ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!
ರಾಜ್ಯ

ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!

ಯಡಿಯೂರಪ್ಪ ನೇತೃತ್ವದ ಸರ್ಕಾರ ಅತ್ಯುತ್ತಮ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಒಂದರ ಮೇಲೊಂದು ಯಡವಟ್ಟುಗಳನ್ನು ಮಾಡುತ್ತಿರುವ ಮುಖ್ಯಮಂತ್ರಿಗಳು ಸರ್ಕಾರದ ಆದೇಶಗಳನ್ನು ನಗೆಪಾಟಲಿಗೀಡು ಮಾಡುತ್ತಿದ್ದಾರೆ. ಅದರಲ್ಲೂ ಕರೋನಾ ನಿಯಂತ್ರಣ ಕುರಿತ ಜವಾಬ್ದಾರಿಯನ್ನು ಆರೋಗ್ಯ ಸಚಿವರ ಬದಲಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ನೀಡುವ ಮೂಲಕ ಕೆಲಸಕ್ಕಿಂತ ಪ್ರಚಾರವೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇಂದಿರಾತನಯ

ಎಲ್ಲಾ ಬಣ್ಣವನ್ನೂ ಮಸಿ ನುಂಗಿತು ಎಂಬ ಮಾತೊಂದಿದೆ. ಸದ್ಯ ಈ ಮಾತು ನೆನಪಿಗೆ ಬರಲು ಕಾರಣವಾಗಿರುವುದು ವಿಶ್ವವನ್ನೇ ಬೆಚ್ಚಿ ಬೀಳಿಸಿದ, ಸಹಸ್ರಾರು ಜೀವಗಳನ್ನು ಬಲಿತೆಗೆದುಕೊಂಡ ಕೊರೊನಾ ಸೋಂಕನ್ನು ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿರುವ ಯಡವಟ್ಟುಗಳು. ಕಠಿಣ ಕ್ರಮದ ಎಚ್ಚರಿಕೆ ನೀಡಿ ಆರಂಭದಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಪೊಲೀಸ್ ಬಲವನ್ನು ಬಳಸಿಕೊಳ್ಳುತ್ತಿರುವ ಇದೇ ಸರ್ಕಾರ ನಂತರದಲ್ಲಿ ಜನ ಪಾಲಿಸುತ್ತಿಲ್ಲ ಎಂಬ ಕಾರಣವೊಡ್ಡಿ ನಿಯಮಗಳನ್ನು ಸಡಿಲಗೊಳಿಸಿ ಪೊಲೀಸರನ್ನು ವಿಲನ್ ಗಳ ರೀತಿ ಬಿಂಬಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವು ಯಡವಟ್ಟು ನಿರ್ಧಾರಗಳಿಂದ ದಿನಕಳೆದಂತೆ ಹೆಚ್ಚುತ್ತಿರುವ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುವ ಆತಂಕ ಕಾಣಿಸಿಕೊಂಡಿದೆ.

