ಮುಂಬೈ ವಕೀಲ, ಕರ್ನಾಟಕದ ಪತ್ರಕರ್ತ ‘ಪಾಪು’ ಇನ್ನು ನೆನಪು ಮಾತ್ರ
ರಾಜ್ಯ

ಮುಂಬೈ ವಕೀಲ, ಕರ್ನಾಟಕದ ಪತ್ರಕರ್ತ ‘ಪಾಪು’ ಇನ್ನು ನೆನಪು ಮಾತ್ರ

ಫ್ರೀಪ್ರೆಸ್ ಜರ್ನಲ್ ಹಾಗೂ ಬಾಂಬೆ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಪಾಪು ಲೇಖನ ಬರೆದಿದ್ದನ್ನು ಗಮನಿಸಿದ ಕೆ. ಸದಾನಂದರು ಫ್ರೀ ಪ್ರೆಸ್ ಸೇರುವಂತೆ ಒತ್ತಾಯ ಮಾಡಿದರು. 1949ರಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕೆ ಕ್ಯಾಲಿಫೋರ್ನಿಯಾ ವಿವಿ ಸೇರಿದರು. ಪತ್ರಿಕೋದ್ಯಮ ಮುಗಿಸಿ ವಾಪಸ್​ ಆಗುವಾಗ 2ನೇ ವಿಶ್ವಯುದ್ಧದ ಸಮಯದಲ್ಲಿ ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಸರ್ ಆ್ಯಂಟನಿ ಈಡನ್‍ ಸಂದರ್ಶನ ಮಾಡಿದ್ದರು

ಕೃಷ್ಣಮಣಿ

ನಾಡೋಜ ಡಾ. ಪಾಟೀಲ್ ಪುಟ್ಟಪ್ಪರವರ 102 ವರ್ಷಗಳ ಸಾರ್ಥಕ ಜೀವನ ಕೊನೆಗೊಂಡಿದೆ. ಇನ್ನು ಉಳಿದಿರುವುದು ಕೇವಲ ಅವರ ನೆನಪು ಮತ್ತು ಸಾಧನೆಗಳು ಮಾತ್ರ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಾಟೀಲ್ ಪುಟ್ಟಪ್ಪ, ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಂಗಾಂಗ ವೈಫಲ್ಯದಿಂದ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಪತ್ರಕರ್ತನಾಗಿ, ರಾಜ್ಯ ಸಭೆ ಸದಸ್ಯನಾಗಿ, ಸಾಹಿತಿಯಾಗಿ ಸಂತೃಪ್ತ ಜೀವನ ನಡೆಸಿದ ಕರ್ನಾಟಕದ ನೆಚ್ಚಿನ ‘ಪಾಪು’ ಇನ್ನು ನೆನಪು ಮಾತ್ರ.

ಡಾ. ಪಾಟೀಲ್ ಪುಟ್ಟಪ್ಪ ವಿಧಿವಶರಾದ ಬಳಿಕ ಮಾತನಾಡಿದ ಪಾಟೀಲ್ ಪುಟ್ಟಪ್ಪ ಪುತ್ರ ಅಶೋಕ್ ಪಾಟೀಲ್, ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರುವ ಪಾಟೀಲ ಪುಟ್ಟಪ್ಪ ನಿವಾಸದಲ್ಲೇ ಬೆಳಗ್ಗೆ 9 ರಿಂದ ಮಧ್ಯಾಹ್ನ ಒಂದು ಗಂಟೆಯ ತನಕ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲು ನಿರ್ಧಾರ ಮಾಡಿದ್ದೇವೆ. ಬಳಿಕ ಹುಟ್ಟೂರು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ‌ ಹಲಗೇರಿಗೆ ಪಾರ್ಥೀವ ಶರೀರ ಕೊಂಡೊಯ್ಯಲಾಗುತ್ತದೆ. ಸಂಜೆ 5 ಗಂಟೆಗೆ ಹಲಗೇರಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು ಎಂದಿದ್ದಾರೆ.

