ಹಕ್ಕುಚ್ಯುತಿ ಪ್ರಸ್ತಾಪ ವಿಧಾನಸಭೆ ಕಲಾಪದ ಸಮಯ ವ್ಯರ್ಥ ಮಾಡಿದ್ದಷ್ಟೇ ಬಂತು
ರಾಜ್ಯ

ಹಕ್ಕುಚ್ಯುತಿ ಪ್ರಸ್ತಾಪ ವಿಧಾನಸಭೆ ಕಲಾಪದ ಸಮಯ ವ್ಯರ್ಥ ಮಾಡಿದ್ದಷ್ಟೇ ಬಂತು

ವಿಧಾನಸಭೆಯಲ್ಲಿ ಪರಸ್ಪರ ಬೈದಾಡಿಕೊಂಡು ಹಕ್ಕುಚ್ಯುತಿ ಮಂಡಿಸಿ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯಕು ಎರಡು ದಿನಗಳ ಕಾಲ ಗದ್ದಲ ಎಬ್ಬಿಸಿ ಕಲಾಪ ಹಾಳು ಮಾಡಿದರು. ಅಂತಿಮವಾಗಿ ಹಕ್ಕುಚ್ಯುತಿ ಸೂಚನೆಯನ್ನು ಮುಕ್ತಾಯಗೊಳಿಸಬೇಕಾಯಿತು. ಪರಸ್ಪರ ಕೆಸರೆರಚಿಕೊಳ್ಳಲು ಅನಗತ್ಯವಾಗಿ ನಿಯಮ ದುರುಪಯೋಗಪಡಿಸಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಇಂದಿರಾತನಯ

ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ ಎನ್ನುವಂತಾಯಿತು ಸಚಿವ ಡಾ.ಕೆ.ಸುಧಾಕರ್ ಮತ್ತು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನಡುವಿನ ವಾಗ್ವಾದ ಪ್ರಕರಣ. ಸದನದಲ್ಲಿ ಕಿತ್ತಾಡಿಕೊಂಡು ಹಕ್ಕುಚ್ಯುತಿ ಆರೋಪಕ್ಕೆ ಕಾರಣವಾದ ಈ ಪ್ರಕರಣ ಎರಡು ದಿನಗಳ ಕಲಾಪವನ್ನು ಬಲಿತೆಗೆದುಕೊಂಡಿತು. ಹಕ್ಕುಚ್ಯುತಿ ನೋಟಿಸ್ ಕುರಿತು ಚರ್ಚೆ ಆರಂಭಕ್ಕೇ ಒಂದು ದಿನ ತೆಗೆದುಕೊಂಡರೆ, ಸೂಚನೆಯನ್ನು ಸ್ವೀಕರಿಸಬೇಕೇ ಬೇಡವೇ ಎಂಬ ಬಗ್ಗೆ ದಿನವಿಡೀ ಚರ್ಚೆಯಾಗಿ ಕೊನೆಗೆ ಸಚಿವ ಡಾ.ಸುಧಾಕರ್ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹಕ್ಕುಚ್ಯುತಿ ನೋಟಿಸ್, ರಮೇಶ್ ಕುಮಾರ್ ವಿರುದ್ಧ ಡಾ.ಸುಧಾಕರ್ ನೀಡಿರುವ ಹಕ್ಕುಚ್ಯುತಿ ನೋಟಿಸ್ ಮತ್ತು ರಮೇಶ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಯಮ 363ರಡಿ ಬಿಜೆಪಿಯ ಕೆ.ಜಿ.ಬೋಪಯ್ಯ ನೀಡಿರುವ ಸೂಚನೆಗಳನ್ನು ಚರ್ಚೆಯ ಬಳಿಕ ಮುಕ್ತಾಯಗೊಳಿಸಲಾಯಿತು. ಅಂದರೆ, ಸದಸ್ಯರ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶವಿಲ್ಲ, ರಮೇಶ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೂ ಉದ್ಭವವಾಗುವುದಿಲ್ಲ.

