ಕಾಂಗ್ರೆಸ್ ಸಂಘಟನೆಗಾಗಿ ಮತ್ತೆ ಗೌಡರ ಕುಟುಂಬದ ವಿರುದ್ಧ ಜಿದ್ದಿಗೆ ಬೀಳಬೇಕಿದೆ ಡಿಕೆಶಿ
ರಾಜ್ಯ

ಕಾಂಗ್ರೆಸ್ ಸಂಘಟನೆಗಾಗಿ ಮತ್ತೆ ಗೌಡರ ಕುಟುಂಬದ ವಿರುದ್ಧ ಜಿದ್ದಿಗೆ ಬೀಳಬೇಕಿದೆ ಡಿಕೆಶಿ

ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುತ್ತಿರುವ ಶಿವಕುಮಾರ್ ಅವರ ಮುಂದೆ ಹಳೇ ಮೈಸೂರು ಭಾಗದ ಒಕ್ಕಲಿಗರನ್ನು ಮತ್ತೆ ಕಾಂಗ್ರೆಸ್ ಪರ ಸಂಘಟಿಸುವ ದೊಡ್ಡ ಜವಾಬ್ದಾರಿ ಇದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾದರೆ ಅವರು ಮತ್ತೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಜಿದ್ದಾಜಿದ್ದಿನ ಹೋರಾಟಕ್ಕೆ ಇಳಿಯಲೇ ಬೇಕು.

ಇಂದಿರಾತನಯ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನೂ ಪದಗ್ರಹಣ ಮಾಡಿಲ್ಲ. ಆಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದೇನು ಮಾಡಬೇಕು ಎಂಬ ಬಗ್ಗೆ ದೊಡ್ಡ ಪಟ್ಟಿಯೊಂದನ್ನು ಅವರು ತಯಾರಿಸಿದ್ದಾರೆ. ಯುಗಾದಿ ಬಳಿಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಅದ್ದೂರಿಯಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಆರಂಭದಲ್ಲೇ ಆಡಳಿತಾರೂಢ ಬಿಜೆಪಿಗೆ ಟಾಂಗ್ ನೀಡಲು ಯೋಚಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯಾದ್ಯಂತ ಪಕ್ಷ ಸಂಘಟನೆಯನ್ನು ಬಲಗೊಳಿಸುವ ಯೋಜನೆಯೂ ಈಗಾಗಲೇ ರೂಪುಗೊಂಡಿದೆ.

ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸುವಾಗ ವರಿಷ್ಠರು ಅವರ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ರಾಜ್ಯದಲ್ಲಿ ಪಕ್ಷವನ್ನುಬಲಪಡಿಸಿ ಮತ್ತೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಬಹುದು ಎಂಬ ನಂಬಿಕೆ ಅವರಲ್ಲಿದೆ. ಇಬ್ಬರೂ ಜತೆ ಜತೆಯಾಗಿ ಕೆಲಸ ಮಾಡಿದರೆ ಅದು ಕಷ್ಟಸಾಧ್ಯವಾದ ಕೆಲಸವೇನೂ ಅಲ್ಲ. ಏಕೆಂದರೆ, ರಾಜ್ಯದಲ್ಲಿ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವ ಎರಡು ಸಮುದಾಗಳನ್ನು ಈ ಇಬ್ಬರು ಪ್ರತಿನಿಧಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಹಳೇ ಮೈಸೂರು ಭಾಗದಲ್ಲಿ ಶಕ್ತಿಯುತವಾಗಿರುವ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಿದ್ದರೆ, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಎರಡೂ ಸಮುದಾಯಗಳು ಒಟ್ಟು ಸೇರಿದರೆ ಲಿಂಗಾಯತ ಸಮುದಾಯ ಬಿಜೆಪಿಯತ್ತ ಒಲವು ತೋರಿದರೂ ಕಾಂಗ್ರೆಸ್ಸನ್ನು ಬಲಪಡಿಸಲು ಕಷ್ಟವೇನೂ ಆಗಲಾರದು.

