ಒಕ್ಕಲಿಗ ಸಚಿವರ ಪೈಪೋಟಿ ಮಧ್ಯೆ ಇತರೆ ಸಚಿವರು ಹೈರಾಣ
ರಾಜ್ಯ

ಒಕ್ಕಲಿಗ ಸಚಿವರ ಪೈಪೋಟಿ ಮಧ್ಯೆ ಇತರೆ ಸಚಿವರು ಹೈರಾಣ

ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದೃಷ್ಟದಿಂದ ಉಪಮುಖ್ಯಮಂತ್ರಿಯಾದ ಡಾ. ಸಿ ಎನ್ ಅಶ್ವತ್ಥನಾರಾಯಣ ಪಕ್ಷದ ಹಿರಿಯರನ್ನು ಕಡೆಗಣಿಸಿ ಹೇಗೆ ಮಿಂಚಲಾರಂಭಿಸಿದ್ದರು. ಇದೀಗ ಅಶ್ವತ್ಥನಾರಾಯಣ ಅವರ ಜಾಗವನ್ನು ಸಚಿವ ಡಾ. ಕೆ ಸುಧಾಕರ್ ಆಕ್ರಮಿಸಿಕೊಂಡಿದ್ದಾರೆ. ಇವರ ಅತಿಯಾದ ಬಿಂಬಿಸಿಕೊಳ್ಳುವಿಕೆ ಇತರೆ ಸಚಿವರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

ಇಂದಿರಾತನಯ

ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗಿರುವ ಒಕ್ಕಲಿಗ ಸಮುದಾಯದವರನ್ನು ಸೆಳೆಯಲು ಬಿಜೆಪಿಯಲ್ಲಿ ಸಾಕಷ್ಟು ಕಸರತ್ತುಗಳು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಬಾಗದ ಹಾಸನ, ಮಂಡ್ಯ ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮೇಲೆ ಕಣ್ಣಿಟ್ಟು ಆ ಭಾಗದಲ್ಲಿ ಇತರೆ ಪಕ್ಷಗಳಲ್ಲಿರುವ ಒಕ್ಕಲಿಗ ಸಮುದಾಯದವರನ್ನು ಸೆಳೆದು ಹಳೇ ಮೈಸೂರು ಭಾಗದಲ್ಲೂ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಆದರೆ, ಪಕ್ಷ ಒಕ್ಕಲಿಗ ಸಮುದಾಯದ ಮೇಲೆ ಕಣ್ಣಿಟ್ಟಿದ್ದರೆ, ಪಕ್ಷದಲ್ಲಿರುವ ಆ ಸಮುದಾಯದ ನಾಯಕರು ಪರಸ್ಪರ ತಮ್ಮೊಳಗೆ ಸ್ಪರ್ಧೆಗೆ ಇಳಿದಿದ್ದಾರೆ.

ಹೌದು, ಹೇಗಾದರೂ ಮಾಡಿ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವಂತೆ ಮಾಡಿದರೆ ತಾವಿಬ್ಬರು ಸೇರಿಕೊಂಡು ಒಕ್ಕಲಿಗ ಸಮುದಾಯದ ಮೇಲೆ ಪ್ರಭುತ್ವ ಸಾಧಿಸಬಹುದು ಎಂಬ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನಿರೀಕ್ಷೆ ಹುಸಿಯಾಗಿದೆ. ಅದರ ಬದಲಾಗಿ ಮೈತ್ರಿ ಸರ್ಕಾರ ಉರುಳಿಸಿ ಉಪ ಚುನಾವಣೆ ಮೂಲಕ ಬಿಜೆಪಿಯಿಂದ ಗೆದ್ದು ಬಂದು ಸಚಿವರಾಗಿರುವ ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಅವರು ಆರಂಭದಿಂದಲೇ ಭಾರೀ ಮಿಂಚುತ್ತಿದ್ದಾರೆ. ಇದು ಅಶ್ವತ್ಥನಾರಾಯಣ ಅವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ನೆನ್ನೆ-ಮೊನ್ನೆ ಪಕ್ಷಕ್ಕೆ ಬಂದ ಸುಧಾಕರ್ ಇಷ್ಟೊಂದು ಪ್ರಭಾವಿಯಾಗುತ್ತಿದ್ದರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗದೆ ತಾವು ಕೂಡ ಅವರೊಂದಿಗೆ ಸ್ಪರ್ಧೆಗೆ ಬಿದ್ದಿದ್ದಾರೆ.