ಮಂಗಳವಾರ ನಡೆದ ಕಲಾಪದಲ್ಲಿ ಸಂವಿಧಾನದ ಕುರಿತ ಚರ್ಚೆಯ ವೇಳೆ ಶಾಸಕರ ಅನರ್ಹತೆ ಕುರಿತಂತೆ ಪ್ರಸ್ತಾಪಿಸಿದ ಸಚಿವ ಡಾ.ಸುಧಾಕರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಬಗ್ಗೆ ಪರೋಕ್ಷವಾಗಿ ಆರೋಪ ಮಾಡಿದ್ದು ವಿವಾದಕ್ಕೆ ಕಾರಣವಾಯಿತು. ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ವಾಗ್ವಾದ ನಡೆದಿತ್ತು. ಡಾ.ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಅವರು ಅವಾಚ್ಯ ಪದ ಬಳಸಿದರು ಎಂಬ ಆರೋಪವೂ ಬಂದು ಗದ್ದಲ ಹೆಚ್ಚಾಗಿ ಕಲಾಪವನ್ನು ಮುಂದೂಡಲಾಯಿತು. ಇದಾದ ಬಳಿಕ ಸ್ಪೀಕರ್ ಪೀಠಕ್ಕೆ ಅವಮಾನ ಮಾಡಿದ್ದಾರೆ ಎಂದು ಸುಧಾಕರ್ ವಿರುದ್ಧ ಪ್ರತಿಪಕ್ಷ ನಾಯಕರು ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸಲು ಮುಂದಾದರೆ, ತಮ್ಮ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ವಿರುದ್ಧ ಸುಧಾಕರ್ ಹಕ್ಕುಚ್ಯುತಿ ಸೂಚನೆ ಮಂಡಿಸಿದರು. ಅಲ್ಲದೆ, ಸದನದ ಸದಸ್ಯರೊಬ್ಬರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ರಮೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಕೆಲವು ಸದಸ್ಯರು ನಿಯಮ 363ರಡಿ ನೋಟಿಸ್ ನೀಡಿದ್ದರು.

ಈ ಕುರಿತು ಬುಧವಾರವೇ ಚರ್ಚೆ ನಡೆಯಬೇಕಿತ್ತಾದರೂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ದಿನವಿಡೀ ಗದ್ದಲವೆಬ್ಬಿಸಿದ ಪರಿಣಾಮ ಕಲಾಪ ನಡೆಯದೆ ಇಡೀ ದಿನ ವ್ಯರ್ಥವಾಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜಿ ಸಂಧಾನಕ್ಕೆ ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಇದರ ಪರಿಣಾಮ ಗುರುವಾರ ಈ ಮೂರೂ ಸೂಚನೆಗಳ ಮೇಲೆ ಸುದೀರ್ಘ ಚರ್ಚೆ ನಡೆಯಿತು. ಅಂತಿಮಾಗಿ ತಾವು ಅವಾಚ್ಯ ಪದ ಬಳಸಿಲ್ಲ. ಒಂದೊಮ್ಮೆ ನಾನು ಅಂತಹ ಪದ ಬಳಕೆ ಮಾಡಿದ್ದೇನೆ ಎಂದು ಸದಸ್ಯರು ಭಾವಿಸಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಎಂದು ಹೇಳಿ ರಮೇಶ್ ಕುಮಾರ್ ಅವರು ವಿವಾದಕ್ಕೆ ತೆರೆ ಎಳೆಯಲು ಮುಂದಾದರು. ಹೀಗಾಗಿ ರಮೇಶ್ ಕುಮಾರ್ ವಿರುದ್ಧ ನೀಡಿದ್ದ ಹಕ್ಕುಚ್ಯುತಿ ಸೂಚನೆಯನ್ನು ಮುಂದುವರಿಸದೇ ಇರಲು ಸುಧಾಕರ್ ನಿರ್ಧರಿಸಿದರು. ಅದೇ ರೀತಿ ರಮೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಾವು ನೀಡಿದ್ದ ಸೂಚನೆಯನ್ನು ಹಿಂದಕ್ಕೆ ಪಡೆಯುವುದಾಗಿ ಬಿಜೆರಪಿ ಸದಸ್ಯರು ಹೇಳಿದರು. ಮೇಲಾಗಿ ಈ ವಿಚಾರವನ್ನು ಬೆಳೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಸುಧಾಕರ್ ವಿರುದ್ಧದ ಹಕ್ಕುಚ್ಯುತಿ ಸೂಚನೆಯನ್ನೂ ಮುಂದುವರಿಸದೇ ಇರಲು ಕಾಂಗ್ರೆಸ್ ಸದಸ್ಯರು ಒಪ್ಪಿದರು. ಇದರಿಂದಾಗಿ ಎರಡು ದಿನಗಳ ಗದ್ದಲ ಗುರುವಾರ ಸಂಜೆ ವೇಳೆ ಸುಖಾಂತ್ಯ ಕಂಡಿತು.