ಕೆಲವೊಂದು ವಿಚಾರಗಳಲ್ಲಿ, ಅದರಲ್ಲೂ ಮಾನವನ ಆರೋಗ್ಯಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವಾಗ ಸಾಮ, ದಾನ, ಭೇದಗಳಿಗೆ ಮಣಿಯದಿದ್ದರೆ ದಂಡ ಪ್ರಯೋಗ ಮಾಡಬೇಕಾಗುತ್ತದೆ. ಹಾಗೆಂದು ಎಲ್ಲರ ಮೇಲ ದಂಡ ಪ್ರಯೋಗ ಮಾಡುವ ಪ್ರಮೇಯ ಬರುವುದಿಲ್ಲ. ಏಕೆಂದರೆ, ಬಹುಜನರ ಪರವಾಗಿ ಸರ್ಕಾರ ಯಾವುದಾದರೂ ನಿರ್ಣಯ ಕೈಗೊಂಡರೆ ಹೆಚ್ಚಿನ ಸಂಖ್ಯೆಯ ಜನ ಅದನ್ನು ಬೆಂಬಲಿಸುತ್ತಾರೆ. ಕೆಲವರು ಅರಿವಿನ ಕೊರತೆಯಿಂದ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುತ್ತಾರೆ. ಇನ್ನುಳಿದಂತೆ ದೇಶವೇ ಹಾಳುಬಿದ್ದು ಹೊಗಲಿ, ನನಗೇನೂ ಆಗದಿದ್ದರೆ ಸಾಕು ಎನ್ನುವ ಮನಸ್ಥಿತಿಯವರು, ಮೊಸರಲ್ಲೂ ಕಲ್ಲು ಹುಡುಕುವ ಮನೋಧರ್ಮದವರು, ನನ್ನಿಷ್ಟದಂತೆ ಬದುಕುವುದು ನನ್ನ ಹಕ್ಕು, ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ ಎನ್ನುವವರು ಮಾತ್ರ ಸರ್ಕಾರದ ನಿರ್ಣಯಗಳನ್ನು ವಿರೋಧಿಸುತ್ತಾರೆ. ಇವರನ್ನು ಸರಿ ದಾರಿಗೆ ತರುವುದು ಸಾಧ್ಯವಿಲ್ಲ. ಅಂಥವರ ವಿರುದ್ಧ ದಂಡ ಪ್ರಯೋಗ ಮಾಡಲೇ ಬೇಕು. ದಂಡಂ ದಶಗುಣಂ ಎಂಬಂತೆ ವರ್ತಿಸಲೇ ಬೇಕು. ಆದರೆ, ನಮ್ಮ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿ ವ್ಯವಹರಿಸುತ್ತಿದೆ. ಯಾರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸುತ್ತಾರೋ ಅವರಿಗೆ ಬೇಕಾದಂತೆ ನಡೆದುಕೊಳ್ಳುವ ಮೂಲಕ ಮತ್ತಷ್ಟು ಮಂದಿ ತಪ್ಪು ಮಾಡಲು ಪ್ರೇರೇಪಿಸುತ್ತಿದೆ. ಕೊರೊನಾ ತಡೆಗಟ್ಟು ವಿಚಾರದಲ್ಲಿ ಸರ್ಕಾರದ ಯಡವಟ್ಟುಗಳು ಮಾಡಿರುವುದೂ ಇದನ್ನೆ.

ಯಡವಟ್ಟು-1

ಮಾ. 9ರಂದು ರಾಜ್ಯದಲ್ಲಿ ಶುರುವಾದ ಕೊರೊನಾ ಹಾವಳಿ ಮಾ. 11ರಂದು ಮೊದಲ ಬಲಿ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಸೋಂಕಿತರ ಸಂಖೆಯ 6ಕ್ಕೇರಿದಾಗ ಎಚ್ಚೆತ್ತುಕೊಂಡ ಸರ್ಕಾರ ಮಾ. 14ರಿಂದ ಒಂದು ವಾರ ರಾಜ್ಯದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿತು. ಮಾಲ್, ಚಿತ್ರಮಂದಿರ, ಸಭೆ, ಸಮಾರಂಭ, ಜಾತ್ರೆ, ಮದುವೆ, ಸಂತೆ, ಸಮಾವೇಶ, ಪ್ರದರ್ಶನ, ಕ್ರೀಡಾಕೂಟಗಳನ್ನು ಸ್ಥಗಿತಗೊಳಿಸಲು ನಿರ್ದೇಶಿಸಿತು. ಆದರೆ, ಎಲ್ಲೂ ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಲೇ ಇಲ್ಲ. ನಂತರದ ದಿನಗಳಲ್ಲಿ ಸೋಂಕು ಪ್ರಕರಣ ಹೆಚ್ಚಾಯಿತು. ಸರ್ಕಾರ ಪದೇ ಪದೇ ಸಹಕರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಸೂಚಿಸಿತಾದರೂ ಸಾಕಷ್ಟು ಮಂದಿ ಅದನ್ನು ಪಾಲಿಸಲೇ ಇಲ್ಲ. ಇದರ ಮಧ್ಯೆ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿದ ಸರ್ಕಾರ, ಕಿದ್ವಾಯಿ ಸೇರಿದಂತೆ ವಿವಿಧ ಸ್ವಾಯತ್ತ ಸಂಸ್ಥೆಗಳಲ್ಲಿ ರೋಗಿಗಳ ದಟ್ಟಣೆ ಕಡಿಮೆ ಮಾಡಲು ತುರ್ತು ಚಿಕಿತ್ಸೆಗಳು ಅಗತ್ಯ ಇರುವವರನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತದೆ. ದಂತ ಕ್ಲಿನಿಕ್ ಮತ್ತು ಹೊಟೇಲ್ ಎಸಿ ಬಂದ್ ಮಾಡಲು, ವಿದೇಶದಿಂದ ಬಂದವರು ಸೆಲ್ಫ್ ಕ್ವಾರಂಟೈನ್ ನಲ್ಲಿ ಮನೆಗಳಲ್ಲೇ ಇರಬೇಕು. ಅನಗತ್ಯವಾಗಿ ಯಾರೂ ಓಡಾಡಬಾರದು, ಜನದಟ್ಟಣೆ ಸೃಷ್ಟಿ ಮಾಡಬಾರದು ಎಂದು ಆದೇಶಿಸಿತು. ಇದಕ್ಕೂ ಜನರ ಪ್ರತಿಕ್ರಿಯೆ ಹಿಂದಿನಂತೆಯೇ ಇತ್ತು. ತಮಗೇನೂ ಆಗಿಲ್ಲ. ಹೀಗಿರುವಾಗ ನಾವೇಕೆ ನಿರ್ಬಂಧ ಹಾಕಿಕೊಳ್ಳಬೇಕು ಎಂದು ನಿರ್ಲಕ್ಷ್ಯ ತೋರಿದರು. ಇದನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೂ ತನ್ನಿಂದ ತಪ್ಪಾಗಬಾರದು ಎಂಬಂತೆ ಆರೋಗ್ಯ ತುರ್ತು ಪರಿಸ್ಥಿತಿಯ ಅವಧಿಯನ್ನು ಮಾರ್ಚ್ 31ರವರೆಗೆ ವಿಸ್ತರಿಸಿತು.