ಇವರಿಬ್ಬರ ನಡುವಿನ ಜಿದ್ದಾಜಿದ್ದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹಿರಿಯ ಸಚಿವ ಆರ್.ಅಶೋಕ್, ಇವೆಲ್ಲಾ ಎಷ್ಟು ದಿನ ಎಂಬಂತೆ ತಣ್ಣಗೆ ಇದ್ದಾರೆ. ಏಕೆಂದರೆ, ರಾಜಕೀಯ ಎಂಬುದೊಂದು ಮ್ಯಾರಥಾನ್. ಇಲ್ಲಿ ಸುದೀರ್ಘ ಅವಧಿ ಮತ್ತು ಹೆಚ್ಚು ದೂರ ಓಡಬೇಕಾಗುತ್ತದೆ. ಆರಂಭದಲ್ಲೇ ವೇಗವಾಗಿ ಓಡಿದರೆ ಬಹಳ ಬೇಗ ಸುಸ್ತಾಗಿ ಗುರಿ ಮುಟ್ಟಲು ಸಾಧ್ಯವಿಲ್ಲ. ಅದರ ಬದಲು ಆರಂಭದಿಂದ ಅಂತ್ಯದವರೆಗೆ ಒಂದೇ ವೇಗದಲ್ಲಿ ಸಾಗುತ್ತಿದ್ದರೆ ಗುರಿ ಮುಟ್ಟಬಹುದು ಎಂಬುದು ಅವರಿಗೆ ಗೊತ್ತಿದೆ.

ಅಶ್ವತ್ಥನಾರಾಯಣ ಜಾಗದಲ್ಲೀಗ ಸುಧಾಕರ್

ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದೃಷ್ಟ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರನ್ನು ಹುಡುಕಿಕೊಂಡು ಬಂದಿತ್ತು. ಬೆಂಗಳೂರಿನಲ್ಲಿ ಆರ್.ಅಶೋಕ್, ಸುರೇಶ್ ಕುಮಾರ್, ವಿ.ಸೋಮಣ್ಣ ಅವರಂತಹ ಹಿರಿಯರು ಇದ್ದರೂ ಮೊದಲ ಬಾರಿ ಸಚಿವರಾದ ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡರು. ಇದಾದ ಬಳಿಕ ಬೆಂಗಳೂರಿನ ಉಸ್ತುವಾರಿಗಾಗಿ ಪೈಪೋಟಿ ಆರಂಭವಾಯಿತು. ಉಸ್ತುವಾರಿ ಇಲ್ಲದೇ ಇದ್ದರೂ ಅಶ್ವತ್ಥನಾರಾಯಣ ಅವರೇ ಮೇಲೆ ಬಿದ್ದು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಗಳನ್ನು ಮಾಡಿದರು. ಅಧಿಕಾರಿಗಳನ್ನು ಕರೆಸಿ ಯೋಜನೆಗಳನ್ನು ರೂಪಿಸಿದರು. ಇನ್ನು ಬೆಂಗಳೂರು ಹೊರತುಪಡಿಸಿ ಇತರೆ ಜಿಲ್ಲೆಗಳ ವಿಚಾರದಲ್ಲೂ, ಅದರಲ್ಲೂ ಮುಖ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಸಾಕಷ್ಟು ಮೆರೆದಾಡಿ ಒಕ್ಕಲಿಗರ ಬೆಂಬಲ ಗಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಇಷ್ಟೆಲ್ಲಾ ಆದರೂ ಅಶೋಕ್ ಮಾತ್ರ ತಮ್ಮದೇ ಆದ ರೀತಿಯಲ್ಲಿ ಏನೂ ಆಗದಂತೆ ಕುಳಿತಿದ್ದರು. ಕ್ರಮೇಣ ಅಶ್ವತ್ಥನಾರಾಯಣ ಅವರ ಪ್ರಭಾವ ಕಡಿಮೆಯಾಗತೊಡಗಿತು. ಬೆಂಗಳೂರು ಅಭಿವೃದ್ಧಿ ಕುರಿತು ಸಭೆ ಕರೆದರೆ ಶಾಸಕರೇ ಗೈರುಹಾಜರಾಗುವಂತಾಯಿತು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಅಶ್ವತ್ಥನಾರಾಯಣ ತಮ್ಮ ಬಳಿ ಇದ್ದ ವೈದ್ಯಕೀಯ ಶಿಕ್ಷಣದ ಜತೆಗೆ ಬಿ.ಶ್ರೀರಾಮುಲು ಅವರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲೂ ನಿಧಾನವಾಗಿ ಕೈ ಆಡಿಸಲಾರಂಭಿಸಿದರು. ಆದರೆ, ಅಷ್ಟರಲ್ಲಿ ಡಾ.ಸುಧಾಕರ್ ಸಚಿವರಾಗಿ ವೈದ್ಯಕೀಯ ಖಾತೆಯನ್ನು ವಹಿಸಿಕೊಂಡರು. ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರಂಭದಲ್ಲಿ ಅಶ್ವತ್ಥನಾರಾಯಣ ಅವರು ಹೇಗೆ ಮುಂಚೂಣಿಯಲ್ಲಿ ಮಿಂಚಲಾರಂಭಿಸಿದರೋ ಅದೇ ರೀತಿ ಸುಧಾಕರ್ ಕೂಡ ಈಗ ಮಿಂಚುತ್ತಿದ್ದಾರೆ. ಅದರಲ್ಲೂ ಮಾಧ್ಯಮಗಳಲ್ಲಿ ಅಶ್ವತ್ಥನಾರಾಯಣ ಅವರಿಗಿಂತ ಹೆಚ್ಚಾಗಿ ಸುಧಾಕರ್ ಕುರಿತಾಗಿಯೇ ಹೆಚ್ಚು ಸುದ್ದಿಗಳು ಬರುತ್ತಿವೆ. ಇಬ್ಬರೂ ಪೈಪೋಟಿಗೆ ಬಿದ್ದಂತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಮಾಧ್ಯಮ ಮುಖ್ಯಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸುಧಾಕರ್ ಪತ್ರಿಕೆಗಳ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಶ್ವತ್ಥನಾರಾಯಣ್ ಅವರ ನಿದ್ದೆಗೆಡಿಸುತ್ತಿದೆ. ಹೇಗಾದರೂ ಮಾಡಿ ಸುಧಾಕರ್ ಅವರನ್ನು ಬದಿಗೆ ಸರಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಸುಧಾಕರ್ ಮಾಧ್ಯಮ ನಿರ್ವಹಣೆ ಮುಂದೆ ಇತರೆ ಸಚಿವರು ಹೈರಾಣ

