ನಾಯಕರ ಭೇಟಿ ಮೂಲಕ ಮೊದಲು ಕಾಂಗ್ರೆಸ್ಸಿನಲ್ಲಿರುವ ‘ಟ್ರಬಲ್ ಶೂಟ್’ಗೆ ಮುಂದಾದ ಡಿಕೆಶಿ
ರಾಜ್ಯ

ನಾಯಕರ ಭೇಟಿ ಮೂಲಕ ಮೊದಲು ಕಾಂಗ್ರೆಸ್ಸಿನಲ್ಲಿರುವ ‘ಟ್ರಬಲ್ ಶೂಟ್’ಗೆ ಮುಂದಾದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷರಾಗುವ ಮೊದಲೇ ಕಾಂಗ್ರೆಸ್ಸಿನಲ್ಲಿರುವ ತೊಂದರೆಗಳನ್ನು ಬಗೆಹರಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಪಕ್ಷದ ಎಲ್ಲಾ ನಾಯಕರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡುತ್ತಿದ್ದಾರೆ. ಜತೆಗೆ ಎಸ್.ಎಂ.ಕೃಷ್ಣ ಅವರ ಆಶೀರ್ವಾದವನ್ನೂ ಪಡೆಯುವ ಮೂಲಕ ಒಕ್ಕಲಿಗರು ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಮತ್ತೆ ಕಾಂಗ್ರೆಸ್ಸನ್ನು ಬಲಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇಂದಿರಾತನಯ

ಮನೆ ಕಟ್ಟಬೇಕಾದರೆ ಮೊದಲು ಪಾಯ ಗಟ್ಟಿಯಾಗಬೇಕು. ಅದಕ್ಕಾಗಿ ಪಾಯ ಹಾಕುವ ಜಾಗದಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿ ಗಟ್ಟಿಗೊಳಿಸಬೇಕು. ನಂತರ ಮನೆ ಕಟ್ಟಿದರೆ ಅದು ಗಟ್ಟಿಯಾಗಿ ನಿಲ್ಲುತ್ತದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡಿ.ಕೆ.ಶಿವಕುಮಾರ್ ಈಗ ಮಾಡುತ್ತಿರುವುದು ಇದೇ ಕೆಲಸ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂಬುದು ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಈ ಜವಾಬ್ದಾರಿ ನಿಭಾಯಿಸಬೇಕಾದರೆ ಪಕ್ಷದ ಎಲ್ಲರ ಸಹಕಾರ ಸಿಕ್ಕಿದರಷ್ಟೇ ಸಾಧ್ಯ ಎಂಬುದನ್ನು ಅರಿತಿದ್ದಾರೆ. ಅದಕ್ಕಾಗಿಯೇ ಅಧಿಕಾರ ಸ್ವೀಕರಿಸುವ ಮುನ್ನವೇ ಪಕ್ಷದ ಎಲ್ಲಾ ನಾಯಕರ ಮನೆಗೆ ತೆರಳಿ ಅವರನ್ನು ಭೇಟಿಯಾಗುತ್ತಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಶಿವಕುಮಾರ್ ಅವರು ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿರುವುದು ಇದೇ ಟ್ರಬಲ್ ಶೂಟಿಂಗ್ ನ ಪ್ರಮುಖ ಭಾಗ. ಮೊದಲು ತಮ್ಮ ಪಕ್ಷದ ಬುಡ ಗಟ್ಟಿ ಮಾಡಿಕೊಂಡರೆ ಬೇರೆ ಪಕ್ಷದ ಬುಡ ಅಲ್ಲಾಡಿಸಲು ಸಾಧ್ಯ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಪಕ್ಷದ ಬುಡ ಗಟ್ಟಿಯಾಗಬೇಕಾದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಆ ರೀತಿ ಕೆಲಸ ಮಾಡಬೇಕಾದರೆ ಎಲ್ಲರ ವಿಶ್ವಾಸ ಗಳಿಸಿಕೊಳ್ಳಬೇಕು. ಈ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ಮೇಲೆ ಅವರು ಕಾಂಗ್ರೆಸ್ಸಿನ ಎಲ್ಲಾ ನಾಯಕರನ್ನೂ ಭೇಟಿ ಮಾಡುತ್ತಿದ್ದಾರೆ. ತಮ್ಮ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಡ್ಡಿಯಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಹುದ್ದೆಗೆ ಪ್ರತಿಸ್ಪರ್ಧಿಯಾಗಿದ್ದ ಎಂ.ಬಿಪಾಟೀಲ್ ಸೇರಿದಂತೆ ಪಕ್ಷದಲ್ಲಿ ತಮ್ಮ ಪರ ಮತ್ತು ವಿರುದ್ಧ ಇರುವ ಎಲ್ಲಾ ನಾಯಕರನ್ನೂ ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಈ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವ ಶಿವಕುಮಾರ್, ಅಧಿಕಾರ ವಹಿಸಿಕೊಂಡ ಮೇಲೆ ಸಂಘಟನೆಯ ಬಗ್ಗೆ ಮಾತ್ರ ಯೋಚಿಸುವ ಉದ್ದೇಶ ಹೊಂದಿದ್ದಾರೆ ಎಂಬುದು ಇಲ್ಲಿ ಸ್ಪಷ್ಟ.