ಯಡವಟ್ಟು-2

ನಂತರ ಸರ್ಕಾರ ಸ್ವಲ್ಪ ಮಟ್ಟಿಗೆ ಎಚ್ಚೆತ್ತುಕೊಂಡಿದ್ದು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ ಬಳಿಕ. ಈ ಕರೆ ರಾಜ್ಯದಲ್ಲಿ ಯಶಸ್ವಿಯಾಗಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡಿ ಅದರಲ್ಲಿ ಯಶಸ್ಸು ಗಳಿಸಿತು. ಜತೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸೋಂಕು ದೃಢಪಟ್ಟಿರುವ ಒಂಬತ್ತು ಜಿಲ್ಲೆಗಳಲ್ಲಿ ಮಾರ್ಚ್‌ 31ರವರೆಗೆ ರಾಜ್ಯ ಸರ್ಕಾರ ಅರೆ ಲಾಕ್‌ಡೌನ್ ಘೋಷಿಸಿ ಮಾ. 22ರಂದು ಆದೇಶ ಹೊರಡಿಸಿತು. ಲಾಕ್‌ಡೌನ್‌ ಅವಧಿಯಲ್ಲಿ ಈ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ ಮತ್ತಿತರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿತು. ಆದರೆ, ಜನರದ್ದು ಆದೇ ನಿರ್ಲಕ್ಷ್ಯ. ಇದರ ಮಧ್ಯೆ ಈ ಆದೇಶವನ್ನು ಪಾಲಿಸುವಂತೆ ಜನರಿಗೆ ಸರ್ಕಾರ ಮನವಿ ಮಾಡಿಕೊಂಡಿತು. ಕಾನೂನು ಬದ್ಧವಾಗಿ ಹೊರಡಿಸುವ ಆದೇಶಗಳನ್ನೇ ಪಾಲಿಸುವುದಿಲ್ಲ ಎಂಬ ಜನರಿಗೆ ಈ ಮನವಿ ಯಾವ ಲೆಕ್ಕ. ಆದರೂ ಸರ್ಕಾರ ಮಾತ್ರ, ಆದೇಶ ನೀಡುವುದಷ್ಟೇ ನನ್ನ ಕೆಲಸ ಎಂಬಂತೆ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಯಡವಟ್ಟು-3

ಹೀಗಿದ್ದರೂ ಕೊರೊನಾ ಪ್ರಕರಣಗಳಲ್ಲಿ ಆತಂಕಕಾರಿಯಾಗಿ ಏರಿಕೆ ಕಂಡುಬಂದಿತ್ತು. ಸೋಮವಾರ (ಮಾ. 23) ಒಂದೇ ದಿನ 7 ಪ್ರಕರಣಗಳು ದೃಢಪಟ್ಟಿತ್ತು. ರಾಜ್ಯವ್ಯಾಪಿ ಸೋಂಕು ಹರಡುವ ಭೀತಿ ಕಾಣಿಸಿಕೊಂಡಿತು. ಆದರೂ ಸರ್ಕಾರ ಸೋಂಕು ದೃಢಪಟ್ಟಿರುವ ಒಂಬತ್ತು ಜಿಲ್ಲೆಗಳಲ್ಲಿ ಮಾತ್ರ ಮಾರ್ಚ್‌ 31 ರವರೆಗೆ ಕರ್ಫ್ಯೂ ಮಾದರಿಯ ಕಠಿಣ ನಿರ್ಬಂಧಗಳಿರುವ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿತು. ಈ ಕುರಿತು ಭಾರೀ ವಿರೋಧ ವ್ಯಕ್ತವಾಗಿ ಜನ, ಆರೋಗ್ಯ ಕ್ಷೇತ್ರದ ಗಣ್ಯರು ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಲಾರಂಭಿಸಿದ ಬಳಿಕ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಆದೇಶವನ್ನು ವಿಸ್ತರಿಸಿತು. ನಿರ್ಬಂಧಗಳ ಆಜ್ಞೆ ನೀಡಿದ್ದರೂ ಸಾರ್ವಜನಿಕರು ಮನೆಗಳಿಗೆ ಸೀಮಿತರಾಗದ ಕಾರಣ ಈ ನಿರ್ಧಾರ. ಅಗತ್ಯ ಸೇವೆಗಳು ಹೊರತು ಎಲ್ಲವೂ ಬಂದ್ ಆಗಲಿದೆ ಎಂದು ಸರ್ಕಾರ ಹೇಳಿತು.

ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!

ಯಡವಟ್ಟು-4

ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿ, ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದ್ದರಿಂದ ಪೊಲೀಸರು ಮಂಗಳವಾರ ಬೆಳಗ್ಗೆ 3 ಗಂಟೆಯಿಂದಲೇ ಪ್ರಮುಖ ರಸ್ತೆಗಳಲ್ಲಿ, ಟೋಲ್ ಕೇಂದ್ರಗಳಲ್ಲಿ ನಿಂತು ವಾಹನಗಳು ಓಡಾಡದಂತೆ ನೋಡಿಕೊಂಡರು. ಜನಜಂಗುಳಿ ಸೇರುವ ಮಾರುಕಟ್ಟೆಗಳನ್ನು ಬಲವಂತದಿಂದ ಬಂದ್ ಮಾಡಿದರು. ಅನಗತ್ಯವಾಗಿ ಜನ ಓಡಾಡದಂತೆ ನಿಯಂತ್ರಿಸಿದರು. ಅನೇಕ ಕಡೆ ಲಘು ಲಾಠಿ ಪ್ರಹಾರಗಳನ್ನೂ ನಡೆಸಲಾಯಿತು. ಈ ಬಗ್ಗೆ ಆಕ್ರೋಶ ವ್ಯಕ್ತವಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉದ್ದೇಶವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆಮೇಲೆ ಇದಕ್ಕೆ ಸರ್ಕಾರವನ್ನು ದೂರಬೇಡಿ ಎನ್ನುವ ಮೂಲಕ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬಿದರು. ಇದರಿಂದ ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೆ ಬರುವ ಲಕ್ಷಣ ಕಾಣಿಸಿಕೊಂಡಿತು. ಆದರೆ, ಸಂಪೂರ್ಣ ಲಾಕ್ ಡೌನ್ ನಿರ್ಭಂಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರ ಮೇಲೆ ಪೊಲೀಸರು ದಂಡ ಪ್ರಯೋಗ ಮಾಡಿದ್ದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರೋ ಮುಖ್ಯಮಂತ್ರಿಗಳ ನಿಲುವು ಬದಲಾಯಿತು. ಊರಿಗೆ ಹೋಗುವವರು, ಬೆಂಗಳೂರಿಗೆ ಬರುವವರು ಎಲ್ಲರೂ ರಾತ್ರಿಯೊಳಗೆ ತಮ್ಮ ಗಮ್ಯ ಸೇರಬೇಕು. ಮಂಗಳವಾರದಿಂದ ಬುಧವಾರದಿಂದ ಯಾರೂ ಮನೆಯಿಂದ ಹೊರಬರುವಂತಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಹೀಗಾಗಿ ಅದುವರೆಗೆ ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಿದ್ದ ಪೊಲೀಸರು ನಿಯಮ ಉಲ್ಲಂಘಿಸಿದವರ ಪಾಲಿಗೆ ವಿಲನ್ ಗಳಾದರೂ. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮತ್ತೆ ಸ್ಪಷ್ಟನೆ ನೀಡಿದ ಅವರು, ರಾಜ್ಯದಲ್ಲಿ ಜನಜೀವನ ನಿಯಂತ್ರಿಸುವದರೊಂದಿಗೆ ಬೇರೆ ಜಿಲ್ಲೆಗಳಿಂದ ಬಂದ ಕೆಲವು ಜನರು ತಮ್ಮ ವಾಹನಗಳಲ್ಲಿ ವಾಪಸ್ಸು ಹೋಗಲು ತಯಾರಾಗಿ ತಮ್ಮ ಊರಿನ ದಾರಿಯನ್ನು ಹಿಡಿದರು. ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಯಿತು. ಹೀಗಾಗಿ ಜನರು ತಮ್ಮ ವಾಹನಗಳಲ್ಲಿ ಊರಿಗೆ ವಾಪಸ್ಸು ಹೋಗಲು ಬಿಡಿ ಎಂದು ಪೊಲೀಸರಿಗೆ ಆದೇಶಿಸಲಾಯಿತು.  ಯುಗಾದಿ ಹಬ್ಬಕ್ಕೆ ತಮ್ಮ ಊರಿಗೆ ಹೋಗಲು ಅನುವು ಮಾಡಿಕೊಡಲಾಯಿತು.  ಇದನ್ನು ತಪ್ಪಾಗಿ ಗ್ರಹಿಸಿ ಜನರನ್ನು ಬೇರೆ ಊರುಗಳಿಗೆ ಹೋಗಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಬಿತ್ತರಿಸಲಾಯಿತು ಎಂದು ತಮ್ಮನ್ನು ಸಮರ್ಥಿಸಿಕೊಂಡರು. ಈ ರೀತಿ ಮುಖ್ಯಮಂತ್ರಿಯವರ ಕ್ಷಣಕ್ಕೊಂದು ನಿಲುವಿನಿಂದಾಗಿ ಬುಧವಾರದಿಂದಲಾದರೂ ಸಂಪೂರ್ಣ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ.