ಅಶ್ವತ್ಥನಾರಾಯಣ ಮತ್ತು ಸುಧಾಕರ್ ನಡುವಿನ ಮಾಧ್ಯಮ ಪೈಪೋಟಿಯಲ್ಲಿ ಇತರೆ ಸಚಿವರು ಹೈರಾಣಾಗಿದ್ದಾರೆ. ತಮ್ಮ ಇಲಾಖೆಯಲ್ಲಿ ಎಷ್ಟು ದೊಡ್ಡ ಕೆಲಸವಾದರೂ ಅದು ಮಾಧ್ಯಮದ ಎಲ್ಲೋ ಒಂದು ಮೂಲೆಯಲ್ಲಿ ಸಣ್ಣದಾಗಿ ಪ್ರಕಟವಾಗುತ್ತದೆ. ಆದರೆ, ಅಶ್ವತ್ಥನಾರಾಯಣ ಮತ್ತು ಸುಧಾಕರ್ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೂ ಅದು ಪ್ರಧಾನವಾಗಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಸುಧಾಕರ್ ಬಗ್ಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡುತ್ತವೆ ಎಂಬ ಅಸಮಾಧಾನ ಹಲವು ಸಚಿವರಲ್ಲಿದ್ದು, ಇದನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಕೂಡ.

