಮಾಧ್ಯಮಗಳು ಹೇಗೆ ವರ್ತಿಸಲಿವೆ, ಏನನ್ನು ಚರ್ಚಿಸಲಿವೆ ಎನ್ನುವುದನ್ನು ರಾಜ್ಯದ ಜನತೆ ನೋಡಲಿದ್ದಾರೆ. ಕೋವಿಡ್‌-19 ನಿಂದ ಜನ ಸಾಯಬಾರದು ನಿಜ, ಆದರೆ, ಅಷ್ಟೇ ಮುಖ್ಯವಾದದ್ದು ಹಸಿವಿನಿಂದ, ವೈದ್ಯಕೀಯ ಶೂಶ್ರೂಷೆ, ಔ‍‍‍ಷಧಿಗಳ ಅಲಭ್ಯತೆಯಿಂದ, ಬಡತನ, ಮೂಲಸೌಲಭ್ಯಗಳ ಕೊರತೆಯಿಂದ ಜನತೆ ಸಾಯಬಾರದು ಎನ್ನುವುದು ಕೂಡಾ.

Click here Support Free Press and Independent Journalism

Pratidhvani
www.pratidhvani.com