ಪ್ರಸ್ತುತ ರಾಜ್ಯ ಕಾಂಗ್ರೆಸ್ಸಿನಲ್ಲಿ ಇರುವ ಸಮಸ್ಯೆ ಒಗ್ಗಟ್ಟಿನದ್ದು. ಮೂಲ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ ಎಂಬ ಎರಡು ಬಣಗಳು ಪಕ್ಷದಲ್ಲಿವೆ. ಇದರ ಜತೆಗೆ ಹಿರಿ ಕಾಂಗ್ರೆಸ್ಸಿಗರು ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಇವರೆಲ್ಲರನ್ನು ಒಟ್ಟು ಸೇರಿಸುವುದು ಕಷ್ಟದ ಕೆಲಸವೇ ಆದರೂ ಅಸಾಧ್ಯವೇನೂ ಅಲ್ಲ. ಅದಕ್ಕಾಗಿಯೇ ಈ ಮೂರೂ ಬಣಗಳ ನಾಯಕರನ್ನು ಶಿವಕುಮಾರ್ ಭೇಟಿ ಮಾಡಿರುವುದು. ಅದರಲ್ಲೂ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ದಲಿತ ಮತ್ತು ಲಿಂಗಾಯತ ಸಮುದಾಯ ಬೇಸರಗೊಂಡಿದೆ. ಅವರನ್ನು ಸಮಾಧಾನಪಡಿಸಬೇಕಾದರೆ ಆ ಸಮುದಾಯದ ನಾಯಕರನ್ನು ಮೊದಲು ಓಲೈಸಬೇಕು. ಶಿವಕುಮಾರ್ ಅವರು ನಾಯಕರನ್ನು ಅವರ ಮನೆಗೇ ತೆರಳಿ ಭೇಟಿ ಮಾಡುತ್ತಿರುವುದರ ಹಿಂದೆ ಈ ಓಲೈಕೆ ರಾಜಕಾರಣವೂ ಇದೆ.