ಕೊರೊನಾ ವೈರಸ್ ವಿಚಾರವನ್ನೇ ತೆಗೆದುಕೊಳ್ಳೋಣ. ಮಗಳ ಮದುವೆ ಕೆಲಸದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೆಲ ದಿನ ತಮ್ಮ ಜವಾಬ್ದಾರಿಯನ್ನು ಸುಧಾಕರ್ ಅವರಿಗೆ ವಹಿಸಿದ್ದರು. ಮದುವೆ ಮುಗಿದ ತಕ್ಷಣವೇ ಕಾರ್ಯಾಚರಣೆಗೆ ಇಳಿದ ಶ್ರೀರಾಮುಲು ನಂತರದಲ್ಲಿ ಸರಣಿ ಸಭೆಗಳನ್ನು ಮಾಡಿದರೂ ಅಲ್ಲಿ ಡಾ.ಸುಧಾಕರ್ ಕಾಣಿಸಿಕೊಳ್ಳುತ್ತಿದ್ದರು. ಮಾರನೇ ದಿನ ಮಾಧ್ಯಮಗಳಲ್ಲಿ ಸುಧಾಕರ್ ಅವರ ಹೆಸರು ಪ್ರಧಾನವಾಗಿ ಇರುತ್ತಿತ್ತೇ ಹೊರತು ಶ್ರೀರಾಮುಲು ಅವರ ಹೆಸರು ಎಲ್ಲೋ ಮೂಲೆಯಲ್ಲಿ ಬರುತ್ತಿತ್ತು. ಉದಾಹರಣೆಗೆ ಕಲಬುರ್ಗಿಯಲ್ಲಿ ಕೊರೊನಾ ಸೋಂಕಿನಿಂದ ಒಬ್ಬ ವ್ಯಕ್ತಿ ಮೃತಪಟ್ಟ ಬಳಿಕ ಜಿಲ್ಲೆಯಲ್ಲಿ ಆತಂಕ ಕಾಣಿಸಿಕೊಂಡು ಯಾರೂ ಕಲಬುರ್ಗಿಗೆ ಕಾಲಿಡದಂತಹ ವಾತಾವರಣ ನಿರ್ಮಾಣವಾಗಿತ್ತು. ಅದರ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಕಲಬುರ್ಗಿಗೆ ತೆರಳಿ ಅಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದರು. ಇತ್ತ ಸುಧಾಕರ್ ಅವರು ಬೆಂಗಳೂರಿನಲ್ಲಿ ಮುಂದಿನ ಕ್ರಮಗಳ ಜತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಆದರೆ, ಮಾರನೇ ದಿನ ಮಾಧ್ಯಮಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸುಧಾಕರ್ ರಾತ್ರಿ-ಹಗಲು ಎನ್ನದೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನವಾಗಿ ಬಂದರೆ, ಸಚಿವ ಶ್ರೀರಾಮುಲು ಕಲಬುರ್ಗಿಯಲ್ಲಿ ಕೆಲಸ ಮಾಡಿದ ಸುದ್ದಿ ಕಣ್ಣಿಗೂ ಕಾಣಿಸಿಕೊಳ್ಳದಂತೆ ಪ್ರಕಟವಾಯಿತು. ಇಲ್ಲಿ ಸುಧಾಕರ್ ಕೆಲಸ ಮಾಡಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಆದರೆ, ಅವರಿಗೆ ಪ್ರಚಾರ ನೀಡುವ ಭರದಲ್ಲಿ ಮಾಧ್ಯಮಗಳು ಇತರ ಸಚಿವರ ಕೆಲಸಗಳನ್ನು ಮೂಲೆಗುಂಪು ಮಾಡುತ್ತಾರೆ ಎಂಬುದಷ್ಟೇ ಸಚಿವರ ಅಸಮಾಧಾನ. ಅಷ್ಟರ ಮಟ್ಟಿಗೆ ಸುಧಾಕರ್ ಮಾಧ್ಯಮ ನಿರ್ವಹಣೆಯ ಪರಿಣತಿ ಹೊಂದಿದ್ದಾರೆ.

ಸುಧಾಕರ್ ಅವರಿಗೆ ಇದು ಹೊಸದೇನೂ ಅಲ್ಲ

ಸುಧಾಕರ್ ಅವರ ರಾಜಕೀಯ ನಡೆಗಳನ್ನು ಬಲ್ಲ ಕಾಂಗ್ರೆಸ್ಸಿಗರು ಹೇಳುವ ಪ್ರಕಾರ, ಸುಧಾಕರ್ ಅವರು ಮಾಧ್ಯಮಗಳ ನಿರ್ವಹಣೆಯಲ್ಲಿ ಎತ್ತಿದ ಕೈ. ಒಂದು ಕೆಲಸ ಮಾಡಿದರೆ, ಹತ್ತು ಕೆಲಸ ಮಾಡಿದಂತೆ ಕಾಣಿಸಿಕೊಳ್ಳುತ್ತಾರೆ. ಕಾಂಗ್ರೆಸ್ಸಿನಲ್ಲಿ ಹಿರಿಯ ನಾಯಕರು ಸುಧಾಕರ್ ಅವರನ್ನು ಮೂಲೆಗುಂಪು ಮಾಡಲು ಅವರ ಇಂತಹ ನಡವಳಿಕೆಯೇ ಕಾರಣ. ಈಗ ಬಿಜೆಪಿಯಲ್ಲೂ ಅದನ್ನು ಮುಂದುವರಿಸುತ್ತಿದ್ದಾರೆ. ಸದ್ಯ ಇದು ಸುಧಾಕರ್ ಮತ್ತು ಡಾ.ಅಶ್ವತ್ಥನಾರಾಯಣ ನಡುವಿನ ಸ್ಪರ್ಧೆಯಾಗಿದ್ದರೆ, ಮುಂದೆ ಬಿಜೆಪಿಯ ಇತರೆಲ್ಲಾ ಹಿರಿಯರನ್ನು ಬದಿಗೆ ಸರಿಸಿ ಸುಧಾಕರ್ ಮುಂಚೂಣಿಗೆ ಬರಲು ಪ್ರಯತ್ನಿಸಬಹುದು. ಆಗ ಪಕ್ಷದಲ್ಲಿ ಮತ್ತೊಂದು ಅಂತರ್ಯುದ್ಧ ನಡೆಯಬಹುದು. ಅದಕ್ಕೆ ಬಿಜೆಪಿಗರು ಸಿದ್ಧರಾಗಿರಬೇಕು ಎಂದು ಹೇಳುತ್ತಾರೆ.

Click here Support Free Press and Independent Journalism

Pratidhvani
www.pratidhvani.com