ಡಿಕೆಶಿ ಕೆಪಿಸಿಸಿ ಪಟ್ಟ; ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಕಾಂಗ್ರೆಸ್ Checkmate
ರಾಜ್ಯ

ಡಿಕೆಶಿ ಕೆಪಿಸಿಸಿ ಪಟ್ಟ; ಮಂಡ್ಯ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಕಾಂಗ್ರೆಸ್ Checkmate

ಕೆ.ಆರ್. ಪೇಟೆ ಗೆಲುವನ್ನೇ ಅಂಕಿತವನ್ನಾಗಿ ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನದಲ್ಲಿ ಗಟ್ಟಿಯಾಗಿ ಬೇರೂರಬೇಕು. ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಕನಿಷ್ಟ 10 ಸ್ಥಾನಗಳಲ್ಲಾದರೂ ಗೆಲ್ಲಬೇಕು ಎಂದು ಬಿಜೆಪಿ Master Plan ರೂಪಿಸಿತ್ತು. ಆದರೆ, ಈ ಎಲ್ಲಾ ಯೋಜನೆಗಳಿಗೂ ಕಾಂಗ್ರೆಸ್ ಹೈಕಮಾಂಡ್ ಗೋಲಿ ಹೊಡೆಯುವಲ್ಲಿ ಸಫಲವಾಗಿದೆ.

ಶಿವಕುಮಾರ್‌ ಎ

ರಾಜ್ಯದ ಪಾಲಿನ ಪ್ರಬಲ ಸ್ಥಾನಗಳಲ್ಲಿ ಒಂದಾದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ? ಇದು ಕಳೆದ ಮೂರು ನಾಲ್ಕು ತಿಂಗಳಿನಿಂದ ಕಾಂಗ್ರೆಸ್ ರಾಜ್ಯ ಘಟಕ ಮತ್ತು ಇಡೀ ರಾಜ್ಯ ರಾಜಕಾರಣವನ್ನು ಇನ್ನಿಲ್ಲದಂತೆ ಕಾಡಿದ ಪ್ರಶ್ನೆ. ಆದರೆ, ಈ ಎಲ್ಲಾ ಪ್ರಶ್ನೆಗಳಿಗೆ ಕೊನೆಗೂ ಮಂಗಳ ಹಾಡಿರುವ ಕಾಂಗ್ರೆಸ್ ಹೈಕಮಾಂಡ್ ಕೈ ಪಾಲಿನ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಮಹತ್ವದ ಆದೇಶ ಹೊರಡಿಸಿದೆ.

2018ರ ವಿಧಾನಸಭಾ ಚುನಾವಣೆ 2019ರ ಲೋಕಸಭಾ ಚುನಾವಣೆ ಸೇರಿದಂತೆ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಇನ್ನಿಲ್ಲದಂತೆ ಸೋಲನುಭವಿಸಿತ್ತು. ಈ ಸೋಲನ್ನು ಸರಿಗಟ್ಟಿ ರಾಜ್ಯದಲ್ಲಿ ಕುಗ್ಗಿರುವ ಪಕ್ಷದ ವರ್ಚಸ್ಸನ್ನು ಮತ್ತೆ ಮೇಲೆತ್ತಲು ಡಿ.ಕೆ. ಶಿವಕುಮಾರ್ ಒಬ್ಬರೇ ಸರಿಯಾದ ಆಯ್ಕೆ ಎಂಬುದು ಹೈಕಮಾಂಡ್ ನಿಲುವು. ಮೂರು ತಿಂಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ವೀಕ್ಷಕರ ತಂಡ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅಂದುಕೊಂಡತೆಯೇ ಕೊನೆಗೂ ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಘಟಕದಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಆದರೆ, ಡಿಕೆಶಿ ಹೀಗೆ ಅತ್ಯುನ್ನತ ಹುದ್ದೆಗೆ ಏರಿರುವುದು ಪಕ್ಷದ ಒಳಗೆ ಸಿದ್ದರಾಮಯ್ಯ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರೆ, ಕಾಂಗ್ರೆಸ್ ಪಕ್ಷದ ಒಳಗಿನ ಈ ಬೆಳವಣಿಗೆ ನಿಜಕ್ಕೂ ಬರಿಸಲಾದ ಹೊಡೆತ ನೀಡುವುದು ಬಿಜೆಪಿಗೆ ಎನ್ನುತ್ತಿದೆ ಮೂಲಗಳು.

ಬಿಜೆಪಿ ಪಕ್ಷದ ಮಹತ್ವಾಕಾಂಕ್ಷೆ ಏನಾಗಿತ್ತು?