ಆದರೆ, ಪಕ್ಷಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮತ್ತೆ ನೇರ ಹಣಾಹಣಿಗಿಳಿಯಲು ಶಿವಕುಮಾರ್ ಸಿದ್ಧರಿದ್ದಾರೆಯೇ ಎಂಬ ಒಂದು ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. 2018ರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇವೇಗೌಡರು ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಡಿ.ಕೆ.ಶಿವಕುಮಾರ್ ಅವರ ಹೊಂದಾಣಿಕೆ. ಸರ್ಕಾರ ಉರುಳಿದ ಬಳಿಕವೂ ಈ ಸಂಬಂಧ ಯಥಾಸ್ಥಿತಿ ಮುಂದುವರಿದಿತ್ತು. ಈ ಕಾರಣಕ್ಕಾಗಿಯೇ ರಾಜಕೀಯ ವಲಯದಲ್ಲಿ ಇಂತಹ ಒಂದು ಪ್ರಶ್ನೆ ಉದ್ಭವವಾಗಿದೆ.

ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಒಕ್ಕಲಿಗ ಸಮುದಾಯದವರೇ ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಆ ಭಾಗದಲ್ಲಿ ಒಕ್ಕಲಿಗರನ್ನು ಓಲೈಸಲು ಕಾಂಗ್ರೆಸ್ ಮತ್ತು ದೇವೇಗೌಡರ ಕುಟುಂಬದ ಮಧ್ಯೆ ಸದಾ ಹೋರಾಟ ನಡೆಯುತ್ತಿತ್ತು. ಒಮ್ಮೆ ಕಾಂಗ್ರೆಸ್ ಗೆದ್ದರೆ ಮತ್ತೊಮ್ಮೆ ದೇವೇಗೌಡರ ಕುಟುಂಬ ಗೆಲ್ಲುತ್ತಿತ್ತು. ಈಗಲೂ ಅದೇ ರೀತಿ ನಡೆಯುತ್ತಿದೆಯಾದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಹಿಂದೆಂದೂ ಇಲ್ಲದ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಜೆಡಿಎಸ್ಸನ್ನು ಬೆಂಬಲಿಸಿತ್ತು. ಹೀಗಿರುವಾಗ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿಯಾಗಬೇಕಾದರೆ ಮೊದಲು ಒಕ್ಕಲಿಗರ ಭದ್ರಕೋಟೆಗೆ ಕಾಲಿಡಬೇಕು. ಆ ರೀತಿ ಆಗಬೇಕಾದರೆ ದೇವೇಗೌಡರು ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಎದುರು ಹಾಕಿಕೊಳ್ಳಲೇ ಬೇಕು. ಪ್ರಸ್ತುತ ಆ ಕುಟುಂಬದೊಂದಿಗಿರುವ ಸೌಹಾರ್ದ ಸಂಬಂಧ ಹೊಂದಿರುವ ಶಿವಕುಮಾರ್ ಮತ್ತೆ ಹಳೆಯ ಶಿವಕುಮಾರ್ ಆಗಿ ಕುಟುಂಬದೊಂದಿಗೆ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.