ಜನವರಿ 14, 1921 ರಂದು ಹಾವೇರಿ ಜಿಲ್ಲೆಯ ಕುರಬಗೊಂಡ ಗ್ರಾಮದ ಶ್ರೀ ಸಿದ್ಧಲಿಂಗಪ್ಪ ಹಾಗೂ ಶ್ರೀಮತಿ ಮಲ್ಲಮ್ಮ ದಂಪತಿಯ ಮಗನಾದ ಪಾಟೀಲ ಪುಟ್ಟಪ್ಪ ತಮ್ಮ ಪ್ರಾಥಮಿಕ ಶಿಕ್ಷಣ, ಹಲಗೇರಿಯಲ್ಲಿ ಮುಗಿಸಿದರು. ಬಳಿಕ ಬ್ಯಾಡಗಿ, ಹಾವೇರಿ ಹಾಗೂ ಧಾರವಾಡದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. 1943ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆಯಾದ ಪಾಟೀಲರು 1945 ರಲ್ಲಿ ಕಾನೂನು ಪದವೀಧರ ಆದರು. 1945ರ ನವೆಂಬರ್ 11 ರಂದು ವಿಜಯಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿ ಜೊತೆ ವಿವಾಹವಾದ ಪಾಟೀಲ್ ಪುಟ್ಟಪ್ಪ, ಮುಂಬೈ ಹೈಕೋರ್ಟ್ ನಲ್ಲಿ ವಕೀಲಿಕೆ ಮಾಡುವ ಉತ್ಸಾಹದಲ್ಲಿ ಮುಂಬೈನತ್ತ ಹೊರಟರು.

ಹೈಕೋರ್ಟ್ ವಕೀಲರಾಗಲು ಹೊರಟವರಿಗೆ ಪತ್ರಿಕೋದ್ಯಮದತ್ತ ಒಲವು ಮೂಡಿತ್ತು. ಫ್ರೀಪ್ರೆಸ್ ಜರ್ನಲ್ ಹಾಗೂ ಬಾಂಬೆ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ ಬರೆದಿದ್ದನ್ನು ಗಮನಿಸಿದ ಕೆ. ಸದಾನಂದರು ‘ಫ್ರೀ ಪ್ರೆಸ್’ ಸೇರುವಂತೆ ಒತ್ತಾಯ ಮಾಡಿದರು. 1949ರಲ್ಲಿ ಪತ್ರಿಕೋದ್ಯಮ ವ್ಯಾಸಂಗಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸೇರಿದರು. ಅಮೆರಿಕದಲ್ಲಿ ಖ್ಯಾತ ಬರಹಗಾರ ವಿಲ್ ಡುರ್ಯಂಟ್, ಶಿಕ್ಷಣ ತಜ್ಞ ರಾಬರ್ಟ್ ಹಚಿನ್ಸ್, ಅಮೆರಿಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ಫ್ರ್ಯಾಂಕ್ ಫರ್ಟರ್, ಐನ್ಸ್ ಸ್ಟೀನ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಜೊತೆ ಬೆರೆತು ಪತ್ರಿಕೋದ್ಯಮ ಮುಗಿಸಿ ಹಡಗಿನಲ್ಲಿ ವಾಪಸ್ ಆಗುವಾಗ 2ನೇ ವಿಶ್ವಯುದ್ಧದ ಸಮಯದಲ್ಲಿ ಇಂಗ್ಲೆಂಡ್ ನ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಸರ್ ಆ್ಯಂಟನಿ ಈಡನ್‍ ಸಂದರ್ಶನ ಮಾಡಿದ್ದರು.