ರಾಜ್ಯ ಬಿಜೆಪಿಗೆ ಶಿವಮೊಗ್ಗ ಎಂದಿಗೂ ಸಹ ಶಕ್ತಿ ಕೇಂದ್ರ. ಆದರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಆರಂಭವಾದ ಬಿಜೆಪಿ ಪಕ್ಷ ಸಂಘಟನೆ ಇಂದು ಬಹುತೇಕ ರಾಜ್ಯದಾದ್ಯಂತ ಗಟ್ಟಿಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಸಹ ಬೂತ್ ಮಟ್ಟದಿಂದ ಕಾರ್ಯಕರ್ತರ ಪಡೆ ಇದೆ. ಯಾರನ್ನೂ ಗೆಲ್ಲಿಸಬಲ್ಲ ಶಕ್ತಿ ಪಕ್ಷದ ತಳಮಟ್ಟದಲ್ಲಿದೆ. ಆದರೆ, ಬಿಜೆಪಿಗೆ ಶಕ್ತಿ ಇಲ್ಲದಿರುವುದು ಹಾಸನ, ರಾಮನಗರ, ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ಮಾತ್ರ.

ಈ ನಾಲ್ಕೂ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಕಾರ್ಯಕರ್ತರ ಪಡೆ ಇಲ್ಲ. ಪಕ್ಷವೂ ಸಹ ಬೂತ್ ಮಟ್ಟದಿಂದ ಗಟ್ಟಿಯಾಗಿಲ್ಲ. ಆದರೆ, ಕಳೆದ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಕಮಾಲ್ ಮಾಡಿದ್ದ ಬಿಜೆಪಿ ಮಂಡ್ಯದಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವಲ್ಲಿ ಸಫಲವಾಗಿತ್ತು. ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ತನಗೆ ಕೊಟ್ಟಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದರು.

ಹೀಗಾಗಿ ಕೆ.ಆರ್. ಪೇಟೆ ಗೆಲುವನ್ನೇ ಅಂಕಿತವನ್ನಾಗಿ ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನದಲ್ಲಿ ಗಟ್ಟಿಯಾಗಿ ಬೇರೂರಬೇಕು. ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಕನಿಷ್ಟ 10 ಸ್ಥಾನಗಳಲ್ಲಾದರೂ ಗೆಲ್ಲಬೇಕು ಎಂದು ಬಿಜೆಪಿ Master Plan ರೂಪಿಸಿತ್ತು.

ಕಪಾಲ ಬೆಟ್ಟದಲ್ಲಿನ ಏಸು ಕ್ರಿಸ್ತನ ಪ್ರತಿಮೆಯನ್ನು ವಿರೋಧಿಸಿ ರಾಮನಗರದಲ್ಲಿ ಆರ್ಎಸ್ಎಸ್ ಪಥಸಂಚಲನ ಮಾಡುವ ಮೂಲಕ ಕಲ್ಲಡ್ಕ ಪ್ರಭಾಕರ್ ಸಹ ಬಿಜೆಪಿ ಪಕ್ಷ ಈ ಯೋಜನೆಗೆ ನೀರೆರೆದಿದ್ದರು. ಆದರೆ, ಈ ಎಲ್ಲಾ ಯೋಜನೆಗಳಿಗೂ ಕಾಂಗ್ರೆಸ್ ಹೈಕಮಾಂಡ್ ಗೋಲಿ ಹೊಡೆಯುವಲ್ಲಿ ಸಫಲವಾಗಿದೆ.

ಬಿಜೆಪಿ ರಿವರ್ಸ್ ಶಾಕ್ ಕೊಟ್ಟ ಕಾಂಗ್ರೆಸ್:

ರಾಮನಗರ, ಹಾಸನ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದ್ದೇ ಪಾರುಪತ್ಯ. ಇಲ್ಲಿ ನಡೆಯುವ ಯಾವುದೇ ಚುನಾವಣೆಯಲ್ಲೂ ಬಿಜೆಪಿ ಪಕ್ಷಕ್ಕೆ ಮೂರನೇ ಸ್ಥಾನ ಖಚಿತವಾಗಿತ್ತು. ದೇವೇಗೌಡ ಆದಿಯಾಗಿ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಹೆಚ್.ಡಿ. ರೇವಣ್ಣ, ಸಿದ್ದರಾಮಯ್ಯ, ಶ್ರೀನಿವಾಸ ಪ್ರಸಾದ್, ಜಿ.ಟಿ. ದೇವೇಗೌಡ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಈ ನಾಲ್ಕೂ ಜಿಲ್ಲೆಗಳ ರಾಜಕೀಯ ಹಣೆಬರಹ ಬರೆಯುವ ಸ್ಥಾನದಲ್ಲಿದ್ದರು.

ಆದರೆ, ನಾಯಕತ್ವದ ವಿಚಾರದಲ್ಲಿ ಈ ನಾಲ್ಕೂ ಜಿಲ್ಲೆ ದೊಡ್ಡ ಮಟ್ಟದ ಸ್ಥಾನ ಪಲ್ಲಟಕ್ಕೆ ಒಳಗಾದದ್ದು ಲೋಕಸಭಾ ಚುನಾವಣೆಯಲ್ಲೇ. ಕಾಂಗ್ರೆಸ್ ವಿರುದ್ಧ ಬಂಡಾಯ ವೆದ್ದಿದ್ದ ನಟಿ ಸುಮಲತಾ ಅಂದಿನ ಸಿಎಂ ಕುಮಾರಸ್ವಾಮಿ ಪುತ್ರನ ವಿರುದ್ಧವೇ ಜಯ ಸಾಧಿಸಿದ್ದರು. ಸ್ವತಃ ಡಿ.ಕೆ. ಶಿವಕುಮಾರ್ ಪ್ರಚಾರ ನಡೆಸಿಯೂ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಬೇಕಾಯಿತು.

ಇದು ನಿಖಿಲ್ ಸೋಲು ಎನ್ನುವುದಕ್ಕಿಂತ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ಸಿದ್ದರಾಮಯ್ಯ ಜೆಡಿಎಸ್ ಹಾಗೂ ಕಾಂಗ್ರೆಸ್ ಸೋಲು ಎನ್ನುವುದೇ ಸೂಕ್ತ. ಅಸಲಿಗೆ ರಾಜ್ಯ ರಾಜಕಾರಣದಲ್ಲಿ ಮಂಡ್ಯ ಚುನಾವಣೆಯಲ್ಲಿ ಇದು ದೊಡ್ಡ ಮಟ್ಟದ ನಾಯಕತ್ವಕ್ಕೆ ಬಿದ್ದ ಮೊದಲ ಹೊಡೆತ ಅಥವಾ ಸೋಲು.

ಇದರ ಬೆನ್ನಿಗೆ ಕೆ.ಆರ್. ಪೇಟೆ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಸೋಲನುಭವಿಸಿದ್ದು ಮತ್ತು ಈ ಭಾಗದಲ್ಲಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಮುನ್ನಲೆಗೆ ಬಂದದ್ದನ್ನು ಗಮನಿಸಿದ್ದ ರಾಜಕೀಯ ಪಂಡಿತರು ಈ ನಾಲ್ಕೂ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹವಾ ಮುಗಿಯಿತು ಎಂದೇ ವ್ಯಾಖ್ಯಾನಿಸಿದ್ದರು.

ಆದರೆ, ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಕಟ್ಟಿದೆ. ಪ್ರಸ್ತುತ ಕಾಂಗ್ರೆಸ್ ಕಾಪಾಡಬಲ್ಲ ಏಕೈಕ ಪ್ರಬಲ ನಾಯಕ ಡಿಕೆಶಿ ಎಂಬುದರಲ್ಲಿ ಯಾರಿಗೂ ಯಾವುದೇ ಅನುಮಾನ ಉಳಿದಿಲ್ಲ. ಅಲ್ಲದೆ, ಕೆಪಿಸಿಸಿ ಉನ್ನತ ಸ್ಥಾನಕ್ಕೆ ಏರಿರುವ ಡಿಕೆಶಿ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂಬುದೂ ಸಹ ಎಲ್ಲರಿಗೂ ಗೊತ್ತಿರುವ ವಿಚಾರವೆ.

ಡಿ.ಕೆ. ಶಿವಕುಮಾರ್ ಅವರಿಗೆ ಪ್ರಭಾವ ಇರುವುದು ರಾಮನಗರ, ಮೈಸೂರು, ಮಂಡ್ಯ ಮತ್ತು ಹಾಸನ ಭಾಗದಲ್ಲಿ. ಈ ಭಾಗದಿಂದಲೇ ಅವರು ಪಕ್ಷ ಸಂಘಟನೆ ಕಾರ್ಯಕ್ಕೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ. ಇದು ಸಾಧ್ಯವಾದರೆ ಈ ಭಾಗದ ಎಲ್ಲಾ ಕಾರ್ಯಕರ್ತರು ಡಿಕೆಶಿ ಬೆನ್ನಿಗೆ ನಿಲ್ಲುವುದರಲ್ಲಿ ಸಂಶಯ ಇಲ್ಲ. ಇನ್ನೂ ಈ ಭಾಗದಲ್ಲಿ ಡಿಕೆಶಿಯನ್ನು ಎದುರಿಸುವಷ್ಟು ಸಾಮರ್ಥ್ಯವೂ ಸಹ ಬಿಜೆಪಿ ಪಕ್ಷದ ಯಾವ ನಾಯರಲ್ಲೂ ಇಲ್ಲ. ಇದ್ದ ಏಕೈಕ ನಾಯಕ ಸಿ.ಪಿ. ಯೋಗೇಶ್ವರ್ ಅವರನ್ನೂ ಸಹ ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗಿದೆ.

ಇದನ್ನೆಲ್ಲಾ ಗಮನಿಸಿದರೆ ಮಂಡ್ಯ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ-ಭದ್ರವಾಗಿ ನೆಲೆಗೊಳಿಸಬೇಕು ಎಂಬ ಬಿಜೆಪಿ ಮಹತ್ವಾಕಾಂಕ್ಷೆಗೆ ಡಿಕೆಶಿ ಮೂಲಕ ಕಾಂಗ್ರೆಸ್ Checkmate ಇಟ್ಟಿರುವುದು ಸ್ಪಷ್ಟವಾಗಿದೆ.

Click here Support Free Press and Independent Journalism

Pratidhvani
www.pratidhvani.com