ಆದರೆ, ಅಷ್ಟಾಗುವುದರಲ್ಲಿ ಎರಡು ದಿನಗಳ ಕಲಾಪದ ಅಮೂಲ್ಯ ಸಮಯ ಸಾಕಷ್ಟು ವ್ಯರ್ಥವಾಯಿತು. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತದೆ ಎಂಬುದೂ ಸಾಬೀತಾಯಿತು. ಅಷ್ಟಕ್ಕೂ ಸಮಾಧಾನದ ಸಂಗತಿ ಎಂದರೆ, ಸಿಟ್ಟಿನ ಭರದಲ್ಲಿ ಆದ ತಪ್ಪನ್ನು ಸರಿಪಡಿಸಿಕೊಂಡರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಈ ಪ್ರಕರಣದಲ್ಲಿ ಸಾಬೀತಾಯಿತು. ಯಾವ ಸಿಟ್ಟು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಯಿತೋ ಅದೇ ವ್ಯಕ್ತಿಯ ಧಾರಾಳತನ ಸಮಸ್ಯೆಯನ್ನು ಅಷ್ಟೇ ಸುಲಭವಾಗಿ ಬಗೆಹರಿಸಿತು. ಒಂದೊಮ್ಮೆ ಬುಧವಾರ ಬೆಳಗ್ಗೆಯೇ ಎಲ್ಲರಿಗೂ ಈ ಕುರಿತು ಜ್ಞಾನೋದಯವಾಗಿದ್ದರೆ ವಿವಾದ ಇಷ್ಟು ಬೆಳೆಯುತ್ತಲೇ ಇರಲಿಲ್ಲ ಎಂಬುದಂತೂ ಸತ್ಯ.

ಈ ಪ್ರಕರಣದಲ್ಲಿ ಹಕ್ಕುಚ್ಯುತಿ ಅಗತ್ಯವೇ ಇರಲಿಲ್ಲ

ಸದನದ ಹಿರಿಯ ಸದಸ್ಯರೇ ಹೇಳುವ ಪ್ರಕಾರ ಇಲ್ಲಿ ಹಕ್ಕುಚ್ಯುತಿಯ ಅಗತ್ಯವೇ ಇರಲಿಲ್ಲ. ಆದರೂ ಪ್ರತಿಪಕ್ಷ ನಾಯಕರು ಹಕ್ಕುಚ್ಯುತಿ ನೋಟಿಸ್ ನೀಡುವ ಮೂಲಕ ಪ್ರಕರಣವನ್ನುಅನಗತ್ಯವಾಗಿ ವಿಳಂಬಿಸಿದರು. ಶಾಸಕರ ಅನರ್ಹತೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಸ್ತಾಪಿಸುತ್ತಾ ಹಿಂದೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ಮಾಡಿದ್ದರು. ಇದಕ್ಕೆ ರಮೇಶ್ ಕಮಾರ್ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದರು. ಇದರಿಂದ ಗಲ್ಲದವುಂಟಾಗಿ ಕಲಾಪ ಮುಂದೂಡುವಂತಾಯಿತು. ಈ ವಿಚಾರದಲ್ಲಿ ಇಬ್ಬರನ್ನೂ ಕರೆಸಿ ಸ್ಪೀಕರ್ ಸಂಧಾನ ಮಾಡಿ ವಿವಾದಕ್ಕೆ ತೆರೆ ಎಳೆಯಬಹುದಿತ್ತು. ಆದರೆ, ಅದಕ್ಕೆ ಮುನ್ನವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದರು. ಇದಕ್ಕೆ ಪ್ರತಿಯಾಗಿ ಸುಧಾಕರ್ ಅವರು ರಮೇಶ್ ಕುಮಾರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದರು. ಹೀಗಾಗಿ ಆ ಕುರಿತು ಆರಂಭಿಕ ಪ್ರಸ್ತಾವನೆಗೆ ಅವಕಾಶ ನೀಡದೆ ಸ್ಪೀಕರ್ ಅವರಿಗೆ ಬೇರೆ ಮಾರ್ಗ ಇರಲಿಲ್ಲ.

ತಾವು ಮಂಡಿಸಿದ ಹಕ್ಕುಚ್ಯುತಿ ಪ್ರಸ್ತಾಪ ಗಟ್ಟಿಯಾಗಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೆ ಮೊದಲೇ ಗೊತ್ತಿತ್ತು ಎಂಬುದಕ್ಕೆ ಈ ಸೂಚನೆ ಮಂಡಿಸುವ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳೇ ಸಾಕ್ಷಿ. ಶಾಸಕರ ಅನರ್ಹತೆ ಕುರಿತಂತೆ ಸುಧಾಕರ್ ಅವರು ಸದನದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅಂಶಗಳನ್ನು ಪ್ರಸ್ತಾಪಿಸಿದ್ದರೂ ಅದನ್ನು ಬದಿಗಿಟ್ಟು ಸುಧಾಕರ್ ಅವರೇ ಆ ಮಾತುಗಳನ್ನು ಹೇಳಿದರು ಎಂದು ಸಿದ್ದರಾಮಯ್ಯ ಹೇಳಿದರು. ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ, ಸುಧಾಕರ್ ಪ್ರಸ್ತಾಪಿಸಿದ ಅಂಶಗಳನ್ನು ದಾಖಲೆ ಸಹಿತ ವಿವರಿಸಿದಾಗ ತಮ್ಮನ್ನು ತಾವು ಸಂಡೇ ಲಾಯರ್ ಎಂದು ಹೇಳಿಕೊಂಡು ಸಮರ್ಥಿಸಿಕೊಳ್ಳಲು ಮುಂದಾದರು. ಜತೆಗೆ ದಾಖಲೆಯ ಆರಂಭಿಕ ಪದಗಳು ಕನ್ನಡದಲ್ಲಿದ್ದುದರಿಂದ ಅದನ್ನು ಬಿಟ್ಟು ಇಂಗ್ಲಿಷ್ ನಲ್ಲಿ ಇದ್ದುದನ್ನು ಮಾತ್ರ ಓದಿದೆ ಎಂದು ತೇಲಿಸಲು ಪ್ರಯತ್ನಿಸಿದರು.