ಕಾಲೇಜು ದಿನಗಳಲ್ಲೇ ಕಾಂಗ್ರೆಸ್ ನತ್ತ ಪ್ರಬಾವಿತರಾಗಿದ್ದ ಪಾಟೀಲ್ ಪುಟ್ಟಪ್ಪ, ಹುಬ್ಬಳ್ಳಿಗೆ ಜವಾಹರಲಾಲ್ ನೆಹರು ಆಗಮಿಸಿದ್ದಾಗ ಪ್ರಭಾವಿತರಾಗಿದ್ದರು. ಮಹಾತ್ಮಾ ಗಾಂಧಿ ಹರಿಜನ ಕೇರಿಗಳ ಪ್ರವಾಸ ಕೈಕೊಂಡು ಹಾವೇರಿಯ ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದರು. 1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಸಂಘಟನೆ ಮಾಡಿದ ತಪ್ಪಿಗಾಗಿ ಕರ್ನಾಟಕ ಕಾಲೇಜಿನಿಂದ ಹೊರಹಾಕಲಾಗಿತ್ತು. ಬರೋಬ್ಬರಿ ಒಂದು ವರ್ಷ ಕಾಲ ಪಾಟೀಲ್ ಪುಟ್ಟಪ್ಪ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು.

ಕರ್ನಾಟಕ ಏಕೀಕರಣ ಹೋರಾಟ ಪಾಟೀಲರ ಬದುಕಿನಲ್ಲಿ ಮಹತ್ವದ ಘಟ್ಟ. 1982ರಲ್ಲಿ ಗೋಕಾಕ್ ವರದಿ ಬಗ್ಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದ್ದೂ ಕೂಡ ಜನರಿಗೆ ಹತ್ತಿರವಾಗುವಂತೆ ಮಾಡಿತ್ತು. 1954ರಲ್ಲಿ ಬಂಡವಾಳ ಇಲ್ಲದೆ ‘ಪ್ರಪಂಚ’ ವಾರ ಪತ್ರಿಕೆ ಆರಂಭಿಸಿದ ಪಾಟೀಲ್
ಪುಟ್ಟಪ್ಪ, 1962 ರಲ್ಲಿ ರಾಜ್ಯಸಭೆ ಸದಸ್ಯರಾಗಿಯೂ ಆಯ್ಕೆಯಾಗಿ 1974ರ ತನಕ ಜನಸೇವೆ ಮಾಡಿದರು. 1985 ರಲ್ಲಿ ಕರ್ನಾಟಕ ಸರ್ಕಾರ ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿತ್ತು. ಆ ಸಮಯದಲ್ಲಿ ಆಡಳಿತದಲ್ಲಿ ಕನ್ನಡ ತರಲು ಸಾಕಷ್ಟು ಶ್ರಮಿಸಿದ್ದರು. ಸಾಕಷ್ಟು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಪಾಟೀಲ ಪುಟ್ಟಪ್ಪನವರು, ಹಲವಾರು ಗೌರವಗಳಿಗೂ ಭಾಜನರಾಗಿದ್ದಾರೆ. ಹಲವಾರು ಕೃತಿಗಳನ್ನೂ ರಚಿಸಿದ್ದು, ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಇದೀಗ ಇಹಲೋಕ ತ್ಯಜಿಸಿರುವ ಕನ್ನಡ ನಾಡು ಕಂಡ ಧೀಮಂತ ನಾಯಕ, ವಕೀಲ ಪತ್ರಕರ್ತ ಡಾ ಪಾಟೀಲ್ ಪುಟ್ಟಪ್ಪ ಇತಿಹಾಸದ ಪುಟಗಳಲ್ಲಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ನೆನಪಿನ ಬುತ್ತಿ ಸೇರಿದ್ದಾರೆ. ಆದರೆ, ಅವರ ನುಡಿ ಹಾಗೂ ಬರೆವಣಿಗೆಗಳು ಇಂದಿಗೂ, ಎಂದಿಗೂ ಕನ್ನಡ ಸಾರಸ್ವತ ಲೋಕಕ್ಕೆ ದಾರಿ ದೀಪವಾಗಲಿವೆ.

Click here Support Free Press and Independent Journalism

Pratidhvani
www.pratidhvani.com