ಡಿಕೆಶಿ-ಗೌಡರ ಕುಟುಂಬದ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ

ದೇವೇಗೌಡರು ಮತ್ತು ಶಿವಕುಮಾರ್ ನಡುವಿನ ರಾಜಕೀಯ ಹೋರಾಟಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ದೇವೇಗೌಡರು ಮತ್ತು ಕುಟುಂಬದ ವಿರುದ್ಧ ಎರಡು ಬಾರಿ ಶಿವಕುಮಾರ್ ಸೋತಿದ್ದರೆ ಏಳು ಬಾರಿ ಗೆದ್ದಿದ್ದಾರೆ. 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ರಾಜಕೀಯವಾಗಿ ಆಗಷ್ಟೇ ಕಣ್ಣು ಬಿಡುತ್ತಿದ್ದ ಶಿವಕುಮಾರ್ ಅವರನ್ನು ದೇವೇಗೌಡರು ಸೋಲಿಸಿದ್ದರು. ಆಗಲೇ ಶಿವಕುಮಾರ್ ಬಗ್ಗೆ ದೇವೇಗೌಡರು, ಈ ಹುಡುಗನನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ನಮ್ಮ ಪಕ್ಷಕ್ಕೇ ಮುಳುಗುನೀರಾಗುತ್ತಾನೆ. ಅವನನ್ನು ಈಗಲೇ ಮಟ್ಟ ಹಾಕಬೇಕು. ಇಲ್ಲದಿದ್ದರೆ ನಮ್ಮನ್ನು ನೆಟ್ಟಗೆ ಮಾಡುತ್ತಾನೆ ಎಂದಿದ್ದರು. ಹೀಗೆ ಆರಂಭವಾದ ಅವರಿಬ್ಬರ ರಾಜಕೀಯ ದ್ವೇಷ 2018ರ ವಿಧಾನಸಭೆ ಚುನಾವಣೆ ಫಲಿತಾಂಶದವರೆಗೂ ಮುಂದುವರಿದಿತ್ತು. ಆರಂಭದಲ್ಲಿ ದೇವೇಗೌಡ ಮತ್ತು ಶಿವಕುಮಾರ್ ಮಧ್ಯೆ ನೇರ ಹಣಾಹಣಿ ಇದ್ದರೆ ನಂತರದಲ್ಲಿ ದೇವೇಗೌಡರೊಂದಿಗೆ ಕುಮಾರಸ್ವಾಮಿ ಅವರೂ ಸೇರಿಕೊಂಡರು. ತಮ್ಮನ್ನು ಸೋಲಿಸಿದ ದೇವೇಗೌಡರನ್ನು ಮಹಿಳೆಯೊಬ್ಬರ ಮೂಲಕ ಚುನಾವಣಾ ಕಣದಲ್ಲಿ ಸೋಲಿಸಿ ಡಿ.ಕೆ.ಶಿವಕುಮಾರ್ ಸೇಡು ತೀರಿಸಿಕೊಂಡಿದ್ದರು. ಕುಮಾರಸ್ವಾಮಿಯನ್ನೂ ಸೋಲಿಸಿದರು 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ರಾಮನಗರ ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಲು ಪ್ರಯತ್ನಿಸಿದಾಗ ದೇವೇಗೌಡರ ಕುಟುಂಬ ಮತ್ತು ಶಿವಕುಮಾರ್ ನಡುವಿನ ದ್ವೇಷ ತಾರಕ್ಕೇರಿತು. ಅದು ತಣ್ಣಗಾಗಿದ್ದು 2018ರಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ.

ಮೈತ್ರಿ ಸರ್ಕಾರದಲ್ಲಿ ಅಗತ್ಯಕ್ಕಿಂತ ಹೆಚ್ಚು ಹತ್ತಿರವಾದರು

ಶತ್ರುವಿನ ಶತ್ರು ಮಿತ್ರ ಎಂಬಂತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇವೇಗೌಡರ ಕುಟುಂಬ, ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಶಿವಕುಮಾರ್ ಅತ್ಯಂತ ಆತ್ಮೀಯತೆ ಬೆಳೆಸಿಕೊಂಡರು. ಇದಕ್ಕೆ ಕಾರಣ ಸಿದ್ದರಾಮಯ್ಯ. ಕಾಂಗ್ರೆಸ್ಸಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಆತಂಕ ಇದ್ದುದೇ ಸಿದ್ದರಾಮಯ್ಯ ಅವರ ಬಗ್ಗೆ. ಅವರು ಇರುವವರೆಗೆ ತಾವು ಅಧಿಕಾರಕ್ಕೇರಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಅವರು ದೇವೇಗೌಡರ ಕುಟುಂಬ, ಅದರಲ್ಲೂ ಕುಮಾರಸ್ವಾಮಿ ಅವರ ಕಡು ವೈರಿಯಾಗಿದ್ದರಿಂದ ಸಹಜವಾಗಿಯೇ ಕುಮಾರಸ್ವಾಮಿ ಜತೆ ಶಿವಕುಮಾರ್ ಹೆಚ್ಚು ಆತ್ಮೀಯರಾದರು. ಸರ್ಕಾರ ಉರುಳಿದ ಮೇಲೂ ಇವರಿಬ್ಬರ ಆತ್ಮೀಯತೆ ಹಾಗೆಯೇ ಮುಂದುವರಿದಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ, ಸಿದ್ದರಾಮಯ್ಯ ಅವರ ವಿರುದ್ಧ ದೇವೇಗೌಡರು ಮತ್ತು ಅವರ ಕುಟುಂಬ ತಿರುಗಿ ಬಿದ್ದಾಗ, ದೇವೇಗೌಡರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದಾಗೆಲ್ಲಾ ಪರೋಕ್ಷವಾಗಿ ದೇವೇಗೌಡರ ಕುಟುಂಬದ ಜತೆ ನಿಂತಿದ್ದರು.