ಇದಾದ ಬಳಿಕ ಹಕ್ಕುಚ್ಯುತಿ ಸೂಚನೆ ಕುರಿತು ಸಿದ್ದರಾಮಯ್ಯ ಸುದೀರ್ಘವಾಗಿ ಮಾತನಾಡಿದರಾದರೂ ಎಲ್ಲೂ ತಮ್ಮ ಸೂಚನೆಯನ್ನು ಗಟ್ಟಿಯಾಗಿ ಸಮರ್ಥಿಸಿಕೊಳ್ಳಲಿಲ್ಲ. ಏಕೆಂದರೆ, ಸುಧಾಕರ್ ಅವರು ಯಾವ ಒಬ್ಬ ವ್ಯಕ್ತಿಯ ವಿರುದ್ಧವೂ ನೇರ ಆರೋಪ ಮಾಡಲಿಲ್ಲ. ಪೀಠದಿಂದ ನಮಗೆ ಅನ್ಯಾಯವಾಗಿದೆ. ನಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದರೇ ಹೊರತು ಯಾರಿಂದ ಆಗಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಿರಲಿಲ್ಲ. ಹೀಗಾಗಿ ಇದು ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿಯೇ ಸಿದ್ದರಾಮಯ್ಯ ಅವರು ಏನೇನೋ ವಿಚಾರಗಳನ್ನು ಪ್ರಸ್ತಾಪಿಸಿ ಹಕ್ಕುಚ್ಯುತಿ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಕೋರಿದರೇ ಹೊರತು ನಿರ್ದಿಷ್ಟವಾಗಿ ಇದೇ ವಿಚಾರದಲ್ಲಿ ಹಕ್ಕುಚ್ಯುತಿಯಾಗಿದೆ ಎಂಬುದನ್ನು ಹೇಳಲಿಲ್ಲ.

ಅದೇ ರೀತಿ ತಮ್ಮ ವಿರುದ್ಧ ಪ್ರತಿಪಕ್ಷದವರು ಹಕ್ಕುಚ್ಯುತಿ ಮಂಡಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸುಧಾಕರ್ ಅವರೂ ರಮೇಶ್ ಕುಮಾರ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದರು ಎಂಬುದು ಸ್ಪಷ್ಟ. ಏಕೆಂದರೆ, ಸದನದಲ್ಲಿ ರಮೇಶ್ ಕುಮಾರ್ ಅವರು ಅವಾಚ್ಯ ಪದ ಬಳಕೆ ಮಾಡಿದ್ದರು ಎಂಬುದು ಅವರ ಆರೋಪ. ಆದರೆ, ಸದನದ ದಾಖಲೆಗಳಲ್ಲಿ ಆ ಅಶ್ಲೀಲ ಪದ ದಾಖಲಾಗಿಯೇ ಇಲ್ಲ. ಈ ರೀತಿ ಇರುವಾಗ ಪ್ರಕರಣ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದು ಹೇಗೆ? ರಮೇಶ್ ಕುಮಾರ್ ಅವರ ವಿರುದ್ಧ ಕ್ರಮ ಜರುಗಿಸುವುದು ಹೇಗೆ? ಹೀಗಾಗಿ ಸ್ಪೀಕರ್ ಅವರು ಅನಿವಾರ್ಯವಾಗಿ ಹಕ್ಕುಚ್ಯುತಿ ಮತ್ತು ಕ್ರಮ ಕೈಗೊಳ್ಳಬೇಕು ಎಂಬ ಪ್ರಸ್ತಾವನೆಗಳನ್ನು ಮುಕ್ತಾಯಗೊಳಿಸಬೇಕಾಯಿತು.

Click here Support Free Press and Independent Journalism

Pratidhvani
www.pratidhvani.com