ಯಡವಟ್ಟು-5

ಇಡೀ ರಾಜ್ಯವೇ ಕೊರೊನಾ ಆತಂಕದಲ್ಲಿದೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಒಟ್ಟಾರೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಡಾ.ಸುಧಾಕರ್ ಅವರು ಬೆಂಗಳೂರಿನಲ್ಲಿದ್ದುಕೊಂಡು ಅಧಿಕಾರಿಗಳ ಸಭೆ ಮಾಡುತ್ತಾ, ಒಟ್ಟಾರೆ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಕೆಲಸದಲ್ಲಿ ನಿರತರಾಗಿದ್ದರೆ, ಆರೋಗ್ಯ ಸಚಿವ ಶ್ರೀರಾಮುಲು ಅವರಂತೂ ಜಿಲ್ಲೆಗಳಿಗೆ ಭೇಟಿ ನೀಡಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಆಗಿರುವ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ತಮಗೆ ಸೋಂಕು ಅಂಟಿಕೊಳ್ಳಬಹುದು ಎಂಬ ಆತಂಕವಿದ್ದರೂ ಅಪಾಯ ಮೈಮೇಲೆ ಎಳೆದುಕೊಂಡು ಕೆಲಸ ಮಾಡುತ್ತಿದ್ದಾರೆ.

ಕರೋನಾ ಹರಡುವ ಭೀತಿ ಹೆಚ್ಚಿಸುತ್ತಿದೆ ರಾಜ್ಯ ಸರ್ಕಾರದ ಯಡವಟ್ಟುಗಳು..!

ಆದರೆ, ಮಂಗಳವಾರ ಮಧ್ಯಾಹ್ನದ ವೇಳೆಗೆ ರಾಜ್ಯಪಾಲರ ಹೆಸರಿನಲ್ಲಿ ಆದೇಶವೊಂದು ಹೊರಬಿತ್ತು. ಸಚಿವ ಶ್ರೀರಾಮುಲು ಅವರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯಿಂದ ಕೊರೊನಾ ಕುರಿತ ಜವಾಬ್ದಾರಿಯನ್ನು ಕಿತ್ತುಕೊಂಡು ಡಾ.ಸುಧಾಕರ್ ಅವರಿಗೆ ವಹಿಸಲಾಯಿತು. ಈ ಮೂಲಕ ಶ್ರೀರಾಮುಲು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಸಂದೇಶ ಹೊರಬರುವಂತಾಯಿತು. ಮುಖ್ಯಮಂತ್ರಿಗಳ ಈ ಕ್ರಮ ಹೇಗಿದೆ ಎಂದರೆ ಖಾತೆ ಶ್ರೀರಾಮುಲು ಕೈಯ್ಯಲ್ಲಿ, ಜವಾಬ್ದಾರಿ ಸುಧಾಕರ್ ಅವರಿಗೆ ಎನ್ನುವಂತಿದೆ. ಅಂದರೆ, ಇಲ್ಲಿ ಕೆಲಸ ಮಾಡಿದವರಿಗಿಂತ ಪ್ರಚಾರ ಪಡೆದುಕೊಂಡವರೇ ಮುಖ್ಯ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ನಿರೂಪಿಸಿಬಿಟ್ಟರು.

Click here Support Free Press and Independent Journalism

Pratidhvani
www.pratidhvani.com