ಸೌಹಾರ್ದದ ಮೂಲಕ ಪೂಜಾರಿ ಮಾರ್ಗದಲ್ಲಿ ನಡೆಯುವ ಮುನ್ಸೂಚನೆ

ಜನಾರ್ದನ ಪೂಜಾರಿ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭವದು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ಯಾವುದೋ ಒಂದು ವಿಚಾರದ ಬಗ್ಗೆ ಚರ್ಚಿಸಲು ಎಸ್.ಎಂ.ಕೃಷ್ಣ ಅವರನ್ನು ಪಕ್ಷದ ಕಚೇರಿಗೆ ಬರುವಂತೆ ಜನಾರ್ದನ ಪೂಜಾರಿ ಆಹ್ವಾನಿಸಿದ್ದರು. ಆದರೆ, ಮುಖ್ಯಮಂತ್ರಿಯ ಅಧಿಕಾರ ಇದೆ ಎಂಬ ಕಾರಣಕ್ಕೆ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಕಚೇರಿಗೆ ತೆರಳಿರಲಿಲ್ಲ. ಆದರೆ, ಮಾರನೇ ದಿನ ಸೋನಿಯಾ ಗಾಂಧಿ ಅವರಿಂದಲೇ ಆದೇಶ ಬಂದು ಕೃಷ್ಣ ಅವರು ಕೆಪಿಸಿಸಿ ಕಚೇರಿಗೆ ತೆರಳಿ ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಆಗ ಜನಾರ್ದನ ಪೂಜಾರಿ, ಮುಖ್ಯಮಂತ್ರಿಯೇ ಆದರೂ ಕೆಪಿಸಿಸಿಯಲ್ಲಿ ಅವರೊಬ್ಬ ಕಾರ್ಯಕರ್ತ ಮಾತ್ರ. ಅಧ್ಯಕ್ಷರು ಕರೆದಾಗ ಬರುವುದು ಕಾರ್ಯಕರ್ತನ ಕೆಲಸ ಎಂದು ಹೇಳಿದ್ದರು. ಶಿವಕುಮಾರ್ ಅವರು ಈಗ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೇಲೆ ಅವರೂ ಜನಾರ್ದನ ಪೂಜಾರಿ ಹಿಡಿದ ಮಾರ್ಗವನ್ನೇ ಹಿಡಿಯುವ ಲಕ್ಷಣ ಕಾಣಿಸುತ್ತಿದೆ.

ಏಕೆಂದರೆ, ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಪಕ್ಷದ ಕುರಿತಾಗಿ ಯಾರ ಮನೆಗೂ ಹೋಗಿ ಚರ್ಚಿಸಲು ಸಾಧ್ಯವಿಲ್ಲ. ಅವರು ಎಷ್ಟೇ ದೊಡ್ಡ ನಾಯಕರಾದರೂ ಕೆಪಿಸಿಸಿ ಕಚೇರಿ ಇಲ್ಲವೇ ಅಧ್ಯಕ್ಷರ ಮನೆಗೆ ತೆರಳಿ ಚರ್ಚೆ ಮಾಡಬೇಕು. ಹೀಗಿರುವಾಗ ಈಗ ನಾನು ನಾಯಕರ ಮನೆಗಳಿಗೆ ಹೋದರೆ, ಮುಂದೆ ಅಧ್ಯಕ್ಷನಾದ ಮೇಲೆ ಅವರು ನಾನಿದ್ದಲ್ಲಿಗೆ ಬರುತ್ತಾರೆ. ಅಂದರೆ ಇಲ್ಲಿ ಅಧಿಕಾರ, ಆದೇಶಗಳಿಗಿಂತ ಸೌಹಾರ್ದಯುತವಾಗಿ ಈ ಎಲ್ಲಾ ಕೆಲಸಗಳು ನಡೆಯುತ್ತವೆ. ಯಾರ ಮೇಲೂ ಅಧಿಕಾರ ಚಲಾಯಿಸುವ ಅಗತ್ಯ ಉದ್ಭವಿಸುವುದಿಲ್ಲ. ನಾಯಕರಿಗೆ ತಮ್ಮ ಬಗ್ಗೆ ಅಸಮಾಧಾನವಾಗುವುದೂ ಇಲ್ಲ. ಭಿನ್ನಮತವೂ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂಬ ಯೋಚನೆಯನ್ನು ಶಿವಕುಮಾರ್ ಮಾಡಿದಂತಿದೆ. ಅಲ್ಲಿಗೆ ಕಾಂಗ್ರೆಸ್ಸಿನಲ್ಲಿ ಆಂತರಿಕ ತೊಂದರೆ ಇಲ್ಲದಂತಾಗುತ್ತದೆ. ಪಕ್ಷ ಸಂಘಟನೆಗೆ ಬೇಕಾಗಿರುವ ಅಂಶವೇ ಇದು.