ಕಾಂಗ್ರೆಸ್ ಸಂಘಟನೆಗಾಗಿ ಮತ್ತೆ ಗೌಡರ ಕುಟುಂಬದ ವಿರುದ್ಧ ಜಿದ್ದಿಗೆ ಬೀಳಬೇಕಿದೆ ಡಿಕೆಶಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದಾಗ ಕುಮಾರಸ್ವಾಮಿ ಅವರು ಶಿವಕುಮಾರ್ ಪರ ನಿಂತರು. ಜೈಲಿನಲ್ಲಿದ್ದಾಗ ದೆಹಲಿಗೆ ಹೋಗಿ ನೋಡಿಕೊಂಡು ಬಂದರು. ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ವಾಪಸಾದಾಗ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ಡಿ.ಕೆ.ಶಿವಕುಮಾರ್ ಪರ ಕಾಂಗ್ರೆಸ್ ಏರ್ಪಡಿಸಿದ್ದ ಹೋರಾಟದಲ್ಲಿ ಜೆಡಿಎಸ್ ಧ್ವಜ ಕಾಣಿಸಿಕೊಂಡಿತ್ತು. ಅಷ್ಟರ ಮಟ್ಟಿಗೆ ಇಬ್ಬರ ಮಧ್ಯೆ ಸೌಹಾರ್ದ ಸಂಬಂಧ ಗಟ್ಟಿಯಾಗಿತ್ತು. ಈ ವಿಚಾರವೇ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆಗಾಗಿ ದೇವೇಗೌಡರ ಕುಟುಂಬವನ್ನು ಎದುರುಹಾಕಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸಲು ಕಾರಣವಾಗಿರುವುದು.

ಇದಕ್ಕೆ ಶಿವಕುಮಾರ್ ಬೆಂಬಲಿಗರು ಹೇಳುವುದೇ ಬೇರೆ. ಸ್ನೇಹವೇ ಆಗಲಿ, ದ್ವೇಷವೇ ಆಗಲಿ ಶಿವಕುಮಾರ್ ಅವರದ್ದು ಸ್ವಲ್ಪ ಅತಿಯಾಗಿರುತ್ತದೆ. ಆದರೆ, ಪಕ್ಷದ ವಿಚಾರ ಬಂದಾಗ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಯಾವ ಮಟ್ಟಕ್ಕೆ ಹೋಗಿ ಬೇಕಾದರೂ ಹೋರಾಟಕ್ಕಿಳಿಯುತ್ತಾರೆ. ಹಿಂದೆ ಹೈಕಮಾಂಡ್ ಹೇಳಿದೆ ಎಂಬ ಕಾರಣಕ್ಕೆ ಅವರು ದೇವೇಗೌಡರ ಕುಟುಂಬದ ಜತೆ ನಿಂತರೇ ಹೊರತು ಅವರಾಗಿಯೇ ಹೋಗಿಲ್ಲ. ಈಗ ಪಕ್ಷ ಸಂಘಟನೆಯ ಜವಾಬ್ದಾರಿ ಸಿಕ್ಕಿರುವುದರಿಂದ ಅದಕ್ಕೆ ಬೇಕಾದರೆ ದೇವೇಗೌಡರು ಮತ್ತು ಅವರ ಕುಟುಂಬದ ವಿರುದ್ಧ ಮತ್ತೆ ತೊಡೆ ತಟ್ಟಿ ನಿಲ್ಲಲಿದ್ದಾರೆ ಎನ್ನುತ್ತಾರೆ.

Click here Support Free Press and Independent Journalism

Pratidhvani
www.pratidhvani.com