ಎಸ್.ಎಂ.ಕೃಷ್ಣ ಭೇಟಿಯ ಹಿಂದಿದೆ ಹಲವು ಉದ್ದೇಶ

ಸೋಮವಾರ ಸಂಜೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದಿದ್ದಾರೆ. ಕೃಷ್ಣ ಅವರು ಪ್ರಸ್ತುತ ಬಿಜೆಪಿಯಲ್ಲಿದ್ದರೂ ಹಿಂದೆ ಕಾಂಗ್ರೆಸ್ಸಿನಲ್ಲಿದ್ದರು. ಶಿವಕುಮಾರ್ ರಾಜಕೀಯವಾಗಿ ಪಳಗಿದ್ದೇ ಅವರ ಗರಡಿಯಲ್ಲಿ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಕುಮಾರ್ ಅವರಿಗೆ, ಇಲಾಖೆಯ ಜವಾಬ್ದಾರಿ ಜತೆಗೆ ಸರ್ಕಾರದ ಆಳ-ಅಗಲಗಳನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಇಂದು ಶಿವಕುಮಾರ್ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಅವರ ಸಾಮರ್ಥ್ಯ ಕಾರಣವಾದರೂ ಅದನ್ನು ಗುರುತಿಸಿ ಅವಕಾಶ ನೀಡಿ ದಾರಿಯನ್ನೂ ತೋರಿಸಿದವರು ಎಸ್.ಎಂ.ಕೃಷ್ಣ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ಮೇಲೆ ಕೃಷ್ಣ ಅವರನ್ನು ಭೇಟಿ ಮಾಡುತ್ತಿರುವುದು.

ಹಾಗೆಂದು ಇದೊಂದೇ ಕಾರಣಕ್ಕಾಗಿ ಭೇಟಿ ಮಾಡುತ್ತಿರುವುದೂ ಅಲ್ಲ. ಕೃಷ್ಣ ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆಗೆ ಒಕ್ಕಲಿಗ ನಾಯಕ ಸ್ಥಾನವನ್ನು ಹಂಚಿಕೊಂಡಿದ್ದರು. ಈಗಲೂ ಮಂಡ್ಯ, ಮೈಸೂರು ಭಾಗದಲ್ಲಿ ಎಸ್.ಎಂ.ಕೃಷ್ಣ ಅವರ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೃಷ್ಣ ಅವರ ಆಶೀರ್ವಾದ ಸಿಕ್ಕಿದರೆ ಈ ಗುಂಪನ್ನು ಸೆಳೆದುಕೊಳ್ಳುವುದು ಶಿವಕುಮಾರ್ ಅವರಿಗೆ ಕಷ್ಟವೇನೂ ಅಲ್ಲ. ಕೃಷ್ಣ ಅವರ ಬೆಂಬಲದೊಂದಿಗೆ ಬಿಜೆಪಿ ಒಕ್ಕಲಿಗರು ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಸ್.ಎಂ.ಕೃಷ್ಣ ಅವರ ಆಶೀರ್ವಾದ ಸಿಕ್ಕಿದರೆ ಅದನ್ನೇ ಅಸ್ತ್ರವಾಗಿ ಬಳಸಿಕೊಂಡು ಒಕ್ಕಲಿಗ ಸಮುದಾಯವನ್ನು ಸೆಳೆಯಲು ಸಹಕಾರಿಯಾಗುತ್ತದೆ. ಏಕೆಂದರೆ, ತಮ್ಮ ಶಿಷ್ಯ ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಸಹಜವಾಗಿಯೇ ಅವರು ಶಿವಕುಮಾರ್ ಬಗ್ಗೆ ಮೃದುವಾಗುತ್ತಾರೆ. ಜತೆಗೆ ಆ ಭಾಗದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟಕ್ಕೂ ಬಲ ಸಿಗುತ್ತದೆ.

ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮೊದಲೇ ಕಾಂಗ್ರೆಸ್ಸಿನಲ್ಲಿರುವ ತೊಂದರೆಗಳನ್ನು ಬಗೆಹರಿಸಿಕೊಂಡು ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಶಿವಕುಮಾರ್ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಜತೆಗೆ ಪ್ರಸ್ತುತ ಪಕ್ಷದೊಳಗೆ ಅವರನ್ನು ವಿರೋಧಿಸುತ್ತಿರುವವರೂ ಅನಿವಾರ್ಯವಾಗಿ ಕೈಜೋಡಿಸಲೇ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದಾರೆ.

Click here Support Free Press and Independent Journalism

Pratidhvani
www.pratidhvani.com